ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳವೆ ಬಾವಿ ಸೇರುತ್ತಿದೆ ಕಲುಷಿತ ನೀರು: ಕುಡಿದವರು ಆಸ್ಪತ್ರೆ ಪಾಲು..!

ಉತ್ತರಹಳ್ಳಿ: ಕೊಳವೆಬಾವಿಗಳಲ್ಲಿ ಕೊಳಚೆ ನೀರು * ಅಪಾರ್ಟ್‌ಮೆಂಟ್ಸ್‌ ಸಮುಚ್ಚಯಗಳ ನಿವಾಸಿಗಳು ಅಸ್ವಸ್ಥ
Last Updated 11 ಸೆಪ್ಟೆಂಬರ್ 2021, 22:03 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ನಿವಾಸಿಗಳು ಹಬ್ಬದ ಸಂಭ್ರಮದಲ್ಲಿದ್ದರೆ, ಉತ್ತರಹಳ್ಳಿ ವಾರ್ಡ್‌ ಸಂಖ್ಯೆ 184ರ ರಾಮಾಂಜನೇಯ ನಗರದ ಕೆಲವು ನಿವಾಸಿಗಳು ಆಸ್ಪತ್ರೆಗೆ ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಪ್ರದೇಶದ ಕೊಳವೆ ಬಾವಿಗಳಿಂದ ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ಇದನ್ನು ಬಳಸಿದವರು ತಲೆನೋವು, ವಾಂತಿ–ಭೇದಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ದುರ್ವಾಸನೆ ತಾಳಲಾರದೆ ಹಲವು ಮಕ್ಕಳು ಪ್ರಜ್ಞೆ ತಪ್ಪಿದ್ದಾರೆ.

‘16 ದಿನಗಳಿಂದ ಈ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಏಳು ಅಪಾರ್ಟ್‌ಮೆಂಟ್ಸ್‌ ಸಮುಚ್ಚಯಗಳಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ. ಕೊಳವೆಬಾವಿಗಳ ಮೂಲಕ ಕೊಳಚೆ ನೀರು ಬರುತ್ತಿದೆ. ಕಲುಷಿತ ನೀರು ಪರೀಕ್ಷಿಸಲು ಸರ್ಕಾರಿ ಪ್ರಯೋಗಾಲಯದವರು ಒಪ್ಪಲಿಲ್ಲ. ಖಾಸಗಿ ಪ್ರಯೋಗಾಲಯದವರು ಪರೀಕ್ಷೆ ನಡೆಸಿದ್ದು, ವರದಿ ಇನ್ನಷ್ಟೇ ಬರಬೇಕಾಗಿದೆ’ ಎಂದು ಎಂ.ಆರ್‌. ಸನ್ನಿಧಿ ಅಪಾರ್ಟ್‌ಮೆಂಟ್ಸ್‌ ಸಮುಚ್ಚಯದ ನಿವಾಸಿ ಸಂದೇಶ್ ತಿಳಿಸಿದರು.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಎಚ್‌.ವಿ.ಜೆ, ಶ್ರೀರಾಮ, ಯಶೋದಾ,ಎಂ.ಆರ್. ಸನ್ನಿಧಿ ಅಪಾರ್ಟ್‌ಮೆಂಟ್ಸ್‌, ಚೈತ್ರಶ್ರೀ ಡೆವಲಪರ್ಸ್‌ ಸೇರಿ ಹಲವು ಅಪಾರ್ಟ್‌ಮೆಂಟ್ಸ್‌ ಸಮುಚ್ಚಯಗಳಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ.

‘ಕೊಳವೆ ಬಾವಿಗಳಿಂದ ಕಪ್ಪು ಮತ್ತು ಹಸಿರು ಬಣ್ಣದ ನೀರು ಬರುತ್ತಿದೆ. ಒಂದೊಂದು ಅಪಾರ್ಟ್‌ಮೆಂಟ್ಸ್ ಸಮುಚ್ಚಯಗಳಲ್ಲೂ 15ರಿಂದ 20 ಜನ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಕೊಳವೆಬಾವಿಯ ನೀರನ್ನು ಬಳಸದೆ ಟ್ಯಾಂಕರ್‌ನಿಂದ ನೀರು ತರಿಸಿಕೊಳ್ಳುತ್ತಿದ್ದೇವೆ’ ಎಂದು ನಿವಾಸಿಗಳು ಅಳಲು ತೋಡಿಕೊಂಡರು.

‘ಎರಡು ಕೊಳವೆಬಾವಿಗಳು ಇದ್ದವರು ಒಂದನ್ನು ಸ್ಥಗಿತಗೊಳಿಸಿ, ಮತ್ತೊಂದನ್ನು ಬಳಸುತ್ತಿದ್ದಾರೆ. ಆದರೆ, ಒಂದೇ ಕೊಳವೆಬಾವಿ ಹೊಂದಿದವರಿಗೆ ತೊಂದರೆಯಾಗುತ್ತಿದೆ. ಐದಾರು ಟ್ಯಾಂಕರ್‌ಗಳಷ್ಟು ನೀರು ತರಿಸಿಕೊಳ್ಳಬೇಕಾಗಿದೆ. ಜಲಮಂಡಳಿಯಿಂದ ಎರಡು ದಿನಕ್ಕೆ ಒಮ್ಮೆ ಅರ್ಧ ತಾಸು ಮಾತ್ರ ಕಾವೇರಿ ನೀರು ಸರಬರಾಜು ಆಗುತ್ತಿದೆ. ಸಮಸ್ಯೆ ಪರಿಹಾರವಾಗುವವರೆಗೆ ಎರಡು ತಾಸುಗಳಾದರೂ ನೀರು ಪೂರೈಸಬೇಕು’ ಎಂದು ಯಶೋದಾ ಅಪಾರ್ಟ್‌ಮೆಂಟ್ಸ್‌ ಸಮುಚ್ಚಯದ ಎನ್.ಪಿ. ಶ್ರೀನಿವಾಸ್ ಒತ್ತಾಯಿಸಿದರು.

‘ಭೂಗರ್ಭ ವಿಜ್ಞಾನಿಗಳನ್ನು ಸ್ಥಳಕ್ಕೆ ಕರೆಯಿಸಿ, ಕೊಳವೆಬಾವಿಗಳಿಗೆ ಕ್ಯಾಮೆರಾಗಳನ್ನು ಇಳಿಸಿ ಪರಿಶೀಲಿಸಿದ್ದೇವೆ. ಕೆಲವು ಕಡೆ 135 ಅಡಿಗಳಷ್ಟು, ಇನ್ನೂ ಕೆಲವು ಕಡೆ 60ರಿಂದ80 ಅಡಿಗಳಷ್ಟು ಆಳದಲ್ಲಿ ಕೊಳಚೆ ನೀರು ಸೇರುತ್ತಿದೆ. ಇನ್ನು ಕೆಲವಡೆ 200 ಅಡಿಯಿಂದ 300 ಅಡಿಗಳಷ್ಟು ಆಳದಲ್ಲಿ ಕಲುಷಿತ ನೀರು ಸೇರಿಕೊಳ್ಳುತ್ತಿದೆ. ಆದರೆ, ಈ ಕೊಳಚೆ ನೀರಿನ ಮೂಲ ಯಾವುದು ಎಂದು ತಿಳಿಯುತ್ತಿಲ್ಲ’ ಎಂದು ನಿವಾಸಿ ವಿಜಯ್‌ಕುಮಾರ್ ಹೇಳಿದರು.

ಕೊಳವೆಬಾವಿ ಸ್ವಚ್ಛಗೊಳಿಸಲು ₹2.40 ಲಕ್ಷ ವೆಚ್ಚ !

ಕೊಳವೆಬಾವಿಗಳನ್ನು ಸ್ವಚ್ಛಗೊಳಿಸಲು (ಫ್ಲಷಿಂಗ್‌)ಏಳು ಅಪಾರ್ಟ್‌ಮೆಂಟ್ಸ್‌ ಸಮುಚ್ಚಯಗಳ ನಿವಾಸಿಗಳು ಸೇರಿ ಒಟ್ಟು ₹2.40 ಲಕ್ಷ ಖರ್ಚು ಮಾಡಿದ್ದಾರೆ. ಕೊಳವೆಬಾವಿಯೊಳಗೆ ರಭಸವಾಗಿ ನೀರು ನುಗ್ಗಿಸಿ ಸ್ವಚ್ಛಗೊಳಿಸಿದ್ದಾರೆ. ಆದರೂ, ಸಮಸ್ಯೆ ಪರಿಹಾರವಾಗಿಲ್ಲ.

‘ಮನೆಯಲ್ಲೆಲ್ಲ ಹೆಗ್ಗಣ, ಇಲಿ ಸತ್ತ ವಾಸನೆ ಬರುತ್ತಿದೆ. ಮನೆ ತುಂಬಾ ಸುಗಂಧ ದ್ರವ್ಯ ಸಿಂಪಡಿಸಿಕೊಂಡು ಇರಬೇಕಾದ ಸ್ಥಿತಿ ಇದೆ’ ಎಂದು ನಿವಾಸಿಗಳು ಅಳಲು ತೋಡಿಕೊಂಡರು.

‘ಜಲಮಂಡಳಿ ಸಮಸ್ಯೆ ಅಲ್ಲ’

‘ನಮ್ಮ ಅಧಿಕಾರಿಗಳುಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದಾರೆ. ಆದರೆ, ಈ ಪ್ರದೇಶಗಳಿಗೆ ಜಲಮಂಡಳಿಯಿಂದ ಯಾವುದೇ ಸಂಪರ್ಕ ಕಲ್ಪಿಸಲಾಗಿಲ್ಲ. ಇದರಲ್ಲಿ ಮಂಡಳಿಯ ತಪ್ಪು ಇಲ್ಲ’ ಎಂದು ಜಲಮಂಡಳಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಂ. ಮಂಜುನಾಥ ಪ್ರತಿಕ್ರಿಯಿಸಿದರು.

‘ಒಂದು ವೇಳೆ, ಮಂಡಳಿ ನಿರ್ವಹಿಸುವ ಒಳಚರಂಡಿ ಮಾರ್ಗದಿಂದಲೇ ಈ ಸಮಸ್ಯೆಯಾಗಿದ್ದರೆ, 5 ಅಡಿ ಅಥವಾ 6 ಅಡಿ ಆಳದಲ್ಲಿಯೇ ಕಲುಷಿತ ನೀರು ಸೇರುವ ಸಾಧ್ಯತೆ ಇರುತ್ತದೆ. 150 ಅಡಿ ಅಥವಾ 200 ಅಡಿ ಆಳದಲ್ಲಿ ಸೇರ್ಪಡೆಯಾಗುತ್ತಿದೆ. ಹಾಗಾಗಿ ಹತ್ತಿರದ ತೆರೆದ ಬಾವಿಯಿಂದಲೂ ಸೇರಿರಬಹುದು’ ಎಂದು ಅವರು ಹೇಳಿದರು.

‘ಅಧಿಕಾರಿಗಳನ್ನು ಮತ್ತೊಮ್ಮೆ ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಲಾಗುವುದು. ಬಿಬಿಎಂಪಿಯ ಗಮನಕ್ಕೂ ತರಲಾಗುವುದು’ ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT