ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರ್ಯಾಂಡ್ ಬೆಂಗಳೂರು: ಅಪಾರ್ಟ್‌ಮೆಂಟ್‌ಗಳಲ್ಲಿ ಎಸ್‌ಟಿಪಿ ಕಡ್ಡಾಯಗೊಳಿಸಿ

‘ಜಲಸುರಕ್ಷಾ ಬೆಂಗಳೂರು’ಗೆ ನೀಡಿದ ಸಲಹೆ
Published 10 ಆಗಸ್ಟ್ 2023, 17:44 IST
Last Updated 10 ಆಗಸ್ಟ್ 2023, 17:44 IST
ಅಕ್ಷರ ಗಾತ್ರ

ಬೆಂಗಳೂರು: ‘ಅಪಾರ್ಟ್‌ಮೆಂಟ್‌ಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣೆ ಘಟಕ (ಎಸ್‌ಟಿಪಿ) ನಿರ್ಮಾಣವನ್ನು ಕಡ್ಡಾಯಗೊಳಿಸಬೇಕು. ಕೊಳಚೆ ನೀರನ್ನು ಶುದ್ಧೀಕರಿಸಿ ಕೆರೆಗಳಿಗೆ ಹರಿಸಬೇಕು, ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಇಂಗು ಗುಂಡಿಗಳನ್ನು ನಿರ್ಮಿಸಬೇಕು.

ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ‘ಜಲಸುರಕ್ಷಾ ಬೆಂಗಳೂರು’ ವಿಷಯಕ್ಕೆ ಸಂಬಂಧಿಸಿದಂತೆ ದಯಾನಂದ ಸಾಗರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ವಿಚಾರ ಸಂಕಿರಣದಲ್ಲಿ ತಜ್ಞರು ನೀಡಿದ ಸಲಹೆಗಳಿವು.

ಅಂತರ್ಜಲದ ಯಥೇಚ್ಛ ಬಳಕೆಯನ್ನು ನಿಯಂತ್ರಿಸಬೇಕು ಹಾಗೂ ನೀರಿನ ಮಿತ ಬಳಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಮತ್ತು ನೀರು ಪೂರೈಕೆಯ ಮೂಲವಾಗಿ ನಗರದ ಕೆರೆಗಳನ್ನು ಬಳಸಬೇಕು. ಅನಧಿಕೃತವಾಗಿ ಕೊಳವೆಬಾವಿ ಕೊರೆಯುವುದನ್ನು ತಡೆಯುವ ಜತೆಗೆ ಅಂತಹವರ ಮೇಲೆ ದುಪ್ಪಟ್ಟು ದಂಡ ವಿಧಿಸಬೇಕು ಎಂದು ತಜ್ಞರು ಅಭಿಪ್ರಾಯಪಟ್ಟರು.

ಈ ವಿಷಯದ ಬಗ್ಗೆ ವಿವರ ನೀಡಿದ ಜಲಮಂಡಳಿಯ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ ಹಾಗೂ ಜಲಸುರಕ್ಷಾ ಬೆಂಗಳೂರಿನ ನೋಡಲ್ ಅಧಿಕಾರಿ ಕೆ.ಎನ್. ರಾಜೀವ್, ‘ಬ್ರ್ಯಾಂಡ್ ಬೆಂಗಳೂರು ಯೋಜನೆ ಬಗ್ಗೆ ನೀಡಿರುವ ಸಲಹೆಗಳನ್ನು ಕ್ರೋಢೀಕರಿಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದರು.

’ನಗರದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಮೂಲಕ ನೀರಿನ‌ ಸಮಸ್ಯೆ ಕಡಿಮೆ ಮಾಡಲು ಯೋಜನೆ ರೂಪಿಸಬೇಕಿದೆ’ ಎಂದು ಹೇಳಿದರು.

‘ಬೆಂಗಳೂರು ನಗರದಾದ್ಯಂತ ಜಲಮಂಡಳಿ ವತಿಯಿಂದ ನೀರಿನ ಸರಬರಾಜು ಮಾಡಲಾಗುತ್ತಿದೆ. ಅದರ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಜಲಮಂಡಳಿಯು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.‌ ಬೆಂಗಳೂರು ಜನರಿಗೆ ನೀರಿನ ವ್ಯವಸ್ಥೆ ಮಾಡುವ ಸಲುವಾಗಿ ದಿನದ 24 ಗಂಟೆಯೂ ಜಲಮಂಡಳಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ತಿಳಿಸಿದರು.

‘ನಗರದ ಜನತೆ ಹೆಚ್ಚಾಗಿ ಕಾವೇರಿ ನೀರಿನ ಮೆಲೆ ಅವಲಂಬಿತರಾಗಿದ್ದಾರೆ. ಪರ್ಯಾಯ ವ್ಯವಸ್ಥೆಗಳಿಗೆ ನಾವು ಮುಂದಾಗಬೇಕಿದೆ’ ಎಂದು ಹೇಳಿದರು.

ದಯಾನಂದ ಸಾಗರ್ ತಾಂತ್ರಿಕ ಮಹಾವಿದ್ಯಾಲಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ
ಡಾ. ರಾಮರಾಜು, ಜಲಮಂಡಳಿಯ ಮುಖ್ಯ ಎಂಜಿನಿಯರ್‌ ವೆಂಕಟೇಶ್, ಸುರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT