ಗುರುವಾರ , ಜುಲೈ 29, 2021
27 °C

ನಕಲಿ ನೋಟು ದಂಧೆ: ವಿದೇಶಿ ಪ್ರಜೆಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಮೆರಿಕದ ಡಾಲರ್‌ ನೋಟು ಹೋಲುವಂತೆ ನಕಲಿ ನೋಟುಗಳನ್ನು ತಯಾರಿಸಿ ವಂಚಿಸುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದು, ಕ್ಯಾಮರೂನ್ ದೇಶದ ಇಬ್ಬರು ಪ್ರಜೆಗಳನ್ನು ಬಂಧಿಸಿದ್ದಾರೆ.

‘ಸುಬ್ರಹ್ಮಣ್ಯನಗರ ಠಾಣೆ ವ್ಯಾಪ್ತಿಯ ಹೋಟೆಲೊಂದರಲ್ಲಿ ಉಳಿದುಕೊಂಡಿದ್ದ ಆರೋಪಿಗಳು, ನಕಲಿ ನೋಟು ದಂಧೆ ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಅಮೆರಿಕದ 100 ಡಾಲರ್ ಮುಖಬೆಲೆಯ ನಕಲಿ ನೋಟುಗಳ ಕಂತೆಗಳನ್ನು ಜಪ್ತಿ ಮಾಡಲಾಗಿದೆ. ಇದರ ರೂಪಾಯಿ ಮೌಲ್ಯ ₹ 80 ಲಕ್ಷ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

‘ವೈದ್ಯಕೀಯ ವೀಸಾದಡಿ ನಗರಕ್ಕೆ ಬಂದಿದ್ದ ಆರೋಪಿಗಳು, ಅದರ ಅವಧಿ ಮುಗಿದರೂ ವಾಪಸು ಹೋಗಿರಲಿಲ್ಲ. ಇಲ್ಲಿಯೇ ಅಕ್ರಮವಾಗಿ ನೆಲೆಸಿ ನಕಲಿ ನೋಟು ದಂಧೆ ನಡೆಸುತ್ತಿದ್ದರು. ₹ 10 ಲಕ್ಷ ನೀಡಿದರೆ, ₹ 1 ಕೋಟಿ ಮೊತ್ತದ ಅಮೆರಿಕ ಡಾಲರ್ ನೀಡುವುದಾಗಿ ಆರೋಪಿಗಳು ಹೇಳುತ್ತಿದ್ದರು. ಅದನ್ನು ನಂಬಿ ಹಣ ಕೊಟ್ಟವರಿಗೆ ನಕಲಿ ನೋಟುಗಳನ್ನು ಕೊಟ್ಟು ವಂಚಿಸುತ್ತಿದ್ದರು.’

‘ಹೋಟೆಲ್‌ನಲ್ಲೇ ಉಳಿದುಕೊಂಡಿದ್ದ ಆರೋಪಿಗಳು, ವಂಚನೆಯಿಂದ ಗಳಿಸಿದ ಹಣದಲ್ಲೇ ಐಷಾರಾಮಿ ಜೀವನ ನಡೆಸುತ್ತಿದ್ದರು. ಅವರ ವಿರುದ್ಧ ಸುಬ್ರಹ್ಮಣ್ಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಯಾರಾದರೂ ವಂಚನೆಗೀಡಾಗಿದ್ದರೆ ಸಿಸಿಬಿ ಕಚೇರಿಗೆ ಮಾಹಿತಿ ನೀಡಬಹುದು’ ಎಂದೂ ಅಧಿಕಾರಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು