ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಚಾರಿಕತೆ ರೋಚಕತೆ ಆಗಬಾರದು: ಸಾಹಿತಿ ಬರಗೂರು ರಾಮಚಂದ್ರಪ್ಪ

Published 14 ಏಪ್ರಿಲ್ 2024, 14:37 IST
Last Updated 14 ಏಪ್ರಿಲ್ 2024, 14:37 IST
ಅಕ್ಷರ ಗಾತ್ರ

ಬೆಂಗಳೂರು: ‘ಸಮಕಾಲೀನ ಸಂದರ್ಭಕ್ಕೆ ಅನುಗುಣವಾದ ವೈಚಾರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಆದರೆ, ವೈಚಾರಿಕತೆ ರಚನಾತ್ಮಕ ಆಗಿರಬೇಕೆ ಹೊರತು, ರೋಚಕತೆ ಆಗಬಾರದು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು. 

ಪಲ್ಲವ ಪ್ರಕಾಶನ ನಗರದಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪ್ರದೀಪ್ ಮಾಲ್ಗುಡಿ ಅವರು ಸಂಪಾದಿಸಿರುವ ‘ಬದುಕಿನ ಬೆರಗು: ನಮ್ಮ ಕಲ್ಲಣ್ಣಿ ಸುಜ್ಞಾನಮೂರ್ತಿ’ ಪುಸ್ತಕ ಬಿಡುಗಡೆ ಮಾಡಿ, ಮಾನತಾಡಿದರು.

‘ವೈಚಾರಿಕತೆ ವಿಶಾಲವಾದ ಚೌಕಟ್ಟನ್ನು ಒಳಗೊಂಡಿದೆ. ಆದರೆ, ಇತ್ತೀಚೆಗೆ ವೈಚಾರಿಕತೆ ಅಂದರೆ ಒಂದೇ ರೀತಿಯಲ್ಲಿ ಇರಬೇಕು ಎನ್ನುವಂತಾಗಿದೆ. ಅಂತಿಮ ಸತ್ಯದ ಹರಿಕಾರರು ಜಾಸ್ತಿಯಾಗಿದ್ದಾರೆ. ಕೆಲವರು ನಾಸ್ತಿಕವಾದವೇ ವಿಚಾರವಾದ ಅಂದುಕೊಳ್ಳುತ್ತಾರೆ. ವಿಚಾರವಾದವನ್ನು ಹೀಗೇ ಎಂದು ಹೇಳಲು ಸಾಧ್ಯವಿಲ್ಲ. ವೈಚಾರಿಕತೆಯ ವ್ಯಾಪ್ತಿ, ಆಯಾಮಗಳನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು. 

‘ಜನಮಾನಸವನ್ನು ಅರ್ಥ ಮಾಡಿಕೊಳ್ಳದೆ ಹೋದರೆ ನಮ್ಮ ಯಾವ ವಿಚಾರವೂ ಜನರನ್ನು ತಲುಪಿ, ಅವರನ್ನು ಬದಲಾಯಿಸುವುದಿಲ್ಲ. ವಿಚಾರವಾದ ಏಕರೂಪಾತ್ಮಕವಾದದ್ದಲ್ಲ. ಒಬ್ಬಬ್ಬರು ಒಂದೊಂದು ವಿಷಯದಲ್ಲಿ ವೈಚಾರಿಕ ಪ್ರಜ್ಞೆ ಹೊಂದಿರುತ್ತಾರೆ. ಈ ವೈರುಧ್ಯದ ನಡುವೆ ನಾವು ಜೀವಿಸುತ್ತೇವೆ. ಜಡ ಸಂಪ್ರದಾಯ, ಅಮಾನವೀಯ ಸಂಪ್ರದಾಯಗಳಿಗೆ ವಿರುದ್ಧವಾದದ್ದೇ ನಿಜವಾದ ವೈಚಾರಿಕತೆಯೆಂದು ಭಾವಿಸಿಕೊಳ್ಳಬೇಕಾಗಿದೆ. ವೈಚಾರಿಕತೆ ಅಂಹಕಾರವಾಗದೆ, ವಿನಯದಿಂದ ಕೂಡಿರಬೇಕು’ ಎಂದರು. 

ಕೃತಿಯ ಬಗ್ಗೆ ಮಾತನಾಡಿದ ನಾಟಕಕಾರ ರಾಜಪ್ಪ ದಳವಾಯಿ, ‘ಕೃತಿಯು ಸುಜ್ಞಾನಮೂರ್ತಿ ಅವರ ಬದುಕು ಹಾಗೂ ಬರಹ ಒಳಗೊಂಡಿದೆ. ಅವರು ಕನ್ನಡ ಸಾಹಿತ್ಯವನ್ನು ವ್ಯಾಪಕವಾಗಿ ಅಧ್ಯಯನ ಮಾಡಿದ್ದಾರೆ. ಅವರು ಮೇಷ್ಟ್ರು ಆಗಿದ್ದರೆ ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತಿತ್ತು. ಅವರು ಕನ್ನಡ–ತೆಲುಗು ನಿಘಂಟು ಹೊರತರಬೇಕಿದೆ’ ಎಂದು ತಿಳಿಸಿದರು. 

ಪುಸ್ತಕ ಪರಿಚಯ 

ಪುಸ್ತಕ: ‘ಬದುಕಿನ ಬೆರಗು: ನಮ್ಮ ಕಲ್ಲಣ್ಣಿ ಸುಜ್ಞಾನಮೂರ್ತಿ’

ಪ್ರಕಾರ: ಅಭಿನಂದನಾ ಗ್ರಂಥ

ಸಂಪಾದಕ: ಪ್ರದೀಪ್ ಮಾಲ್ಗುಡಿ  

ಪುಟಗಳು: 472

ಬೆಲೆ: ₹400

ಪ್ರಕಾಶನ: ಪಲ್ಲವ ಪ್ರಕಾಶನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT