ಮಂಗಳವಾರ, ಮಾರ್ಚ್ 21, 2023
23 °C
ಭಾರತ, ಅಮೆರಿಕದ ನಕಲಿ ನೋಟುಗಳ ತಯಾರಿ ಜಾಲ: ತಲೆಮರೆಸಿಕೊಂಡ ಇಬ್ಬರು ಆರೋಪಿಗಳು

₹ 1.10 ಕೋಟಿ ಮೌಲ್ಯದ ನಕಲಿ ನೋಟು ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹೆಣ್ಣೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ₹ 1.10 ಕೋಟಿ ಮೌಲ್ಯದ ಭಾರತ ಹಾಗೂ ಅಮೆರಿಕದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಇಬ್ಬರು ರೂವಾರಿಗಳು ತಲೆಮರೆಸಿಕೊಂಡಿದ್ದಾರೆ.

‘ಮನೆಯೊಂದನ್ನು ಬಾಡಿಗೆ ಪಡೆದಿದ್ದ ಆರೋಪಿಗಳು, ನಕಲಿ ನೋಟು ತಯಾರಿಸುತ್ತಿದ್ದರು. ಜೊತೆಗೆ ಹಣ ದ್ವಿಗುಣ, ಹಣ ವರ್ಗಾವಣೆ, ಹೂಡಿಕೆಯ ಹೆಸರಿನಲ್ಲಿ ಸಾರ್ವಜನಿಕರಿಗೆ ವಂಚಿಸುತ್ತಿದ್ದರು’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘₹ 500 ಮುಖಬೆಲೆಯ 10,033 ಭಾರತೀಯ ನಕಲಿ ನೋಟುಗಳು, 100 ಡಾಲರ್‌ ಮುಖಬೆಲೆಯ 798 ನಕಲಿ ನೋಟುಗಳು, ನಕಲಿ ಕರೆನ್ಸಿ ತಯಾರಿಕೆಗೆ ದಾಸ್ತಾನಿದ್ದ ನೋಟಿನ ಮಾದರಿಯ 1 ಸಾವಿರ ಕಪ್ಪು ಬಣ್ಣದ ಹಾಗೂ ಬಿಳಿ ಬಣ್ಣದ ಹಾಳೆ, ರಾಸಾಯನಿಕ ಬಾಟಲಿಗಳು, ಕೆನಾನ್‌ ಕಂಪನಿಯ ಕೆಂಪು, ಗುಲಾಬಿ, ಹಳದಿ, ಕಪ್ಪುಬಣ್ಣದ ಪ್ರಿಂಟರ್‌ ಇಂಕ್‌ ಜೆಟ್‌ಗಳು, ಎಲೆಕ್ಟ್ರಾನಿಕ್‌ ಡ್ರೈಯಿಂಗ್ ಯಂತ್ರ ವಶಕ್ಕೆ ಪಡೆಯಲಾಗಿದೆ’ ಎಂದು ತಿಳಿಸಿವೆ.

‘ಇಬ್ಬರು ಆರೋಪಿಗಳು ಸ್ಥಳೀಯ ಹಾಗೂ ವಿದೇಶಿ ಮೂಲದ ವ್ಯಕ್ತಿಗಳೊಂದಿಗೆ ಸೇರಿಕೊಂಡು, ನಕಲಿ ನೋಟು ತಯಾರಿಸಿ ವಂಚಿಸುತ್ತಿದ್ದರು. ಕಂಪ್ಯೂಟರ್ ಹಾಗೂ ಕಲರ್ ಇಂಕ್‌ ಬಳಕೆಯಿಂದ ನೋಟು ತಯಾರಿಸುತ್ತಿದ್ದರು. ವಂಚನೆಗೆ ಒಳಗಾದ ವ್ಯಕ್ತಿಯೊಬ್ಬರು ಹೆಣ್ಣೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿ ಸಿಸಿಬಿ ಘಟಕದ ಮಾದಕ ದ್ರವ್ಯ ನಿಗ್ರಹ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನಕಲಿ ಕರೆನ್ಸಿ ವಶಕ್ಕೆ ಪಡೆದಿದ್ದಾರೆ’ ಎಂದು ಮೂಲಗಳು ಹೇಳಿವೆ.

ನಾಲ್ವರು ಪೆಡ್ಲರ್‌, ವಿದೇಶಿ ಪ್ರಜೆ ಬಂಧನ

ಹೆಬ್ಬಾಳ, ಬಾಣಸವಾಡಿ ಹಾಗೂ ಕೋರಮಂಗಲದಲ್ಲಿ ನಿಷೇಧಿತ ಮಾದಕ ವಸ್ತು ಹಾಗೂ ಎಂಡಿಎಂಎ ಕ್ರಿಸ್ಟಲ್‌ ಪರಿಚಯಸ್ಥರಿಗೆ ಮಾರಾಟ ಮಾಡುತ್ತಿದ್ದ ಸೂಡಾನ್‌ ದೇಶದ ಪ್ರಜೆ ಸೇರಿ ನಾಲ್ವರು ಪೆಡ್ಲರ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ ₹ 35 ಲಕ್ಷದ ಮಾದಕ ವಸ್ತು ಹಾಗೂ ಎಂಡಿಎಂಎ ಕ್ರಿಸ್ಟಲ್‌ ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಬಳಸಿದ ಕಾರು ಹಾಗೂ ಐದು ಮೊಬೈಲ್‌ ವಶಕ್ಕೆ ಪಡೆಯಲಾಗಿದೆ.

‘ಆರೋಪಿಗಳು ನೈಜೀರಿಯಾ ಮತ್ತು ಕೇರಳದಿಂದ ಕಡಿಮೆ ಬೆಲೆಗೆ ಎಂಡಿಎಂಎ ಕ್ರಿಸ್ಟಲ್‌ ಅನ್ನು ಖರೀದಿಸಿ ರಾಜಧಾನಿಯ ವಿದ್ಯಾರ್ಥಿಗಳು, ಐಟಿ –ಬಿಟಿ ಉದ್ಯೋಗಿಗಳಿಗೆ ಪ್ರತಿ ಗ್ರಾಂಗೆ ₹ 10ರಿಂದ ₹ 12 ಸಾವಿರಕ್ಕೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು. ಈ ದಂಧೆಯಲ್ಲಿ ಇನ್ನಷ್ಟು ಮಂದಿ ತೊಡಗಿಕೊಂಡಿದ್ದು ಅವರ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ಧಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು