33 ಕ್ಯಾಂಪ್ಯಾಕ್ಟರ್ ಸ್ಥಗಿತ: ತುಷಾರ್ ಗಿರಿನಾಥ್
‘ಎಸ್‌ಟಿಎಸ್ ಸ್ಥಾಪನೆಯಿಂದಾಗಿ ಒಂಬತ್ತು ವಾರ್ಡ್‌ಗಳಲ್ಲಿ 33 ಕಾಂಪ್ಯಾಕ್ಟರ್‌ಗಳ ಸಂಚಾರ ಸ್ಥಗಿತಗೊಳ್ಳಲಿದೆ. 211 ಆಟೊಗಳು ನೇರವಾಗಿ ಎಸ್‌ಟಿಎಸ್‌ಗೆ ಕಸವನ್ನು ವಿಲೇವಾರಿ ಮಾಡಲಿವೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು. ‘ಮನೆಯಿಂದ ಸಂಗ್ರಹಿಸುವ ತ್ಯಾಜ್ಯವನ್ನು ಆಟೊದಲ್ಲಿ ತೆಗೆದುಕೊಂಡು ಹೋಗಿ ಕಾಂಪ್ಯಾಕ್ಟರ್‌ಗಳಿಗೆ ರಸ್ತೆಗಳಲ್ಲಿ ತುಂಬಲಾಗುತ್ತಿತ್ತು. ಇದರಿಂದ ವಾಸನೆ ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗುತ್ತಿವೆ. ಹೊಸ ವ್ಯವಸ್ಥೆಯಿಂದ ಇದು ನಿಯಂತ್ರಣಕ್ಕೆ ಬರಲಿದೆ. ಆಟೊದಿಂದ ನೇರವಾಗಿ ಎಸ್‌ಟಿಎಸ್‌ಗೆ ತ್ಯಾಜ್ಯ ವಿಲೇವಾರಿಯಾಗುತ್ತದೆ. ಪ್ರತಿ ಆಟೊ ಎಷ್ಟು ಪ್ರಮಾಣದ ತ್ಯಾಜ್ಯ ವಿಲೇವಾರಿ ಮಾಡುತ್ತದೆ ಎಂಬುದನ್ನು ದಾಖಲಿಸಲಾಗುತ್ತದೆ. ಈ ಘಟಕದಿಂದ ನಾಗರಿಕರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ವಾಸನೆಯೂ ಇರುವುದಿಲ್ಲ’ ಎಂದರು. ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಯೊಂದು ವಿಧಾನಸಭೆ ಕ್ಷೇತ್ರದಲ್ಲೂ ಒಂದು ಎಸ್‌ಟಿಎಸ್ ನಿರ್ಮಾಣ ಮಾಡಲು ಸೂಚಿಸಿದ್ದಾರೆ. ಅದರಂತೆ ನಗರದಲ್ಲಿ 27 ಎಸ್‌ಟಿಎಸ್ ನಿರ್ಮಾಣ ಮಾಡಲು ನಿರ್ಧಾರ ಮಾಡಲಾಗಿದೆ. ಇದೀಗ ಎರಡು ಆರಂಭವಾಗಿದ್ದು ಇನ್ನೊಂದು ಜನವರಿಯಲ್ಲಿ ಆರಂಭವಾಗಲಿದೆ. ಪ್ರತಿ ಘಟಕಕ್ಕೆ ₹13 ಕೋಟಿ ವೆಚ್ಚ ಮಾಡಲಾಗುತ್ತದೆ’ ಎಂದರು.