ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಹನ ವಿಚಾರವನ್ನೂ ಸುಬೋಧವಾಗಿ ತಿಳಿಸುತ್ತಿದ್ದ ಡಿವಿಜಿ: ಶತಾವಧಾನಿ ಆರ್‌.ಗಣೇಶ

Last Updated 17 ಅಕ್ಟೋಬರ್ 2021, 4:51 IST
ಅಕ್ಷರ ಗಾತ್ರ

ಬೆಂಗಳೂರು: ‘‌ಡಿ.ವಿ.ಗುಂಡಪ್ಪನವರು ಗಹನವಾದ ವಿಚಾರಗಳನ್ನು ಸುಬೋಧವಾಗಿ ತಿಳಿಸುತ್ತಿದ್ದರು. ಅವರ ಕೃತಿಗಳು ಇಲ್ಲದೇ ಹೋಗಿದ್ದರೆ ಈ ಹೊತ್ತಿನ ಅರಿವಾಗಲಿ, ಸಮಾಧಾನವಾಗಲಿ, ಸಂತೋಷವಾಗಲಿ ಇರುತ್ತಿರಲಿಲ್ಲ. ಇದು ಅತಿಶಯೋಕ್ತಿಯಲ್ಲ’ ಎಂದು ವಿದ್ವಾಂಸ ಶತಾವಧಾನಿ ಆರ್‌.ಗಣೇಶ ಅಭಿಪ್ರಾಯಪಟ್ಟರು.

ನಗರದ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಹಾಗೂಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಿವಿಜಿ ಸಾಹಿತ್ಯ ಸಂಭ್ರಮ –ಮತ್ತೆ! ಮತ್ತೆ! ಕಾರ್ಯಕ್ರಮದಲ್ಲಿ ಡಿವಿಜಿಯವರ ಮರುಮುದ್ರಣಗೊಂಡಿರುವ 19 ಪುಸ್ತಕಗಳನ್ನು ಬಿಡುಗಡೆಗೊಳಿಸಿ ಶನಿವಾರ ಮಾತನಾಡಿದರು.

‘ಸಮಾಜಕ್ಕೆ ಗಾಳಿ, ನೀರು, ಆಹಾರ, ನೆಲೆ ಹೇಗೆ ಅಗತ್ಯವೋ, ಅದೇ ರೀತಿ ಒಳ್ಳೆಯ ಸಾಹಿತ್ಯ, ಸಂಗೀತವೂ ಬೇಕು. ಅವು ಜೀವನ ಸಂಸ್ಕಾರಕಗಳಿದ್ದಂತೆ ಎಂದು ಡಿವಿಜಿಯವರೇ ಬರೆದಿದ್ದಾರೆ. ಅವರ ಬರವಣಿಗೆಗಳನ್ನು ಜನ ಈಗಲೂ ಇಷ್ಟಪಡುತ್ತಿದ್ದಾರೆ ಎಂದರೆ ಸಮಾಜ ಆರೋಗ್ಯವಾಗಿದೆ ಎಂದರ್ಥ’ ಎಂದರು.

‘19 ಕೃತಿಗಳಲ್ಲಿ 10 ಬಗೆಯ ಪ್ರಾತಿನಿಧಿಕ ಸಾಹಿತ್ಯ ಪ್ರಕಾರಗಳಿವೆ. ಡಿವಿಜಿಯವರ ಸಾಹಿತ್ಯದ ಹರವು ಎಷ್ಟು ವಿಸ್ತಾರವಾದುದು ಎಂಬುದು ಇದರಿಂದ ಅರ್ಥವಾಗುತ್ತದೆ. ಜ್ಞಾನಪೀಠ ಪ್ರಶಸ್ತಿಯ ಅಂತಿಮ ಸುತ್ತಿಗೆ ಆಯ್ಕೆಯಾದ ಮೂರು ಕೃತಿಗಳಲ್ಲಿ ಡಿವಿಜಿಯವರ ಮಂಕುತಿಮ್ಮನ ಕಗ್ಗವೂ ಇತ್ತು. ರಾಜಕೀಯ ಹಾಗೂ ಇತರ ಕಾರಣಗಳಿಂದಾಗಿ ಅದು ಪ್ರಶಸ್ತಿಗೆ ಆಯ್ಕೆಯಾಗಲಿಲ್ಲ ಎಂಬುದು ಬೇಸರದ ವಿಷಯ. ಕನ್ನಡದ ಎಲ್ಲಾ ಬಗೆಯ ಸಾಹಿತ್ಯ ಪ್ರಕಾರಗಳಿಗೂ ಯೋಗದಾನ ಸಲ್ಲಿಸಿ ಓದುಗರನ್ನು ಹಾಗೂ ಸಾಹಿತ್ಯ ಪ್ರಕಾರಗಳನ್ನು ಬೆಳೆಸಿದವರು ಡಿವಿಜಿ’ ಎಂದು ಹೇಳಿದರು.

‘ರಾಜ್ಯಶಾಸ್ತ್ರ, ರಾಜ್ಯ ಕುಟುಂಬ, ರಾಜಕೀಯ ಪ್ರಸಂಗಗಳು–1, ರಾಜಕೀಯ ಪ್ರಸಂಗಗಳು–2 ಹಾಗೂ ರಾಜ್ಯಾಂಗ ತತ್ವಗಳು ಎಂಬ ಐದು ಕೃತಿಗಳು ಡಿವಿಜಿಯವರು ರಾಜ್ಯಶಾಸ್ತ್ರವನ್ನು ಕುರಿತು ಬರೆದ ಪಂಚರತ್ನಗಳು. ರಾಜಕೀಯ ಪ್ರಸಂಗಗಳು ಕೃತಿಯಲ್ಲಿ ಕಮ್ಯುನಿಸ್ಟ್‌ ಸಿದ್ಧಾಂತದ ಯೋಗ್ಯತೆ ಏನು ಎಂಬುದನ್ನು ಯಾವ ರಾಗ ದ್ವೇಷವೂ ಇಲ್ಲದೆ ಬಹಳ ಸಹಾನುಭೂತಿಯಿಂದಲೇ ವಿಶ್ಲೇಷಿಸಿದ್ದಾರೆ’ ಎಂದು ತಿಳಿಸಿದರು.

ಬಿಡುಗಡೆಯಾದ ಕೃತಿಗಳು

ಡಿವಿಜಿ: ರಾಜ್ಯಶಾಸ್ತ್ರ, ರಾಜ್ಯ ಕುಟುಂಬ, ದಿವಾನ್‌ ಸಿ.ರಂಗಾಚಾರ್ಲು, ಪುರುಷ ಸೂಕ್ತ, ಇಂದ್ರವಜ್ರ, ಉಮರನ ಒಸಗೆ, ಶೃಂಗಾರಮಂಗಳಂ, ರಾಜಕೀಯ ಪ್ರಸಂಗಗಳು–1, ರಾಜಕೀಯ ಪ್ರಸಂಗಗಳು–2, ತಿಲೋತ್ತಮೆ ಕನಕಾಲುಕಾ, ಪ್ರಹಸನತ್ರಯೀ, ಶ್ರೀ ವಿದ್ಯಾರಣ್ಯ ವಿಜಯ, ಈಶೋಪನಿಷತ್ತು, ನಿವೇದನ, ಬೆಕ್ಕೋಜಿ, ಗೀತ ಶಾಕುನ್ತಲ, ವೇದ–ವೇದಾಂತ, ಕಾವ್ಯ ಸ್ವಾರಸ್ಯ, ಸಾಹಿತ್ಯ ಶಕ್ತಿ.

ಎ.ನರಸಿಂಹ ಭಟ್‌: ಮಂಕುತಿಮ್ಮನ ಕಗ್ಗ: ಅರ್ಥಾನುಸಂಧಾನ.

ದಿ.ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯ: ಪಂಚ ಪ್ರಪಂಚ, ಮೂರರ ಮಹಿಮೆ, ಶಬ್ದ ಸಂಸಾರ, ಹತ್ತರ ಹಿರಿಮೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT