ಬುಧವಾರ, ಆಗಸ್ಟ್ 10, 2022
21 °C
ಅನುದಾನ ಹಂಚಿಕೆ: ಒಂದು ಕಣ್ಣಿಗೆ ಸುಣ್ಣ, ಮತ್ತೊಂದಕ್ಕೆ ಬೆಣ್ಣೆ... ಹೀಗೇಕೆ?

PV Web Exclusive | ತಾರತಮ್ಯ ಬಿಡಿ, ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಗಮನ ಕೊಡಿ

ಎಂ. ನಾಗರಾಜ Updated:

ಅಕ್ಷರ ಗಾತ್ರ : | |

BBMP

ರಾಜಧಾನಿ ಬೆಂಗಳೂರಿನ ಎಲ್ಲ ಭಾಗಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಬೇಕಾದರೆ ಜರಡಿಯಲ್ಲಿ ಬಿದ್ದ ನೀರಿನಂತೆ ಸರ್ಕಾರದ ಅನುದಾನವು ಎಲ್ಲ ಕ್ಷೇತ್ರಗಳಿಗೂ ಸಮಾನವಾಗಿ ಹಂಚಿಕೆಯಾಗಬೇಕು. ಆದರೆ, ನಗರದ ವಿಧಾನಸಭಾಕ್ಷೇತ್ರಗಳಿಗೆ ಅನುದಾನವನ್ನು ಬಿಡುಗಡೆ ಮಾಡುವಾಗ ಭಾರಿ ತಾರತಮ್ಯ ಮಾಡಲಾಗಿರುವುದನ್ನು ಅಂಕಿಅಂಶಗಳೇ ಸಾರುತ್ತವೆ. ಇಂತಹ ತಾರತಮ್ಯ ಇದೇನು ಮೊದಲಲ್ಲ. ಹಿಂದಿನಿಂದಲೂ ಆಡಳಿತಾರೂಢ ಪಕ್ಷಗಳು, ಒಂದು ಕಣ್ಣಿಗೆ ಸುಣ್ಣ, ಮತ್ತೊಂದಕ್ಕೆ ಬೆಣ್ಣೆ ಬಳಿಯುವ ಕೆಲಸವನ್ನು ಮಾಡಿಕೊಂಡೇ ಬಂದಿವೆ. ಆಡಳಿತಾರೂಢ ಪಕ್ಷದ ಶಾಸಕರ ಕ್ಷೇತ್ರಗಳಿಗೆ ದಂಡಿಯಾಗಿ ಅನುದಾನ ಹಂಚಿಕೆ ಆಗುವುದರ ಹಿಂದಿನ ಗುಟ್ಟು ಎಲ್ಲರಿಗೂ ಗೊತ್ತಿರುವಂಥದ್ದೇ. ಇಂತಹ ‘ಅಭಿವೃದ್ಧಿ ಕಾರ್ಯ’ಗಳಿಂದ ನಗರದಲ್ಲಿ ಕೆಲವರು ಪ್ರಭಾವಿಗಳಾಗಿ ಬೆಳೆದಿದ್ದಾರೆ. ಆ ಪ್ರಭಾವಿಗಳು ಅನ್ಯ ಪಕ್ಷದವರಾಗಿದ್ದರೂ ಅವರ ಕ್ಷೇತ್ರಗಳಿಗೆ ತುಸು ಹೆಚ್ಚೇ ಅನುದಾನ ಸಿಗುತ್ತದೆ. ಕಡಿಮೆ ಸಿಕ್ಕವರು ಒಂದಷ್ಟು ಗೊಣಗಾಡಿ, ಪ್ರತಿರೋಧ ತೋರಿ ಸುಮ್ಮನಾಗುತ್ತಾರೆ. ಪ್ರಭಾವಿಗಳ ‘ಶಕ್ತಿ’ ಮತ್ತಷ್ಟು ಹೆಚ್ಚಾಗುತ್ತದೆ.

ಆಯಾ ಪ್ರದೇಶದಲ್ಲಿ ಅಗತ್ಯವಿರುವ ದೀರ್ಘಾವಧಿಯ ಕಾಮಗಾರಿಗಳಿಗೆ ಹಣಕಾಸಿನ ತೊಂದರೆಯಾಗದಿರಲಿ ಎಂಬ ಉದ್ದೇಶದಿಂದ ಸರ್ಕಾರ ಈ ರೀತಿ ಅನುದಾನವನ್ನು ಒದಗಿಸುತ್ತದೆ. ಇದು ಒಳ್ಳೆಯದೇ. ಆದರೆ, ಮುಖಂಡರ ಸೂಚನೆ ಪ್ರಕಾರ ಆಯ್ಕೆ ಮಾಡಿಕೊಳ್ಳುವ ಕಾಮಗಾರಿಗಳನ್ನು ನಿರ್ವಹಿಸಲು ಗುತ್ತಿಗೆದಾರರ ಆಯ್ಕೆಯೂ ಅದಕ್ಕೆ ಅನುಗುಣವಾಗಿಯೇ ಆಗುತ್ತದೆ. ಇದರಲ್ಲಿ ಮುಚ್ಚು ಮರೆ ಏನಿಲ್ಲ. ಆದ್ದರಿಂದಲೇ ಹಿಂದೊಮ್ಮೆ ಕಾಮಗಾರಿಗಳಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದಾಗ ಪಾಲಿಕೆ ಕಚೇರಿಯಲ್ಲಿ ಕಡತಗಳಿದ್ದ ಕೋಣೆಗೆ ಬೆಂಕಿಬಿದ್ದು ದಾಖಲೆಗಳು ಸುಟ್ಟು ಹೋಗಿದ್ದವು. ಪಾಲಿಕೆ ವ್ಯಾಪ್ತಿಯ ರಾಜರಾಜೇಶ್ವರಿನಗರ, ಗಾಂಧಿನಗರ ಹಾಗೂ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದಿದ್ದ ₹ 1,539 ಕೋಟಿ ಮೊತ್ತದ ಕಾಮಗಾರಿಗಳ ಅಕ್ರಮಗಳಿಗೆ ಸಂಬಂಧಿಸಿದ ಕಡತಗಳು ಸಹ ಸುಟ್ಟು ಬೂದಿಯಾದ ದಾಖಲೆಗಳಲ್ಲಿ ಸೇರಿದ್ದವು. ಅವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ನಾಶಪಡಿಸುವ ಉದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ ಎಂದು ದೂರಲಾಗಿತ್ತು. 

ನಗರದಲ್ಲಿ ಕೈಗೊಳ್ಳುವ ಅನೇಕ ಕಾಮಗಾರಿಗಳನ್ನು ನೋಡಿದಾಗ ಅವುಗಳ ಅಗತ್ಯವೇ ಇಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಯಾರೂ ಏನೂ ಹೇಳುವುದಿಲ್ಲ. ನಿಯಮದ ಪ್ರಕಾರ, ಆಯಾ ವಾರ್ಡ್‌ಗಳಿಗೆ ಅಗತ್ಯವಿರುವ ಕಾಮಗಾರಿಗಳ ಪಟ್ಟಿಯನ್ನು ವಾರ್ಡ್‌ ಸಮಿತಿಯಲ್ಲಿ ನಿರ್ಧರಿಸಬೇಕು. ಅಲ್ಲದೇ ರಾಜಕೀಯ ಹಸ್ತಕ್ಷೇಪವಿಲ್ಲದೆ ಅವು ನಡೆಯಬೇಕು. ಆದರೆ, ಈ ರೀತಿ ನಡೆಯಲು ಸಾಧ್ಯವೇ?  ಕ್ಷೇತ್ರದ ಅಭಿವೃದ್ಧಿಗಾಗಿ ಲಭ್ಯವಾದ ಬೃಹತ್‌ ಮೊತ್ತವನ್ನು ಆ ಮುಖಂಡರು ತಮಗೆ ಬೇಕು ಎನಿಸಿದ ಕಾರ್ಯವನ್ನು ಕೈಗೊಂಡು ಬರಿದು ಮಾಡುತ್ತಾರೆ. ಇದರಿಂದಾಗಿ ಸರ್ಕಾರದ ಮೂಲ ಉದ್ದೇಶಕ್ಕೆ ಹಿನ್ನಡೆಯಾಗುತ್ತಿದೆ.
ಕ್ಷೇತ್ರದ ಅಭಿವೃದ್ಧಿಗಾಗಿ ದೊಡ್ಡ ಮೊತ್ತದ ಅನುದಾನ ದೊರೆತಾಗ ಮುಖಂಡರೂ ದೊಡ್ಡತನ ತೋರಿ ಕ್ಷೇತ್ರದಲ್ಲಿ ಜನರಿಗೆ ಅನುಕೂಲವಾಗುವಂತಹ ಬೃಹತ್‌ ಕಾಮಗಾರಿಗಳನ್ನು ಕೈಗೊಂಡು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಆಗಷ್ಟೇ ಅದರ ಅನುಕೂಲ ನಾಗರಿಕರಿಗೆ ಸಿಗುತ್ತದೆ. ಇಂತಹ ಕಾಮಗಾರಿಗಳಿಗೆ ಅಕ್ಕ ಪಕ್ಕದ ಕ್ಷೇತ್ರಗಳ ಶಾಸಕರೊಂದಿಗೆ ಸಮನ್ವಯ ಸಾಧಿಸಿ, ಅವರಿಗೆ ಬಂದಿರುವ ಅನುದಾನವನ್ನೂ ಇದಕ್ಕೆ ಸೇರಿಸಿಕೊಳ್ಳಬಹುದು. ಆಗ ತ್ವರಿತವಾಗಿ ಯೋಜನೆ ಪೂರ್ಣಗೊಳಿಸಲು ಹಣಕಾಸಿನ ಅಡಚಣೆಯೂ ಆಗುವುದಿಲ್ಲ. ಈ ರೀತಿ ಆಲೋಚಿಸಿದರೆ, ಅತಿ ಜರೂರಾಗಿ ಆಗಬೇಕಾದ ಮೇಲುಸೇತುವೆ, ಕೆಳಸೇತುವೆ, ಹೊಸದಾಗಿ ಡಾಂಬರೀಕೃತ ರಸ್ತೆಗಳ ನಿರ್ಮಾಣ, ಮಳೆ ನೀರು ಚರಂಡಿಗಳ ನಿರ್ಮಾಣ ಸಾಧ್ಯ. ಪ್ರತಿಯೊಂದು ವಿಧಾನಸಭಾ ಕ್ಷೇತ್ರವೂ ಇನ್ನೊಂದಕ್ಕೆ ಆತುಕೊಂಡೇ ಇರುವುದರಿಂದ ಅಕ್ಕಪಕ್ಕದ  ಕ್ಷೇತ್ರಗಳ ಶಾಸಕರು ಈ ಕಾಮಗಾರಿ ಬೇಡ (ಅಭಿವೃದ್ಧಿ ಪರವೇ ಇದ್ದರೆ) ಎನ್ನಲೂ ಆಗುವುದಿಲ್ಲ. ಇಂತಹ ಸಮನ್ವಯತೆಯೇ ಇಲ್ಲಿ ಇಲ್ಲ. ಬಹುಶಃ ವಿಶೇಷ ಅನುದಾನದ ಬಳಕೆ ಸ್ವತಂತ್ರವಾಗಿದ್ದರೆ ಮಾತ್ರ ‘ಅನುಕೂಲ’ ಎಂಬ ಭಾವನೆ ಮುಖಂಡರಲ್ಲಿ ಇರಬಹುದು.

ನಗರದಲ್ಲಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಆನೇಕಲ್‌ಗೆ ಬರೀ ₹ 2 ಕೋಟಿ ಸಿಕ್ಕಿದ್ದರೆ, ರಾಜರಾಜೇಶ್ವರಿ ನಗರಕ್ಕೆ ಅತ್ಯಧಿಕ ₹ 900 ಕೋಟಿ ಅನುದಾನ ದೊರೆತಿದೆ. ರಾಜರಾಜೇಶ್ವರಿ ನಗರಕ್ಕೆ ಏಕೆ ಇಷ್ಟೊಂದು ಬೃಹತ್ ಮೊತ್ತ? ಆಯಿತು, ಇದು ಇತ್ತೀಚೆಗೆ ಪಾಲಿಕೆ ವ್ಯಾಪ್ತಿಗೆ ಸೇರಿದೆ, ನಾನಾ ಬಗೆಯ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕಿದೆ ಎಂದೇ ಭಾವಿಸೋಣ. ಇದರ ಜತೆಗೇ ಪಾಲಿಕೆ ತೆಕ್ಕೆಗೆ ಸೇರಿದ ದಾಸರಹಳ್ಳಿಗೆ ಏಕೆ ಕೇವಲ ₹ 50 ಕೋಟಿ? ಹಾಗಿದ್ದರೆ ಆ ಕ್ಷೇತ್ರವೇನು ಪೂರ್ಣಅಭಿವೃದ್ಧಿಯಾಗಿದೆಯೇ? ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯದ ಪ್ರಮುಖ ಕೈಗಾರಿಕಾ ಪ್ರದೇಶವಾದ ಪೀಣ್ಯ ಇದೆ. ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ವರಮಾನವೂ ಇಲ್ಲಿಂದ ಬರುತ್ತಿದೆ. ಇಲ್ಲಿನ ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುವ ಸಾವಿರಾರು ಕಾರ್ಮಿಕರು ಇದರ ಅಸುಪಾಸು ವಾಸವಿದ್ದಾರೆ. ಆದರೆ, ಅವರಿಗೆ ಯಾವುದೇ ಸೌಕರ್ಯವಿಲ್ಲ. ಸಮಗ್ರ ಬೆಂಗಳೂರು ಅಭಿವೃದ್ಧಿ ನಮ್ಮ ಧ್ಯೇಯ ಎಂದು ಎದೆ ತಟ್ಟಿ ಹೇಳುವ ಸರ್ಕಾರ ಈ ಕ್ಷೇತ್ರಕ್ಕೂ ರಾಜರಾಜೇಶ್ವರಿ ನಗರ, ಯಶವಂತಪುರ, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ಕೆ.ಆರ್‌.ಪುರ, ಯಲಹಂಕ ವಿಧಾನಸಭಾ ಕ್ಷೇತ್ರಗಳಿಗೆ ಕೊಟ್ಟಿರುವಂತೆಯೇ ₹ 500 ಕೋಟಿ – ₹ 900 ಕೋಟಿ ಕೊಡಬೇಕಿತ್ತಲ್ಲವೇ? ಬಿಜೆಪಿಯ ಶಾಸಕರಿರುವ ಕ್ಷೇತ್ರಗಳಿಗೆ ಮಾತ್ರ ಹೆಚ್ಚುಅನುದಾನ ನೀಡಿದರೆ ಬೆಂಗಳೂರು ಸಮಗ್ರವಾಗಿ ಅಭಿವೃದ್ಧಿ ಆದಂತಾಗುತ್ತದೆಯೇ? ಸರ್ಕಾರ ಆತ್ಮವಿಮರ್ಶೆ ಮಾಡಿಕೊಳ್ಳಬೇಕು.

ಹಿಂದಿನ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 100 ವಾರ್ಡ್‌ಗಳಲ್ಲಿ ಸೌಕರ್ಯ, ಸವಲತ್ತುಗಳು ಸಾಕಷ್ಟು ಉತ್ತಮವಾಗಿವೆ. ಹೊಸದಾಗಿ ಪಾಲಿಕೆ ವ್ಯಾಪ್ತಿಗೆ ಸೇರಿದ ಪ್ರದೇಶಗಳ ಅಭಿವೃದ್ಧಿಗೆ ಈಗ ಹೆಚ್ಚು ಒತ್ತು ಕೊಡಬೇಕು. ಆದರೆ, ಸರ್ಕಾರ ಮಾತ್ರ ನಗರದ ಹಳೆಯ ಪ್ರದೇಶವನ್ನು ಒಳಗೊಂಡ ಬಸವನಗುಡಿ ವಿಧಾನಸಭಾ ಕ್ಷೇತ್ರಕ್ಕೆ  ₹ 245 ಕೋಟಿ, ಅದೇ ರೀತಿ ರಾಜಾಜಿನಗರಕ್ಕೆ ₹ 250 ಕೋಟಿ, ಚಿಕ್ಕಪೇಟೆಗೆ ₹ 225 ಕೋಟಿ ಒದಗಿಸುವ ಮೂಲಕ ಧಾರಾಳತನ ತೋರಿದೆ. ಆದರೆ ಈ ಕ್ಷೇತ್ರಗಳಿಗೆ ಅಂಟಿಕೊಂಡೇ ಇರುವ ಚಾಮರಾಜಪೇಟೆಗೆ ₹ 40 ಕೋಟಿ ನೀಡಿದೆ! ಇದು ಸಮಗ್ರ ಬೆಂಗಳೂರು ನಮ್ಮ ಗುರಿ ಎಂದು ಹೇಳುವ ಸರ್ಕಾರ ಅನುದಾನ ಹಂಚಿಕೆ ಮಾಡಿರುವ ಪರಿ.

ಇನ್ನು ಕೆಲ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ನೋಡಿದರೆ ಇದರ ಅಗತ್ಯವಿದೆಯೇ ಎಂಬ ಪ್ರಶ್ನೆಮೂಡುತ್ತದೆ. ಸರಿಯಾದ ರಸ್ತೆ ನಿರ್ಮಿಸದಿದ್ದರೂ ಮಳೆ ನೀರು ಚರಂಡಿಗೆ ಅಲಂಕಾರ ಮಾಡುವ ಕೆಲಸ ಹೆಚ್ಚಾಗಿ ನಡೆಯುತ್ತಿದೆ. ಅದೂ ಇಕ್ಕಟ್ಟಾದ ರಸ್ತೆಗಳಿರುವ ಪ್ರದೇಶದಲ್ಲಿಯೂ ತರಾತುರಿಯಲ್ಲಿ ಇಂತಹ ಕಾಮಗಾರಿಗಳು ನಡೆಯುತ್ತಿವೆ. ಮನೆಗಳನ್ನು ಕಟ್ಟಿಕೊಂಡಿರುವ ಎಲ್ಲರೂ ತಮ್ಮ ಮನೆ ಮುಂದೆ ಚಪ್ಪಡಿ ಕಲ್ಲು ಹಾಕಿ ಚರಂಡಿಯನ್ನು ಮುಚ್ಚಿದ್ದಾರೆ. ಆದರೆ, ಈಗ ಆ ಚಪ್ಪಡಿ ಕಲ್ಲುಗಳನ್ನು ಕಿತ್ತು ಮತ್ತೆ ಅದನ್ನೇ ಕೂರಿಸಿ ಸಿಮೆಂಟ್‌ ಬಳಿದು, ಬಣ್ಣ ಹಚ್ಚಿ ಹೊಸದಾಗಿ ಮಾಡಿದ ಕಾಮಗಾರಿ ಎಂಬಂತೆ ಬಿಂಬಿಸಲಾಗುತ್ತಿದೆ. ಖಾಲಿ ನಿವೇಶನವಿರುವ ಕಡೆ ಮಾತ್ರ ಅವರೇ ಚಪ್ಪಡಿ ಕಲ್ಲು ತಂದು ಹಾಕಿದ್ದಾರೆ. ಉಳಿದಂತೆ ಸಾರ್ವಜನಿಕರು ಹಾಕಿಕೊಂಡಿರುವ ಚಪ್ಪಡಿ ಕಲ್ಲಿಗೂ ಪಾಲಿಕೆಯಿಂದ ಹಣ ಹೋಗುತ್ತದೆ. ಕೆಲಪ್ರದೇಶಗಳಲ್ಲಿ ಈ ಹಿಂದೆ ಚರಂಡಿಗಳಿಗೆ ಅಳವಡಿಸಿದ್ದ ಚಪ್ಪಡಿ ಕಲ್ಲುಗಳನ್ನು ಕಿತ್ತು ಅದನ್ನು ಬೇರೆಡೆಗೆ ಸಾಗಿಸಲಾಗಿದೆ. ಈಗ ಅಲ್ಲಿಗೆ ಸಿಮೆಂಟ್‌ ಸ್ಲ್ಯಾಬ್‌ ಹಾಕಲಾಗುತ್ತಿದೆ. ತೆಗೆದ ಚಪ್ಪಡಿ ಕಲ್ಲುಗಳು ವ್ಯರ್ಥ ಎಂಬಂತೆ ಸಾಗಿಸಿ, ಸಾಗಣೆಗೂ ಮತ್ತೆ ಹಣ ಪಡೆಯಲಾಗುತ್ತದೆ. ಆದರೆ ಅದೇ ಕಲ್ಲನ್ನು ಇನ್ನೆಲ್ಲೋ ಮರು ಬಳಕೆ ಮಾಡಿ, ಅದಕ್ಕೂ ಬಿಲ್‌ ಮಾಡಲಾಗುತ್ತಿದೆ. ಇವೆಲ್ಲವನ್ನೂ ನೋಡಿದರೆ ಕಾಮಗಾರಿ ಸಾರ್ವಜನಿಕರಿಗಾಗಿಯೋ ಅಥವಾ ಗುತ್ತಿಗೆದಾರರಿಗಾಗಿಯೋ ಎಂಬ ಅನುಮಾನ ಮೂಡುತ್ತದೆ.

ಅಂದಮಾತ್ರಕ್ಕೆ ಬಿಡುಗಡೆಯಾದ ಅನುದಾನವೆಲ್ಲ ಲೂಟಿಯಾಗಿದೆ ಎಂದೇನೂ ಅಲ್ಲ. ಒಳ್ಳೆ ಕೆಲಸಗಳೂ ಆಗಿವೆ. ಒಂದಷ್ಟು ಉದ್ಯಾನಗಳು ನಳನಳಿಸುತ್ತಿವೆ. ವಾಕಿಂಗ್‌ ಪಾಥ್‌, ವ್ಯಾಯಾಮ ಪರಿಕರಗಳನ್ನು ಅಳವಡಿಸಿ ನಾಗರಿಕರಿಗೆ ಅನುಕೂಲ ಕಲ್ಪಿಸಲಾಗಿದೆ. ಒಂದಷ್ಟು ರಸ್ತೆಗಳು ಉತ್ತಮ ಸ್ಥಿತಿಯಲ್ಲಿವೆ. ಆದರೆ, ಹಲವೆಡೆ ಉತ್ತಮ ಸ್ಥಿತಿಯಲ್ಲಿದ್ದ ರಸ್ತೆಗೇ  ಮತ್ತೆ ಮತ್ತೆ ಡಾಂಬರು ಹಾಕುವ ಕೆಲಸ ನಡೆಯುತ್ತಿದೆ. ಮತ್ತೆ ಮತ್ತೆ ಈ ರಸ್ತೆಗಳಿಗೇ ಏಕೆ ಡಾಂಬರು ಹಾಕಲಾಗುತ್ತದೆ ಎಂಬುದಕ್ಕೆ ಮಾತ್ರ ಉತ್ತರ ಸಿಗಲ್ಲ. ಅಲ್ಲದೇ, ಉತ್ತಮವಾಗಿದ್ದ ರಸ್ತೆಗಳನ್ನು ಅಗೆದು ಹಾಕಿ, ವೈಟ್‌ ಟಾಪ್‌ ರಸ್ತೆಯನ್ನಾಗಿ ಪರಿವರ್ತಿಸಿದ್ದೂ ಏಕೆ ಎಂಬುದು ತಿಳಿಯುತ್ತಿಲ್ಲ. ಇದೇ ಹಣವನ್ನು ರಸ್ತೆಯೇ ಇಲ್ಲದ ಪ್ರದೇಶಗಳಲ್ಲಿ ಹೊಸದಾಗಿ ರಸ್ತೆಗಳನ್ನು ನಿರ್ಮಿಸಲು ಬಳಸಬಹುದಿತ್ತಲ್ಲವೇ? ವಾಹನ ದಟ್ಟಣೆಯನ್ನು ನಿಯಂತ್ರಿಸಲು ಅಗತ್ಯವಿರುವ ಜಂಕ್ಷನ್‌ಗಳಲ್ಲಿ ಕೆಳಸೇತುವೆಗಳು, ಮೇಲುಸೇತುವೆಗಳನ್ನು ನಿರ್ಮಿಸಬಹುದಿತ್ತಲ್ಲವೇ?
ಅನುದಾನ ಬಿಡುಗಡೆಗೆ ಸರ್ಕಾರ ಆ ಕ್ಷೇತ್ರದ ಪ್ರತಿನಿಧಿ ಯಾವ ಪಕ್ಷದ ಶಾಸಕ ಎಂಬುದನ್ನು ನೋಡಬಾರದು. ಆತ ಎಷ್ಟು ಪ್ರಭಾವಿ ಎಂಬುದು ಮಾನದಂಡವಾಗಬಾರದು. ಇಡೀ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿ ಮಾತ್ರ ಸರ್ಕಾರದ ಗುರಿಯಾಗಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು