ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತೀರ್ಪು ಬದಲಿಸಿದರೆ ಕೋರ್ಟ್‌ ಏಕೆ ಬೇಕು?’

ಸುಗ್ರೀವಾಜ್ಞೆಗಳ ವಿರುದ್ಧ ಸಿಐಟಿಯು ಪ್ರತಿಭಟನೆ * ರಾಷ್ಟ್ರಪತಿಗೆ ಮನವಿ ಸಲ್ಲಿಸಲು ಚಿಂತನೆ
Last Updated 24 ಸೆಪ್ಟೆಂಬರ್ 2020, 23:46 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾರ್ಮಿಕ ಕಾಯ್ದೆಗೆ ತಂದಿರುವ ತಿದ್ದುಪಡಿಗಳು ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸುತ್ತವೆ. ನ್ಯಾಯಾಲಯಗಳ ಆದೇಶ ಬದಲಿಸುವ ಅವಕಾಶ ಇದೆ ಎಂದು ಹೊಸ ಕಾನೂನು ಹೇಳುತ್ತದೆ. ನ್ಯಾಯಾಲಯದ ತೀರ್ಪುಗಳನ್ನೇ ಮಾರ್ಪಡಿಸಲು, ಭಾಗಶಃ ಜಾರಿ ಮಾಡಲು ಅವಕಾಶ ಇದ್ದ ಮೇಲೆ ಕೋರ್ಟ್‌ ಏಕೆ ಬೇಕು’ ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಪ್ರಶ್ನಿಸಿದರು.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ಸರ್ಕಾರಗಳು ರೂಪಿಸಿರುವ ಈ ಸುಗ್ರೀವಾಜ್ಞೆಗಳು ಕಾನೂನು ರೂಪ ಪಡೆದು ಜಾರಿಯಾದರೆ, ಮುಂದಿನ 10 ವರ್ಷಗಳಲ್ಲಿ 49 ವರ್ಷಕ್ಕಿಂತ ಮೇಲ್ಪಟ್ಟವರು ಯಾರೂ ಕೆಲಸದಲ್ಲಿ ಇರುವುದಿಲ್ಲ’ ಎಂದರು.

‘ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲು, ಕಂಪನಿ ಮುಚ್ಚಲು ಸರ್ಕಾರದ ಶಾಸನಾತ್ಮಕ ಅನುಮತಿ ಇರುವ 100 ಮಂದಿ ಕಾರ್ಮಿಕರ ಮಿತಿಯನ್ನು 300ಕ್ಕೆ ಹೆಚ್ಚಿಸಲಾಗಿದೆ. ಅಂದರೆ, 300ರವರೆಗಿನ ಕಾರ್ಮಿಕರನ್ನು ಯಾವುದೇ ಮುಲಾಜಿಲ್ಲದೆ ಕೆಲಸದಿಂದ ತೆಗೆದು ಹಾಕಲು ಇದರಿಂದ ಸಾಧ್ಯವಾಗಲಿದೆ’ ಎಂದು ವಿವರಿಸಿದರು.

‘ತಿದ್ದುಪಡಿಗಳು ಜಾರಿಯಾದಲ್ಲಿ, ಈಗ ಶೇ 15ರಷ್ಟು ಇರುವ ಕಾರ್ಮಿಕರ ವೇತನ ಪಾಲು ಮತ್ತಷ್ಟು ಕುಸಿಯಲಿದೆ. ಶೇ 47ರಷ್ಟು ಇರುವ ಬಂಡವಾಳಗಾರರ ಲಾಭದ ಪಾಲು ಮತ್ತಷ್ಟು ಹೆಚ್ಚಲಿದೆ. ಕಾರ್ಮಿಕರು ಹಲವು ಹಕ್ಕುಗಳನ್ನು ಕಳೆದುಕೊಳ್ಳಲಿದ್ದಾರೆ’ ಎಂದರು.

ಸಿಐಟಿಯು ಅಧ್ಯಕ್ಷೆ ವರಲಕ್ಷ್ಮಿ, ‘ದೇಶದಲ್ಲಿ ಶೇ 100ಕ್ಕೆ ಶೇ70ರಷ್ಟು ಕಾರ್ಮಿಕರು ಗುತ್ತಿಗೆ ಪದ್ಧತಿಯಡಿ ಕೆಲಸ ಮಾಡುತ್ತಿದ್ದಾರೆ. ಅಂದರೆ, ಕಾರ್ಮಿಕ ಕಾನೂನುಗಳು ಅನ್ವಯ ಆಗುವುದು ಶೇ 30ರಷ್ಟು ಕಾರ್ಮಿಕರಿಗೆ ಮಾತ್ರ. ಅದರಲ್ಲಿಯೂ ಅಸಂಘಟಿತ ಕಾರ್ಮಿಕರಿಗೆ ಈ ಹಕ್ಕುಗಳೂ ಸಿಗುತ್ತಿಲ್ಲ’ ಎಂದರು.

ಸಿಪಿಐ (ಎಂ) ಬೆಂಗಳೂರು ಜಿಲ್ಲೆ ಪ್ರಧಾನ ಕಾರ್ಯದರ್ಶಿ ಕೆ.ಎನ್. ಉಮೇಶ್, ‘ಸುಗ್ರೀವಾಜ್ಞೆ ಆಯಿತು, ಮಸೂದೆಗಳನ್ನು ಮಂಡಿಸಿದ್ದೂ ಆಯಿತು, ಕಾನೂನುಗಳು ಕೂಡ ಜಾರಿ ಆಗುತ್ತದೆ ಎಂದು ಸರ್ಕಾರಗಳು ತಿಳಿದು ಕೊಂಡಿರಬಹುದು. ಹೋರಾಟ ನಡೆಸಲಾಗುತ್ತದೆ. ಈ ಮಸೂದೆಗಳಿಗೆ ಅಂಕಿತ ಹಾಕದಂತೆ ರಾಷ್ಟ್ರಪತಿಯವರಿಗೆ ಮನವಿ ಮಾಡಿಕೊಳ್ಳಲಾಗುವುದು’ ಎಂದು ಅವರು ಹೇಳಿದರು.

‘ಬದುಕಿನ ರಕ್ಷಣೆಗೆ ಆದ್ಯತೆ’

ಕಾರ್ಮಿಕ ಸಚಿವರು ಸ್ಥಳಕ್ಕೆ ಬಾರದಿದ್ದರೆ, ಸ್ವಾತಂತ್ರ್ಯ ಉದ್ಯಾನದಿಂದ ವಿಧಾನಸೌಧದವರೆಗೆ ಜಾಥಾ ನಡೆಸಲು ಸಿಐಟಿಯು ತೀರ್ಮಾನಿಸಿತ್ತು. ಮಧ್ಯಾಹ್ನ 2 ಗಂಟೆಯ ನಂತರ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್‌ ಪ್ರತಿಭಟನಾ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿದರು.

‘ಕಾರ್ಮಿಕರ ಬದುಕಿನ ರಕ್ಷಣೆ ನಮ್ಮ ಮೊದಲ ಆದ್ಯತೆ. ಅವರ ಹಕ್ಕುಗಳ ರಕ್ಷಣೆ ಎರಡನೇ ಆದ್ಯತೆ. ಹಂತ–ಹಂತವಾಗಿ ಬೇಡಿಕೆ ಈಡೇರಿಸಲಾಗುವುದು. ಮುಖ್ಯಮಂತ್ರಿಯವರ ಜೊತೆ ಕಾರ್ಮಿಕ ಮುಖಂಡರ ಸಭೆ ನಡೆಸಲು ವ್ಯವಸ್ಥೆ ಮಾಡಲಾಗುವುದು’ ಎಂದು ಸಚಿವರು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT