ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ಕಾರ್ಯಕ್ರಮ: ವಿದ್ಯಾರ್ಥಿಗಳಿಗೂ ಆದ್ಯತೆ

ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲು ವಿಶೇಷ ಶಿಬಿರ ಆಯೋಜಿಸಲಿದೆ ‍ಬಿಬಿಎಂಪಿ
Last Updated 1 ಜುಲೈ 2021, 16:42 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಲಸಿಕೆ ಕಾರ್ಯಕ್ರಮದ ಅನುಷ್ಠಾನದ ವೇಳೆ ಕಾಲೇಜು ವಿದ್ಯಾರ್ಥಿಗಳಿಗೂ ಆದ್ಯತೆ ಮೇರೆಗೆ ಲಸಿಕೆ ಹಾಕಲು ಬಿಬಿಎಂಪಿ ಮುಂದಾಗಿದೆ.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ, ‘ಕಾಲೇಜು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ಕೋವಿಡ್‌ ಹೊಂದಿರದ ಬಗ್ಗೆ ಪ್ರಮಾಣಪತ್ರ ತೋರಿಸುವುದನ್ನು ಕಡ್ಡಾಯಗೊಳಿಸಿಲ್ಲ. ಆದರೆ, ಕಾಲೇಜುಗಳನ್ನು ಆರಂಭಿಸುವ ವೇಳೆ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಂಡಿದ್ದರೆ ಒಳ್ಳೆಯದು. ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವ ಸಲುವಾಗಿಯೇ ವಿಶೇಷ ಶಿಬಿರಗಳನ್ನು ಆಯೋಜಿಸಲಿದ್ದೇವೆ. ಬುಧವಾರ 60 ಕಾಲೇಜುಗಳಲ್ಲಿ ವಿಶೇಷ ಶಿಬಿರಗಳನ್ನು ಏರ್ಪಡಿಸಿದ್ದೇವೆ’ ಎಂದು ತಿಳಿಸಿದರು.

‘ನಮ್ಮ ಮಹಾನಗರದಲ್ಲಿ ಕೋವಿಡ್‌ ಲಸಿಕೆ ಹಾಕುವ ಕಾರ್ಯಕ್ರಮಗಳು ಸಾಂಗವಾಗಿ ನಡೆಯುತ್ತಿವೆ. ದೇಶದ ಇತರ ಮಹಾನಗರಗಳಿಗೆ ಹೋಲಿಸಿದರೆ, ನಮ್ಮ ನಗರದಲ್ಲಿ ಲಸಿಕೆ ಪಡೆದವರ ಸಂಖ್ಯೆ ಹೆಚ್ಚು ಇದೆ. ವಯಸ್ಕ ನಿವಾಸಿಗಳಲ್ಲಿ ಶೇ 50ಕ್ಕಿಂತಲೂ ಹೆಚ್ಚು ಮಂದಿ ಲಸಿಕೆ ಪಡೆದಿರುವುದು ಬೆಂಗಳೂರಿನಲ್ಲಿ ಮಾತ್ರ. ಲಸಿಕೆಯ ಲಭ್ಯತೆ ನೋಡಿಕೊಂಡು ಜನರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇವೆ’ ಎಂದರು.

‘ನಗರದಲ್ಲಿ ನಿತ್ಯ 1.5 ಲಕ್ಷ ಮಂದಿಗೆ ಲಸಿಕೆ ನೀಡಲು ಅಗತ್ಯವಿರುವಷ್ಟು ಪೂರ್ವ ಸಿದ್ಧತೆ ಮಾಡಿಕೊಂಡಿದ್ದೇವೆ. ಆದರೆ, ಬೇಡಿಕೆ ಇರುವಷ್ಟು ಲಸಿಕೆ ನಮಗೆ ಪೂರೈಕೆ ಆಗುತ್ತಿಲ್ಲ. ಬಿಬಿಎಂಪಿಗೆ ನಿತ್ಯ ಅಂದಾಜು 40 ಸಾವಿರದಿಂದ 50 ಸಾವಿರ ಡೋಸ್‌ಗಳು ಮಾತ್ರ ಪೂರೈಕೆಯಾಗುತ್ತಿವೆ. ನಗರದ ಖಾಸಗಿ ಆಸ್ಪತ್ರೆಗಳ ಮೂಲಕ ನಿತ್ಯ 30 ಸಾವಿರದಿಂದ 40 ಸಾವಿರದಷ್ಟು ಡೋಸ್‌ಗಳನ್ನು ನೀಡಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

‘ವೈರಾಣು ಈಗಲೂ ಇದೆ– ಎಚ್ಚರ ತಪ್ಪದಿರಿ’
‘ಕೊರೊನಾ ವೈರಾಣು ಈಗಲೂ ಇದೆ. ಈ ಪ್ರಜ್ಞೆ ನಮ್ಮಲ್ಲಿರಬೇಕು. ಹಾಗಾಗಿ ಲಾಕ್‌ಡೌನ್‌ ಸಡಿಲಿಕೆ ಬಳಿಕವೂ ಜನರು ಮುನ್ನೆಚ್ಚರಿಕಾ ಕ್ರಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು’ ಎಂದು ಗೌರವ್‌ ಗುಪ್ತ ಕಿವಿಮಾತು ಹೇಳಿದರು.

‘ಲಾಕ್‌ಡೌನ್‌ ಸಡಿಲಿಕೆಯ ಮುಂದಿನ ಹಂತದಲ್ಲಿ ಶಾಪಿಂಗ್‌ ಮಾಲ್‌ಗಳಿಗೆ ಅನುಮತಿ ಕೊಡುವಾಗ ಹೆಚ್ಚಿನ ಎಚ್ಚರ ವಹಿಸುವ ಅಗತ್ಯ ಇದೆ. ಮಳಿಗೆಗಳ ವರ್ತಕರು, ಅ‌ಲ್ಲಿನ ಕಾರ್ಮಿಕರು ಹಾಗೂ ಗ್ರಾಹಕರೆಲ್ಲರೂ ಮುನ್ನೆಚ್ಚರಿಕೆ ವಹಿಸಿದರೆ ಮಾತ್ರ ಕೋವಿಡ್‌ ಹತೋಟಿ ಸಾಧ್ಯ. ಕಾರಿನಲ್ಲಿ ಪ್ರಯಾಣಿಸುವವರು ಸೀಟ್‌ ಬೆಲ್ಟ್‌ ಧರಿಸಿದಂತೆ ಹಾಗೂ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ತೀರಾ ಅನಿವಾರ್ಯ ಇದ್ದರೆ ಮಾತ್ರ ಜನ ದಟ್ಟಣೆ ಇರುವ ಕಡೆಗೆ ಹೋಗಬೇಕು’ ಎಂದರು.

‘ಹೊರರಾಜ್ಯಗಳಿಂದ ಹಾಗೂ ಹೊರ ಜಿಲ್ಲೆಗಳಿಂದ ನಗರಕ್ಕೆ ಬರುವವರು ಕೋವಿಡ್‌ ಇಲ್ಲ ಎಂಬುದನ್ನು ಸಾಬೀತುಪಡಿಸುವ ಪ್ರಮಾಣಪತ್ರ ಹೊಂದುವುದನ್ನು ಕಡ್ಡಾಯಗೊಳಿಸಬೇಕು ಎಂದು ಕೆಲವರು ಒತ್ತಡ ಹೇರುತ್ತಿರುವುದು ನಿಜ. ಆದರೆ, ಸದ್ಯಕ್ಕೆ ಇಂತಹ ನಿರ್ಬಂಧ ಜಾರಿಯಲ್ಲಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT