ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಖಾನೆ ಹಾರುಬೂದಿ: ರೈತರಿಗೆ ಸಂಕಟ

Published 1 ಮಾರ್ಚ್ 2024, 16:00 IST
Last Updated 1 ಮಾರ್ಚ್ 2024, 16:00 IST
ಅಕ್ಷರ ಗಾತ್ರ

ಬೆಂಗಳೂರು: ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆಯ ಮಾಕವಳ್ಳಿ ಗ್ರಾಮದಲ್ಲಿರುವ ಕೋರಮಂಡಲ್‌ ಸಕ್ಕರೆ ಕಾರ್ಖಾನೆಯಿಂದ ಪರಿಸರ ಮಾಲಿನ್ಯವಾಗುತ್ತಿದ್ದು, ಕಾರ್ಖಾನೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಾಜ್ಯ ರೈತ ಸಂಘ, ಪರಿಸರ ಮಾಲಿನ್ಯ ಸಂರಕ್ಷಣೆ ನಾಗರಿಕರ ವೇದಿಕೆ ಹಾಗೂ ಪರಿಸರ ಬಳಗ, ಜನಶಕ್ತಿ ಸಂಘಟನೆಗಳ ನೇತೃತ್ವದಲ್ಲಿ ನಗರದ ಚರ್ಚ್‌ಸ್ಟ್ರೀಟ್ ರಸ್ತೆಯಲ್ಲಿರುವ ರಾಜ್ಯ ಪರಿಸರ ಮಾಲಿನ್ಯ ಹಾಗೂ ನಿಯಂತ್ರಣ ಮಂಡಳಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು.

ಕಾರ್ಖಾನೆಯಿಂದ ಮಾಕವಳ್ಳಿ ಗ್ರಾಮದ ಸುತ್ತಮುತ್ತಲಿನ ಒಂಬತ್ತು ಗ್ರಾಮಗಳಿಗೆ ಸಮಸ್ಯೆ ಆಗುತ್ತಿದ್ದರೂ ಮಂಡಳಿ ಅಧಿಕಾರಿಗಳು ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದ ಪ್ರತಿಭಟನಕಾರರು, ಕಚೇರಿ ಒಳಕ್ಕೂ ನುಗ್ಗಿ ಆಕ್ರೋಶ ಹೊರಹಾಕಿದರು.

ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಂಡಳಿ ಅಧಿಕಾರಿಗಳು ರೈತರೊಂದಿಗೆ ಚರ್ಚಿಸಿದರೂ ಆಕ್ರೋಶ ತಣಿಯಲಿಲ್ಲ. ಕಾರ್ಖಾನೆ ವಿರುದ್ಧ ಕೇಂದ್ರಕ್ಕೆ ಪತ್ರ ಬರೆಯುವಂತೆ ಒತ್ತಾಯಿಸಿದರು. ಅಲ್ಲದೇ ನದಿಯಲ್ಲಿ ಕಲುಷಿತಗೊಂಡಿರುವ ನೀರನ್ನು ಬಾಟಲಿಯಲ್ಲಿ ತುಂಬಿ ರೈತರು ತಂದಿದ್ದರು.

ರಾತ್ರಿವರೆಗೂ ಪ್ರತಿಭಟನೆ ಮುಂದುವರಿದಿತ್ತು. ಸ್ಥಳದಲ್ಲೇ ಅಡುಗೆ ಮಾಡಿ, ಅಹೋರಾತ್ರಿ ಪ್ರತಿಭಟನೆ ನಡೆಸಲು ರೈತರು ಪಾತ್ರೆ, ಸಿಲಿಂಡರ್‌ ಹಾಗೂ ಸ್ಟೌಗಳನ್ನು ಮಂಡಳಿ ಆವರಣಕ್ಕೆ ತಂದಿದ್ದರು. ಇದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ರೈತರು ಹೋಟೆಲ್‌ನಿಂದ ಊಟ ತಂದು ಸೇವಿಸಿದರು.

‘ಕಾರ್ಖಾನೆ ವಿರುದ್ಧ ಚೆನ್ನೈನ ಹಸಿರು ನ್ಯಾಯಾಧಿಕರಣದಲ್ಲಿ ರೈತ ಸಂಘವು ಪ್ರಕರಣ ದಾಖಲಿಸಿತ್ತು. ಆಗ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಡಿಸ್ಟಿಲರಿ ಘಟಕವನ್ನು ಸ್ಥಾಪಿಸುವುದಿಲ್ಲ ಎಂಬುದಾಗಿ ಆಡಳಿತ ಮಂಡಳಿ ಒಪ್ಪಿಗೆ ನೀಡಿತ್ತು. ಆದರೆ, ನ್ಯಾಯಾಲಯದಲ್ಲಿ ನೀಡಿದ ಭರವಸೆಯನ್ನೂ ಬದಿಗೊತ್ತಿ ಡಿಸ್ಟಿಲರಿ ಸ್ಥಾಪಿಸಲು ಮುಂದಾಗಿದೆ’ ಎಂದು ಆಕ್ರೋಶ ಹೊರಹಾಕಿದರು.

‘ಸಕ್ಕರೆ ಕಾರ್ಖಾನೆಯಲ್ಲಿ ಡಿಸ್ಟಿಲರಿ ಎಥೆನಾಲ್‌ ಘಟಕವನ್ನು ಸ್ಥಾಪಿಸುವ ಸಂಬಂಧ ಮಾರ್ಚ್‌ 6ರಂದು ಸಾರ್ವಜನಿಕ ಸಭೆ ಕರೆಯಲಾಗಿದೆ. ಅದನ್ನು ರದ್ದುಗೊಳಿಸಬೇಕು’ ಎಂದು ಆಗ್ರಹಿಸಿದರು.

‘2011ರಿಂದಲೂ ಕೋರಮಂಡಲ್‌ ಸಕ್ಕರೆ ಕಾರ್ಖಾನೆಯಿಂದ ಪರಿಸರದ ಮೇಲೆ ಹಾನಿಯಾಗುತ್ತಿದೆ. ತಾಲ್ಲೂಕು ಆಡಳಿತ, ಜಿಲ್ಲಾಡಳಿತ ಹಾಗೂ ರಾಜ್ಯಮಟ್ಟದ ಅಧಿಕಾರಿಗಳಿಗೆ ವರದಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಿರ್ಲಕ್ಷ್ಯ ವಹಿಸಿರುವ ಜಿಲ್ಲಾ ಹಾಗೂ ರಾಜ್ಯಮಟ್ಟದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಕಾರ್ಖಾನೆ ಹೊರಸೂಸುತ್ತಿರುವ ಹಾರುಬೂದಿಯಿದ ಜಾನುವಾರುಗಳು ಮೇವಿಗೂ ಸಮಸ್ಯೆ ಆಗುತ್ತಿದೆ. ಪಶು ಸಂಗೋಪನಾ ಇಲಾಖೆ ಹೆಚ್ಚಿನ ಸಂಶೋಧನೆ ನಡೆಸಬೇಕು ಎಂದು ಜಿಲ್ಲಾಡಳಿತ ಶಿಫಾರಸು ಮಾಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ’ ಎಂದು ಸಂಘದ ಅಧ್ಯಕ್ಷ ರಾಜೇಗೌಡ ಆಪಾದಿಸಿದರು.

ರಾಜ್ಯದಲ್ಲಿ ಹರಿಯುತ್ತಿರುವ ಕೆಲವು ನದಿಗಳ ನೀರು ಕುಡಿಯಲು ಯೋಗ್ಯವಿಲ್ಲ ಎಂದು ತಜ್ಞರು ವರದಿ ನೀಡಿದ್ದಾರೆ. ಒಂದು ಕಾರ್ಖಾನೆಯ ವೈಯಕ್ತಿಕ ಅಭಿವೃದ್ಧಿ ಹಾಗೂ ಹಿತಾಸಕ್ತಿ ನದಿಗಳನ್ನು ಮತ್ತಷ್ಟು ಕಲುಷಿತ ಮಾಡಲಾಗುತ್ತಿದೆ ಎಂದು ಸಂಘದ ಮುಖಂಡ ಯೋಗೇಶ್‌ ಹೇಳಿದರು.

Cut-off box - ‘ಕಬ್ಬು ಅರೆಯವಿಕೆಗೆ ಮಾತ್ರ ಅವಕಾಶ ಸಿಗಲಿ’ ಕೋರಮಂಡಲ್‌ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಕಬ್ಬು ಅರೆಯುವಿಕೆ ಹೊರತು ಪಡಿಸಿ ಡಿಸ್ಟಿಲರಿ ಎಥೆನಾಲ್‌ ಘಟಕದ ಸ್ಥಾಪನೆಗೆ ಅವಕಾಶ ನೀಡಬಾರದು. ಎಥೆನಾಲ್‌ ಘಟಕದ ಸ್ಥಾಪನೆ ಪ್ರಸ್ತಾವವನ್ನು ಶಾಶ್ವತವಾಗಿ ಕೈಬಿಡಬೇಕು ಎಂದು ರೈತರು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT