ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡ ನಿರ್ಮಾಣಕ್ಕೆ 'ಕಾವೇರಿ' ಬಳಸಿದರೆ ಒ.ಸಿ ಇಲ್ಲ

ಕಾಮಗಾರಿಗೆ ಸಂಸ್ಕರಿಸಿದ ನೀರು: ಬಿಬಿಎಂಪಿ ಆದೇಶ
Last Updated 4 ಅಕ್ಟೋಬರ್ 2019, 20:32 IST
ಅಕ್ಷರ ಗಾತ್ರ

ಬೆಂಗಳೂರು: ಇನ್ನು ಮುಂದೆ ಕಟ್ಟಡಗಳ ನಿರ್ಮಾಣಕ್ಕೆ ಅಂತರ್ಜಲ ಅಥವಾ ಕಾವೇರಿ ನೀರು ಬಳಸಿದರೆ ಬಿಬಿಎಂಪಿಯಿಂದ ಸ್ವಾಧೀನಾನುಭವ ಪತ್ರ (ಒ.ಸಿ) ಪಡೆಯಲು ಸಾಧ್ಯವಿಲ್ಲ. ಏಕೆಂದರೆ, ಕಟ್ಟಡಗಳ ನಿರ್ಮಾಣಕ್ಕೆ ಜಲಮಂಡಳಿಯಿಂದ ಸಂಸ್ಕರಿಸಿದ ತ್ಯಾಜ್ಯ ನೀರು ಖರೀದಿಸುವುದನ್ನು ಕಡ್ಡಾಯಗೊಳಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ.

‘ಕಟ್ಟಡಗಳ ನಿರ್ಮಾಣಕ್ಕೆ ಸಂಸ್ಕರಿಸಿದ ನೀರು ಖರೀದಿಸಿರುವ ರಸೀದಿ ಸಲ್ಲಿಸದ ಹೊರತು ಹೊಸ ಕಟ್ಟಡದ ಯೋಜನೆಗಳಿಗೆ ಅನುಮೋದನೆ ಮತ್ತು ಸ್ವಾಧೀನಾನುಭವ ಪ್ರಮಾಣಪತ್ರ (ಒ.ಸಿ) ನೀಡಬಾರದು’ ಎಂದು ಬಿಬಿಎಂಪಿಗೆ ಜಲಮಂಡಳಿ ಮನವಿ ಮಾಡಿತ್ತು. ಇದನ್ನು ಪುರಸ್ಕರಿಸಿರುವ ಪಾಲಿಕೆ ಈ ಆದೇಶ ಹೊರಡಿಸಿದೆ.

‘ಕಟ್ಟಡ ಯೋಜನೆಗಳಿಗೆ ಅನುಮೋದನೆ, ಆರಂಭಿಕ ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಬೇಕು’ ಎಂದು ಬಿಬಿಎಂಪಿಯ 8 ವಲಯಗಳ ಮುಖ್ಯ ಎಂಜಿನಿಯರ್‌ಗಳಿಗೆ ನಗರ ಯೋಜನೆಯ ಹೆಚ್ಚುವರಿ ನಿರ್ದೇಶಕ ಆರ್. ಪ್ರಸಾದ್ ಅವರು ಪತ್ರ ಬರೆದಿದ್ದಾರೆ.

‘ಹೊಸ ಆದೇಶದಂತೆ ಜಲಮಂಡಳಿಯಿಂದ ಸಂಸ್ಕರಿಸಿದ ತ್ಯಾಜ್ಯ ನೀರು ಖರೀದಿಸಲಾಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿಯೇ ಪ್ರಾರಂಭಿಕ ಪ್ರಮಾಣಪತ್ರಗಳ (ಸಿ.ಸಿ) ವಿತರಣೆ ಮಾಡಲಾಗುತ್ತಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಎರಡು ಸ್ಥಳೀಯ ಸಂಸ್ಥೆಗಳು ಸೇರಿ ಕೈಗೊಂಡಿರುವ ಈ ನಿರ್ಧಾರದಿಂದ ‌ಅಂತರ್ಜಲ ಮತ್ತು ಕಾವೇರಿ ನೀರನ್ನು ಸಂರಕ್ಷಿಸಲು ಸಾಧ್ಯವಾಗಲಿದೆ. ಈ ನೀರನ್ನು ಅಗತ್ಯ ಇರುವ ಕಡೆಗೆ ಬಳಸಿಕೊಳ್ಳಬಹುದು’ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದರು.

‘ಬಿಬಿಎಂಪಿ ನೀಡಿರುವ ಸಹಕಾರದಿಂದ ಕುಡಿಯುವ ನೀರಿನ ಉಳಿತಾಯಕ್ಕೆ ಸಹಕಾರಿಯಾಗಲಿದೆ’ ಎಂದು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಹೇಳಿದರು.

ಜಲ ಮಂಡಳಿಯ ಅಂಕಿ–ಅಂಶಗಳ ಪ್ರಕಾರ, ನಗರದಲ್ಲಿ ಜಲಮಂಡಳಿಯ 16 ಒಳಚರಂಡಿ ಸಂಸ್ಕರಣಾ ಘಟಕಗಳಿದ್ದು (ಎಸ್‌ಟಿಪಿ), ಈ ಪೈಕಿ 9 ಎಸ್‌ಟಿಪಿಗಳಲ್ಲಿ 27.1 ದಶಲಕ್ಷ ಲೀಟರ್‌ ನೀರನ್ನು ಸಂಸ್ಕರಿಸಲಾಗುತ್ತಿದೆ. ಈ ನೀರನ್ನು ಕಟ್ಟಡಗಳ ನಿರ್ಮಾಣ ಮತ್ತು ಇತರೆ ಕೆಲಸಕ್ಕೆ ಬಳಸಿದರೆ ಕಾವೇರಿ ನೀರಿನ ಮೇಲಿನ ಒತ್ತಡ ಕಡಿಮೆಯಾಗಲಿದೆ.

ಈ ಕುರಿತು ನಿಯಮ ಇಲ್ಲದ ಕಾರಣ ಕುಡಿಯಲು ಯೋಗ್ಯವಾದ ಅಂತರ್ಜಲ ಮತ್ತು ಕಾವೇರಿ ನೀರನ್ನೇ ಕಟ್ಟಡಗಳ ನಿರ್ಮಾಣಕ್ಕೆ ಬಳಸಲಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT