ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಎಎಲ್‌ ರಸ್ತೆ: ತಂಪೆರೆಯುತ್ತಿದ್ದ 8 ಮರಗಳ ಹನನ

ಸ್ಥಳೀಯರಿಂದ ದಿಢೀರ್‌ ಪ್ರತಿಭಟನೆ
Last Updated 15 ಮಾರ್ಚ್ 2021, 19:20 IST
ಅಕ್ಷರ ಗಾತ್ರ

ಬೆಂಗಳೂರು: ಎಚ್‌ಎಎಲ್‌ ರಸ್ತೆಯಲ್ಲಿ ಸಂಚರಿಸು‌ವವರಿಗೆ ತಂಪಾದ ಅನುಭವ ನೀಡುತ್ತಿದ್ದ ಎಂಟು ಮರಗಳನ್ನು ಬಿಬಿಎಂಪಿ ಭಾನುವಾರ ಕಡಿದಿದೆ. ಸುರಂಜನದಾಸ್ ಜಂಕ್ಷನ್‌ನಲ್ಲಿ ಗ್ರೇಡ್‌ ಸಪರೇಟರ್‌ ಕಾಮಗಾರಿಗಾಗಿ ಮರ ಕಡಿದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಮರಗಳ ಹನನವನ್ನು ವಿರೋಧಿಸಿ ಸ್ಥಳೀಯರು ಸೋಮವಾರ ದಿಢೀರ್‌ ಪ್ರತಿಭಟನೆ ನಡೆಸಿದರು. ಬಿಸಿಲನ್ನೂ ಲೆಕ್ಕಿಸದೆ ಮಧ್ಯಾಹ್ನದವರೆಗೆ ಭಿತ್ತಿಪತ್ರ ಪ್ರದರ್ಶಿಸಿ ಧರಣಿ ನಡೆಸಿದರು.

₹ 45 ಕೋಟಿ ವೆಚ್ಚದ ಈ ಕಾಮಗಾರಿ ಸಲುವಾಗಿ ಒಟ್ಟು 48 ಮರಗಳನ್ನು ತೆರವುಗೊಳಿಸುವುದಕ್ಕೆ ಬಿಬಿಎಂಪಿ ತೀರ್ಮಾನಿಸಿತ್ತು. ಬಳಿಕ ಮಾರ್ಗದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು 16 ಮರಗಳನ್ನು ಕಡಿಯುವುದನ್ನು ತಪ್ಪಿಸಲು ಕ್ರಮ ಕೈಗೊಂಡಿತ್ತು. ಏಳು ಮರಗಳನ್ನು ಸ್ಥಳಾಂತರ ಮಾಡಿತ್ತು. ಅಂತಿಮವಾಗಿ ಭಾರಿ ಗಾತ್ರದ 25 ಮರಗಳನ್ನು ಕಡಿಯಲು ಮುಂದಾಗಿತ್ತು. ಇದರಲ್ಲಿ ಈಗಾಗಲೇ ಎಂಟು ಮರಗಳನ್ನು ಎರಡು ದಿನಗಳಲ್ಲಿ ಕಡಿಯಲಾಗಿದೆ.

‘ನಾನು ಶನಿವಾರ ಸಂಜೆ ಇಲ್ಲಿನ ರಸ್ತೆಯಲ್ಲಿ ಬರುವಾಗ ಅಂಚೆ ಕಚೇರಿ ಬಳಿ ಭಾರಿ ಗಾತ್ರದ ಮರವನ್ನು ಕಡಿದಿದ್ದರು. ಇದನ್ನು ನೋಡಿ ಅವಕ್ಕಾಗಿದ್ದೆ. ಭಾನುವಾರ ರಾತ್ರೋ ರಾತ್ರಿ ಮರಗಳನ್ನು ಕಡಿದಿದ್ದಾರೆ. ಸೋಮವಾರ ಬೆಳಿಗ್ಗೆ ನೋಡುವಾಗ ಇಲ್ಲಿ ಎಂಟು ಮರಗಳು ಧರೆಗುರುಳಿವೆ’ ಎಂದು ವಿನಾಯಕ ನಗರದ ನಿವಾಸಿ ಸ್ವಾತಿ ದಾಮೋದರ್‌ ‘ಪ್ರಜಾವಾಣಿ’ ಬಳಿ ಬೇಸರ ತೋಡಿಕೊಂಡರು.

ಎಚ್‌ಎಎಲ್‌ ರಸ್ತೆಯಲ್ಲಿ ಸಿಗ್ನಲ್‌ರಹಿತ ಕಾರಿಡಾರ್‌ ನಿರ್ಮಾಣಕ್ಕೆ 2017ರಲ್ಲೇ ಬಿಬಿಎಂಪಿ ಯೋಜನೆ ರೂಪಿಸಿತ್ತು. ಈ ಕಾಮಗಾರಿಗಾಗಿ ಎಚ್‌ಎಎಲ್‌ ರಸ್ತೆ ಪಕ್ಕದ ಮರಗಳನ್ನು ಕಡಿಯಲಾಗುತ್ತದೆ ಎಂಬ ಸುದ್ದಿ ತಿಳಿದು ಸ್ಥಳೀಯರು 2017ರ ಆ.13ರಂದು ಮಾನವ ಸರಪಣಿ ರಚಿಸಿ ಭಾರಿ ಪ್ರತಿಭಟನೆ ನಡೆಸಿದ್ದರು. ಆ ಬಳಿಕ ಬಿಬಿಎಂಪಿ ಈ ಯೋಜನೆಯನ್ನು ಮುಂದುವರಿಸಿರಲಿಲ್ಲ. ಈಗ ಮತ್ತೆ ಹಳೆ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ.

‘ನಮಗೆ ಗ್ರೇಡ್‌ ಸಪರೇಟರ್‌ಗಿಂತ ಇಲ್ಲಿನ ಮರಗಳೇ ಮುಖ್ಯ. ಇವು ಒಂದೆರಡು ವರ್ಷಗಳಲ್ಲಿ ಬೆಳೆದವುಗಳಲ್ಲ. ರಾತ್ರೋರಾತ್ರಿ ಈ ಮರಗಳನ್ನು ಕಡಿಯುವುದು ಸುಲಭ. ರಾತ್ರೋ ರಾತ್ರಿ ಮರಗಳನ್ನು ಬೆಳೆಸಲು ಸಾಧ್ಯವೇ’ ಎಂದು ಪ್ರಶ್ನಿಸುತ್ತಾರೆ ಇಲ್ಲಿಗೆ ಸಮೀಪದ ಅನ್ನಸಂದ್ರಪಾಳ್ಯ ನಿವಾಸಿ ಸ್ವಸ್ತಿಕ್‌ ಮಣಿ.

‘ನಾವು ಹೈಕೋರ್ಟ್ ಆದೇಶದ ಪ್ರಕಾರ ತಜ್ಞರ ಸಮಿತಿ ರಚಿಸಿ ಅದರ ಶಿಫಾರಸಿನ ಆಧಾರದಲ್ಲೇ ಮರಗಳನ್ನು ಕಡಿಯುವುದಕ್ಕೆ ಅನುಮತಿ ನೀಡಿದ್ದೇವೆ’ ಎಂದು ಬಿಬಿಎಂಪಿಯ ಉಪಅರಣ್ಯಸಂರಕ್ಷಣಾಧಿಕಾರಿ ರಂಗಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲ್ಲಿ ಒಂದು ಮರ ಕಡಿದರೆ ಮೂರು ಸಸಿಗಳನ್ನು ನೆಟ್ಟು ಬೆಳೆಸಲು ಕ್ರಮ ಕೈಗೊಂಡಿದ್ದೇವೆ. ಇಲ್ಲಿನ ರಸ್ತೆಗಳ ಪಕ್ಕದಲ್ಲಿ ಈಗಾಗಲೇ ಸಸಿಗಳನ್ನು ನೆಟ್ಟಿದ್ದೇವೆ. ನಗರದಲ್ಲಿ ಅಭಿವೃದ್ಧಿ ಕಾಮಗಾರಿ ಸಲುವಾಗಿ ಕಡಿಯಬೇಕಾಗಿ ಬರುವ ಮರಗಳಿಗೆ ಪ್ರತಿಯಾಗಿ ಬೇರೆ ಕಡೆ ಸಸಿ ಬೆಳೆಸಲು ವಿಶೇಷ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದೇವೆ’ ಎಂದರು.

‘ಸಾರ್ವಜನಿಕರ ಗಮನಕ್ಕೆ ಬಾರದಂತೆ ಮರ ಕಡಿಯಲು ಅನುಮತಿ ನೀಡಿರುವುದು ಬಿಬಿಎಂಪಿಯ ತಪ್ಪು. ಅಭಿವೃದ್ಧಿ ಕಾರ್ಯಗಳೇನಿದ್ದರೂ ಜನರಿಗಾಗಿ ಇರಬೇಕು. ರಾತ್ರೋ ರಾತ್ರಿ ಮರಗಳನ್ನು ಕಡಿದಿದ್ದನ್ನು ನೋಡಿ ಸುಮ್ಮನಿರಲು ಸಾಧ್ಯವಿಲ್ಲ’ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ಮುಕುಂದ ಗೌಡ ತಿಳಿಸಿದರು. ಇಲ್ಲಿನ ಮರಗಳನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ಎಎಪಿ ಕೂಡಾ ಕೈ ಜೋಡಿಸಿದೆ.

‘ಇನ್ನುಳಿದ ಮರಗಳನ್ನು ರಕ್ಷಿಸಿಕೊಳ್ಳುತ್ತೇವೆ’

‘ಸ್ಥಳೀಯರ ಅರಿವಿಗೇ ಬಾರದೇ ಎಂಟು ಮರಗಳನ್ನು ಬಿಬಿಎಂಪಿಯವರು ಕಡಿದುಬಿಟ್ಟಿದ್ದಾರೆ. ಆದರೆ, ಇನ್ನುಳಿದ ಮರಗಳನ್ನು ಕಡಿಯುವುದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಈ ಕುರಿತು ಕಾನೂನು ಹೋರಾಟಕ್ಕೂ ಸಿದ್ಧತೆ ನಡೆಸುತ್ತಿದ್ದೇವೆ’ ಎಂದು ಸ್ವಾತಿ ತಿಳಿಸಿದರು.

‘ಭಿತ್ತಿಪತ್ರದ ಮೂಲಕ ಮಾಹಿತಿ ನೀಡಲಿ’

‘ತಜ್ಞರ ಅಭಿಪ್ರಾಯ ಪಡೆದು ಸಾಧ್ಯವಾದಷ್ಟು ಮರಗಳನ್ನು ಉಳಿಸಲು ಕ್ರಮ ಕೈಗೊಂಡಿವುದಾಗಿ ಬಿಬಿಎಂಪಿ ಹೇಳುತ್ತದೆ. ಆದರೆ, ಯಾವೆಲ್ಲ ಮರಗಳನ್ನು ಕಡಿಯಲಾಗುತ್ತದೆ ಎಂಬ ಬಗ್ಗೆ ಸ್ಥಳೀಯರಿಗೆ ಅರಿವೇ ಇರುವುದಿಲ್ಲ. ಎಲ್ಲರೂ ಬಿಬಿಎಂಪಿ ವೆಬ್‌ಸೈಟ್‌ ನೋಡುವುದಿಲ್ಲ. ಕಾಮಗಾರಿಗಾಗಿ ಯಾವ ಮರವನ್ನು ಕಡಿಯಲಾಗುತ್ತದೆ ಎಂಬ ಬಗ್ಗೆ ಅದರ ಬಳಿ ಭಿತ್ತಿಪತ್ರ ಅಂಟಿಸುವ ಮೂಲಕ ಜನರಿಗೆ ಮಾಹಿತಿ ನೀಡಬೇಕು. ಮಹಾರಾಷ್ಟ್ರದಲ್ಲಿ ಈ ಮಾದರಿಯನ್ನು ಅನುಸರಿಸಲಾಗುತ್ತಿದೆ’ ಎಂದು ಪರಿಸರ ಕಾರ್ಯಕರ್ತ ವಿಜಯ್‌ ನಿಶಾಂತ್‌ ಸಲಹೆ ನೀಡಿದರು.

* ನಗರದಲ್ಲಿ ಮೊದಲೇ ಉಸಿರಾಡಲೂ ಕಷ್ಟಪಡಬೇಕಾದ ಸ್ಥಿತಿ ಇದೆ. ಅಭಿವೃದ್ಧಿ ಹೆಸರಿನಲ್ಲಿ ಇನ್ನಷ್ಟು ಮರಗಳನ್ನು ಕಡಿದರೆ ಭವಿಷ್ಯ ಹೇಗಿರಬಹುದು. ನಮಗೆ ಗ್ರೇಡ್‌ ಸಪರೇಟರ್‌ ಬೇಡ. ಮರಗಳು ಉಳಿಯಬೇಕು.

-ವಂಶಿಕೃಷ್ಣ, ಸುದ್ದಗುಂಟೆಪಾಳ್ಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT