ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಲಕ್ಷ ಮನೆ ಯೋಜನೆ; ಹಿಂದಿನ ಅರ್ಜಿ ರದ್ದು: ಸೋಮಣ್ಣ

ಅರ್ಜಿ ಸಲ್ಲಿಸುವವರ ಆದಾಯ ಮಿತಿ ₹3 ಲಕ್ಷಕ್ಕೆ ಏರಿಕೆ: ಸಚಿವ ಸೋಮಣ್ಣ
Last Updated 25 ಜೂನ್ 2021, 19:33 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಬೆಂಗಳೂರು ನಗರದಲ್ಲಿ ನಿರ್ಮಿಸುತ್ತಿರುವ ಒಂದು ಲಕ್ಷ ಬಹುಮಹಡಿ ಮನೆ ನಿರ್ಮಾಣ ಯೋಜನೆಯಡಿ ಈ ಹಿಂದೆ ಸ್ವೀಕರಿಸಿದ್ದ ಎಲ್ಲ ಅರ್ಜಿಗಳನ್ನು ರದ್ದುಪಡಿಸಲಾಗಿದೆ. ಬುಧವಾರದಿಂದ ಹೊಸದಾಗಿ ಅರ್ಜಿಗಳನ್ನು ಸ್ವೀಕರಿಸಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು.

ಒಂದು ಲಕ್ಷ ಬಹುಮಹಡಿ ಮನೆಗಳ ನಿರ್ಮಾಣ ಯೋಜನೆ ಕುರಿತು ರಾಜೀವ್‌ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಅಧಿಕಾರಿಗಳ ಜತೆ ಶುಕ್ರವಾರ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದೆ ಭೂಸ್ವಾಧೀನ ಸೇರಿದಂತೆ ಯಾವುದೇ ಪ್ರಕ್ರಿಯೆ ನಡೆಸದೆ ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಅವುಗಳನ್ನು ರದ್ದುಮಾಡಲು ನಿರ್ಧರಿಸಲಾಗಿದೆ. ಹಿಂದೆ ಅರ್ಜಿ ಸಲ್ಲಿಸಿದ್ದವರೂ ಈಗ ಹೊಸದಾಗಿ ಅರ್ಜಿ ಸಲ್ಲಿಸಬಹುದು’ ಎಂದರು.

ವಾರ್ಷಿಕ ₹ 83,000ದೊಳಗೆ ಆದಾಯ ಹೊಂದಿದ ಕುಟುಂಬದವರು ಮಾತ್ರ ಅರ್ಜಿ ಸಲ್ಲಿಸಬಹುದು ಎಂಬ ಮಿತಿ ಇತ್ತು. ಈಗ ಅದನ್ನು ₹ 3 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಸೀಮಿತವಾಗಿದ್ದ ಯೋಜನೆಯನ್ನು ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದರು.

ಈ ಯೋಜನೆಗಾಗಿ 515 ಎಕರೆ ಜಮೀನು ಸ್ವಾಧೀನಕ್ಕೆ ಪಡೆಯಲಾಗಿದೆ. ಮೊದಲ ಹಂತದಲ್ಲಿ 46,998 ಮನೆಗಳ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದೆ. 42,361 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಆಗಸ್ಟ್‌ 15ರಂದು 5,000 ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು ಎಂದರು.

2022ರ ವೇಳೆಗೆ ಈ ಯೋಜನೆಯಡಿ 80,000 ಮನೆಗಳನ್ನು ಹಂಚಿಕೆ ಮಾಡುವ ಗುರಿ ಇದೆ. ಅತ್ಯಂತ ಪಾರದರ್ಶಕವಾಗಿ ಎಲ್ಲ ಪ್ರಕ್ರಿಯೆಗಳನ್ನೂ ನಡೆಸಲಾಗುವುದು ಎಂದು ಸೋಮಣ್ಣ ತಿಳಿಸಿದರು.

ರಾಜೀವ್‌ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಬಸವರಾಜ್‌ ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.

ದಿಢೀರ್ ಬದಲಾವಣೆ

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮುಖ್ಯಮಂತ್ರಿಯವರ ಲಕ್ಷ ಮನೆ ಯೋಜನೆ ಘೋಷಿಸಲಾಗಿತ್ತು. 2017ರಲ್ಲಿ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಆಗ ವಸತಿ ಸಚಿವರಾಗಿದ್ದ ಎಂ. ಕೃಷ್ಣಪ್ಪ (ವಿಜಯನಗರ), ಯೋಜನೆಯ ಅನುಷ್ಠಾನದ ಜವಾಬ್ದಾರಿ ಹೊತ್ತಿದ್ದರು.

ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ಯೋಜನೆ ಮುಂದುವರಿದಿತ್ತು. ಆಗ, 48,614 ಫಲಾನುಭವಿಗಳಿಗೆ ಆಯ್ಕೆಪತ್ರವನ್ನು ವಿತರಿಸಲಾಗಿತ್ತು. ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವೂ ಯೋಜನೆ ಮುಂದುವರಿಸಿತ್ತು. ಪ್ರಧಾನಮಂತ್ರಿ ಆವಾಸ್‌ ಮತ್ತು ಮುಖ್ಯಮಂತ್ರಿಯವರ ಲಕ್ಷ ಮನೆ ಯೋಜನೆಗಳನ್ನು ಒಟ್ಟಾಗಿ ಅನುಷ್ಠಾನಕ್ಕೆ ತರುವ ನಿರ್ಧಾರ ಮಾಡಲಾಗಿತ್ತು.

‘ಮುಖ್ಯಮಂತ್ರಿಯವರ ಲಕ್ಷ ಮನೆ ಯೋಜನೆಯಡಿ 2021ರ ಜೂನ್‌ ಅಂತ್ಯದೊಳಗೆ 30,000 ಮನೆ ಹಂಚಿಕೆ ಮಾಡದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವೆ’ ಎಂದು ವಸತಿ ಸಚಿವ ಸೋಮಣ್ಣ ಸವಾಲು ಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT