ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಮಧ್ಯೆ ಇರಬೇಕು; ಸೋಂಕಿನ ಭಯ ತಪ್ಪಿದ್ದಲ್ಲ

ಕೊರೊನಾ ಜತೆ ಬದುಕೋಣ
Last Updated 21 ಸೆಪ್ಟೆಂಬರ್ 2020, 22:38 IST
ಅಕ್ಷರ ಗಾತ್ರ

ಬೆಂಗಳೂರು: ‘ಯಾವತ್ತೋ ಒಂದು ದಿನ ನನಗೂ ಕೊರೊನಾ ಸೋಂಕು ತಗಲುತ್ತದೆ ಎಂಬ ಶಂಕೆ ಇತ್ತು. ಕೋವಿಡ್‌ ವಿರುದ್ಧದ ಹೋರಾಟಕ್ಕೆ ಸರ್ಕಾರ ಸೂಚಿಸಿದ ಪ್ರಕಾರ ಬೆಂಗಳೂರಿನ ಒಂದು ವಲಯದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದೆ.
ಜನರ ಮಧ್ಯೆಯೇ ಇರಬೇಕಾಗಿತ್ತು. ಇಂತಹ ಯಾವುದೋ ಸಂದರ್ಭದಲ್ಲಿ ಸೋಂಕು ತಗುಲಿದೆ’ ಎನ್ನುತ್ತಾರೆ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿರುವ ಯಲಹಂಕ ಶಾಸಕ ಎಸ್‌.ಆರ್‌. ವಿಶ್ವನಾಥ್‌.

‘ನಮ್ಮ ಬಳಿ ಬರುವ ಜನರನ್ನು ದೂರ ಇರಿಸಲು ಆಗುವುದಿಲ್ಲ. ಆದರೆ, ಒಂದಷ್ಟು ಜನ ಮಾಸ್ಕ್‌ ಹಾಕಿಕೊಳ್ಳುತ್ತಿ
ರಲಿಲ್ಲ, ಹತ್ತಿರ ಬಂದೇ ಮಾತನಾಡುವುದು, ಸುತ್ತುವರಿಯುವುದನ್ನು ಮಾಡುತ್ತಿದ್ದರು. ಈ ರೀತಿಯಾಗಿ ಕೊರೊನಾ ಸೋಂಕು ತಗುಲಿತು’ ಎಂದರು.

‘‌ರೋಗ ಲಕ್ಷಣಗಳು ಇರಲಿಲ್ಲ. ಆಸ್ಪತ್ರೆಗೆ ಹೋಗುವಾಗ ಕೆಲವು ದಿನಗಳು ಅಲ್ಲೇ ಇರಬೇಕಾಗುತ್ತದೆ ಎಂದು ತಯಾರಿ ಮಾಡಿಕೊಂಡು ಹೋಗಿದ್ದೆ. ಈ ಸಂದರ್ಭದಲ್ಲಿ ಪುಸ್ತಕಗಳನ್ನು ಓದಲು ನಿರ್ಧರಿಸಿದ್ದೆ. ಚಂದ್ರಶೇಖರ ಆಜಾದ್‌ ಕುರಿತ ‘ಅಜೇಯ’ ಮತ್ತು ಸಾವರ್ಕರ್‌ ಬರೆದಿರುವ ‘ಸ್ವಾತಂತ್ರ್ಯಸಂಗ್ರಾಮ 1857’ ಪುಸ್ತಕಗಳನ್ನು ಓದಿದೆ. ಪ್ರತೀ ಒಂದೂವರೆ ಗಂಟೆಗೂ ಪ್ರಾಣಾಯಾಮ ಮಾಡಲು ಹೇಳುತ್ತಿದ್ದರು. ಶ್ವಾಸಕೋಶದ ಸಾಮರ್ಥ್ಯಹೆಚ್ಚಿಸಲು ಮತ್ತು ಉಸಿರಾಟ ಸರಾಗವಾಗಿಸಲು ಇದು ಅಗತ್ಯವಾಗಿತ್ತು.
ಹೆದರಿಕೆ ಆಗಲಿಲ್ಲ’ ಎಂದು ಅವರು ಹೇಳಿದರು.

‘ಸದಾ ಜನರು, ಅಧಿಕಾರಿಗಳು ಮತ್ತು ಕಾರ್ಯಕರ್ತರ ಜತೆ ಮಾತನಾಡಿ ಕೊಂಡು ಇರುತ್ತಿದ್ದ ನನಗೆ ವಾರ್ಡ್‌ನಲ್ಲಿ ಮಾತನಾಡಲು ಯಾರೂ ಇಲ್ಲದ ಕಾರಣ ತಲೆ ಚಿಟ್ಟು ಹಿಡಿಯುತ್ತಿತ್ತು. ಅದಕ್ಕಾಗಿ ದೂರವಾಣಿ ಮೂಲಕ ಕಾರ್ಯಕರ್ತರು ಮತ್ತು ಅಧಿಕಾರಿಗಳ ಜತೆ ಫೋನ್‌ ಮೂಲಕವೇ ಮಾತನಾಡುತ್ತಿದ್ದೆ ಸಚಿವ ಬೈರತಿ ಬಸವರಾಜ್‌ ಅವರು ಕೂಡ ನಾನಿದ್ದ ವಾರ್ಡ್‌ನ ಪಕ್ಕದಲ್ಲೇ ದಾಖಲಾಗಿದ್ದರು’.

‘ಇದೇನು ಹೆದರುವ ಕಾಯಿಲೆ ಅಲ್ಲ. ಹಿಂದಿನಿಂದಲೂ ಇದ್ದ ಕೆಲವು ಆರೋಗ್ಯಕರ ಪದ್ಧತಿಗಳನ್ನು ನೆನಪಿಗೆ ಬಂದವು. ಹೊರಗಿನಿಂದ ಬಂದಾಗ ಕೈಕಾಲು ತೊಳೆದುಕೊಳ್ಳುವುದು, ಸರಳ ಆಹಾರ, ವ್ಯಾಯಾಮ, ಯೋಗ, ಪ್ರಾಣಾಯಾಮಗಳನ್ನು ನಿತ್ಯವೂ ರೂಢಿಸಿಕೊಂಡರೆ ಕ್ಷೇಮ.’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT