ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಪಿಗಳಿಗಾಗಿ ಕಸ್ಟಮ್ಸ್‌ ಅಧಿಕಾರಿಗಳ ಶೋಧ

ಬಾಂಗ್ಲಾ ಗಡಿ ಮೂಲಕ ವಿದೇಶಿ ಸಿಗರೇಟ್‌ಗಳ ಅಕ್ರಮ ಸಾಗಣೆ
Last Updated 4 ಜುಲೈ 2019, 20:16 IST
ಅಕ್ಷರ ಗಾತ್ರ

ಬೆಂಗಳೂರು: ಎಚ್ಚರಿಕೆ ಸಂದೇಶವಿಲ್ಲದ ವಿದೇಶಿ ತಯಾರಿಕೆ ಸಿಗರೇಟ್‌ಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿರುವ ಗ್ಯಾಂಗ್‌ಗಾಗಿ ಕಸ್ಟಮ್ಸ್‌ ಅಧಿಕಾರಿಗಳು ಶೋಧ ಆರಂಭಿಸಿದ್ದಾರೆ.

ಬಾಂಗ್ಲಾ ಗಡಿಯ ಮೂಲಕವಾಗಿ ದೇಶದೊಳಕ್ಕೆ ನುಸುಳುತ್ತಿರುವ ವಿವಿಧ ಬ್ರ್ಯಾಂಡ್‌ಗಳ ಸಿಗರೇಟ್‌ಗಳನ್ನು ವಿವಿಧ ನಗರಗಳಿಗೆ ಪೂರೈಕೆ ಮಾಡಲಾಗುತ್ತಿದ್ದು, ನಗರದ ಮೂರು ಗೋದಾಮುಗಳಲ್ಲಿ ಇತ್ತೀಚೆಗೆ ₹ 2 ಕೋಟಿ ಮೌಲ್ಯದ ಅಕ್ರಮ ಸಿಗರೇಟ್‌ಗಳನ್ನು ವಶಪಡಿಸಿಕೊಂಡ ಬಳಿಕ ಕಸ್ಟಮ್ಸ್‌ ಅಧಿಕಾರಿಗಳು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಸಿಗರೇಟ್‌ ಕಳ್ಳಸಾಗಣೆದಾರರ ಜಾಲವು ನಗರದಲ್ಲಿ ಆರು ತಿಂಗಳಿಂದ ಕಾರ್ಯಾಚರಣೆ ನಡೆಸುತ್ತಿದೆ. ಈ ಜಾಲ ಯಾವುದು? ಇದರ ಕಾರ್ಯವಿಧಾನ ಹೇಗೆ ಎಂಬುದನ್ನು ಪತ್ತೆ ಹಚ್ಚಲು ಸಿಗರೇಟ್‌ ಮಾರಾಟಗಾರರ ಮೇಲೆ ಕಸ್ಟಮ್ಸ್‌ ಅಧಿಕಾರಿಗಳು ನಿಗಾ ಇಟ್ಟಿದ್ದರು. ಸಿಗರೇಟ್‌ಗಳು ಕೋಲ್ಕತ್ತಾದಿಂದ ರೈಲಿನಲ್ಲಿ ಬರುತ್ತಿದೆ ಎಂಬ ಮಾಹಿತಿ ಸಿಗುತ್ತಿದ್ದಂತೆ ತನಿಖೆ ಆರಂಭಿಸಲಾಯಿತು ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಜೂನ್‌ ಎರಡನೇ ವಾರದಲ್ಲಿ ಮೊದಲ ಬಾರಿಗೆ ಯಶವಂತಪುರ ಹಾಗೂ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಗಳಲ್ಲಿ ವಿದೇಶಿ ಸಿಗರೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ‘ಕಾಟನ್‌ ಬಟ್ಟೆ’ ಎಂದು ನಮೂದಿಸಿ ಸಿಗರೇಟ್‌ ಸಾಗಣೆ ಮಾಡಲಾಗಿತ್ತು. ಕಸ್ಟಮ್ಸ್‌ ಅಧಿಕಾರಿಗಳು ಹಿಂದೆ ಬಿದ್ದಿರುವ ಸುಳಿವು ಸಿಕ್ಕಿದ್ದರಿಂದ ಆರೋಪಿಗಳು ಸಿಗರೇಟ್‌ ಪೆಟ್ಟಿಗೆಗಳನ್ನು ಬಿಡಿಸಿಕೊಳ್ಳಲು ಬರಲಿಲ್ಲ.

ಅಲ್ಲದೆ, ಕೋಲ್ಕತ್ತಾದಿಂದ ಬಂದಿದ್ದ ಸಿಗರೇಟ್‌ ಪಾರ್ಸಲ್‌ ಮೇಲೆ ಸುಳ್ಳು ವಿಳಾಸ ನಮೂದಿಸಲಾಗಿತ್ತು. ಎನ್‌ಬಿಕೆ, 17ನೇ ಕ್ರಾಸ್‌, ಯಶವಂತಪುರ ಎಂದು ಬರೆಯಲಾಗಿತ್ತು. ಇದು ಸುಳ್ಳು ವಿಳಾಸ ಎಂಬುದು ತನಿಖೆಯಿಂದ ಗೊತ್ತಾಯಿತು.

ಸಾಮಾನ್ಯವಾಗಿ ರೈಲಿನಲ್ಲಿ ಬರುವ ಪಾರ್ಸಲ್‌ಗಳನ್ನು ಸಂಬಂಧಪಟ್ಟ ವ್ಯಕ್ತಿಯ ಗುರುತಿನ ಪತ್ರಗಳನ್ನು ಪರಿಶೀಲಿಸಿ ಹಸ್ತಾಂತರಿಸಲಾಗುತ್ತದೆ. ಆದರೆ, ಸಿಗರೇಟ್‌ ಪೆಟ್ಟಿಗೆಗಳನ್ನು ತೆಗೆದುಕೊಳ್ಳುವ ಬರುವ ವ್ಯಕ್ತಿಯ ಬಳಿ ಯಾವುದೇ ದಾಖಲೆ ಇರಲಿಲ್ಲ.

ರೈಲ್ವೆ ಅಧಿಕಾರಿಗಳು ಸಿಗರೇಟ್‌ ತೆಗೆದುಕೊಂಡು ಹೋದ ವ್ಯಕ್ತಿಯ ಬಗ್ಗೆ ಕಸ್ಟಮ್ಸ್‌ ಅಧಿಕಾರಿಗಳಿಗೆ ಸುಳಿವು ನೀಡಿದ್ದರು. ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಚಿಕ್ಕಪೇಟೆಯ ಮೂರು ಗೋದಾಮುಗಳ ಬಗ್ಗೆ ಮಾಹಿತಿ ನೀಡಿದರು. ಬಳಿಕ ಅವುಗಳ ಮೇಲೆ ದಾಳಿ ನಡೆಸಿ ಸಿಗರೇಟ್‌ ವಶಪಡಿಸಿಕೊಳ್ಳಲಾಗಿತ್ತು.

ಕಸ್ಟಮ್ಸ್‌ ಇಲಾಖೆಯ ಅಡಿಷನಲ್‌ ಕಮಿಷನರ್‌ ರಮಣ ರೆಡ್ಡಿ ಅವರ ಪ್ರಕಾರ ಒಂದು ತಿಂಗಳಲ್ಲಿ ₹ 3.5 ಕೋಟಿ ಮೌಲ್ಯದ ಸಿಗರೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಿಗರೇಟ್‌ ಅಕ್ರಮ ಸಾಗಣೆ ವ್ಯವಹಾರಕ್ಕೆ ರೈಲ್ವೆಯ ಕೆಲವು ಕೆಳ ಹಂತದ ಸಿಬ್ಬಂದಿ ಕೈಜೋಡಿಸಿರಬಹುದು ಎಂಬ ಶಂಕೆಯನ್ನು ಕಸ್ಟಮ್ಸ್‌ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT