ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವರ್ಗಾವಣೆ ಕೌನ್ಸೆಲಿಂಗ್‌ ಶೀಘ್ರ ಪೂರ್ಣಗೊಳಿಸಿ: ಸಚಿವ ದಿನೇಶ್ ಗುಂಡೂರಾವ್

Published 26 ಆಗಸ್ಟ್ 2024, 23:30 IST
Last Updated 26 ಆಗಸ್ಟ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಸೆಪ್ಟೆಂಬರ್ ಮೊದಲ ವಾರದೊಳಗೆ ವರ್ಗಾವಣೆ ಕೌನ್ಸೆಲಿಂಗ್‌ ಪೂರ್ಣಗೊಳಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಸೋಮವಾರ ಇಲಾಖೆಯ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಎಂಟು ವರ್ಷಗಳ ಬಳಿಕ ಆರೋಗ್ಯ ಇಲಾಖೆಯಲ್ಲಿ ಎಲ್ಲ ವರ್ಗದ ನೌಕರರು, ಸಿಬ್ಬಂದಿಯ ವರ್ಗಾವಣೆಯು ಕೌನ್ಸೆಲಿಂಗ್‌ ಮೂಲಕ ನಡೆಯುತ್ತಿದೆ. ಸೆಪ್ಟೆಂಬರ್ ಮೊದಲ‌ ವಾರದಲ್ಲಿ ವೈದ್ಯಾಧಿಕಾರಿಗಳ ಜೇಷ್ಠತಾ ಪಟ್ಟಿ ತಯಾರಾಗಬೇಕು ಎಂದು ಸೂಚಿಸಿದರು.

ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಏಕರೂಪ ವೇತನ ಜಾರಿ ಕುರಿತು ಪರಿಶೀಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು

ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಕಂಡುಬಂದರೆ ಸಹಿಸುವುದಿಲ್ಲ ಎಂದು ಇದೇ ವೇಳೆ ದಿನೇಶ್ ಗುಂಡೂರಾವ್‌ ಎಚ್ಚರಿಕೆ ನೀಡಿದರು.

ಔಷಧ ಪೂರೈಕೆಯಲ್ಲಿ ಸುಧಾರಣೆ ಆಗಿದೆ. ಹಿಂದೆ ಕೇವಲ ಶೇ 30ರಷ್ಟು ಔಷಧಗಳು ನಿಗಮದಿಂದ ಸರಬರಾಜು ಆಗುತ್ತಿತ್ತು. ಇದೀಗ ಶೇ 65ರಷ್ಟು ಔಷಧಗಳು ಆಸ್ಪತ್ರೆಗಳಿಗೆ ರವಾನೆಯಾಗುತ್ತಿವೆ. ಇದು ಶೇ 90ಕ್ಕೆ ಏರಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆಯನ್ನು ಸಹಿಸುವುದಿಲ್ಲ ಎಂದು ಔಷಧ ಸರಬರಾಜು ನಿಗಮದ ಅಧಿಕಾರಿಗಳಿಗೆ ಎಚ್ಚರಿಸಿದರು.

ಆಸ್ಪತ್ರೆಗಳು ಅಗತ್ಯಕ್ಕನುಗುಣವಾಗಿ ಸ್ಥಳೀಯ ಮಟ್ಟದಲ್ಲಿ ಎಬಿಎಆರ್‌ಕೆ ನಿಧಿಯಲ್ಲಿ ಶೇ 10ರಷ್ಟು ಔಷಧ ಖರೀದಿಸಬಹುದು. ಈ ನಿಧಿಯನ್ನು ಔಷಧ ಖರೀದಿಗೇ ಪೂರ್ಣ ಬಳಸಿದರೆ ಆಸ್ಪತ್ರೆಗಳ ಅಭಿವೃದ್ಧಿ ಕುಂಠಿತಗೊಳ್ಳಬಹುದು ಎಂದರು.

ಆರೋಗ್ಯ ಸೇವೆಗಳ ಕುರಿತು ಸಾರ್ವಜನಿಕರ ದೂರುಗಳಿಗೆ 104 ಸಹಾಯವಾಣಿಗೆ ಪರ್ಯಾಯವಾಗಿ 112 ಸಹಾಯವಾಣಿ ಆರಂಭಿಸುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಿ ವರದಿ ನೀಡಲು ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT