ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂದಲಗಳ ನಡುವೆಯೂ ಗಣೇಶೋತ್ಸವ ಸಡಗರ

ಭಾನುವಾರವೂ ಮೂರ್ತಿ ಪ್ರತಿಷ್ಠಾಪನೆಗೆ ಸಿದ್ಧತೆ * ಪೊಲೀಸರು–ಸಂಘಟಕರ ನಡುವೆ ಚಕಮಕಿ
Last Updated 11 ಸೆಪ್ಟೆಂಬರ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಶುಕ್ರವಾರ ಹಾಗೂ ಶನಿವಾರ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಮನೆಗಳಲ್ಲಿ ಗೌರಿ–ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸುವ ಮೂಲಕ ಜನ ಹಬ್ಬ ಆಚರಿಸಿದರು. ಆದರೆ, ಕೋವಿಡ್‌ ಮೂರನೇ ಅಲೆ ಕಾಣಿಸಿಕೊಳ್ಳುವ ಆತಂಕವಿರುವ ಕಾರಣ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಹಲವು ನಿರ್ಬಂಧಗಳನ್ನು ವಿಧಿಸಿದ್ದರಿಂದ ಬೀದಿಗಳಲ್ಲಿ ಹಬ್ಬದ ಸಡಗರ ಅಷ್ಟಾಗಿ ಕಂಡು ಬರಲಿಲ್ಲ.

ಕೆಲವೆಡೆ ಸಣ್ಣ ಪುಟ್ಟ ರಸ್ತೆಗಳು ಹಾಗೂ ಓಣಿಗಳಲ್ಲಿ ಸಾಮೂಹಿಕವಾಗಿ 4 ಅಡಿ ಎತ್ತರದವರೆಗಿನ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಿದರು. ನಗರದ ಬಹುತೇಕ ಕಡೆಗಳಲ್ಲಿ ಚತುರ್ಥಿಯ ದಿನವೇ ಮೂರ್ತಿಗಳನ್ನು ವಿಸರ್ಜಿಸಲಾಯಿತು. ನಗರದ ಹಲಸೂರು ಕೆರೆ, ಯಡಿಯೂರು ಕೆರೆ, ಸ್ಯಾಂಕಿ ಕೆರೆ ಸೇರಿದಂತೆವಿವಿಧ ಕೆರೆಗಳಲ್ಲಿ ಪಾಲಿಕೆ ವತಿಯಿಂದ ಗಣೇಶ ಮೂರ್ತಿ ವಿಸರ್ಜನೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಪ್ರತಿ ವಾರ್ಡ್‌ಗಳಲ್ಲಿ ಬಿಬಿಎಂಪಿ ವತಿಯಿಂದ ಸಂಚಾರ ತೊಟ್ಟಿಗಳಲ್ಲಿ ಮೂರ್ತಿ ವಿಸರ್ಜಿಸಿದರು. ಕೆಲವೆಡೆ ಸ್ಥಳೀಯ ಮುಖಂಡರೂ ಇಂತಹ ತೊಟ್ಟಿಗಳ ವ್ಯವಸ್ಥೆ ಮಾಡಿದ್ದರು.

ಪೊಲೀಸರಿಂದ ತಕರಾರು ಆರೋಪ:

‘ಬೀದಿ, ರಸ್ತೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದಕ್ಕೆ ಪೊಲೀಸರು ತಕರಾರು ಮಾಡಿದ್ದಾರೆ. ಅನುಮತಿ ಪಡೆಯಲು ಬಿಬಿಎಂಪಿ ಕಚೇರಿಗೆ ಹೋದರೆ, ರಜೆ ಇತ್ತು. ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದರೆ, ನಾವು ಈಗಾಗಲೇ ಆದೇಶ ಮಾಡಿಯಾಗಿದೆ. ಬೀದಿಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಬಹುದು ಎಂದು ಉತ್ತರಿಸಿದರು. ಆದರೂ ಪೊಲೀಸರು ಕಿರಿಕಿರಿಯನ್ನುಂಟು ಮಾಡಿದ್ದಾರೆ’ ಎಂದು ಕೆಲವು ಸಂಘಟಕರು ಆರೋಪಿಸಿದರು.

‘ಪೊಲೀಸ್‌ ಇಲಾಖೆಗೆ ಸರಿಯಾದ ಮಾಹಿತಿ ಇಲ್ಲದಿರುವುದರಿಂದ ಬಹುತೇಕ ಕಡೆ ಗಣೇಶನನ್ನು ಕೂರಿಸಲು ತೊಂದರೆಯಾಗುತ್ತಿದೆ. ಸುತ್ತೋಲೆ ಹೊರಡಿಸುತ್ತೇವೆ ಎಂದು ಹೇಳಿದ್ದ ಬಿಬಿಎಂಪಿಯು ಮೌಖಿಕ ಆದೇಶ ಮಾತ್ರ ನೀಡಿರುವುದರಿಂದ ಈ ಗೊಂದಲ ಸೃಷ್ಟಿಯಾಗಿದೆ’ ಎಂದುಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರಾಜು ದೂರಿದರು.

ಮೂರ್ತಿಗಳ ತೆರವು:

ಬಿಟಿಎಂ ಬಡಾವಣೆಯಲ್ಲಿ ಕೂರಿಸಿದ್ದ ಗಣೇಶ ಮೂರ್ತಿಗಳನ್ನು ತೆರವುಗೊಳಿಸುವಂತೆ ಪೊಲೀಸರು ಶುಕ್ರವಾರ ಸಂಜೆ ಒತ್ತಾಯ ಮಾಡುತ್ತಿದ್ದಂತೆ ಗದ್ದಲ ಉಂಟಾಯಿತು. ಆಯೋಜಕರು ಪೊಲೀಸರ ವಿರುದ್ಧ ಪ್ರತಿಭಟನೆ ಮಾಡಿದರು.

‘ಬೇಗ ಮೂರ್ತಿಯನ್ನು ವಿಸರ್ಜಿಸಬೇಕು ಎಂದು ಪೊಲೀಸರು ಒತ್ತಡ ಹೇರಿದರು. ಸಂಜೆಯ ಮಂಗಳಾರತಿಗೂ ಅವಕಾಶ ನೀಡದೆ ಮೂರ್ತಿಗಳನ್ನು ತೆಗೆಯಿಸಿದರು’ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT