ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ 19: ಶಂಕಿತರ ಸಂಪರ್ಕಕ್ಕೆ ಐವಿಆರ್‌ಎಸ್‌

35 ಖಾಸಗಿ ಆಸ್ಪತ್ರೆಗಳ ಜತೆ ಒಡಂಬಡಿಕೆ l ವಿಮಾನ ನಿಲ್ದಾಣ, ಬಂದರುಗಳಲ್ಲಿ 1,14,705 ಪ್ರಯಾಣಿಕರ ತಪಾಸಣೆ
Last Updated 16 ಮಾರ್ಚ್ 2020, 22:14 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ 14 ದಿನಗಳಲ್ಲಿ ಬೆಂಗಳೂರಿಗೆ ಬಂದಿಳಿದ ಪ್ರಯಾಣಿಕರನ್ನು ಸಂಪರ್ಕಿಸಲು ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಪ್ರತಿಕ್ರಿಯಾತ್ಮಕ ಧ್ವನಿ ಸ್ಪಂದನಾ ವ್ಯವಸ್ಥೆ (ಐವಿಆರ್‌ಎಸ್‌) ಜಾರಿಗೆ ತರಲಾಗಿದೆ.

ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣ, ಕಾರವಾರ ಮತ್ತು ಮಂಗಳೂರು ಬಂದರುಗಳಲ್ಲಿ ಒಟ್ಟಾರೆ 1,14,705 ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಸ್ವಯಂ ಘೋಷಣೆ ಮಾಡಿಕೊಳ್ಳುವ ನಮೂನೆಯಲ್ಲಿ ಪ್ರಯಾಣಿಕರು ತಮ್ಮ ಮೊಬೈಲ್ ದೂರವಾಣಿ ಸಂಖ್ಯೆ ಮತ್ತು ಇ–ಮೇಲ್ ವಿಳಾಸ ನೀಡಿದ್ದಾರೆ. 24 ಗಂಟೆಗಳಲ್ಲಿ 42 ಸಾವಿರ ಕರೆಗಳನ್ನು ಈ ಪ್ರಯಾಣಿಕರಿಗೆ ಮಾಡಿದ್ದೇವೆ. ಅವರ ಆರೋಗ್ಯ ಸ್ಥಿತಿಗತಿ ಬಗ್ಗೆ ಐವಿಆರ್‌ಎಸ್‌ ಬಳಸಿ ತಿಳಿದುಕೊಳ್ಳುತ್ತಿದ್ದೇವೆ’ ಎಂದು ಆರೋಗ್ಯ ಇಲಾಖೆ ಆಯುಕ್ತ ಪಂಕಜ್‌ ಕುಮಾರ್ ಪಾಂಡೆ ತಿಳಿಸಿದರು.

‘ತಕ್ಷಣ ಸ್ಪಂದಿಸುವ ನಿಟ್ಟಿನಲ್ಲಿ 17 ಸರ್ಕಾರಿ ಮತ್ತು 35 ಖಾಸಗಿ ಆಸ್ಪತ್ರೆಗಳನ್ನು ನಗರದಲ್ಲಿ ಗುರುತಿಸಲಾಗಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಮಾಹಿತಿ ನೀಡಿದರು.

‘ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ 35 ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ರೋಗಿಗಳ ಲಕ್ಷಣ ಆಧರಿಸಿ ವೈದ್ಯರು ಅಥವಾ 104ರ ಸಿಬ್ಬಂದಿ ಆ ಖಾಸಗಿ ಆಸ್ಪತ್ರೆಗೆ ತೆರಳುವಂತೆ ಸೂಚನೆ ನೀಡುತ್ತಾರೆ. ವಿದೇಶದಿಂದ ಬಂದ ದಾಖಲೆ ತೋರಿಸಿ ಆಸ್ಪತ್ರೆಗೆ ದಾಖಲಾಗಬಹುದು’ ಎಂದರು.

‘14 ದಿನಗಳಲ್ಲಿ ಬಂದಿರುವ ಎಲ್ಲಾ ಪ್ರಯಾಣಿಕರನ್ನು ಒಂದೇ ವೇಳೆಗೆ ಸಂಪರ್ಕಿಸಿ ಅವರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಕಲೆ ಹಾಕಲು ಐವಿಆರ್‌ಎಸ್‌ ವ್ಯವಸ್ಥೆ ಬಳಸಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ವ್ಯ‌ಕ್ತಿ ಕರೆ ಸ್ವೀಕರಿಸಿದ ಕೂಡಲೇ ಪ್ರಾಥಮಿಕ ಮಾಹಿತಿಯನ್ನು ಕೇಳಿಸಲಾಗುತ್ತದೆ’ ಎಂದು ಹೇಳಿದರು.

ಬಳಿಕ ಕೊರೊನಾ ಸೋಂಕಿನ ಲಕ್ಷಣಗಳಾದ ಕೆಮ್ಮು, ನೆಗಡಿ, ಜ್ವರದ ಲಕ್ಷಣಗಳಿವೆಯೇ ಎಂದು ಪ್ರಶ್ನಿಸುತ್ತದೆ. ಇದಕ್ಕೆ ಉತ್ತರ ಪಡೆಯಲು ‘ಹೌದು’ ಎಂದಾದರೆ ‘ಒಂದನ್ನು' ಒತ್ತಿ. ‘ಇಲ್ಲ’ ಎಂದಾದರೆ `ಎರಡನ್ನು’ ಒತ್ತಿ ಎಂದು ಹೇಳಬಹುದು. ‌ಈ ರೀತಿ ಸಂಗ್ರಹಿಸಿದ ದತ್ತಾಂಶವನ್ನು ಆರೋಗ್ಯವಂತ ಹಾಗೂ ಅನಾರೋಗ್ಯ ಸಮಸ್ಯೆಯುಳ್ಳವರು ಎಂದು ವರ್ಗೀಕರಣ ಮಾಡಿ ಪ್ರತ್ಯೇಕ ನಿಗಾ ಹಾಗೂ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

9 ಮಂದಿ ಒಳಕ್ಕೆ, 36 ಮಂದಿ ಹೊರಕ್ಕೆ

ಕೊರೊನಾ ಸೋಂಕು ಶಂಕೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸೋಮವಾರ 9 ಮಂದಿ ಒಳರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶಂಕೆಯಿಂದ ದಾಖಲಾಗಿರುವ ಜನರಲ್ಲಿ ಈ ಸೋಂಕು ಪತ್ತೆಯಾಗಿಲ್ಲ ಎಂದು ವರದಿ ಬಂದ ಹಿನ್ನೆಲೆಯಲ್ಲಿ 36 ಮಂದಿಯನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ. ಇನ್ನೂ 44 ಮಂದಿ ಆಸ್ಪತ್ರೆಗಳಲ್ಲಿಯೇ ನಿಗಾದಲ್ಲಿದ್ದಾರೆ.

ಬೆಂಗಳೂರಿನಲ್ಲಿ 1, ಹಾಸನ 2, ದಕ್ಷಿಣ ಕನ್ನಡ 3, ಕಲಬುರ್ಗಿ 5, ಉತ್ತರ ಕನ್ನಡ 2, ಉಡುಪಿಯಲ್ಲಿ ಒಬ್ಬರು ಒಳರೋಗಿಗಳಾಗಿ ದಾಖಲಾಗಿದ್ದಾರೆ. ಇವರುಗಳ ಗಂಟಲು ದ್ರವದ ಮಾದರಿ ಹಾಗೂ ರಕ್ತ ಮಾದರಿಯನ್ನು ಸಂಗ್ರಹಿಸಿ ಸೋಂಕು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.

ಈ ಹಿಂದೆ ದಾಖಲಾಗಿದ್ದ ಶಂಕಿತರ ಪೈಕಿ ರಾಜೀವ್‍ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿನ ಒಬ್ಬ, ಬೆಂಗಳೂರಿನ ಇತರೆ ಆಸ್ಪತ್ರೆಗಳಲ್ಲಿ 12, ದಕ್ಷಿಣ ಕನ್ನಡ 12, ಬಳ್ಳಾರಿ 6, ಉಡುಪಿ 1, ವಿಜಯಪುರ 1, ಗದಗ 2, ಧಾರವಾಡ 1 ಸೇರಿ ಒಟ್ಟು 36 ಮಂದಿಯ ಮಾದರಿಗಳಲ್ಲಿ ಸೋಂಕು ಪತ್ತೆಯಾಗಿಲ್ಲ. ಹಾಗಾಗಿ ಅವರನ್ನು ಆಸ್ಪತ್ರೆಯಿಂದ ಕಳುಹಿಸಿಕೊಡಲಾಗಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

ಹೊಸದಾಗಿ 33 ಮಂದಿ ಶಂಕಿತರ ಗಂಟಲ ದ್ರವ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ಬಿಎಂಟಿಸಿ: ಸಾವಿರ ಮಾರ್ಗ ಕಡಿತ

ಪ್ರಯಾಣಿಕರ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ಬಿಎಂಟಿಸಿ ಒಂದು ಸಾವಿರ ಮಾರ್ಗಗಳನ್ನು ಸೋಮವಾರ ಕಡಿಮೆ ಮಾಡಿತ್ತು. ಬಿಎಂಟಿಸಿ ಸರಾಸರಿ ವರಮಾನದಲ್ಲಿ ಪ್ರತಿದಿನ ₹80 ಲಕ್ಷದಂತೆ ಎರಡು ದಿನಗಳಿಂದ ₹1.60 ಕೋಟಿ ಖೋತಾ ಆಗಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

6 ಸಾವಿರ ಬಸ್‌ಗಳು ನಿತ್ಯ ಸಂಚರಿಸುತ್ತಿದ್ದು, ಅವುಗಳಲ್ಲಿ 1 ಸಾವಿರ ಬಸ್ ರಸ್ತೆಗೆ ಇಳಿದಿಲ್ಲ ಎಂದು ಹೇಳಿವೆ.

ರೈಲು ನಿಲ್ದಾಣದಲ್ಲಿ ಸಹಾಯವಾಣಿ

ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಯಶವಂತಪುರ ಮತ್ತು ಕಂಟೋನ್ಮೆಂಟ್ ರೈಲು ನಿಲ್ದಾಣಗಳಲ್ಲಿ ಸಯಾವಾಣಿ ಕೇಂದ್ರ ತೆರೆಯಲಾಗಿದೆ.

ರೋಗದ ಬಗ್ಗೆ ಮಾಹಿತಿ ಮತ್ತು ಜಾಗೃತಿಯನ್ನು ಕೇಂದ್ರದ ಸಿಬ್ಬಂದಿಗಳು ನೀಡಲಿದ್ದಾರೆ. ವೈಯಕ್ತಿಕ ಸ್ವಾಸ್ಥ್ಯದ ಬಗ್ಗೆ ಮಾಹಿತಿಯುಳ್ಳ ಕರ ಪತ್ರಗಳನ್ನು ಪ್ರಯಾಣಿಕರಿಗೆ ಹಂಚಲಾಗುತ್ತಿದೆ.

ಸಂಚಾರ ದಟ್ಟಣೆ ಇಳಿಮುಖ

ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ನಗರದಲ್ಲಿ ಸೋಮವಾರ ಜನ ಸಂಚಾರ ವಿರಳವಾಗಿಯೇ ಇತ್ತು. ಭಾನುವಾರಕ್ಕೆ ಹೋಲಿಸಿದರೆ ದಟ್ಟಣೆ ತುಸು ಹೆಚ್ಚಳವಾಗಿತ್ತಾದರೂ, ಪ್ರತಿ ಸೋಮವಾರ ಕಂಡುಬರುವ ದಟ್ಟಣೆ ಇರಲಿಲ್ಲ.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳು ಬೆರಳೆಣಿಕೆ ಪ್ರಯಾಣಿಕರನ್ನು ಹೊತ್ತು ಸಂಚರಿಸಿದವು. ಮೆಟ್ರೊ ರೈಲಿನಲ್ಲೂ ಪ್ರಯಾಣಿಕರ ಸಂಖ್ಯೆ ವಿರಳವಾಗಿಯೇ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT