ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ನಾಗರಿಕರಿಗೆ ಲಸಿಕೆ ನೀಡಿಕೆ ಆರಂಭ

ಜಿಲ್ಲೆಯಲ್ಲಿ 20 ಸಾವಿರ ಜನರಿಗೆ ಲಸಿಕೆ: ಜಿಲ್ಲಾಧಿಕಾರಿ ಜೆ. ಮಂಜುನಾಥ್
Last Updated 1 ಮಾರ್ಚ್ 2021, 21:02 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯಲ್ಲಿರುವ 23,750 ಆರೋಗ್ಯ ಕಾರ್ಯಕರ್ತರಲ್ಲಿ 20,088 ಜನರಿಗೆ (ಬಿಬಿಎಂಪಿ ವ್ಯಾಪ್ತಿ ಹೊರತು ಪಡಿಸಿ) ಮೊದಲ ಹಂತದ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ತಿಳಿಸಿದರು.

'ಕೊರೊನಾ ಸೇನಾನಿಗಳಿಗೆ ಮೊದಲ ಹಂತದಲ್ಲಿ ಶೇ 84.6 ರಷ್ಟು ಜನರು ಲಸಿಕೆ ನೀಡಲಾಗಿದೆ. ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಮಾತ್ರ ಉಳಿದುಕೊಂಡಿದ್ದಾರೆ' ಎಂದು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪ್ರತಿ ಕೇಂದ್ರಗಳಲ್ಲಿ ದಿನಕ್ಕೆ 200 ಜನರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ. ಎರಡನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟ, ಮಧುಮೇಹ ಸೇರಿದಂತೆ ಹಲವು ಆರೋಗ್ಯ ಸಮಸ್ಯೆ ಎದುರಿಸುತ್ತಿರುವ 45 ರಿಂದ 59 ವರ್ಷದೊಳಗಿನವರಿಗೆ ಲಸಿಕೆ ನೀಡಲಾಗುವುದು’ ಎಂದರು.

'ಎರಡನೇ ಹಂತದ ಲಸಿಕೆಯನ್ನು ಈಗಾಗಲೇ 4,244 ಜನರಿಗೆ ನೀಡಲಾಗಿದೆ. ಅಲ್ಲದೆ, ಸೋಮವಾರದಿಂದ ಸಾರ್ವನಿಕರ ಲಸಿಕೆ ಅಭಿಯಾನ ಆರಂಭವಾಗಿದ್ದು, ಬೆಂಗಳೂರು ನಗರ ಜಿಲ್ಲೆಯಲ್ಲಿ ಸಾರ್ವಜನಿಕರಿಗೂ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ' ಎಂದರು.

'ಲಸಿಕೆಯನ್ನು ಸೋಮವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ಮಾತ್ರ ನೀಡಲಾಗುತ್ತಿದೆ. ಬಿಬಿಎಂಪಿ ಹೊರತುಪಡಿಸಿ ಆನೇಕಲ್ ತಾಲ್ಲೂಕು ಆಸ್ಪತ್ರೆ, ಕೆ.ಆರ್.ಪುರ ತಾಲ್ಲೂಕು ಆಸ್ಪತ್ರೆ, ಯಲಹಂಕ ತಾಲ್ಲೂಕು ಆಸ್ಪತ್ರೆ, ರಾಜರಾಜೇಶ್ವರಿ ಮೆಡಿಕಲ್ ಆಸ್ಪತ್ರೆ, ನಾರಾಯಣ ನೇತ್ರಾಲಯ ಆಸ್ಪತ್ರೆಯಲ್ಲಿ ಲಸಿಕೆ ನೀಡಲಾಗುತ್ತಿದೆ' ಎಂದರು.

'ಸಾರ್ವಜನಿಕರು ಆರೋಗ್ಯ ಸೇತು ಸೇರಿದಂತೆ ಮೂರು ರೀತಿ ನೋಂದಣಿ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಆಧಾರ್ ಕಾರ್ಡ್ ಸೇರಿದಂತೆ ಏಳು ರೀತಿಯ ದಾಖಲೆಗಳನ್ನು ಪಡೆದು ಲಸಿಕೆ ನೀಡಲಾಗುತ್ತದೆ' ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್, ‘ಜ್ವರ, ಕೆಮ್ಮು ಇರುವವರಿಗೆ ಲಸಿಕೆ ನೀಡಲಾಗುವುದಿಲ್ಲ. ಗುಣಮುಖರಾದ 14 ದಿನಗಳ ನಂತರ ಲಸಿಕೆ ಪಡೆದುಕೊಳ್ಳಬಹುದು’ ಎಂದರು.

ಲಸಿಕೆ: ನೋಂದಣಿ ಹೇಗೆ:

*ಕೋವಿನ್ (Co-WIN) ಅಥವಾ ಆರೋಗ್ಯ ಸೇತು ಆ್ಯಪ್‌ ಡೌನ್‌ಲೋಡ್ ಮಾಡಿಕೊಳ್ಳಬೇಕು

*cowin.gov.inಗೆ ಲಾಗಿನ್‌ ಆಗಲೂಬಹುದು

*ಮೊಬೈಲ್‌ ದೂರವಾಣಿ ಸಂಖ್ಯೆ ದಾಖಲಿಸಬೇಕು

*ಮೊಬೈಲ್‌ಗೆ ಬರುವ ಒಟಿಪಿ ಬಳಸಿ ಖಾತೆ ಸೃಷ್ಟಿಸಬೇಕು

*ಹೆಸರು, ವಯಸ್ಸು, ಲಿಂಗ ವಿವರ ದಾಖಲಿಸಿ, ಗುರುತಿನ ಚೀಟಿಯೊಂದನ್ನು ಅಪ್‌ಲೋಡ್ ಮಾಡಬೇಕು

*45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಬೇರೆ ಕಾಯಿಲೆಗಳಿದ್ದರೆ ವೈದ್ಯರ ಪ್ರಮಾಣಪತ್ರ ಲಗತ್ತಿಸಬೇಕು.

*ಲಸಿಕೆ ಹಾಕಿಸಿಕೊಳ್ಳುವ ಕೇಂದ್ರದ ಹೆಸರು, ದಿನಾಂಕ ನಮೂದಿಸಬೇಕು

*ಒಂದು ಮೊಬೈಲ್‌ ಸಂಖ್ಯೆಯಲ್ಲಿ ನಾಲ್ಕು ಜನ ಹೆಸರು ನೋಂದಾಯಿಸಬಹುದು

*ಮೊಬೈಲ್ ಹೊಂದಿಲ್ಲದವರು
ಬೇರೆ ಮಾರ್ಗಗಳ
ಮೂಲಕವೂ ಹೆಸರು ನೋಂದಾಯಿಸಬಹುದು

*1507ಗೆ ಕರೆ ಮಾಡಿ ನೋಂದಾಯಿಸಬಹುದು

*ಕೋವಿಡ್‌ ಲಸಿಕೆ ಹಾಕುವ ಎಲ್ಲ ಖಾಸಗಿ ಆಸ್ಪತ್ರೆಗಳ ವಿವರವನ್ನೂ ವೆಬ್‌ಸೈಟ್‌ನಲ್ಲಿ ದಾಖಲಿಸಲಾಗಿದೆ.

*ಇದಕ್ಕಾಗಿ https://www.mohfw.gov.in/pdf/CGHSEmphospitals.xlsx ಅಥವಾ

https://www.mohfw.gov.in/pdf/PMJAYPRIVATEHOSPITALSCONSOLIDATED.xlsx ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

938 ಮಂದಿ ಹಿರಿಯರಿಗೆ ಲಸಿಕೆ

ಬೆಂಗಳೂರು: ಹಿರಿಯ ನಾಗರಿಕರು ಹಾಗೂ ಅನ್ಯರೋಗಗಳಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್‌ ಲಸಿಕೆ ನೀಡುವ ಅಭಿಯಾನ ಸೋಮವಾರ ಆರಂಭವಾಯಿತು. ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ವರ್ಗದಡಿ ಲಸಿಕೆ ಪಡೆಯಲು ಅರ್ಹರಾದ 938 ಮಂದಿ ಮೊದಲ ದಿನವೇ ಲಸಿಕೆ ಪಡೆದರು.

ಈ ಹಿಂದೆ ಒಮ್ಮೆ ಲಸಿಕೆ ಪಡೆದಿದ್ದ 127 ಆರೋಗ್ಯ ಕಾರ್ಯಕರ್ತರು ಸೋಮವಾರ ಎರಡನೇ ಡೋಸ್‌ ಪಡೆದರು. ಮೂವರು ಆರೋಗ್ಯ ಕಾರ್ಯಕರ್ತರು ಮೊದಲ ಬಾರಿ ಲಸಿಕೆ ಪಡೆದರು.

ಒಟ್ಟು 23 ಕಡೆ ಲಸಿಕೆ ಕೇಂದ್ರಗಳನ್ನು ಆರಂಭಿಸಲು ಬಿಬಿಎಂಪಿ ಉದ್ದೇಶಿಸಿತ್ತು. ಕಾರಣಾಂತರಗಳಿಂದ 17 ಕೇಂದ್ರಗಳು ಮಾತ್ರ ಕಾರ್ಯನಿರ್ವಹಿಸಿದವು. ಸೋಮವಾರ ಒಟ್ಟು 1,063 ಮಂದಿಗೆ ಕೋವಿಡ್‌ ಲಸಿಕೆ ಹಾಕಲಾಯಿತು.

ಮೊದಲ ದಿನ ಗೊಂದಲ

ಬೆಂಗಳೂರು: ಹಿರಿಯ ನಾಗರಿಕರಿಗೆ ಹಾಗೂ 45 ವರ್ಷ ಮೇಲ್ಪಟ್ಟು ಅನ್ಯ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಕೋವಿಡ್‌ ಲಸಿಕೆ ನೀಡುವ ಅಭಿಯಾನದ ಮೊದಲ ದಿನ ಲಸಿಕೆ ಕೇಂದ್ರಗಳ ಸಿಬ್ಬಂದಿ ಹಾಗೂ ಲಸಿಕೆ ಪಡೆಯಲು ಬಂದವರು ಕೆಲವು ಗೊಂದಲಗಳಿಗೂ ಸಾಕ್ಷಿಯಾಗಬೇಕಾಯಿತು.

ಕೋವಿನ್‌ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿದ್ದ ಕೆಲವು ಹಿರಿಯ ನಾಗರಿಕರು ಸಂಬಂಧಪಟ್ಟ ಲಸಿಕಾ ಕೇಂದ್ರಗಳಿಗೆ ತೆರಳಿದಾಗ ಅಲ್ಲಿನ ಕಂಪ್ಯೂಟರ್‌ನಲ್ಲಿ ಅವರ ಹೆಸರು ಕಂಡುಬರಲೇ ಇಲ್ಲ. ಈ ಸಮಸ್ಯೆ ಅರಿವಿಗೆ ಬರುತ್ತಿದ್ದಂತೆಯೇ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು ಅಧಿಕೃತ ದಾಖಲೆ ಹೊಂದಿದ್ದವರಿಗೆ ಲಸಿಕೆ ನೀಡಲು ವ್ಯವಸ್ಥೆ ಮಾಡಿದರು.

ಇನ್ನೂ ಕೆಲವು ಕಡೆ ಪೋರ್ಟಲ್‌ನಲ್ಲಿ ಮೊದಲೇ ಹೆಸರು ನೋಂದಾಯಿಸಿದ್ದವರ ವಿವರಗಳು ಕಂಪ್ಯೂಟರ್‌ನಲ್ಲಿ ಕಾಣಿಸಿದರೂ ಅವರು ನೋಂದಾಯಿಸಿದ್ದ ಮೊಬೈಲ್‌ ನಂಬರ್‌ಗೆ ಒಟಿಪಿ ಬಾರದ ಕಾರಣ ಸಮಸ್ಯೆ ಎದುರಾಯಿತು.

ಲಸಿಕೆ ಹಾಕುವ ಸಿಬ್ಬಂದಿಯ ಹೆಸರನ್ನು ಮೊದಲೇ ಕಂದ್ರೀಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ. ಆ ಕೇಂದ್ರದಲ್ಲಿ ಯಾರಿಗೆ ಲಸಿಕೆ ನೀಡಲಾಗುವವರ ವಿವರವು ಕಂಪ್ಯೂಟರ್ ಪರದೆ ಮೇಳೆ ಕಾಣಿಸಿಕೊಳ್ಳಬೇಕೆಂದರೆ ಅವರು ಅಲ್ಲಿ ಖುದ್ದು ಹಾಜರಿಬೇಕು. ಆದರೆ, ಕೆಲವು ಕೇಂದ್ರಗಳಲ್ಲಿ ಸಿಬ್ಬಂದಿಯನ್ನು ಕೊನೆ ಕ್ಷಣದಲ್ಲಿ ಬದಲಾಯಿಸಿದ್ದರಿಂದ ಸಮಸ್ಯೆ ಎದುರಾಯಿತು. ಪರ್ಯಾಯ ಸಿಬ್ಬಂದಿಯ ಹೆಸರು ವಿವರಗಳನ್ನು ಕೇಂದ್ರೀಕೃತ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಲು ಸಮಯ ಹಿಡಿಯಿತು. ಹಾಗಾಗಿ ಲಸಿಕೆ ಪಡೆಯಲು ಬಂದವರು ಕಾಯಬೇಕಾಯಿತು. ಕೆಲವು ಕೇಂದ್ರಗಳಲ್ಲಿ ಬದಲಿ ಸಿಬ್ಬಂದಿಯ ವಿವರವನ್ನು ಅಪ್‌ಲೋಡ್‌ ಮಾಡಿದ ಬಳಿಕವೂ ಲಸಿಕೆ ಪಡೆಯುವವರ ವಿವರಗಳು ಕಂಪ್ಯೂಟರ್‌ನಲ್ಲಿ ಕಾಣಿಸಿಕೊಳ್ಳಲಿಲ್ಲ.

ದಾಸರಹಳ್ಳಿ ವಲಯದ ಎರಡು ಆಸ್ಪತ್ರೆಗಳು ಸೇರಿದಂತೆ ಕೆಲವು ಆಸ್ಪತ್ರೆಗಳು ಅನ್ಯರೋಗಗಳನ್ನು ಹೊಂದಿದ್ದವರಿಗೆ ಲಸಿಕೆ ನೀಡಲು ನಿರಾಕರಿಸಿದವು. ಬೇರೆ ಕಾಯಿಲೆ ಇದ್ದವರು ಲಸಿಕೆ ಪಡೆದಾಗ ಅವರ ಆರೋಗ್ಯದಲ್ಲಿ ಏರುಪೇರಾದರೆ ಚಿಕಿತ್ಸೆ ನೀಡಲು ತಮ್ಮಲ್ಲಿ ಸೂಕ್ತ ಸೌಕರ್ಯಗಳಿಲ್ಲ ಎಂಬುದು ಆ ಆಸ್ಪತ್ರೆಯವರ ವಾದ.

‘ಮೊದಲ ದಿನ ಕೆಲವೊಂದು ಗೊಂದಲಗಳು ಎದುರಾಗಬಹುದು ಎಂಬುದನ್ನು ಮೊದಲೇ ನಿರೀಕ್ಷಿಸಿದ್ದೆವು. ಏನೆಲ್ಲ ಸಮಸ್ಯೆಗಳು ಎದುರಾಗಿವೆ ಎಂಬ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ. ಪೋರ್ಟಲ್‌ನಲ್ಲೂ ಕೆಲವು ಮಾರ್ಪಾಡು ಮಾಡುವಂತೆ ಕೋರಿದ್ದೇವೆ. ಒಂದೆರಡು ದಿನಗಳಲ್ಲಿ ಎಲ್ಲ ಸಮಸ್ಯೆಗಳು ಬಗೆಹರಿಯುವ ನಿರೀಕ್ಷೆ ಇದೆ’ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಇನ್ಫೊಸಿಸ್‌ ಸಂಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ದಂಪತಿ ಬೊಮ್ಮಸಂದ್ರದ ನಾರಾಯಣ ಹೆಲ್ತ್‌ ಸಟಿಯಲ್ಲಿ ಕೋವಿಡ್‌ ಲಸಿಕೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT