ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಪರೀಕ್ಷೆ ಪ್ರಮಾಣ ಕಡಿತಗೊಳಿಸಿದ ಬಿಬಿಎಂಪಿ: ಸರ್ಕಾರದಿಂದಲೇ ಸೂಚನೆ?

ಸೋಂಕಿತರ ಪರೋಕ್ಷ ಸಂಪರ್ಕಕ್ಕೆ ಬಂದವರ ಪರೀಕ್ಷೆಗೆ ಕೊಕ್‌
Last Updated 11 ಮೇ 2021, 20:33 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಲ್ಲೇ ಅತಿ ಹೆಚ್ಚು ಕೋವಿಡ್‌ ಸಕ್ರಿಯ ಪ್ರಕರಣಗಳನ್ನು ಹೊಂದಿರುವ ರಾಜ್ಯ ಕರ್ನಾಟಕ. ಈ ಹಣೆಪಟ್ಟಿ ಅಂಟಿಕೊಂಡ ಬಳಿಕ ನಗರದಲ್ಲಿ ಸೋಂಕು ‍ಪತ್ತೆ ಪ್ರಮಾಣ ತಗ್ಗಿಸಲು ವಾಮಮಾರ್ಗ ಅನುಸರಿಸಲಾಗುತ್ತಿದೆಯೇ? ಕೋವಿಡ್‌ ಪರೀಕ್ಷೆಗಳ ಪ್ರಮಾಣವನ್ನು ಏಕಾಏಕಿ ಕಡಿಮೆ ಮಾಡಿರುವ ಕ್ರಮ ಇಂತಹದ್ದೊಂದು ಅನುಮಾನಕ್ಕೆ ಕಾರಣವಾಗಿದೆ.

ಇದುವರೆಗೂ ಯಾವುದೇ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾದರೂ ಅವರ ನೇರ ಸಂಪರ್ಕಕ್ಕೆ ಬಂದವರನ್ನು ಹಾಗೂ ಪರೋಕ್ಷವಾಗಿ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಿ ಅವರಿಗೂ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿತ್ತು. ಒಬ್ಬ ಸೋಂಕಿತ ಪತ್ತೆಯಾದರೆ ಕನಿಷ್ಠ ಪಕ್ಷ 20 ಮಂದಿಯನ್ನಾದರೂ ಪರೀಕ್ಷೆ ನಡೆಸಬೇಕು ಎಂಬ ತಂತ್ರವನ್ನು ಬಿಬಿಎಂಪಿ ಅನುಸರಿಸುತ್ತಿತ್ತು. ಪರೀಕ್ಷಾ ಫಲಿತಾಂಶ ಬರುವವರೆಗೂ ಅವರು ಹೊರಗಡೆ ಅಡ್ಡಾಡದಂತೆ ಹಾಗೂ ಮನೆಯಲ್ಲೇ ಪ್ರತ್ಯೇಕವಾಸದಲ್ಲಿ ಇರುವಂತೆ ಸೂಚನೆ ನೀಡಲಾಗುತ್ತಿತ್ತು. ಕೋವಿಡ್‌ ರೋಗಿಯ ಸಂಪರ್ಕಕ್ಕೆ ಬಂದು ಸೋಂಕು ಅಂಟಿಸಿಕೊಂಡವರು ಮತ್ತಷ್ಟು ಮಂದಿಗೆ ಸೋಂಕು ಹರಡುವುದನ್ನು ತಡೆಯಲಾಗುತ್ತಿತ್ತು. ಈ ವಿಧಾನವನ್ನು ಅನುಸರಿಸಿಯೇ ಕೋವಿಡ್‌ ಮೊದಲ ಅಲೆಯನ್ನು ನಿಯಂತ್ರಿಸುವಲ್ಲಿ ಬಿಬಿಎಂಪಿ ತಕ್ಕಮಟ್ಟಿನ ಯಶಸ್ಸನ್ನೂ ಗಳಿಸಿತ್ತು.

ನಗರದಲ್ಲಿ ಎರಡನೇ ಅಲೆಯಲ್ಲಿ ಭಾರಿ ಪ್ರಮಾಣದಲ್ಲಿ ಸೋಂಕು ಪತ್ತೆಯಾಗಲು ಆರಂಭವಾದ ಬಳಿಕ ಸೊಂಕಿತರ ಸಂಪರ್ಕಕ್ಕೆ ಬಂದವರನ್ನು 1:20ರ ಅನುಪಾತದಲ್ಲಿ ಪರೀಕ್ಷೆ ನಡೆಸಲು ಸಾಧ್ಯವಾಗಿರಲ್ಲಿಲ್ಲ. ಆದರೂ ಸೋಂಕಿತರ ಜೊತೆ ನೇರ ಹಾಗೂ ಪರೋಕ್ಷ ಸಂಪರ್ಕಕ್ಕೆ ಬಂದವರನ್ನು ಆರೋಗ್ಯ ಕಾರ್ಯಕರ್ತರು ಆದಷ್ಟು ಪ್ರಮಾಣದಲ್ಲಿ ಪತ್ತೆ ಹಚ್ಚಿ ಪರೀಕ್ಷೆಗೆ ಒಳಪಡಿಸುತ್ತಿದ್ದರು. ನಿತ್ಯ ಸರಾಸರಿ 20 ಸಾವಿರದಷ್ಟು ಪ್ರಕರಣಗಳು ಪತ್ತೆಯಾಗುತ್ತಿದ್ದಾಗ 60 ಸಾವಿರಕ್ಕೂ ಅಧಿಕ ಮಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಆದರೆ, ಸೋಂಕಿತರ ಪರೋಕ್ಷ ಸಂಪರ್ಕಕ್ಕೆ ಬಂದವರನ್ನು ಕೋವಿಡ್‌ ಚಿಕಿತ್ಸೆಗೆ ಒಳಪಡಿಸುವ ಪರಿಪಾಠವನ್ನು ನಾಲ್ಕು ದಿನಗಳಿಂದ ಕೈಬಿಡಲಾಗಿದೆ. ಮೇ 9ರಂದು 20 ಸಾವಿರಕ್ಕೂ ಅಧಿಕ ಕೋವಿಡ್ ಪ್ರಕರಣ ಪತ್ತೆಯಾದರೂ ಮರುದಿನ ಕೇವಲ 32 ಸಾವಿರ ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಿಂದಾಗಿ ಸೋಂಕು ಪತ್ತೆ ಪ್ರಮಾಣ ಈಗ 15 ಸಾವಿರಕ್ಕೆ ಇಳಿದಿದೆ.

‘ಸದ್ಯಕ್ಕೆ ನಾವು ಸೋಂಕಿತರ ಹಾಗೂ ಸೋಂಕಿನ ಲಕ್ಷಣ ಇರುವವರನ್ನು ಮಾತ್ರ ಪರೀಕ್ಷೆಗೆ ಒಳಪಡಿಸುತ್ತಿದ್ದೇವೆ. ಸೋಂಕಿತರ ಪರೋಕ್ಷ ಸಂಪರ್ಕಕ್ಕೆ ಬಂದವರನ್ನು ಪರೀಕ್ಷೆಗೆ ಒಳಪಡಿಸುತ್ತಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳಿಂದ ಸ್ಪಷ್ಟ ಸೂಚನೆ ಇದೆ’ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರವೊಂದರ (ಪಿಎಚ್‌ಸಿ) ವೈದ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗ ಕೋವಿಡ್‌ ಲಸಿಕೆ ಪಡೆಯಲು ನಿತ್ಯ ನೂರಾರು ಜನ ಪಿಎಚ್‌ಸಿಗಳಿಗೆ ಬರುತ್ತಾರೆ. ಲಸಿಕೆ ನೀಡುವುದು ಹಾಗೂ ಕೋವಿಡ್‌ ಪರೀಕ್ಷೆ ನಡೆಸುವುದಕ್ಕೆ ಸಾಕಷ್ಟು ಪ್ರಮಾಣದಲ್ಲಿ ಸಿಬ್ಬಂದಿ ಲಭ್ಯ ಇಲ್ಲ. ಕೋವಿಡ್‌ ಪರೀಕ್ಷೆಗಳ ಸಂಖ್ಯೆಯನ್ನು ಕಡಿತಗೊಳಿಸಲು ಇದು ಕೂಡಾ ಕಾರಣ’ ಎಂದು ಅವರು ವಿವರಿಸಿದರು.

‘ಈ ಹಿಂದೆ ಸೊಂಕು ಲಕ್ಷಣ ಇದೆ ಎಂದ ತಕ್ಷಣ ಪಿಎಚ್‌ಸಿಗಳಲ್ಲಿ ನೇರವಾಗಿ ಕೋವಿಡ್‌ ಪರೀಕ್ಷೆ ಮಾಡುತ್ತಿದ್ದರು. ಈಗ ವೈದ್ಯರ ಶಿಫಾರಸು ಪತ್ರ ತನ್ನಿ ಎನ್ನುತ್ತಿದ್ದಾರೆ. ಸೋಂಕಿನ ಎಲ್ಲ ಲಕ್ಷಣಗಳಿದ್ದರೂ ಪರೀಕ್ಷೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಸಂಜಯ ನಗರದ ನಿವಾಸಿ ಕೃಷ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಅಷ್ಟೇ ಅಲ್ಲ, ಈ ಹಿಂದೆ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದ (ಪಿಎಚ್‌ಸಿ) ವ್ಯಾಪ್ತಿಯಲ್ಲಿ ಸಂಪರ್ಕ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕಿಯರ ನಾಲ್ಕೈದು ತಂಡಗಳು ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ಮಾರುಕಟ್ಟೆಗಳು, ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ಸೇರಿದಂತೆ ಜನ ಜಂಗುಳಿ ಹೆಚ್ಚು ಇರುವ ‍ಪ್ರದೇಶಗಳಿಗೆ ತೆರಳಿ ಜನರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸುತ್ತಿದ್ದರು. ಸಂಚಾರ ನಿರ್ಬಂಧ ಕ್ರಮಗಳು ಜಾರಿಯಾದ ಬಳಿಕ ಇದನ್ನೂ ಕೈಬಿಡಲಾಗಿದೆ.

ಸರ್ಕಾರದಿಂದಲೇ ಸೂಚನೆ?
‘ಕೋವಿಡ್‌ ಪರೀಕ್ಷೆ ಪ್ರಮಾಣವನ್ನು ಕಡಿಮೆ ಮಾಡುವಂತೆ ಸರ್ಕಾರದಿಂದಲೇ ಸೂಚನೆ ಇದೆ. ಹಾಗಾಗಿ ಪರೀಕ್ಷೆಗಳ ಪ್ರಮಾಣವನ್ನು ಕಡಿತಗೊಳಿಸಿದ್ದೇವೆ’ ಎಂದು ಹೆಸರು ಬಹಿರಂಗಪಡಿಸಲು ಬಿಬಿಎಂಪಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋವಿಡ್‌ ದೃಢಪಟ್ಟ ವ್ಯಕ್ತಿಗಳ ಜೊತೆ ನೇರ ಹಾಗೂ ಪರೋಕ್ಷ ಸಂಪರ್ಕಕ್ಕೆ ಬಂದವರನ್ನು ಗುರುತಿಸಿ, ಪ್ರತ್ಯೇಕಿಸುವ ಮೂಲಕ ಅವು ಇನ್ನಷ್ಟು ಮಂದಿಗೆ ಸೋಂಕು ಹರಡದಂತೆ ತಡೆಯುವುದು ಈ ಕಾಯಿಲೆಯ ನಿಯಂತ್ರಣಕ್ಕೆ ಇರುವ ಅತ್ಯಂತ ವೈಜ್ಞಾನಿಕ ಮಾರ್ಗ. ಪರೀಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿದರೆ ಈ ರೋಗ ನಿಯಂತ್ರಣ ಕಷ್ಟಸಾಧ್ಯ’ ಎಂದು ಅಧಿಕಾರಿ ಅಭಿಪ್ರಾಯಪಟ್ಟರು.

ಪರೀಕ್ಷೆ ಪ್ರಮಾಣ ಕಡಿಮೆ ಮಾಡುವಂತೆ ಸಚಿವರು ಸೂಚನೆ ನೀಡಿದ್ದಾರೆ ಎಂದು ಬಿಜೆಪಿ ಶಾಸಕರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT