ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮ ಕಸಿದ ಪಟಾಕಿ ಅವಘಡ, 70ಕ್ಕೂ ಅಧಿಕ ಪ್ರಕರಣಗಳು ವರದಿ

ಪಾದಚಾರಿಗಳಿಗೆ ಕಿಡಿ ಸಿಡಿದು ಗಾಯ
Last Updated 25 ಅಕ್ಟೋಬರ್ 2022, 20:22 IST
ಅಕ್ಷರ ಗಾತ್ರ

ಬೆಂಗಳೂರು: ಪಟಾಕಿ ಅವಘಡದಿಂದ ಗಾಯ ಮಾಡಿಕೊಂಡ 70ಕ್ಕೂ ಅಧಿಕ ಪ್ರಕರಣಗಳು ನಗರದ ಆಸ್ಪತ್ರೆಗಳಲ್ಲಿ ವರದಿಯಾಗಿದೆ. ಹಲವು ಕುಟುಂಬಗಳ ದೀಪಾವಳಿ ಸಂಭ್ರಮವನ್ನು ಪಟಾಕಿ ಕಸಿದಿದೆ. ಪಾದಚಾರಿಗಳೂ ಪಟಾಕಿ ಕಿಡಿಯಿಂದ ಗಾಯ ಮಾಡಿಕೊಂಡ ಪ್ರಕರಣಗಳು ವರದಿಯಾಗಿವೆ.

ಪಟಾಕಿಯ ಬಗ್ಗೆ ವೈದ್ಯರು ಜಾಗೃತಿ ಮೂಡಿಸಿದರೂ ಈ ಬಾರಿ ಸಹ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾಗುತ್ತಿವೆ. ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಮಂಗಳವಾರ 10ಕ್ಕೂ ಅಧಿಕ ಮಂದಿ ಪಟಾಕಿ ಗಾಯಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇದರಿಂದಾಗಿ 3 ದಿನಗಳಲ್ಲಿ ಅಲ್ಲಿ 15ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ಬಾಲಕನ ಕಣ್ಣಿಗೆ ಗಂಭೀರ ಹಾನಿಯಾಗಿದ್ದು, ದೃಷ್ಟಿ ಕಳೆದುಕೊಳ್ಳುವ ಬಗ್ಗೆ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.

ವಿಕ್ಟೋರಿಯಾದ ಮಹಾಬೋಧಿ ಸುಟ್ಟಗಾಯಗಳ ಕೇಂದ್ರದಲ್ಲಿ ಒಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಾರಾಯಣ ನೇತ್ರಾಲಯದಲ್ಲಿ 18 ಪ್ರಕರಣಗಳು ವರದಿಯಾಗಿದ್ದು, ನಾಲ್ವರಿಗೆ ಗಂಭೀರ ವಾಗಿ ಗಾಯಗಳಾಗಿವೆ. ನೇತ್ರಧಾಮ ಕಣ್ಣಿನ ಆಸ್ಪತ್ರೆಯಲ್ಲಿ 20, ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 13, ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ 3 ಹಾಗೂ ಮೋದಿ ಕಣ್ಣಿನಆಸ್ಪತ್ರೆಯಲ್ಲಿ ಒಂದು ಪ್ರಕರಣ ವರದಿಯಾಗಿದೆ. ಇವರಲ್ಲಿ ಹೆಚ್ಚಿನವರು ಲಕ್ಷ್ಮೀ ಬಾಂಬ್, ಬಿಜ್ಲಿ ಪಟಾಕಿ ಹಾಗೂ ಫ್ಲವರ್ ಪಾಟ್ ಸಿಡಿಸಿದವರಾಗಿದ್ದಾರೆ.

ಪಟಾಕಿ ಸಿಡಿಸದಿದ್ದರೂ ಗಾಯ: ಅನ್ನಪೂರ್ಣೇಶ್ವರಿ ನಗರದ 39 ವರ್ಷದ ಮಹಿಳೆ, ಸರ್ಜಾಪುರದ 49 ವರ್ಷದ ಮಹಿಳೆ ಹಾಗೂ ಅವೆನ್ಯೂ ರಸ್ತೆಯ 22 ವರ್ಷದ ಯುವಕ ಪಟಾಕಿ ಸಿಡಿತ ವೀಕ್ಷಿಸುವಾಗ ಕಿಡಿ ತಾಕಿ, ಗಾಯಗೊಂಡಿದ್ದಾರೆ. ಇವರಿಗೆ ಮಿಂಟೊ ಕಣ್ಣಿನ ಆಸ್ಪ‍ತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅದೇ ರೀತಿ, ಕುಟುಂಬದ ಸದಸ್ಯರೆಲ್ಲ ಒಟ್ಟಾಗಿ ಪಟಾಕಿ ಸಿಡಿಸುವಾಗ ಗಾಯಗೊಂಡ ಪ್ರಕರಣಗಳೂ ವರದಿಯಾಗಿವೆ.

ಮೈಸೂರು ರಸ್ತೆಯ 19 ವರ್ಷದ ಯುವಕನ ಬಲಗಣ್ಣಿಗೆ ಗಂಭೀರ ಗಾಯವಾಗಿದೆ. ಪಟಾಕಿ ಸ್ಫೋಟಗೊಂಡಾಗ ನೆಲದಲ್ಲಿನ ಕಲ್ಲುಗಳು ಸಿಡಿದು, ಯುವಕನ ಕನ್ನಡಕಕ್ಕೆ ಬಡಿದಿವೆ. ಇದರಿಂದಾಗಿ ಕನ್ನಡಕದ ಗಾಜು ಒಡೆದು, ಕಣ್ಣಿನೊಳಗೆ ಹೊಕ್ಕಿವೆ. ಮಿಂಟೊ ಆಸ್ಪತ್ರೆ ವೈದ್ಯರು ಯುವಕನಿಗೆ ಶಸ್ತ್ರಚಿಕಿತ್ಸೆ ನಡೆಸಿ, ಗಾಜು ಹೊರತೆಗೆದಿದ್ದಾರೆ.

‘ಪಟಾಕಿಯಿಂದ ಗಾಯಗೊಂಡವರಲ್ಲಿ ಒಬ್ಬರಿಗೆ ದೃಷ್ಟಿ ಬರುವ ಭರವಸೆ ಉಳಿದಿಲ್ಲ. ಐವರಿಗೆ ಅಲ್ಪ ಪ್ರಮಾಣದಲ್ಲಿ ದೃಷ್ಟಿ ನಷ್ಟವಾಗಿದೆ. ಹಸಿರು ಪಟಾಕಿ ಗಳಿಂದಲೂ ಕಣ್ಣಿಗೆ ಅಪಾಯವಿದೆ. ಪಟಾಕಿಯ ಕಿಡಿಗಳು ಕಣ್ಣಿನ ಮೇಲೆ ಬಿದ್ದಲ್ಲಿ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ದೀಪಾವಳಿಯ ಸಂದರ್ಭದಲ್ಲಿ ಬೆಳಕಿನಿಂದ ಕತ್ತಲೆಗೆ ಹೋಗಬಾರದು’ ಎಂದು ಮಿಂಟೊ ಕಣ್ಣಿನ ಆಸ್ಪತ್ರೆ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ತಿಳಿಸಿದರು.

ಕೈಯಲ್ಲಿ ಸಿಡಿದ ಹೂವಿನ ಕುಂಡ

ಹೂವಿನ ಕುಂಡವನ್ನು ಕೈಯಲ್ಲಿ ಹಿಡಿದು ಹಚ್ಚಲು ಹೋಗಿ, ಇಬ್ಬರು ಯುವಕರು ಕೈ ಸುಟ್ಟುಕೊಂಡಿದ್ದಾರೆ. ಪಟಾಕಿ ಸಿಡಿತವನ್ನು ವೀಕ್ಷಿಸುತ್ತಿದ್ದ 4 ವರ್ಷದ ಮಗುವಿಗೂ ಗಾಯವಾಗಿದೆ. ಇವರಿಗೆ ಆಸ್ಟರ್ ಸಿಎಂಐ ಆಸ್ಪತ್ರೆ
ಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ‘ಪಟಾಕಿ ಹಚ್ಚುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಕಣ್ಣು ಸೇರಿ ವಿವಿಧ ಸೂಕ್ಷ್ಮ ಅಂಗಗಳಿಗೆ ಪಟಾಕಿ ಕಿಡಿ ತಾಕದಂತೆ ಎಚ್ಚರ ವಹಿಸಬೇಕು. ಗಾಯಗೊಂಡಲ್ಲಿ ತಕ್ಷಣ ಹತ್ತಿರದ ಆಸ್ಪತ್ರೆಗೆ ತೆರಳಿ, ಚಿಕಿತ್ಸೆ ಪಡೆದುಕೊಳ್ಳಬೇಕು’ ಎಂದು ಆಸ್ಟರ್ ಸಿಎಂಐ ಆಸ್ಪತ್ರೆಯ ಎಮರ್ಜೆನ್ಸಿ ಮೆಡಿಸಿನ್ ವಿಭಾಗದ ಡಾ.ಎಸ್. ಶೈಲೇಶ್ ಶೆಟ್ಟಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT