ಶುಕ್ರವಾರ, ಸೆಪ್ಟೆಂಬರ್ 17, 2021
26 °C

ಬೆಂಗಳೂರಿಗೆ ಹೊಸ ನೋಟ ಕೊಟ್ಟು ಅಭಿವೃದ್ಧಿಪಡಿಸಲು ನಾನು ಸಿದ್ಧನಿದ್ದೇನೆ: ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬೆಂಗಳೂರು ನಗರಕ್ಕೆ ಹೊಸ ನೋಟ ಕೊಟ್ಟು ಸಮಗ್ರ ಅಭಿವೃದ್ಧಿ ಮಾಡುವ ಜೊತೆಗೆ, ಎಲ್ಲ ಸೇವೆಗಳನ್ನು ನಾಗರಿಕರಿಗೆ ಒದಗಿಸುವ ಕೆಲಸವನ್ನು ಮಾಡಲು ನಾನು ಸಿದ್ಧನಿದ್ದೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಅಗ್ರಹಾರ‌ ದಾಸರಹಳ್ಳಿ ವಾರ್ಡ್‌ನಲ್ಲಿ ಬಿಬಿಎಂಪಿ ವತಿಯಿಂದ ಭಾನುವಾರ ಆಯೋಜಿಸಿದ್ದ ಸರ್ಕಾರಿ ಪ್ರಾಥಮಿಕ‌- ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಿಂದೆ ಗೃಹ ಸಚಿವನಾಗಿದ್ದಾಗ ಈ ಕ್ಷೇತ್ರಕ್ಕೆ ಬಂದಿದ್ದೇನೆ. ಈಗ ಮುಖ್ಯಮಂತ್ರಿ ಜೊತೆಗೆ ಬೆಂಗಳೂರು ಮಂತ್ರಿಯೂ ಆಗಿರುವುದರಿಂದ ನನಗೂ ಜವಾಬ್ದಾರಿ ಇದೆ. ಬೆಂದಕಾಳೂರು ಮಹಾನಗರ ಬೆಂಗಳೂರು ಆಗಿ, ಈಗ ಬೃಹತ್‌ ಬೆಂಗಳೂರು ಆಗಿದೆ. ಬೆಳೆಯುತ್ತಾ ಹೋಗಿದೆ, ಬೆಳವಣಿಗೆ ಆಗಿದೆ. ಆದರೆ, ಅಭಿವೃದ್ಧಿ ಆಗಬೇಕು. ಯಾವ ಯಾವ ವಲಯಕ್ಕೆ ಏನೇನು ಬೇಕು ಎಂಬ ಸಮಗ್ರ ಮಾಹಿತಿಯನ್ನು ಸಂಗ್ರಹಿಸುತ್ತೇನೆ. ನಾಗರಿಕ ಸೇವೆಯನ್ನು ಮನೆ ಬಾಗಿಲಿಗೆ ತಲುಪಿಸುವ ವಿನೂತನ ಯೋಜನೆ ಮಾಡುತ್ತೇನೆ. ಕಾಮಗಾರಿಯ ಜೊತೆ ತಂತ್ರಾಂಶವನ್ನೂ ಬಳಕೆ ಮಾಡುತ್ತೇನೆ’ ಎಂದರು.

‘ಬೆಂಗಳೂರಿಗೆ ಸ್ವತಂತ್ರವಾದ ಆರೋಗ್ಯ ವ್ಯವಸ್ಥೆಯನ್ನು ಮಾಡಲು ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಜೊತೆಗೆ ಮೂಲಸೌಕರ್ಯ ಒದಗಿಸಲು ಅತೀ ಹೆಚ್ಚು ಒತ್ತು ಕೊಡುತ್ತೇನೆ’ ಎಂದರು.

‘ಖಾಸಗೀಕರಣ, ಉದಾರಿಕರಣದ ಬಳಿಕ ಬೆಂಗಳೂರಿನಂಥ ನಗರದಲ್ಲಿ ಶಾಲೆಗಳು, ಆಸ್ಪತ್ರೆಗಳು ಖಾಸಗಿ ವಲಯದಲ್ಲಿ ಹೆಚ್ಚು ಇದೆ. ಖಾಸಗಿ ವಲಯಕ್ಕೆ ಪೈಪೋಟಿ ಕೊಟ್ಟು, ಅಷ್ಟೇ ಗುಣಮಟ್ಟದ ಶಿಕ್ಷಣ ಕೊಡುವ ವ್ಯವಸ್ಥೆ ಅಗ್ರಹಾರ, ದಾಸರಹಳ್ಳಿಯಲ್ಲಿ ಮಾಡುವ ಉದ್ದೇಶದಿಂದ ಪ್ರೌಢ ಶಾಲೆ ಜೊತೆಗೆ ಪದವಿಪೂರ್ವ ಕಾಲೇಜನ್ನು ಸೇರಿಸಿರುವುದು ಸಂತೋಷದ ವಿಷಯ’ ಎಂದರು.

‘ಕ್ಷೇತ್ರದ ಶಾಸಕ ವಿ. ಸೋಮಣ್ಣ ಅವರ ವೇಗಕ್ಕೆ ನಾವೆಲ್ಲರೂ ಕೆಲಸ ಮಾಡಲು ಆಗಲ್ಲ. ಅವರ ವಯಸ್ಸು 70 ಪ್ಲಸ್‌. ಆದರೆ, ಶಕ್ತಿ 20 ಪ್ಲಸ್‌. ಅಷ್ಟು ಕೆಲಸ ಮಾಡುತ್ತಾರೆ. ನಗರದಲ್ಲಿ ಕೆಲಸ ಮಾಡುವುದು ಕಷ್ಟ. ಆದರೆ, ಎಲ್ಲ ಅಧಿಕಾರಿಗಳನ್ನು ಜೋಡಿಸಿಕೊಂಡು ಸೋಮಣ್ಣ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿರುವ ಇಂಚು ಇಂಚು ಜಾಗವನ್ನು ನಾಗರಿಕರ ಸೇವೆಗೆ ಬಳಕೆ ಮಾಡುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ಇದನ್ನೂ ಓದಿ... ಜಿಲ್ಲಾಡಳಿತ ಕಳ್ಳರಂತೆ ಬಂದು ದೇಗುಲಗಳನ್ನು ತೆರವುಗೊಳಿಸುತ್ತಿದೆ: ಪ್ರತಾಪ ಸಿಂಹ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು