ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಆರ್‌ಬಿಐ ಕಚೇರಿಗೆ ಬಾಂಬ್ ಬೆದರಿಕೆ

* ₹ 2,000 ಮುಖಬೆಲೆ ನೋಟು ವಾಪಸ್‌ ಪಡೆಯುವ ನಿರ್ಧಾರದ ಬೆನ್ನಲ್ಲೇ ಕರೆ * ಸಿಬ್ಬಂದಿಯಲ್ಲಿ ಆತಂಕ
Published : 2 ಜೂನ್ 2023, 22:39 IST
Last Updated : 2 ಜೂನ್ 2023, 22:39 IST
ಫಾಲೋ ಮಾಡಿ
Comments

ಬೆಂಗಳೂರು: ನಗರದ ನೃಪತುಂಗ ರಸ್ತೆಯಲ್ಲಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಪ್ರಾದೇಶಿಕ ಕಚೇರಿಗೆ ಬಾಂಬ್ ಬೆದರಿಕೆ ಬಂದಿದ್ದು, ಪೊಲೀಸರು ಗುರುವಾರ (ಜೂನ್ 1) ಇಡೀ ದಿನ ಕಚೇರಿಯಲ್ಲಿ ಶೋಧ ನಡೆಸಿದರು.

ಹಲಸೂರು ಗೇಟ್ ಠಾಣೆ ವ್ಯಾಪ್ತಿಯಲ್ಲಿರುವ ಕಚೇರಿಯಲ್ಲಿ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದರು.

₹2,000 ಮುಖಬೆಲೆಯ ನೋಟುಗಳನ್ನು ಹಿಂದಕ್ಕೆ ಪಡೆಯುವುದಾಗಿ ಆರ್‌ಬಿಐ ಇತ್ತೀಚೆಗಷ್ಟೇ ಘೋಷಿಸಿದೆ. ಇದರ ಬೆನ್ನಲ್ಲೇ, ಬಾಂಬ್ ಬೆದರಿಕೆ ಕರೆ ಬಂದಿದ್ದರಿಂದ ಕಚೇರಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಹಲವು ಗಂಟೆಗಳ ಶೋಧದಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಸಿಗದಿದ್ದರಿಂದ, ಇದೊಂದು ಹುಸಿ ಬಾಂಬ್ ಕರೆ ಎಂಬುದಾಗಿ ಪೊಲೀಸರು ಘೋಷಿಸಿದರು. ನಂತರ, ಕಚೇರಿ ಸಿಬ್ಬಂದಿ ನಿಟ್ಟುಸಿರು ಬಿಟ್ಟರು.

ನೌಕಾದಳ ಅಧಿಕಾರಿ ಹೆಸರಿನಲ್ಲಿ ಕರೆ: ಆರ್‌ಬಿಐ ಪ್ರಾದೇಶಿಕ ಕಚೇರಿಗೆ ಬಾಂಬ್ ಬೆದರಿಕೆ ಹಾಕಿದ್ದ ಆರೋಪದಡಿ ವೈಭವ್ ಭಗವಾನ್ ಎಂಬಾತನ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಜೂನ್ 1ರಂದು ಬೆಳಿಗ್ಗೆ ‘ನಮ್ಮ 112’ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದ ಆರೋಪಿ, ತನ್ನ ಹೆಸರು ವೈಭವ್ ಭಗವಾನ್ ಹಾಗೂ ತಾನೊಬ್ಬ ನೌಕಾದಳದ ಅಧಿಕಾರಿ ಎಂಬುದಾಗಿ ಹೇಳಿದ್ದ. ‘ಬೆಂಗಳೂರು ರಿಸರ್ವ್ ಬ್ಯಾಂಕ್ ಆಫ್‌ ಇಂಡಿಯಾ ಕಚೇರಿಯಲ್ಲಿ ಬಾಂಬ್ ಸ್ಫೋಟ ಆಗಲಿದೆ. ಕೂಡಲೇ ಪರಿಶೀಲಿಸಿ’ ಎಂದಿದ್ದ. ನಿಯಂತ್ರಣ ಕೊಠಡಿ ಸಿಬ್ಬಂದಿ, ಹಲಸೂರು ಗೇಟ್ ಠಾಣೆ ಪೊಲೀಸರಿಗ ಮಾಹಿತಿ ರವಾನಿಸಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ನಿಯಂತ್ರಣ ಕೊಠಡಿ ಕರ್ತವ್ಯದಲ್ಲಿದ್ದ ಪಿಎಸ್‌ಐ ಗಂಗವ್ವ ರಡ್ಡೇರ್ ಅವರು ಬಾಂಬ್‌ ಬೆದರಿಕೆ ಸಂಬಂಧ ಆರೋಪಿ ವೈಭವ್ ವಿರುದ್ಧ ದೂರು ನೀಡಿದ್ದಾರೆ. ಅದರನ್ವಯ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಪತ್ತೆ ಮಾಡಲಾಗುತ್ತಿದೆ’ ಎಂದರು.

‘ಸಾರ್ವಜನಿಕರಲ್ಲಿ ಭೀತಿಯನ್ನುಂಟು ಮಾಡುವ ಉದ್ದೇಶದಿಂದ ಆರೋಪಿ ಕೃತ್ಯ ಎಸಗಿದ್ದಾನೆ. ಆತ ಯಾರು? ಆತನ ನಿಜವಾದ ಹೆಸರೇನು? ಉದ್ದೇಶವೇನು ? ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಆರ್‌ಬಿಐ ಕಚೇರಿಗೂ ಭದ್ರತೆ ಹೆಚ್ಚಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT