ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂದಿನಿಂದ ನೋಂದಣಿ

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ನೇತೃತ್ವದಲ್ಲಿ ಸಭೆ
Last Updated 28 ಏಪ್ರಿಲ್ 2021, 2:48 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮೇ 1ರಿಂದ ಕೋವಿಡ್‌ ಲಸಿಕೆ ನೀಡಲು ಬುಧವಾರದಿಂದ ನೋಂದಣಿ ಆರಂಭವಾಗಲಿದೆ. ಲಸಿಕೆ ಪಡೆಯಲು ಅರ್ಹರಾಗಿರುವವರು ಕೋವಿನ್‌ ಪೋರ್ಟಲ್‌ನಲ್ಲಿ ಅಗತ್ಯ ಮಾಹಿತಿ ಒದಗಿಸಿ ನೋಂದಣಿ ಮಾಡಿಕೊಳ್ಳಬಹುದು.

ಪಾಲಿಕೆಯ ಹಿರಿಯ ಅಧಿಕಾರಿಗಳೊಂದಿಗೆ ಮಂಗಳವಾರ ವರ್ಚ್ಯುವಲ್‌ ಸಭೆ ನಡೆಸಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ, ಮೂರನೇ ಹಂತದ ಲಸಿಕೆ ವಿತರಣೆಗೆ ಕೈಗೊಂಡಿರುವ ಸಿದ್ಧತೆಗಳನ್ನು ಪರಿಶೀಲಿಸಿದರು.‌

ಸಭೆಯಲ್ಲಿ ಮಾತನಾಡಿದ ಅವರು, ‘ಈ ಬಾರಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಸರ್ಕಾರದ ವತಿಯಿಂದ ಕೋವಿಡ್‌ ಲಸಿಕೆ ನೀಡಲಾಗುವುದು. ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಲಸಿಕೆ ಪೂರೈಸುವುದಿಲ್ಲ. ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಹೋಂಗಳು ಕಂಪನಿಗಳಿಂದ ನೇರವಾಗಿ ಲಸಿಕೆ ಖರೀದಿಸಬೇಕು. ಸರ್ಕಾರ ನಿಗದಿಪಡಿಸಿದ ದರದಲ್ಲೇ ವಿತರಣೆ ಮಾಡಬೇಕು’ ಎಂದರು.

ತ್ವರಿತ ಫಲಿತಾಂಶಕ್ಕೆ ಸೂಚನೆ:ನಗರದ ವ್ಯಾಪ್ತಿಯಲ್ಲಿ ಕೋವಿಡ್‌ ಪತ್ತೆ ಪರೀಕ್ಷೆಗೆ ಮಾದರಿಗಳನ್ನು ಸಂಗ್ರಹಿಸಿದ 24 ಗಂಟೆಗಳೊಳಗೆ ವರದಿ ನೀಡುವಂತೆ ಎಲ್ಲ ಪ್ರಯೋಗಾಲಯಗಳಿಗೂ ಸೂಚನೆ ನೀಡಬೇಕು. ಮಾದರಿಗಳ ಸಂಗ್ರಹದ ಸಮಯದಲ್ಲಿ ವಿಳಾಸ, ಮೊಬೈಲ್‌ ಸಂಖ್ಯೆ ಮತ್ತು ಪಿನ್‌ ಕೋಡ್‌ ನಿಖರವಾಗಿ ನಮೂದಿಸುವಂತೆ ಎಚ್ಚರಿಕೆ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಖಾಸಗಿ ಪ್ರಯೋಗಾಲಯಗಳು ವರದಿಯನ್ನು ತಡವಾಗಿ ಐಸಿಎಂಆರ್‌ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡುತ್ತಿರುವುದರಿಂದ ‘ಬಿಯು’ ಸಂಖ್ಯೆ ಸೃಜಿಸುವುದು ವಿಳಂಬವಾಗುತ್ತಿದೆ. ಇದು ಕೋವಿಡ್‌ ರೋಗಿಗಳು ಆಸ್ಪತ್ರೆ ತಡವಾಗಿ ದಾಖಲಾಗಲು ಕಾರಣವಾಗುತ್ತಿದೆ. ಈ ವಿಚಾರದಲ್ಲಿ ಖಾಸಗಿ ಪ್ರಯೋಗಾಲಯಗಳಿಗೆ ಸ್ಪಷ್ಟವಾದ ಸೂಚನೆಗಳನ್ನು ನೀಡಬೇಕು ಎಂದರು.

ನಗರದ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲಾ ₹ 2 ಲಕ್ಷ ಮತ್ತು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ₹ 25 ಲಕ್ಷ ಅನುದಾನವನ್ನು ಔಷಧಿ ಖರೀದಿಗಾಗಿ ಒದಗಿಸಲಾಗಿದೆ. ಎಲ್ಲರೂ ತಕ್ಷಣವೇ ಈ ಅನುದಾನವನ್ನು ಬಳಸಿಕೊಂಡು ಅಗತ್ಯ ಔಷಧಿಗಳನ್ನು ಖರೀದಿಸಿ, ದಾಸ್ತಾನು ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ವರದಿ ವಿಳಂಬ: ಪ್ರಯೋಗಾಲಯ ಬಂದ್‌
24 ಗಂಟೆಗಳೊಳಗೆ ಕೋವಿಡ್‌ ಪತ್ತೆ ಪರೀಕ್ಷಾ ವರದಿ ನೀಡಲು ವಿಫಲವಾದ ಆರೋಪದ ಮೇಲೆ ಪಶ್ಚಿಮ ವಲಯದಲ್ಲಿನ ಆರ್‌.ವಿ. ಮೆಟ್ರೊಪೋಲಿಸ್‌ ಪ್ರಯೋಗಾಲಯವನ್ನು ಬಿಬಿಎಂಪಿ ಅಧಿಕಾರಿಗಳು ಮಂಗಳವಾರ ಬಂದ್‌ ಮಾಡಿಸಿದ್ದಾರೆ.

ನಿಗದಿತ ಗಡುವಿನೊಳಗೆ ವರದಿ ನೀಡದ ಕಾರಣಕ್ಕೆ ಆರ್‌.ವಿ. ಮೆಟ್ರೊಪೋಲಿಸ್‌ ಪ್ರಯೋಗಾಲಯಕ್ಕೆ ಸೋಮವಾರ ಶೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿತ್ತು. ಮಂಗಳವಾರ ಬೀಗಮುದ್ರೆ ಹಾಕಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ಆರೋಪದ ಮೇಲೆ ಮೆಡಲ್‌ ಮತ್ತು ಆರತಿ ಪ್ರಯೋಗಾಲಯಗಳನ್ನು ಸೋಮವಾರ ಬಂದ್‌ ಮಾಡಿಸಲಾಗಿತ್ತು.

‘ಸೋಂಕು ತಡೆಗಾಗಿ ಕರ್ಫ್ಯೂ; ತುರ್ತು ಸಹಾಯಕ್ಕೆ ನಮ್ಮ – 100’
‘ಕರ್ಫ್ಯೂ ಸಮಯದಲ್ಲಿ ಯಾವುದೇ ತುರ್ತು ಸಹಾಯ ಬೇಕಾದರೂ ನಮ್ಮ – 100ಕ್ಕೆ ಕರೆ ಮಾಡಬಹುದು’ ಎಂದು ನಗರ ಪೊಲೀಸರು ಹೇಳಿದ್ದಾರೆ.

ಕರ್ಫ್ಯೂ ನಿಯಮಗಳನ್ನು ಜಾರಿಗೆ ತರಲು ನಗರದಾದ್ಯಂತ ಬಿಗಿ ಭದ್ರತೆ ಕೈಗೊಂಡಿರುವ ಪೊಲೀಸರು, ಗಸ್ತು ತಿರುಗಲು ಹೊಯ್ಸಳ ವಾಹನಗಳನ್ನು ನಿಯೋಜಿಸಿದ್ದಾರೆ. ಆಯಾ ಠಾಣೆ ವ್ಯಾಪ್ತಿಯಲ್ಲಿ ಗಸ್ತು ತಿರುಗುವ ಸಿಬ್ಬಂದಿ, ಯಾವುದೇ ತುರ್ತು ಸಂದರ್ಭದಲ್ಲೂ ಜನರಿಗೆ ಸಹಾಯ ಮಾಡಲಿದ್ದಾರೆ.

ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್, ‘ಅಪರಾಧ ತಡೆಗಾಗಿ ನಗರದಲ್ಲಿ ಹೊಯ್ಸಳ ಗಸ್ತು ವಾಹನಗಳು ಸಂಚರಿಸುತ್ತಿದ್ದವು. ಇದೀಗ ಕರ್ಫ್ಯೂ ಸಂದರ್ಭದಲ್ಲೂ ವಾಹನಗಳು ಗಸ್ತು ತಿರುಗಲಿವೆ. ಯಾರಿಗಾದರೂ ತುರ್ತು ಸಹಾಯದ ಅವಶ್ಯಕತೆ ಇದ್ದರೆ, 100ಕ್ಕೆ ಕರೆ ಮಾಡಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT