ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರೋಗ್ಯ ಕ್ಷೇತ್ರದಲ್ಲಿ ತುರ್ತು ಪರಿಸ್ಥಿತಿ’

ಆಯುಷ್ ಇಲಾಖೆಯ ಆಯುಕ್ತೆ ಮೀನಾಕ್ಷಿ ನೇಗಿ ಅಭಿಮತ
Last Updated 3 ಮಾರ್ಚ್ 2020, 18:43 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್‌ ನಂತಹ ವೈರಸ್ ಆರೋಗ್ಯ ಕ್ಷೇತ್ರದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣ ಮಾಡಿದೆ. ಈ ಸೋಂಕುಗಳಿಗೆ ಅಲೋಪಥಿಯಲ್ಲಿಯೂ ಔಷಧಿಗಳು ದೊರೆಯುತ್ತಿಲ್ಲ. ಇಂತಹ ಸಂದರ್ಭದಲ್ಲಿ ಯುನಾನಿಯಂತಹ ಸಾಂಪ್ರದಾಯಿಕ ಚಿಕಿತ್ಸಾ ವಿಧಾನಗಳಲ್ಲಿ ವೈಜ್ಞಾನಿಕ ಸಂಶೋಧನೆ ನಡೆಸಿ,ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸವಾಗಬೇಕು’ ಎಂದು ಆಯುಷ್ ಇಲಾಖೆಯ ಆಯುಕ್ತೆ ಮೀನಾಕ್ಷಿ ನೇಗಿ ತಿಳಿಸಿದರು.

ಹಕೀಂ ಅಜ್ಮಲ್ ಖಾನ್ ಅವರ 152ನೇ ಜಯಂತಿ ಅಂಗವಾಗಿ ಆಯುಷ್ ಇಲಾಖೆಯು ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಯುನಾನಿ ದಿನಾಚರಣೆ–2020’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಅಲೋಪಥಿಯಿಂದಾಗಿದೇಶದಲ್ಲಿ ಪ್ರಚಲಿತವಿದ್ದ ಯುನಾನಿ ಚಿಕಿತ್ಸಾ ಪದ್ಧತಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ವೈಜ್ಞಾನಿಕ ಸಂಶೋಧನೆ ನಡೆಸಿ, ಪುರಾವೆಗಳನ್ನು ಒದಗಿಸದಿರುವುದೇ ಇದಕ್ಕೆ ಮುಖ್ಯ ಕಾರಣ. ಹಾಗಾಗಿ ವೈದ್ಯಕೀಯ ಕಾಲೇಜುಗಳಲ್ಲಿ ಈ ಕ್ಷೇತ್ರದಲ್ಲಿ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಾವಿರಾರು ವರ್ಷಗಳ ಇತಿಹಾಸ ಇರುವ ಯುನಾನಿ ಪದ್ಧತಿಯನ್ನು ಮುನ್ನೆಲೆಗೆ ತರಲು ಇಲಾಖೆಯಿಂದ ಅಗತ್ಯ ಪ್ರೋತ್ಸಾಹ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಆಯುಷ್ ಮಂತ್ರಾಲಯದ ಆಡಳಿತ ಮಂಡಳಿಯ ಉಪಾಧ್ಯಕ್ಷ ಡಾ.ಎಂ.ಎ. ವಹೀದ್, ‘ಪ್ರಚಾರದ ಕೊರತೆಯಿಂದ ಈ ವೈದ್ಯಕೀಯ ಪದ್ಧತಿಯು ಮುನ್ನೆಲೆಗೆ ಬರಲಿಲ್ಲ. ಪರಿಣಾಮಕಾರಿಯಾದ ಔಷಧಿಗಳ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಬೇಕು. ಕಾಲೇಜುಗಳಲ್ಲಿ ಸಂಶೋಧನೆಗೆ ಅವಕಾಶ ಮಾಡಿಕೊಟ್ಟು, ಪ್ರೋತ್ಸಾಹಿಸಬೇಕು. ಯುನಾನಿ ವೈದ್ಯ ಪದ್ಧತಿಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಹಕೀಂ ಅಜ್ಮಲ್‌ ಖಾನ್‌ ಅವರು ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯನ್ನು ಪ್ರಚುರಪಡಿಸಲು ಶ್ರಮಿಸಿದ್ದರು’ ಎಂದು ತಿಳಿಸಿದರು.

ಮೂಲಸೌಕರ್ಯಕ್ಕೆ ಆಗ್ರಹ
ಸರ್ಕಾರಿ ಯುನಾನಿ ವೈದ್ಯಕೀಯ ಕಾಲೇಜಿಗೆ ಅಗತ್ಯ ಮೂಲಸೌಕರ್ಯ ಒದಗಿಸಿ, ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡಬೇಕು ಎಂದು ಪ್ರಾಧ್ಯಾಪಕರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

‘1975ರಲ್ಲಿ ಆರಂಭವಾದ ಈ ಕಾಲೇಜಿನಿಂದ ಪ್ರತಿ ವರ್ಷ 60 ವಿದ್ಯಾರ್ಥಿಗಳು ಪದವಿ ಪಡೆದು ಹೊರಹೋಗುತ್ತಿದ್ದಾರೆ. ಈ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಾರಂಭಿಸಿ, ಹೆಚ್ಚಿನ ಸಂಶೋಧನೆಗಳಿಗೆ ಅವಕಾಶವನ್ನು ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಆಯುಷ್ ಮಂತ್ರಾಲಯಕ್ಕೆ ಶಿಫಾರಸು ಮಾಡಬೇಕು. ಕಾಲೇಜಿಗೆ ಮಂಜೂರಾಗಿದ್ದ 46 ಹುದ್ದೆಗಳಲ್ಲಿ 27 ಹುದ್ದೆಗಳು ಖಾಲಿಯಿವೆ. ಆದಷ್ಟು ಬೇಗ ಈ ಹುದ್ದೆಗಳನ್ನು ಭರ್ತಿ ಮಾಡಬೇಕು’ ಎಂದು ಡಾ.ಸುಧಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT