ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಐಟಿ ಮಾದರಿ ಯುವಿಸಿಇ ಅಭಿವೃದ್ಧಿ: ಡಿಸಿಎಂ ಅಶ್ವತ್ಥನಾರಾಯಣ

ಪ್ರತ್ಯೇಕ ಕಾಯ್ದೆ ಕುರಿತು ಉಪ ಮುಖ್ಯಮಂತ್ರಿಗೆ ವರದಿ ಸಲ್ಲಿಸಿದ ಸಮಿತಿ
Last Updated 15 ಡಿಸೆಂಬರ್ 2020, 20:46 IST
ಅಕ್ಷರ ಗಾತ್ರ

ಬೆಂಗಳೂರು: ಐಐಟಿ ಮಾದರಿಯಲ್ಲಿ ಯೂನಿವರ್ಸಿಟಿ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜು (ಯುವಿಸಿಇ) ಅಭಿವೃದ್ಧಿಪಡಿಸಲು ಪ್ರತ್ಯೇಕ ಕಾಯ್ದೆ ಅಗತ್ಯವಿದ್ದು, ಅದಕ್ಕಾಗಿ ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

ಯುವಿಸಿಇ ಅಭಿವೃದ್ಧಿಗೆ ಕಾಯ್ದೆ ರೂಪಿಸುವ ಉದ್ದೇಶದಿಂದ ವಿವಿಧ ಐಐಟಿಗಳು ಹಾಗೂ ಐಐಎಂಗಳ ಕಾಯ್ದೆಗಳನ್ನು ಅಧ್ಯಯನ ಮಾಡಿ ಸಿದ್ಧಪಡಿಸಿದ ವರದಿಯನ್ನು ಐಐಐಟಿಬಿ ನಿರ್ದೇಶಕ ಎಸ್‌. ಸಡಗೋಪನ್‌ ನೇತೃತ್ವದ ಸಮಿತಿಯಿಂದ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ‘ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯಕ್ಕೆ ಶೈಕ್ಷಣಿಕ, ಆರ್ಥಿಕ, ಆಡಳಿತಾತ್ಮಕ ಸ್ವಾಯತ್ತತೆ ನೀಡುವ ಬಗ್ಗೆ ಸರ್ಕಾರಕ್ಕೆ ಶಿಫಾರಸುಗಳನ್ನು ಮಾಡಿರುವ ಸಮಿತಿ, ಪ್ರತ್ಯೇಕ ಕಾಯ್ದೆಯ ಅಗತ್ಯವನ್ನು ಒತ್ತಿ ಹೇಳಿದೆ’ ಎಂದರು.

ಅದಕ್ಕೂ ಮೊದಲು, ಕೆ.ಆರ್. ವೃತ್ತದಲ್ಲಿರುವ ಯುವಿಸಿಇ ಕ್ಯಾಂಪಸ್‌ಗೆ ಸಮಿತಿಯ ಸದಸ್ಯರೊಂದಿಗೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ, ಕಟ್ಟಡಗಳ ನಿರ್ಮಾಣ, ಮೂಲಸೌಕರ್ಯ ಇತ್ಯಾದಿ ಅಂಶಗಳ ಬಗ್ಗೆ ಚರ್ಚೆ ನಡೆಸಿ‌ದರು. ಸಮಿತಿ ಅಧ್ಯಕ್ಷ ಎಸ್. ಸಡಗೋಪನ್, ಸಮಿತಿ ಸದಸ್ಯರಾದ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೇಣುಗೋಪಾಲ್, ಬಿ. ಮುತ್ತುರಾಮನ್, ಪ್ರಶಾಂತ್ ಪ್ರಕಾಶ್ ನಾಗಾನಂದ ದೊರೆಸ್ವಾಮಿ, ನಾರಾಯಣನ್ ಇದ್ದರು

ಉದ್ದೇಶಿತ ಮಸೂದೆಯಲ್ಲಿರುವ ಅಂಶಗಳೇನು?:

* ಸರ್ಕಾರದ ಮೇಲೆ ಆರ್ಥಿಕ ಅವಲಂಬನೆ ತಗ್ಗಿಸಲು ಆಂತರಿಕ ಹಾಗೂ ಬಾಹ್ಯ ಮೂಲಗಳಿಂದ ಸಂಪನ್ಮೂಲ ಕ್ರೋಢೀಕರಣಕ್ಕೆ ಅವಕಾಶ. ದೇಣಿಗೆ ಸ್ವೀಕಾರ, ಹಳೆಯ ವಿದ್ಯಾರ್ಥಿಗಳಿಂದ ಹಣಕಾಸು ನೆರವು ಪಡೆಯಲು ಅವಕಾಶ.

* ಅತ್ಯುತ್ತಮ ಗುಣಮಟ್ಟದ ಬೋಧಕ ಸಿಬ್ಬಂದಿ ನೇಮಿಸಿಕೊಂಡು, ಉತ್ತಮ ವೇತನ ನೀಡುವ ಜತೆಗೆ ಟ್ಯೂಷನ್ ಫೀ ನಿಗದಿ ಮಾಡುವ ಅಧಿಕಾರ ಯುವಿಸಿಇಗೇ ನೀಡುವುದು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ. ಆರ್ಥಿಕವಾಗಿ ದುರ್ಬಲ ವಿದ್ಯಾರ್ಥಿಗಳಿಗೆ ನೆರವು.

* ಉತ್ಕೃಷ್ಟ ಶೈಕ್ಷಣಿಕ ಹಿನ್ನೆಲೆಯ ಬೋಧಕರ‌ ನೇಮಕ, ಸಂಶೋಧನೆ ಹಾಗೂ ಮೂಲಸೌಕರ್ಯಕ್ಕೆ ಆದ್ಯತೆ. ಹೊಸ ರೀತಿಯ ಪಠ್ಯ ಸೇರ್ಪಡೆಗೊಳಿಸುವ ಹಾಗೂ ಹೊಸ ಕೋರ್ಸುಗಳನ್ನು ಆರಂಭಿಸಲು ಯುವಿಸಿಇಗೆ ಅಧಿಕಾರ.

* ಆಡಳಿತದಲ್ಲಿ ಯುವಿಸಿಇಗೆ ಪೂರ್ಣ ಅಧಿಕಾರ ನೀಡುವುದರ ಜತೆಗೆ, ಸ್ವತಂತ್ರ ಅಸ್ತಿತ್ವ. ಒಟ್ಟಾರೆ ಮಾಲೀಕತ್ವ ಸರ್ಕಾರದ್ದೇ
ಆಗಿದ್ದರೂ ಆಡಳಿತದಲ್ಲಿ ಯುವಿಸಿಇಯದ್ದೇ ಅಂತಿಮ ನಿರ್ಧಾರ. 11 ಸದಸ್ಯರ ಆಡಳಿತ ಮಂಡಳಿಯಲ್ಲಿ ಸರ್ಕಾರಕ್ಕೂ ಸಮಾನ ಪ್ರಾತಿನಿಧ್ಯ. ಮಂಡಳಿಯಲ್ಲಿ ಸರ್ಕಾರ, ಕೈಗಾರಿಕೆ, ಶೈಕ್ಷಣಿಕ ವಲಯದಿಂದ ತಲಾ ಮೂವರು ಸದಸ್ಯರು, ಹಳೆಯ ವಿದ್ಯಾರ್ಥಿಗಳಿಂದ ಇಬ್ಬರು ಸದಸ್ಯರು ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT