ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಎಸ್‌ಐ ಆಸ್ಪತ್ರೆ: ಚಿಕಿತ್ಸೆಗಾಗಿ ಅಲೆದಾಟ–ಕಾರ್ಮಿಕರಿಗೆ ಪಿಕಲಾಟ

ರೋಗಬಾಧೆಗಿಂತ ಸುತ್ತಾಟದ ಸುಸ್ತೇ ಜಾಸ್ತಿ!
Last Updated 30 ನವೆಂಬರ್ 2021, 21:00 IST
ಅಕ್ಷರ ಗಾತ್ರ

ಬೆಂಗಳೂರು: ಕಾರ್ಮಿಕರ ಹಣದಲ್ಲೇ ನಡೆಯುವ, ಕಾರ್ಮಿಕರ ಆರೋಗ್ಯ ಕಾಪಾಡಲೆಂದೇ ಇರುವ ಆಸ್ಪತ್ರೆ ಇದು. ಇಲ್ಲಿಗೆ ಬರುವ ರೋಗಿಗಳು ಚಿಕಿತ್ಸೆಗಾಗಿ ನಡೆಸಬೇಕಾದ ಅಲೆದಾಟದಲ್ಲೇ ಸುಸ್ತಾಗುತ್ತಾರೆ... ನಗರದಲ್ಲಿರುವ ಇಎಸ್‌ಐ ಆಸ್ಪತ್ರೆಗಳ ಸ್ಥಿತಿ ಇದು.

ಕಾರ್ಮಿಕರ ರಾಜ್ಯ ವಿಮಾ ನಿಗಮ ನಿರ್ವಹಣೆ ಮಾಡುತ್ತಿರುವ ಆಸ್ಪತ್ರೆಗಳಲ್ಲಿ ರಾಜಾಜಿನಗರದಲ್ಲಿ ಮಾದರಿ ಆಸ್ಪತ್ರೆ ಇದೆ. ಈ ಆಸ್ಪತ್ರೆ ಒಳ ಹೊಕ್ಕರೆ ಏಳುಸುತ್ತಿನ ಕೋಟೆಯಲ್ಲಿ ಸುತ್ತಾಡಿದ ಅನುಭವವಾಗುತ್ತದೆ. ರೋಗಿಗಳು, ಅವರ ಸಂಬಂಧಿಕರು ದಾಖಲೆ ಪತ್ರಗಳನ್ನು ಹಿಡಿದು, ಮೊಗದಲ್ಲಿದುಗುಡ ಹೊತ್ತು ಅತ್ತಿಂದಿತ್ತ ಅಲೆದಾಡುವ ದೃಶ್ಯಗಳಿಲ್ಲಿ ಮಾಮೂಲು.

ನಗರದ ಹಲವೆಡೆ ಇಎಸ್‌ಐ ಆಸ್ಪತ್ರೆಗಳಿವೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ರಾಜಾಜಿನಗರದಲ್ಲಿನ ‘ಮಾದರಿ ಆಸ್ಪತ್ರೆಗೆ’ ಕಳುಹಿಸಲಾಗುತ್ತದೆ. ರೋಗಿಗಳನ್ನು ನೋಂದಾಯಿಸಲು, ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದೊಯ್ಯಲು ಬೇಕಿರುವ ಅನುಮತಿ ಪಡೆಯಲು ಅಲೆದಾಡಿಯೇ ಕಾರ್ಮಿಕರು ಹೈರಾಣಾಗುತ್ತಾರೆ.

‘ಕಾರ್ಮಿಕರ ವೇತನದಿಂದ ಇಎಸ್‌ಐ ಸೌಲಭ್ಯ ಪಡೆದುಕೊಳ್ಳಲು ತಿಂಗಳಿಗೆ ₹1 ಸಾವಿರ ಕಡಿತಗೊಳ್ಳುತ್ತದೆ. ಅದೇ ಹಣದಲ್ಲಿ ನಡೆಯುವ ಆಸ್ಪತ್ರೆಯಲ್ಲಿ ಸೌಲಭ್ಯಗಳನ್ನು ಪಡೆಯಲು ನಾವು ಪರದಾಡಬೇಕಿದೆ’ ಎಂದು ಲಗ್ಗೆರೆಯಿಂದ ಚಿಕಿತ್ಸೆಗೆಂದು ಬಂದಿದ್ದ ರಮೇಶ್ ಬೇಸರ ತೋಡಿಕೊಂಡರು.

‘ವಿಶಾಲವಾದ ಜಾಗದಲ್ಲಿ ದೊಡ್ಡ ದೊಡ್ಡ ಕಟ್ಟಡಗಳಿವೆ. ಚಿಕಿತ್ಸೆ ನೀಡಲು ಬೇಕಾದ ಎಲ್ಲ ವ್ಯವಸ್ಥೆಗಳೂ ಇಲ್ಲಿವೆ. ಆದರೆ, ಸಿಬ್ಬಂದಿಯ ಬೇಜವಾಬ್ದಾರಿಯಿಂದ ಕಾರ್ಮಿಕರು ಅಲೆದಾಡಬೇಕಾದ ಸ್ಥಿತಿ ಇದೆ. ಶೈತ್ಯಾಗಾರದಲ್ಲಿ ಎರಡು ಶವಗಳು 15 ತಿಂಗಳು ಬಳಿಕ ಸಿಕ್ಕಿರುವುದು ಸಿಬ್ಬಂದಿ ಬೇಜವಾಬ್ದಾರಿ ಕೆಲಸಕ್ಕೆ ಸಾಕ್ಷಿ’ ಎಂದರು.

‘ಮೂತ್ರಪಿಂಡ ಸಮಸ್ಯೆ ಇರುವ ತಂದೆಗೆ ಡಯಾಲಿಸಿಸ್ ಮಾಡಿಸಬೇಕಿದೆ. ಈ ಆಸ್ಪತ್ರೆಯಲ್ಲಿ ನೋಂದಣಿ ಮಾಡಿಸಿ ದೃಢೀಕರಣ ಪತ್ರ ಪಡೆಯಬೇಕಾಗಿದೆ. ವಾರದಿಂದ ಅಲೆದಾಡುತ್ತಿದ್ದೇನೆ’ ಎಂದು ಸಪ್ಪೆಮೋರೆಯಲ್ಲಿ ಕುಳಿತಿದ್ದ ಇಮ್ರಾನ್ ಹೇಳಿದರು.

‘ಹೆಸರಿಗೆ ದೊಡ್ಡ ಆಸ್ಪತ್ರೆ. ಅನಾರೋಗ್ಯ ಪೀಡಿತರಾಗಿ ಬರುವ ಕಾರ್ಮಿಕರಿಗೆ ಸರಿಯಾದಚಿಕಿತ್ಸೆ ಇಲ್ಲಿ ಸಿಗುವುದಿಲ್ಲ. ದೊಡ್ಡ ಸಮಸ್ಯೆ ಇದ್ದರೆ ಬೇರೆ ಆಸ್ಪತ್ರೆಗಳಿಗೆ ರವಾನಿಸಲು ಮೀನಾಮೇಷ ಎಣಿಸುತ್ತಾರೆ. ಉದಾಹರಣೆಗೆ ಹೃದಯ ಸಂಬಂಧಿ ಖಾಯಿಲೆಗಳಿದ್ದರೆ ಜಯದೇವ ಆಸ್ಪತ್ರೆಗೆ ಕಳುಹಿಸಬೇಕು. ಅದಕ್ಕೂ ಮೂರ್ನಾಲ್ಕು ದಿನ ಸತಾಯಿಸುತ್ತಾರೆ’ ಎಂದು ಕಾರ್ಮಿಕ ಹೋರಾಟಗಾರ ಅಪ್ಪಣ್ಣ ದೂರಿದರು.

‘ಚಿಕಿತ್ಸೆ ಪಡೆಯಲು ಹಣಪಾವತಿಸಬೇಕಿಲ್ಲ ಎಂಬ ಕಾರಣಕ್ಕೆ ಕಾರ್ಮಿಕರು ಇಲ್ಲಿಗೆ ಬರುತ್ತಾರೆ. ಕಾರ್ಮಿಕರೆಂದರೆ ಆಸ್ಪತ್ರೆಯವರಿಗೆ ಅಸಡ್ಡೆ. ಆದ್ದರಿಂದಲೇ ಈ ರೀತಿ ಉಡಾಫೆ ವರ್ತನೆ ಇದೆ. ತಗಾದೆ ತೆಗೆದರೆ ಭದ್ರತಾ ಸಿಬ್ಬಂದಿ ಮೂಲಕಕಾರ್ಮಿಕರನ್ನು ಹೊರಗೆ ದಬ್ಬಿಸುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪೌರ ಕಾರ್ಮಿಕರು, ವಲಸೆ ಕಾರ್ಮಿಕರು ಸೇರಿದಂತೆ ಅನಕ್ಷರಸ್ಥರೂ ಚಿಕಿತ್ಸೆಗಾಗಿ ಇಲ್ಲಿಗೆ ಬರುತ್ತಾರೆ. ದಾಖಲೆಗಳಲ್ಲಿ ಸಣ್ಣಪುಟ್ಟ ಲೋಪವಿದ್ದರೆ, ಇನಿಷಿಯಲ್(ಆರಂಭಿಕ ಅಕ್ಷರ) ಬಿಟ್ಟು ಹೋಗಿದ್ದರೆ ಅದನ್ನೇ ದೊಡ್ಡದು ಮಾಡಿ ಚಿಕಿತ್ಸೆ ನಿರಾಕರಿಸಲಾಗುತ್ತದೆ. ಈ ಎಲ್ಲ ಸಮಸ್ಯೆಗಳಿಂದ ಬೇಸತ್ತಿರುವ ಕಾರ್ಮಿಕರು ಇಎಸ್‌ಐ ಸೌಲಭ್ಯವೂ ಬೇಡ, ವೇತನದಲ್ಲಿ ಕಡಿತ ಆಗುವುದು ಬೇಡ ಎನ್ನುತ್ತಿದ್ದಾರೆ’ ಎಂದು ಅಪ್ಪಣ್ಣ ಹೇಳಿದರು.

‘ಕಾರ್ಮಿಕ ಇಲಾಖೆ ಕಾರ್ಯದರ್ಶಿಯಾಗಿದ್ದ ಕ್ಯಾಪ್ಟನ್ ಮಣಿವಣ್ಣನ್ ಅವರು ಈ ಆಸ್ಪತ್ರೆಗಳ ಮೇಲುಸ್ತುವಾರಿಗೆ ಸಮಿತಿ ರಚನೆ ಮಾಡಲು ಎರಡು ಸಭೆಗಳನ್ನು ನಡೆಸಿದ್ದರು. ಅವರು ಬೇರೆಡೆಗೆ ವರ್ಗಾವಣೆಯಾದ ಬಳಿಕ ಸಭೆಯೇ ನಡೆದಿಲ್ಲ’ ಎಂದರು.

ಪೀಣ್ಯದಲ್ಲಿ ಸುಸಜ್ಜಿತ ಆಸ್ಪತ್ರೆ

ಪೀಣ್ಯದಲ್ಲಿ ಇಎಸ್‌ಐ ಆಸ್ಪತ್ರೆ ಸುಸಜ್ಜಿತವಾಗಿದ್ದು, ಸಮಯಕ್ಕೆ ಸರಿಯಾಗಿ ಚಿಕಿತ್ಸೆಯೂ ದೊರೆಯುತ್ತಿದೆ ಎನ್ನುವ ಅಭಿಪ್ರಾಯ ಕಾರ್ಮಿಕರಲ್ಲಿದೆ.

‘ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲದಂತೆ ಕಟ್ಟಡ ನಿರ್ಮಾಣವಾಗಿದೆ. ನಿರ್ವಹಣೆ ಕೂಡ ಅಚ್ಚುಕಟ್ಟಾಗಿದ್ದು, ವೈದ್ಯರೂ ಸಮಯ ಪಾಲನೆ ಮಾಡುತ್ತಿದ್ದಾರೆ’ ಎಂದು ಚಿತ್ರದುರ್ಗದಿಂದ ಚಿಕಿತ್ಸೆಗೆಂದು ಬಂದಿದ್ದ ರುದ್ರಪ್ಪ ಹೇಳಿದರು.

* ಇಎಸ್‌ಐ ಆಸ್ಪತ್ರೆಗಳಿಗೆ ಹಣಕಾಸಿನ ಕೊರತೆ ಇಲ್ಲ. ಆದರೆ, ಸರಿಯಾದ ವ್ಯವಸ್ಥೆ ಇಲ್ಲ. ಭ್ರಷ್ಟಾಚಾರ, ಚಿಕಿತ್ಸೆ ವಿಪರೀತ ವಿಳಂಬವಾಗುವುದರಿಂದ ಕಾರ್ಮಿಕರು ರೋಸಿ ಹೋಗಿದ್ದಾರೆ.

–ಕೆ.ಮಹಾಂತೇಶ್, ನಿರ್ಮಾಣ ಕಾರ್ಮಿಕರ ಫೆಡರೇಷನ್ ಪ್ರಧಾನ ಕಾರ್ಯದರ್ಶಿ

* ರೋಗಿಗಳಿಗೆ ಚಿಕಿತ್ಸೆ ವಿಳಂಬವಾಗುತ್ತಿದ್ದರೆ, ಸಭೆ ನಡೆಸಿ ಸೂಚನೆ ನೀಡುತ್ತೇನೆ. ಕೇಂದ್ರ ಸರ್ಕಾರಕ್ಕೂ ಪತ್ರ ಬರೆಯುತ್ತೇನೆ

–ಶಿವರಾಂ ಹೆಬ್ಬಾರ್, ಕಾರ್ಮಿಕ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT