ಭಾನುವಾರ, ಜೂನ್ 13, 2021
25 °C
ಕೃಷಿಕರಿಗಾಗಿ ಕೃಷಿ ವಿಶ್ವವಿದ್ಯಾಲಯದಿಂದ ವಿನೂತನ ಯೋಜನೆ

ಹಸಿವು ನೀಗಿಸಲಿದೆ ‘ರೈತ ದಾಸೋಹ’

ಮನೋಹರ್ ಎಂ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೃಷಿ ಮಾಹಿತಿ ಪಡೆಯಲು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರಕ್ಕೆ (ಜಿಕೆವಿಕೆ) ನಿತ್ಯ ಭೇಟಿ ನೀಡುವ ರೈತರಿಗೆ ‘ರೈತ ದಾಸೋಹ’ ಯೋಜನೆಯಡಿ ಉಚಿತ ವಾಗಿ ಊಟ ನೀಡುವ ಕಾರ್ಯಕ್ರಮ ಶೀಘ್ರವೇ ಆರಂಭಗೊಳ್ಳಲಿದೆ.

ವಿವಿಧ ಜಿಲ್ಲೆಗಳಿಂದ ಕನಿಷ್ಠ ನೂರು ಮಂದಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುತ್ತಾರೆ. ಮಳೆಗಳಿಗೆ ಅನುಗುಣವಾಗಿ ಬೆಳೆ ಆಯ್ಕೆ ಮಾಡಿಕೊಳ್ಳುವುದು, ಉಳುಮೆ, ಯಂತ್ರೋಪಕರಣಗಳು, ವಿವಿಧ ತಳಿಗಳು, ಬೆಳೆಗಳ ರೋಗ ನಿಯಂತ್ರಣ ಕುರಿತು ತಜ್ಞರಿಂದ ಮಾಹಿತಿ ಪಡೆಯಲು, ಸಸಿಗಳ ಖರೀದಿ ಹಾಗೂ ಬಿತ್ತನೆ ಬೀಜಗಳ ಖರೀದಿಗೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.

‘ಲಾಕ್‍ಡೌನ್ ನಂತರ ರೈತರ ಸಂಖ್ಯೆ ಇಳಿಮುಖವಾಗಿತ್ತು. ಲಾಕ್‍ಡೌನ್ ಸಡಿಲಿಕೆಯಾದ ಬಳಿಕ ರೈತರ ಸಂಖ್ಯೆ ಏರಿದ್ದು, ಜಿಕೆವಿಕೆ ಆವರಣದಲ್ಲಿರುವ ರೈತ ತರಬೇತಿ ಕೇಂದ್ರದಲ್ಲಿ ದಾಸೋಹಕ್ಕೆ ವ್ಯವಸ್ಥೆ ಮಾಡಲಾಗಿದೆ. ದಾಸೋಹ ಕಾರ್ಯಕ್ರಮಕ್ಕೆ ಶೀಘ್ರದಲ್ಲೇ  ಚಾಲನೆ ನೀಡಲಾಗುವುದು’ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ರಾಜೇಂದ್ರ ಪ್ರಸಾದ್ 'ಪ್ರಜಾವಾಣಿ'ಗೆ ತಿಳಿಸಿದರು.

'ಊಟ ಸೇವನೆಗೆ ರೈತರಿಗೆ ಟೋಕನ್ ವಿತರಿಸಲಾಗುವುದು. ರೈತರಿಗೆ ಮಾತ್ರವಲ್ಲದೆ ವಿಶ್ವವಿದ್ಯಾಲಯಕ್ಕೆ ಅಧ್ಯಯನ ಹಾಗೂ ವಿವಿಧ ಪರೀಕ್ಷೆ ಬರೆಯಲು ಬೇರೆ ಭಾಗಗಳಿಂದ ಬರುವ ವಿದ್ಯಾರ್ಥಿಗಳು ಹಾಗೂ ಪೋಷಕರಿಗೂ ಈ ಯೋಜನೆಯಡಿ ಊಟದ ವ್ಯವಸ್ಥೆ ಮಾಡಲಾಗುವುದು' ಎಂದರು.

ಸಿಬ್ಬಂದಿ ವೇತನದಿಂದ ದಾಸೋಹಕ್ಕೆ ವ್ಯವಸ್ಥೆ: ‘ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಒಂದು ದಿನದ ವೇತನವನ್ನು 'ಶಾಶ್ವತ ನಿಧಿ'ಗೆ ನೀಡಲಾಗುವುದು. ರೈತ ದಾಸೋಹಕ್ಕೆ ತಗುಲುವ ವೆಚ್ಚವನ್ನು ಈ ನಿಧಿಯ ಹಣದಿಂದಲೇ ಭರಿಸಲಾಗುವುದು’ ಎಂದು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಶಿವರಾಂ ತಿಳಿಸಿದರು.

ರೈತರ ಮೊಬೈಲ್‍ಗಳಿಗೆ ಕೃಷಿ ಮಾರ್ಗದರ್ಶಿ
ಕೃಷಿ ವಿಶ್ವವಿದ್ಯಾಲಯವು ಪ್ರತಿವರ್ಷ ಹೊರತರುವ ಸುಧಾರಿತ ಕೃಷಿ ಪದ್ಧತಿಗಳ ಆಪ್ತ ಮಾರ್ಗದರ್ಶಿಯು ಇನ್ನು ಮುಂದೆ ರೈತರ ಮೊಬೈಲ್‍ಗಳಿಗೆ ಉಚಿತವಾಗಿ ಲಭ್ಯವಾಗಲಿದೆ. ವಾಟ್ಸ್ಆ್ಯಪ್ ಮೂಲಕ ಮಾರ್ಗದರ್ಶಿ ನೇರವಾಗಿ ರೈತರ ಮೊಬೈಲ್‍ಗಳಿಗೆ ರವಾನೆಯಾಗಲಿದೆ.

ಆಸಕ್ತರು 9972035456, 9591347043 ಮೊಬೈಲ್ ಸಂಖ್ಯೆಗಳಿಗೆ ಸಂದೇಶ ಕಳುಹಿಸಿ ಮಾರ್ಗದರ್ಶಿ ಪಡೆದುಕೊಳ್ಳಬಹುದು. ಈ ಕೈಪಿಡಿಯು ವಿಶ್ವವಿದ್ಯಾಲಯದ ವೆಬ್‍ಸೈಟ್ www.uasbangalore.edu.inನಲ್ಲೂ ಲಭ್ಯ.

*
ಈಗ ಬಿತ್ತನೆ ಅವಧಿ. ಈ ವೇಳೆ ಬಿತ್ತನೆ ಬೀಜ ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುವ ರೈತರಿಗೆ ಮಧ್ಯಾಹ್ನದ ವೇಳೆ ಊಟದ ವ್ಯವಸ್ಥೆ ಮಾಡಲು ಯೋಜನೆ ರೂಪಿಸಲಾಗಿದೆ.
-ಎಸ್.ರಾಜೇಂದ್ರ ಪ್ರಸಾದ್, ಕುಲಪತಿ, ಕೃಷಿ ವಿಶ್ವವಿದ್ಯಾಲಯ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು