ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಲಸೌಕರ್ಯಕ್ಕೆ ಶುಲ್ಕ ಪಾವತಿ ಅಗತ್ಯ: ಜಲಮಂಡಳಿ ಅಧ್ಯಕ್ಷ

ರಾಯಲ್‌ ಲೇಕ್‌ ಫ್ರಂಟ್‌ ನಿವಾಸಿಗಳೊಂದಿಗೆ ಜಲಮಂಡಳಿ ಅಧ್ಯಕ್ಷರ ಸಭೆ
Published 15 ಏಪ್ರಿಲ್ 2024, 19:55 IST
Last Updated 15 ಏಪ್ರಿಲ್ 2024, 19:55 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಯಲ್‌ ಲೇಕ್‌ ಫ್ರಂಟ್‌ ಬಡಾವಣೆ’ ನಿವಾಸಿಗಳು ತಮ್ಮ ಪಾಲಿನ ಮೂಲ ಸೌಕರ್ಯದ ಶುಲ್ಕವನ್ನು ಪಾವತಿಸಿದಲ್ಲಿ ಕಾವೇರಿ ನೀರು ಸರಬರಾಜು ಪ್ರಾರಂಭಿಸಲಾಗುತ್ತದೆ ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ಪ್ರಸಾತ್‌ ಮನೋಹರ್‌ ಹೇಳಿದರು.

ರಾಯಲ್‌ ಲೇಕ್‌ ಫ್ರಂಟ್‌ ನಿವಾಸಿಗಳ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಬಡಾವಣೆ ನಿರ್ಮಾಣ ಸಂದರ್ಭದಲ್ಲೇ ಅಗತ್ಯ ಪೈಪ್‌ಲೈನ್‌ಗಳನ್ನು ನಿರ್ಮಾಣದಾರರು ಅಳವಡಿಸಬೇಕಿತ್ತು. ಆದರೆ, ಒಳಚರಂಡಿ ಅಥವಾ ನೀರಿನ ಪೈಪ್‌ಲೈನ್‌ ವ್ಯವಸ್ಥೆ ಅಳವಡಿಕೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಈ ಮೂಲಭೂತ ಸೌಕರ್ಯವನ್ನು ಅಳವಡಿಸಲು ಜಲಮಂಡಳಿಗೆ ತಗಲುವ ವೆಚ್ವವನ್ನು ‘ಡಿಮ್ಯಾಂಡ್‌ ನೋಟಿಸ್‌’ ಮೂಲಕ ಕೇಳಲಾಗಿದೆ. ಇದನ್ನು ಭರಿಸಿದಲ್ಲಿ ಜಲಮಂಡಳಿ ಅಗತ್ಯ ಕಾಮಗಾರಿ ನಡೆಸಿ ನೀರು ಪೂರೈಸಲಿದೆ ಎಂದರು.

‘ನಿವಾಸಿಗಳಲ್ಲಿ ಒಗ್ಗಟ್ಟಿನ ಕೊರೆತೆಯಿಂದ ಒಟ್ಟಾರೆಯಾಗಿ ಶುಲ್ಕ ಪಾವತಿಸಲು ಸಾಧ್ಯವಿಲ್ಲ. ಪರಿಹಾರ ನೀಡಿ’ ಎಂದು ನಿವಾಸಿಗಳು ಮನವಿ ಮಾಡಿದರು.

‘ನಿವಾಸಿಗಳಿಗೆ ವೈಯಕ್ತಿಕ ‘ಡಿಮ್ಯಾಂಡ್‌ ನೋಟಿಸ್‌’ ನೀಡಲಾಗುವುದು. ಶೇ 60ರಷ್ಟು ನಿವಾಸಿಗಳು ಶುಲ್ಕ ತುಂಬಿದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು’ ಎಂದು ರಾಮ್‌ಪ್ರಸಾತ್‌ ಭರವಸೆ ನೀಡಿದರು.

ಬಿಸಿಎಂಸಿ ಲೇಔಟ್‌, ರಘುವನಹಳ್ಳಿ, ಬಾಲಾಜಿ ಲೇಔಟ್‌ ವಜ್ರಹಳ್ಳಿ, ಬಿಸಿಸಿಎಚ್‌ ಲೇಔಟ್‌ಗಳು 110 ಗ್ರಾಮಗಳ ವ್ಯಾಪ್ತಿಯಲ್ಲಿವೆ. ಇವುಗಳು ಹೊಸದಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಸೇರ್ಪಡೆಯಾಗಿವೆ. ಸರ್ಕಾರದ ನಿರ್ಧಾರದಂತೆ ಈ ಬಡಾವಣೆಗಳಿಗೆ ಸಂಪರ್ಕ ನೀಡಲಾಗಿದೆ. ಕಾವೇರಿ 5ನೇ ಹಂತದ ಕಾಮಗಾರಿ ಮುಗಿದ ನಂತರ ‘ಪ್ರೊರೇಟಾ’ ಶುಲ್ಕ ಪಡೆದುಕೊಳ್ಳುವ ಬಗ್ಗೆ ಸರ್ಕಾರ ನಿರ್ಧರಿಸಲಿದೆ ಎಂದರು.

ದೊಡ್ಡಕಲ್ಲಸಂದ್ರದಲ್ಲಿರುವ ಬಿಡಿಎ ಎಂಪ್ಲಾಯೀಸ್‌ ಲೇಔಟ್‌ ಮತ್ತು ನಾರಾಯಣನಗರ ಬ್ಲಾಕ್‌ 1 ಲೇಔಟ್‌ನಿಂದ ಈಗಾಗಲೇ ಇಟಿಪಿ ಶುಲ್ಕವನ್ನು ಪಡೆದುಕೊಂಡು ಸಂಪರ್ಕ ನೀಡಲಾಗಿದೆ. ಬಿಡಿಎ ನಿರ್ಮಾಣ ಮಾಡುವ ಲೇಔಟ್‌ಗೂ ಸಂಪರ್ಕ ನೀಡಲು ಜಲಮಂಡಳಿ ಶುಲ್ಕವನ್ನು ವಿಧಿಸುತ್ತದೆ. ಯಾವುದೇ ಲೇಔಟ್‌ಗಳಿಗೂ ವಿನಾಯಿತಿ ನೀಡಲಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT