ಶನಿವಾರ, ಜೂನ್ 19, 2021
27 °C

ಅಗತ್ಯವಾದರೆ ಲಾಕ್‌ಡೌನ್ ಮುಂದುವರಿಕೆ ನಿಶ್ಚಿತ: ಡಿ.ವಿ. ಸದಾನಂದಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ರಾಜ್ಯದಲ್ಲಿ ಜಾರಿಗೆ ತಂದಿರುವ ಲಾಕ್‌ಡೌನ್‌ ಯಶಸ್ವಿಯಾಗಿದೆ. ಮೇ 24ರವರೆಗೆ ಇನ್ನೂ ಸಾಕಷ್ಟು ಸುಧಾರಣೆ ಆಗಬಹುದು. 24ರ ನಂತರವೂ ಪ್ರಕರಣಗಳು ಕಡಿಮೆಯಾಗದಿದ್ದರೆ ನಿರ್ದಾಕ್ಷಿಣ್ಯವಾಗಿ ಲಾಕ್‌ಡೌನ್ ಮಾಡಬೇಕು’ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಸಲಹೆ ನೀಡಿದರು.

ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರದ ನಂದಿನಿ ಬಡಾವಣೆಯ ಕೆಂಪೇಗೌಡ ಸಮುದಾಯ ಭವನದಲ್ಲಿ ಶನಿವಾರ 46 ಆಮ್ಲಜನಕ ಹಾಸಿಗೆ ಸೌಲಭ್ಯದ ಕೋವಿಡ್ ಆರೈಕೆ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

‘ಮುಂಬೈ, ದೆಹಲಿ ಸೇರಿದಂತೆ ಹಲವೆಡೆ ಲಾಕ್‌ಡೌನ್‌ ಪರಿಣಾಮ ಬೀರಿದೆ. ನಗರದಲ್ಲಿಯೂ ಲಾಕ್‌ಡೌನ್‌ನಿಂದ ಕೋವಿಡ್‌ ಪ್ರಕರಣಗಳು ಕಡಿಮೆಯಾಗಿವೆ. ಲಾಕ್‌ಡೌನ್‌ನಿಂದ ಕೆಲವರಿಗೆ ಕಷ್ಟವಾಗಬಹುದು. ಅವರ ಜೀವನವನ್ನು ಮತ್ತೆ ರೂಪಿಸುವ ಕೆಲಸವನ್ನು ಸರ್ಕಾರ ಮಾಡಲಿದೆ’ ಎಂದೂ ಹೇಳಿದರು.

‘ಕೋವಿಡ್‌ ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಎಲ್ಲ ಕ್ರಮಗಳನ್ನೂ ಕೈಗೊಂಡಿವೆ. ಆದರೂ, ಕೆಲವು ಟೀಕೆ–ಟಿಪ್ಪಣಿಗಳು, ಬೈಗುಳಗಳನ್ನು ಮಾಧ್ಯಮಗಳಲ್ಲಿ ಕೇಳಬೇಕಾಗಿದೆ. ಇಂತಹ ವಿಮರ್ಶೆಗಳಿಂದ ಧೃತಿಗೆಡುವುದಿಲ್ಲ' ಎಂದೂ ಅವರು ಹೇಳಿದರು.

‘ಅಗತ್ಯವಿರುವಷ್ಟು ಲಸಿಕೆ ಸಂಗ್ರಹ ಇಲ್ಲದಿದ್ದ ಮೇಲೆ ಲಸಿಕೆ ಅಭಿಯಾನ ಏಕೆ ಆರಂಭಿಸಬೇಕು ಎಂದು ಹಲವರು ಪ್ರಶ್ನಿಸುತ್ತಾರೆ. 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಹಾಕಲು ಆರಂಭಿಸಿದಾಗ ಶೇ 42ರಷ್ಟು ಮಂದಿ ಮಾತ್ರ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬಂದಿದ್ದರು. ಎರಡನೇ ಅಲೆ ತೀವ್ರವಾದ ನಂತರ 18 ವರ್ಷ ಮೇಲ್ಪಟ್ಟವರೂ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬಂದರು. ಹೀಗಾಗಿ, ನಮ್ಮ ನಿರೀಕ್ಷೆಯ ಕ್ರಿಯಾ ಯೋಜನೆಯಲ್ಲಿ ವ್ಯತ್ಯಾಸವಾಯಿತು. ಎಲ್ಲರಿಗೂ ಲಸಿಕೆ ವಿತರಿಸಲಾಗುವುದು’ ಎಂದೂ ಹೇಳಿದರು.

ಮನೆ ಮನೆಗೆ ಆಮ್ಲಜನಕ: ‘ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಕೆ. ಗೋಪಾಲಯ್ಯ ಅವರು ಉತ್ತಮವಾಗಿ ಕೋವಿಡ್‌ ಪರಿಹಾರ ಕ್ರಮಗಳನ್ನು ಕೈಗೊಂಡಿದ್ದಾರೆ. ಎರಡು ವಾಹನಗಳ ಮೂಲಕ ಮನೆ ಮನೆಗೆ ಆಮ್ಲಜನಕ ಪೂರೈಸುತ್ತಿದ್ದಾರೆ. ಸರ್ಕಾರದ ಮೇಲೆ ಅವಲಂಬಿತರಾಗದೆ ಸಾರ್ವಜನಿಕರೂ ಇಂತಹ ಕಾರ್ಯಗಳಿಗೆ ಕೈಜೋಡಿಸಿದರೆ ಕೋವಿಡ್ ನಿರ್ವಹಣೆ ಸುಲಭವಾಗುತ್ತದೆ’ ಎಂದು ಸದಾನಂದ ಗೌಡ ಹೇಳಿದರು.

ಲಕ್ಷಣ ಹೊಂದಿರುವವರಿಗೆ ಪರೀಕ್ಷೆ: ‘ಲಾಕ್‌ಡೌನ್‌ನ ಪರಿಣಾಮ ಹತ್ತು ದಿನಗಳ ನಂತರ ಗೊತ್ತಾಗಲಿದೆ. ಈಗಾಗಲೇ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದರು.

‘ಪರೀಕ್ಷೆಗಳ ಸಂಖ್ಯೆ ಕಡಿಮೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ನಾವು ಸೋಂಕಿನ ಲಕ್ಷಣ ಹೊಂದಿರುವವರಿಗೆ ಮತ್ತು ಹೆಚ್ಚು ಪ್ರಕರಣಗಳು ವರದಿಯಾಗಿರುವ ಪ್ರದೇಶಗಳಲ್ಲಿ ಮಾತ್ರ ಹೆಚ್ಚು ಪರೀಕ್ಷೆ ನಡೆಸುತ್ತಿದ್ದೇವೆ’ ಎಂದೂ ಅವರು ಹೇಳಿದರು.

‘45 ವರ್ಷ ಮೇಲ್ಪಟ್ಟವರಿಗೆ ಕೋವಿಶೀಲ್ಡ್‌ ಎರಡನೇ ಡೋಸ್ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದೂ ತಿಳಿಸಿದರು.

ಸಚಿವ ಕೆ.ಗೋಪಾಲಯ್ಯ, ವಲಯ ಆಯುಕ್ತ ಬಸವರಾಜು, ವಲಯ ಸಂಯೋಜಕ ಉಜ್ವಲ್ ಘೋಷ್, ವಲಯ ಜಂಟಿ ಆಯುಕ್ತ ಶಿವಸ್ವಾಮಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು