‘ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿ’
ರಾಷ್ಟ್ರೀಯ ಹೆದ್ದಾರಿ 4ರ ತುಮಕೂರು ರಸ್ತೆಯ ಚಿಕ್ಕಬಿದರಕಲ್ಲು ಬಳಿ ರಸ್ತೆ ಗುಂಡಿ ಬಿದ್ದಿದೆ. ಇದರಿಂದ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ. ವಾಹನಗಳು ವೇಗವಾಗಿ ಬಂದು, ಬ್ರೇಕ್ ಹಾಕುವುದರಿಂದ ಹಿಂಬದಿ ಸವಾರರು ವಾಹನಕ್ಕೆ ಗುದ್ದುವ ಸಾಧ್ಯತೆಯಿದೆ. ಈ ಮಾರ್ಗದಲ್ಲಿ ವಾಹನ ಓಡಿಸುವುದು ಬಹಳ ದುಸ್ತರವಾಗಿದೆ. ಗುಂಡಿ ಬಿದ್ದಿರುವ ಸ್ಥಳದಲ್ಲಿ ರಸ್ತೆಯ ಉಬ್ಬ ಸಹ ಇದೆ. ಇದು ಸುಗಮ ಸಂಚಾರಕ್ಕೆ ಅಡ್ಡಿಪಡಿಸುತ್ತದೆ. ಚಾಲಕರು ಗುಂಡಿಗಳನ್ನು ತಪ್ಪಿಸಲು ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸುವುದರಿಂದ ವೃದ್ಧರು, ಮಕ್ಕಳು ಈ ರಸ್ತೆಯ ಮೂಲಕ ಓಡಾಡುವುದು ಕಷ್ಟ. ಮಳೆ ಬಂದರೆ ಗುಂಡಿಗಳು ನೀರಿನಿಂದ ಆವೃತವಾಗಿ, ಜೀವಕ್ಕೆ ಕುತ್ತು ತರಲಿವೆ. ಸಂಬಂಧಪಟ್ಟವರು ಕೂಡಲೇ ಕ್ರಮವಹಿಸಿ, ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.
-ಅನುರಾಧ ಎಸ್.ಎಚ್., ವಿನಾಯಕನಗರ
‘ಮೇಲ್ಸೇತುವೆಯಲ್ಲಿ ತ್ಯಾಜ್ಯ’
ಬಿಬಿಎಂಪಿ ಮತ್ತು ಬಿಡಿಎ ಅಧಿಕಾರಿಗಳ ಅಸಡ್ಡೆ ಹಾಗೂ ನಿರ್ಲಕ್ಷ್ಯದಿಂದ ಇತ್ತೀಚೆಗೆ ನಗರದಲ್ಲಿನ ಮೇಲ್ಸೇತುವೆಗಳು ಮಣ್ಣು ಹಾಗೂ ಕಸದ ರಾಶಿಯಿಂದ ಆವರಿಸಿಕೊಳ್ಳುತ್ತಿವೆ. ಇದಕ್ಕೆ ಹೊಸೂರು ರಸ್ತೆಯ ಡೇರಿ ಸರ್ಕಲ್ ಮೇಲ್ಸೇತುವೆ ಉತ್ತಮ ಉದಾಹರಣೆ. ಇಲ್ಲಿ ಮಣ್ಣನ್ನು ಒಂದೆಡೆ ರಾಶಿ ಹಾಕಿ ಇಡಲಾಗಿದ್ದು, ವಿಲೇವಾರಿ ಮಾಡಿಲ್ಲ. ಹಲವು ದಿನಗಳಿಂದ ಮಣ್ಣು ಹಾಗೇ ಇರುವುದರಿಂದ ಅಲ್ಲಿ ಗಿಡಗಳು ಸಹ ಬೆಳೆಯುತ್ತಿವೆ. ನಗರದ ಎಲ್ಲಾ ಮೇಲ್ಸೇತುವೆಗಳನ್ನು ಪರಿಶೀಲಿಸಿ, ಮಣ್ಣು ಹಾಗೂ ಕಸಗಳ ವಿಲೇವಾರಿಗೆ ಕ್ರಮವಹಿಸಬೇಕು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇದೇ ರಸ್ತೆಗಳಲ್ಲಿ ಸಂಚರಿಸುತ್ತಿದ್ದರೂ ಈ ಬಗ್ಗೆ ಗಮನ ಹರಿಸದಿರುವುದು ವಿಪರ್ಯಾಸ. ಇನ್ನಾದರೂ ಎಚ್ಚೆತ್ತುಕೊಂಡು, ಈ ಬಗ್ಗೆ ಕೂಡಲೇ ಕ್ರಮವಹಿಸಬೇಕು.
-ಶಿವಪ್ರಸಾದ್ ಎಸ್., ಕೆಂಪೇಗೌಡ ರಸ್ತೆ ಬಡಾವಣೆ
‘ಪಾದಚಾರಿ ಮಾರ್ಗದಲ್ಲಿ ಕಸದ ರಾಶಿ’
ನಗರದ ಹೃದಯ ಭಾಗದಲ್ಲಿರುವ ಪುನೀತ್ ರಾಜ್‌ಕುಮಾರ್ ರಸ್ತೆಯಲ್ಲಿ, ಬನಶಂಕರಿ 3ನೇ ಹಂತದ ಕತ್ರಿಗುಪ್ಪೆ ಬಳಿ ಇರುವ ಉದ್ಭವ ಆಸ್ಪತ್ರೆ ಎದುರಿಗೆ ಪಾದಚಾರಿ ಮಾರ್ಗದಲ್ಲಿಯೇ ಕಸ ಹಾಗೂ ಚರಂಡಿ ತ್ಯಾಜ್ಯದ ರಾಶಿ ಹಾಕಲಾಗಿದೆ. ಸಮೀಪವೇ ತಾಜಾ ತಿಂಡಿ ಹೋಟೆಲ್ ಇದೆ. ಇದರಿಂದ ಪಾದಚಾರಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುವುದರಿಂದ ಪಾದಚಾರಿಗಳು ರಸ್ತೆ ಅಪಘಾತಕ್ಕೆ ಒಳಗಾಗುವ ಅಪಾಯ ಇದೆ. ಇನ್ನೊಂದೆಡೆ ಗಿಡಗಂಟಿಗಳು ಬೆಳೆದಿವೆ. ಇದರಿಂದ ಪಾದಚಾರಿ ಮಾರ್ಗ ಜನರಿಗೆ ನಿರುಪಯುಕ್ತವಾಗಿದೆ. ಆದ್ದರಿಂದ, ಆದಷ್ಟು ಬೇಗ ಕಸ–ತ್ಯಾಜ್ಯ ಹಾಗೂ ಗಿಡಗಂಟಿಗಳನ್ನು ತೆರವು ಮಾಡಿಸಿ, ಪಾದಚಾರಿಗಳು ಸಾಗಲು ಅವಕಾಶ ಮಾಡಿಕೊಡಬೇಕು.
- ಜಿ.ಎಸ್.ಎಸ್. ಬಾಬು, ಇಟ್ಟಮಡು
‘ಪಾದಚಾರಿ ಮಾರ್ಗದಲ್ಲಿ ಕಸದ ರಾಶಿ’
ನಗರದ ಹೃದಯ ಭಾಗದಲ್ಲಿರುವ ಪುನೀತ್ ರಾಜ್‌ಕುಮಾರ್ ರಸ್ತೆಯಲ್ಲಿ, ಬನಶಂಕರಿ 3ನೇ ಹಂತದ ಕತ್ರಿಗುಪ್ಪೆ ಬಳಿ ಇರುವ ಉದ್ಭವ ಆಸ್ಪತ್ರೆ ಎದುರಿಗೆ ಪಾದಚಾರಿ ಮಾರ್ಗದಲ್ಲಿಯೇ ಕಸ ಹಾಗೂ ಚರಂಡಿ ತ್ಯಾಜ್ಯದ ರಾಶಿ ಹಾಕಲಾಗಿದೆ. ಸಮೀಪವೇ ತಾಜಾ ತಿಂಡಿ ಹೋಟೆಲ್ ಇದೆ. ಇದರಿಂದ ಪಾದಚಾರಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುವುದರಿಂದ ಪಾದಚಾರಿಗಳು ರಸ್ತೆ ಅಪಘಾತಕ್ಕೆ ಒಳಗಾಗುವ ಅಪಾಯ ಇದೆ. ಇನ್ನೊಂದೆಡೆ ಗಿಡಗಂಟಿಗಳು ಬೆಳೆದಿವೆ. ಇದರಿಂದ ಪಾದಚಾರಿ ಮಾರ್ಗ ಜನರಿಗೆ ನಿರುಪಯುಕ್ತವಾಗಿದೆ. ಆದ್ದರಿಂದ, ಆದಷ್ಟು ಬೇಗ ಕಸ–ತ್ಯಾಜ್ಯ ಹಾಗೂ ಗಿಡಗಂಟಿಗಳನ್ನು ತೆರವು ಮಾಡಿಸಿ, ಪಾದಚಾರಿಗಳು ಸಾಗಲು ಅವಕಾಶ ಮಾಡಿಕೊಡಬೇಕು.
ಜಿ.ಎಸ್.ಎಸ್. ಬಾಬು, ಇಟ್ಟಮಡು
‘ಪ್ರತಿನಿತ್ಯ ಪಾರಿವಾಳಗಳ ಸಾವು’
ಲಾಲ್ ಬಾಗ್ ಸಂಪರ್ಕಿಸುವ ಸುಬ್ಬಯ್ಯ ವೃತ್ತದ (ಮಿಷನ್ ರಸ್ತೆ) ಶಿವ ದೇವಾಲಯದ ಹಿಂಭಾಗದಲ್ಲಿ ನಿತ್ಯ ಸಾರ್ವಜನಿಕರು ಇಲ್ಲಿನ ಪಾರಿವಾಳಗಳಿಗೆ ಆಹಾರ ಧಾನ್ಯಗಳನ್ನು ತಂದು ಹಾಕುತ್ತಾರೆ. ಕೆಲವರು ಚೀಲಗಟ್ಟಲೆ ಧವಸಧಾನ್ಯವನ್ನು ಈ ಸ್ಥಳದಲ್ಲಿ ಸುರಿಯುತ್ತಾರೆ. ಈ ಜಾಗವು ವೃತ್ತಾಕಾರವಾಗಿರುವುದರಿಂದ ಕೆಲವು ಪಾರಿವಾಳಗಳು ವಾಹನಗಳ ಚಕ್ರಕ್ಕೆ ಸಿಲುಕಿ, ಪ್ರತಿನಿತ್ಯ ಮೃತಪಡುತ್ತಿವೆ. ದವಸಧಾನ್ಯ ಹಾಕಿ ತಮ್ಮ ಕರ್ಮ ಕಳೆದುಕೊಳ್ಳಬೇಕೆನ್ನುವವರು ತಮ್ಮ ಮನೆಗಳಲ್ಲಿ ಪಾರಿವಾಳಗಳನ್ನು ಸಾಕಿಕೊಳ್ಳಲಿ.
ಸಿ.ಗಣೇಶ್ ಬಾಬು, ಸಂಪಂಗಿರಾಮನಗರ
‘ಕಿತ್ತುಹೋದ ಪಾದಚಾರಿ ಮಾರ್ಗ’
ಮೈಸೂರು ರಸ್ತೆಯಲ್ಲಿರುವ ಸ್ಯಾಟ್‌ಲೈಟ್ ಬಸ್ ನಿಲ್ದಾಣ ಎದುರು ನಿರ್ಮಿಸಿರುವ ಪಾದಚಾರಿ ಮಾರ್ಗದ ಕಾಂಕ್ರಿಟ್ ಕಿತ್ತುಹೋಗಿದ್ದು, ಜನರು ಪ್ರಾಣಭಯದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ದಿನಪೂರ್ತಿ ವಾಹನಗಳ ದಟ್ಟಣೆ ಇರುವ ಈ ರಸ್ತೆಯಲ್ಲಿ ಜನರ ಓಡಾಟವೂ ಹೆಚ್ಚಾಗಿದೆ. ಜನರ ಅನುಕೂಲಕ್ಕೆ ನಿರ್ಮಿಸಿದ್ದ ಪಾದಚಾರಿ ಮಾರ್ಗ ಕೆಲದಿನಗಳಲ್ಲಿಯೇ ಹಾಳಾಗಿದೆ. ಕಲ್ಲುಗಳು ಕಿತ್ತು ಹೊರಗೆ ಬಂದಿವೆ. ಇಂಥ ಪಾದಚಾರಿ ಮಾರ್ಗಗಳಲ್ಲಿ ಹೆಜ್ಜೆ ಹಾಕಲು ವೃದ್ಧರು, ಮಕ್ಕಳು ಹಾಗೂ ಮಹಿಳೆಯರು ಭಯಪಡುತ್ತಿದ್ದಾರೆ. ಪಾದಚಾರಿ ಮಾರ್ಗದಲ್ಲಿ ಕಲ್ಲುಗಳು ಕುಸಿದು, ರಂಧ್ರಗಳು ಉಂಟಾಗಿವೆ. ಮಾರ್ಗದಲ್ಲಿ ನಡೆದುಕೊಂಡು ಹೋಗುವ ವೇಳೆ ರಂಧ್ರದಲ್ಲಿ ಕಾಲು ಸಿಲುಕಿ, ಆಯತಪ್ಪಿ ಬೀಳುತ್ತಿದ್ದಾರೆ. ಪಾದಚಾರಿ ಮಾರ್ಗ ದುರಸ್ತಿಗಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಸ್ಪಂದನೆ ಸಿಕ್ಕಿಲ್ಲ.
ರಾಮಾಂಜನೇಯ, ಸ್ಥಳೀಯ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.