ಬುಧವಾರ, ಜುಲೈ 28, 2021
21 °C
ಪರಿಸ್ಥಿತಿ ಬಿಗಡಾಯಿಸಿದರೆ ರಿವರ್ಸ್ ಕ್ವಾರಂಟೈನ್: ಬಿಬಿಎಂಪಿ ಆಯುಕ್ತ

ಕೋವಿಡ್–19 | ಕ್ರೀಡಾಂಗಣಗಳಲ್ಲಿ ‌ಬಯಲು ಆಸ್ಪತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದೆ ವ್ಯಾಪಕವಾಗಿ ಹರಡಿದರೆ ಸೋಂಕಿತರ ಚಿಕಿತ್ಸೆಗೆ ತಾತ್ಕಾಲಿಕ ಬಯಲು ಆಸ್ಪತ್ರೆಗಳನ್ನು ತೆರೆಯಲು ನಗರದ ಅಲ್ಲಲ್ಲಿ ಜಾಗ ಗುರುತಿಸಲಾಗಿದೆ’ ಎಂದು ಬಿಬಿಎಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ತಿಳಿಸಿದರು.

ಬಿಬಿಎಂಪಿ ಕೌನ್ಸಿಲ್ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಂಠೀರವ ಕ್ರೀಡಾಂಗಣ, ಅರಮನೆ ಮೈದಾನದಲ್ಲಿನ ತ್ರಿಪುರವಾಸಿನಿ ಕಲ್ಯಾಣ ಮಂಟಪ, ಬಿಐಸಿ(ಬೆಂಗಳೂರು ಇಂಟರ್‌ ನ್ಯಾಷನಲ್ ಸೆಂಟರ್), ವೈಟ್‌ಫೀಲ್ಡ್‌ನಲ್ಲಿರುವ ವಸ್ತುಪ್ರದರ್ಶನ ಕೇಂದ್ರ ಹಾಗೂ ವಿವಿಧೆಡೆ ಇರುವ ಕ್ರೀಡಾಂಗಣಗಳನ್ನು ಗುರುತಿಸಲಾಗಿದೆ’ ಎಂದು ಹೇಳಿದರು.

‘ಸಂದರ್ಭ ಬಂದರೆ ರಿವರ್ಸ್ ಕ್ವಾರಂಟೈನ್ (60 ವರ್ಷ ಮೇಲ್ಪಟ್ಟವರು, ಹೃದಯ ತೊಂದರೆ, ಉಸಿರಾಟದ ತೊಂದರೆ ಇರುವವರು, ಗರ್ಭಿಣಿಯರನ್ನು ಮನೆಯಲ್ಲೇ ಪ್ರತ್ಯೇಕ ಕೊಠಡಿಯಲ್ಲಿ ಇರಿಸುವುದು. ಕುಟುಂಬದ ಇತರ ಸದಸ್ಯರಿಂದ ಅಂತರ ಕಾಯ್ದುಕೊಳ್ಳುವಂತೆ ಮಾಡುವುದು) ಅನಿವಾರ್ಯವಾಗಲಿದೆ’ ಎಂದು ತಿಳಿಸಿದರು.

‘ಕೋವಿಡ್–19 ಸೊಂಕಿತರ ಸಂಖ್ಯೆ ಹೆಚ್ಚಿರುವ ದೇಶಗಳಲ್ಲಿ ಸೋಂಕು ದೃಢಪಟ್ಟ ವ್ಯಕ್ತಿ ಆರೋಗ್ಯಕರವಾಗಿದ್ದರೆ ಆಸ್ಪತ್ರೆಗೆ ಕರೆದೊಯ್ಯುತ್ತಿಲ್ಲ. ಮನೆಯಲ್ಲೇ ಪ್ರತ್ಯೇಕವಾಗಿ ಇರಲು ಸೂಚಿಸಲಾಗುತ್ತಿದೆ. ಪರಿಸ್ಥಿತಿ ಕೈ ಮೀರಿದಾಗ ಆ ರೀತಿಯ ಕ್ರಮಗಳನ್ನು ಬೆಂಗಳೂರಿನಲ್ಲೂ ಕೈಗೊಳ್ಳಲಾಗುತ್ತದೆ. ಆ ಮಟ್ಟಕ್ಕೆ ಹೋಗದಂತೆ ತಡೆಯುವುದು ಜನರ ಕೈನಲ್ಲೇ ಇದೆ. ಹೊರ ರಾಜ್ಯಗಳಿಂದ ಬಂದವರು ಮತ್ತು ಪ್ರವಾಸ ಇತಿಹಾಸ ಹೊಂದಿದವರು 14 ದಿನ ಪ್ರತ್ಯೇಕವಾಗಿಯೇ ಇರುವುದು ಒಳ್ಳೆಯದು’ ಎಂದರು.

‘ಪ್ರಸ್ತುತ ನಗರದಲ್ಲಿ ಸೋಂಕು ನಿಯಂತ್ರಣದಲ್ಲಿದೆ. ಹೊರ ರಾಜ್ಯಗಳಿಂದ ಬಂದವರು, ಪ್ರಯಾಣ ಇತಿಹಾಸ ಹೊಂದಿದವರಲ್ಲಿ ಮಾತ್ರ ಸೋಂಕು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ, ಜನ ಭಯಪಡುವ ಅಗತ್ಯ ಇಲ್ಲ. ಮುನ್ನೆಚ್ಚರಿಕೆ ವಹಿಸಿದರೆ ಸಾಕು’ ಎಂದರು.

‘ಕಂಟೈನ್‌ಮೆಂಟ್ ವಲಯದ ಮಾರ್ಗಸೂಚಿ ಬದಲಾಗಿದೆ. ಸೋಂಕು ಪತ್ತೆಯಾದ ಇಡೀ ಪ್ರದೇಶವನ್ನು ಕಂಟೈನ್‌ಮೆಂಟ್ ವಲಯವನ್ನಾಗಿ ಮಾಡುವುದಿಲ್ಲ. ಮನೆ ಅಥವಾ ಹೆಚ್ಚೆಂದರೆ ಆ ಬೀದಿಯನ್ನು ಮಾತ್ರ ಕಂಟೈನ್‌ಮೆಂಟ್ ವಲಯ ಎಂದು ಪರಿಗಣಿಸಲಾಗುತ್ತಿದೆ. ಹೀಗಾಗಿ, ಕಂಟೈನ್‌ಮೆಂಟ್ ಪ್ರದೇಶಗಳ ಸಂಖ್ಯೆ ಜಾಸ್ತಿಯಾಗಿವೆ. ಈ ಸಂಖ್ಯೆ ನೋಡಿಕೊಂಡು ಜನ ಆತಂಕಪಡುವುದು ಬೇಡ. ಸೋಂಕು ಸಮುದಾಯಕ್ಕೆ ಹರಡದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಲಾಗಿದೆ’ ಎಂದು ವಿವರಿಸಿದರು.

ನಿತ್ಯ 2 ಸಾವಿರ ಜನರಿಗೆ ಪರೀಕ್ಷೆ
‘ಬೆಂಗಳೂರಿನಲ್ಲಿ ಪ್ರತಿನಿತ್ಯ 2 ಸಾವಿರ ಜನರಿಗೆ ಕೊರೊನಾ ಸೋಂಕು ಪರೀಕ್ಷೆ ನಡೆಸಲಾಗುತ್ತಿದೆ’ ಎಂದು ಅನಿಲ್‌ಕುಮಾರ್ ಹೇಳಿದರು.

‘ಹೊರ ಜಿಲ್ಲೆಗಳಿಂದ ಗಂಟಲು ದ್ರವದ ಮಾದರಿಗಳು ಹೆಚ್ಚಾಗಿ ಬಂದರೆ ಬೆಂಗಳೂರಿನಲ್ಲಿ ಪರೀಕ್ಷೆಗೆ ಕಳುಹಿಸಿದ್ದವರ ವರದಿ ಬರುವುದು ಎರಡು–ಮೂರು ದಿನ ತಡವಾಗುತ್ತಿದೆ’ ಎಂದು ತಿಳಿಸಿದರು.

‘ಪರೀಕ್ಷಾ ವರದಿ ಬರುವಷ್ಟರಲ್ಲೇ ಸೋಂಕಿತರು ಬೇರೆಯವರಿಗೆ ಹರಡುವ ಸಾಧ್ಯತೆ ಇದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಪ್ರಕರಣ ಪತ್ತೆಯಾದ ಕೂಡಲೇ ಸೋಂಕಿತರ ದೂರವಾಣಿ ಸಂಖ್ಯೆಗೆ ಮಾಹಿತಿ ನೀಡಬೇಕು ಎಂದು ತಿಳಿಸಲಾಗಿದೆ. ಸೋಂಕಿತರು ಬಿಬಿಎಂಪಿಗೆ ತಿಳಿಸಿದರೆ ಅವರನ್ನು ಕರೆತಂದು ಆಸ್ಪತ್ರೆಗೆ ದಾಖಲಿಸಲು ಅನುಕೂಲವಾಗುತ್ತದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು