ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ಸಂಸ್ಕರಣೆ ನಿರ್ವಹಣೆಗೆ ನಿಗಮ?

ಪ್ರಸ್ತಾವನೆ ಸಿದ್ಧಪಡಿಸುತ್ತಿದೆ ಬಿಬಿಎಂಪಿ: ಶೀಘ್ರ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಕೆ
Last Updated 25 ನವೆಂಬರ್ 2020, 21:21 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ರಾಜ್ಯ ಸರ್ಕಾರವು ರಚಿಸಲಿರುವ ಹೊಸ ನಿಗಮಗಳ ಪಟ್ಟಿಗೆ ಮತ್ತೊಂದು ನಿಗಮ ಸೇರ್ಪಡೆಯಾಗುವ ಸಾಧ್ಯತೆ ಇದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಏಳು ಕಸ ಸಂಸ್ಕರಣಾ ಘಟಕಗಳ ನಿರ್ವಹಣೆಗೆ ಪ್ರತ್ಯೇಕ ನಿಗಮವನ್ನು ಸ್ಥಾಪಿಸುವ ಕುರಿತು ಬಿಬಿಎಂಪಿ ಪ್ರಸ್ತಾವ ಸಿದ್ಧಪಡಿಸುತ್ತಿದೆ.

ಹಸಿಕಸದಿಂದ ಸಾವಯವ ಗೊಬ್ಬರ ತಯಾರಿಸುವ ಉದ್ದೇಶದಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು ಏಳು ಕಡೆ ಕಸ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗಿದೆ. ಈ ಘಟಕಗಳು ನಿತ್ಯ 2,300 ಟನ್‌ಗಳಷ್ಟು ಕಸವನ್ನು ಸಂಸ್ಕರಣೆಗೆ ಒಳಪಡಿಸುವ ಸಾಮರ್ಥ್ಯ ಹೊಂದಿವೆ. ಆದರೆ, ಇವುಗಳಲ್ಲಿ ನಿತ್ಯ 1000 ಟನ್‌ಗಳಷ್ಟು ಕಸ ಮಾತ್ರ ಸಂಸ್ಕರಣೆಯಾಗುತ್ತಿದೆ. ಈ ಘಟಕಗಳಲ್ಲಿ ಉತ್ಪಾದನೆಯಾಗುವ ಕಾಂಪೋಸ್ಟ್‌ಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಂಡುಕೊಳ್ಳುವಲ್ಲೂ ಬಿಬಿಎಂಪಿ ಯಶಸ್ವಿಯಾಗಿಲ್ಲ.

ಸ್ಥಳೀಯರ ಪ್ರತಿರೋಧದಿಂದಾಗಿ ಕೆಲವು ಘಟಕಗಳನ್ನು ಪದೇ ಪದೇ ಸ್ಥಗಿತಗೊಳಿಸಬೇಕಾದ ಸ್ಥಿತಿ ಇದೆ. ಘಟಕಗಳ ಉಪಉತ್ಪನ್ನವಾದ 16 ಮಿ.ಮಿ ದಪ್ಪದ ಹಾಗೂ 35 ಮಿ.ಮೀ ದಪ್ಪದ ಸಾವಯವ ಗೊಬ್ಬರವನ್ನುದಾಸ್ತಾನು ಇಡುವುದಕ್ಕೂ ಬಿಬಿಎಂಪಿ ಸಮಸ್ಯೆ ಎದುರಿಸುತ್ತಿದೆ. ಇವುಗಳನ್ನು ರೈತರಿಗೆ ಉಚಿತವಾಗಿ ನೀಡುತ್ತಿದೆ.

‘ಬಿಬಿಎಂಪಿಯ ಕಸ ಸಂಸ್ಕರಣೆ ಘಟಕಗಳ ನಿರ್ವಹಣೆಗೆ ಪ್ರತ್ಯೇಕ ನಿಗಮ ಸ್ಥಾಪಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಲಹೆ ನೀಡಿದ್ದಾರೆ. ಈ ಕುರಿತು ನಾವು ರೂಪರೇಷೆ ಸಿದ್ಧಪಡಿಸುತ್ತಿದ್ದೇವೆ. ಶೀಘ್ರವೇ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುತ್ತೇವೆ’ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಸ ಸಂಸ್ಕರಣಾ ಘಟಕಕ್ಕೆ ಪ್ರತ್ಯೇಕ ನಿಗಮ ರೂಪಿಸಿದ್ದೇ ಆದರೆ, ಅವುಗಳ ನಿರ್ವಹಣೆಯಲ್ಲಿ ವೃತ್ತಿಪರತೆ ಹೆಚ್ಚಲಿದೆ. ಈ ಘಟಕಗಳಲ್ಲಿ ನಿರ್ವಹಣೆ ವೇಳೆ ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಂಡುಕೊಳ್ಳುವುದು ಸುಲಭವಾಗಲಿದೆ. ಈ ಘಟಕಗಳಲ್ಲಿ ತಯಾರಾಗುವ ಕಾಂಪೋಸ್ಟ್‌ಗಳಿಗೆ ಉತ್ತಮ ಮಾರುಕಟ್ಟೆ ಕಂಡುಕೊಳ್ಳಲು ಸಾಧ್ಯವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT