ಬೆಂಗಳೂರು:ನಗರದ ಉತ್ತರ ಪ್ರದೇಶಗಳಲ್ಲಿ ಭಾನುವಾರ ರಾತ್ರಿ ಬಿರುಸಿನ ಮಳೆಯಾಗಿದ್ದು, ಯಲಹಂಕ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳು ತತ್ತರಿಸಿಹೋದರು. ನೂರಾರು ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಯಿತು. ಜಲಾವೃತಗೊಂಡ ಅಪಾರ್ಟ್ಮೆಂಟ್ ಸಮುಚ್ಚಯದ ಫ್ಲ್ಯಾಟ್ಗಳಲ್ಲಿ ಸಿಲುಕಿದ್ದ ನಿವಾಸಿಗಳನ್ನು ಸ್ಥಳಾಂತರಿಲು ಬೋಟ್ ಹಾಗೂ ಟ್ರ್ಯಾಕ್ಟರ್ ಅವಲಂಬಿಸಬೇಕಾದ ಸ್ಥಿತಿಯನ್ನು ಕೇವಲ ನಾಲ್ಕೈದು ತಾಸು ಸುರಿದ ಮಳೆ ಸೃಷ್ಟಿಸಿತು.

ನಗರದಾದ್ಯಂತ ಹಲವು ದಿನಗಳಿಂದ ನಿತ್ಯವೂ ಜೋರು ಮಳೆಯಾಗುತ್ತಿದೆ. ಭಾನುವಾರವೂ ಮಳೆಯ ಅಬ್ಬರ ಜೋರಾಗಿತ್ತು. ನಗರದ ಉತ್ತರ ಭಾಗದಲ್ಲಿ ಸಂಜೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೂ ನಿರಂತರವಾಗಿ ಮಳೆ ಸುರಿಯಿತು. ಒಂದೇ ಸಮನೆ ಹೊಯ್ದ ಮಳೆಗೆ ಬಹುತೇಕ ಪ್ರದೇಶಗಳು ಜಲಾವೃತ್ತಗೊಂಡವು. ಜಕ್ಕೂರು ಹಾಗೂ ವಿದ್ಯಾರಣ್ಯಪುರ ಬಳಿಯ ಸಿಂಗಾಪುರದ ಕೆರೆಗಳು ಕೋಡಿ ಬಿದ್ದು, ನೀರು ರಭಸವಾಗಿ ಹೊರಗೆ ಹರಿಯಿತು. ಯಲಹಂಕ ಕೋಗಿಲು ಕ್ರಾಸ್ನಲ್ಲೂ ರಾಜಕಾಲುವೆಗಳು ಮೈದುಂಬಿ ನೀರು ರಸ್ತೆಗೆ ಹರಿಯಿತು. ಯಲಹಂಕ ಹಳೇ ನಗರ, ಕೋಗಿಲು ಕ್ರಾಸ್, ಜಕ್ಕೂರು, ಅಲ್ಲಾಳಸಂದ್ರ, ವಿದ್ಯಾರಣ್ಯಪುರ, ಸಿಂಗಾಪುರ ಹಾಗೂ ಸುತ್ತಮುತ್ತ ಪ್ರದೇಶಗಳ ನೂರಾರು ಮನೆಗಳಿಗೆ ಮಳೆ ನೀರು ನುಗ್ಗಿತ್ತು.

ಸಿಂಗಾಪುರ ಕೆರೆ ಪ್ರದೇಶಕ್ಕೆ ಹೊಂದಿಕೊಂಡಿರುವ ಮನೆಗಳಲ್ಲಿ ಮೂರು ಅಡಿಗಳಷ್ಟು ನೀರು ನುಗ್ಗಿತ್ತು. ಮಳೆ ಶುರುವಾದಾಗಿನಿಂದಲೂ ಆತಂಕದಲ್ಲಿದ್ದ ನಿವಾಸಿಗಳು, ಮನೆಗೆ ನೀರು ನುಗ್ಗುತ್ತಿದ್ದಂತೆ
ಮತ್ತಷ್ಟು ಗಲಿಬಿಲಿಗೊಂಡರು. ರಾತ್ರಿಯಿಡೀ ನೀರು ಹೊರಹಾಕಲು ಹರಸಾಹಸಪಟ್ಟರು. ಇಲ್ಲಿನ ಕೆಲ ಪ್ರದೇಶಗಳಲ್ಲಿ ಸೋಮವಾರ ಮಧ್ಯಾಹ್ನದವರೆಗೂ ಮಳೆ ನೀರನ್ನು ಹೊರಚೆಲ್ಲುವ ಕಾರ್ಯ ಮುಂದುವರಿದಿತ್ತು. ಮಳೆ ನಿಂತು ನಾಲ್ಕೈದು ತಾಸುಗಳ ಬಳಿಕ ನೀರಿನ ಮಟ್ಟ ಇಳಿಯಿತು. ನಿವಾಸಿಗಳು ಮಳೆ ನೀರನ್ನು ಹೊರಗೆ ಹಾಕಿ, ಮನೆಗಳನ್ನು ಸ್ವಚ್ಛ ಮಾಡುತ್ತಿದ್ದ ದೃಶ್ಯಗಳು ಸೋಮವಾರವೂ ಕಂಡುಬಂದವು.

ರಾಜಕಾಲುವೆ ಜಾಗದಲ್ಲಿ ರಸ್ತೆ: ಸಿಂಗಾಪುರದಲ್ಲಿ ರಸ್ತೆ ಮೇಲೆಯೇ ನೀರು ಹರಿದು, ಮನೆಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿತ್ತು. ಈ ಭಾಗದಲ್ಲಿ ರಾಜಕಾಲುವೆಯನ್ನು ಒತ್ತುವರಿ ಮಾಡಿ ರಸ್ತೆ ನಿರ್ಮಿಸಲಾಗಿದ್ದು, ಇದೀಗ ಅದೇ ರಸ್ತೆಯಲ್ಲಿ ನೀರು ಹರಿಯುತ್ತಿರುವುದಾಗಿ ನಿವಾಸಿಗಳು ದೂರಿದರು.

ಕೆರೆ ನೀರಿನ ಜೊತೆಯಲ್ಲಿ ಹಾವು, ಚೇಳು ಹಾಗೂ ಮೀನುಗಳು ಸಹ ಕಾಣಿಸಿಕೊಂಡವು. ಕೆಲ ಮನೆಗಳಲ್ಲೂ ಹಾವುಗಳ ಹಾವಳಿ ಇತ್ತು. ಇದು ಜನರ ಭಯಕ್ಕೆ ಕಾರಣವಾಯಿತು. ಕೆಲವರು ಹಾವುಗಳನ್ನು ಹಿಡಿದು ಹೊರಗೆ ಬಿಟ್ಟರು.

‘25 ವರ್ಷಗಳಿಂದ ಸಿಂಗಾಪುರದಲ್ಲಿ ವಾಸವಿದ್ದೇವೆ. ಇಂಥ ಮಳೆಯನ್ನು ಕಂಡಿರಲಿಲ್ಲ. ಸಿಂಗಾಪುರ ಕೆರೆ ಸಹ ಕೋಡಿ ಬಿದ್ದಿದ್ದು, ಇಷ್ಟು ಪ್ರಮಾಣದಲ್ಲಿ ನೀರು ಹರಿದಿದ್ದು ಇದೇ ಮೊದಲು. 20ಕ್ಕೂ ಹೆಚ್ಚು ಮನೆಗಳಿಗೂ ನೀರು ನುಗ್ಗಿದ್ದು, ಎಲ್ಲರಿಗೂ ತೊಂದರೆ ಆಗಿದೆ’ ಎಂದು ಸ್ಥಳೀಯ ನಿವಾಸಿ ರಂಗನಾಥ್ ಹೇಳಿದರು.

‘ಕೆರೆ ಕೋಡಿ ಬಿದ್ದ ನೀರು ಸರಾಗವಾಗಿ ಹರಿದು ಹೋಗಲು ರಾಜಕಾಲುವೆ ಇತ್ತು. ಆ ಕಾಲುವೆ ಮುಚ್ಚಿ, ಅದೇ ಸ್ಥಳದಲ್ಲಿ ರಸ್ತೆಯನ್ನು ನಿರ್ಮಿಸಲಾಗಿದೆ. ಈ ಬಗ್ಗೆ ದೂರು ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಇದೀಗ, ನೀರು ಹರಿದು ಹೋಗಲು ಸೂಕ್ತ ಕಾಲುವೆ ಇಲ್ಲ. ಹೀಗಾಗಿಯೇ ನೀರು ರಸ್ತೆಯಲ್ಲಿ ಹರಿಯುತ್ತಿದೆ’ ಎಂದೂ ತಿಳಿಸಿದರು.

ಕೆರೆಯಂತಾದ ನೆಲಮಹಡಿ: ಸಿಂಗಾಪುರ ಬಳಿಯ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ ಸಮುಚ್ಚಯದ ಆವರಣಕ್ಕೂ ನೀರು ನುಗ್ಗಿತ್ತು. ನೆಲಮಹಡಿಯಲ್ಲಿ ಮೂರು ಅಡಿಯಷ್ಟು ನೀರು ನಿಂತು, ಇಡೀ ಆವರಣ ಕೆರೆಯಂತಾಗಿತ್ತು. ಕಾರು ಹಾಗೂ ಬೈಕ್ಗಳು ನೀರಿನಲ್ಲಿ ಮುಳುಗಿದ್ದವು.

‘ಕೆರೆ ಕೋಡಿ ಬಿದ್ದ ನೀರು ರಸ್ತೆಯಲ್ಲಿ ಹರಿದು, ಅಪಾರ್ಟ್ಮೆಂಟ್ ಸಮುಚ್ಚಯಕ್ಕೆ ನುಗ್ಗಿದೆ. ಕೆಲ ನಿವಾಸಿಗಳು, ಹರಿಯುವ ನೀರಿನಲ್ಲೇ ಸಂಚರಿಸಿದರು. ಬಹುತೇಕ ನಿವಾಸಿಗಳು ಹೊರ ಬಾರದ ಹಾಗೂ ಹೊರಗಿನವರು ಒಳಗೆ ಹೋಗಲಾಗದ ಸ್ಥಿತಿ ನಿರ್ಮಾಣವಾಗಿತ್ತು’ ಎಂದು ಸ್ಥಳೀಯ ನಿವಾಸಿಯೊಬ್ಬರು ವಿವರಿಸಿದರು.

ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ಸಿಬ್ಬಂದಿ, ಅಪಾರ್ಟ್ಮೆಂಟ್ ಸಮುಚ್ಚಯಕ್ಕೆ ಬಂದು ದೋಣಿ ಹಾಗೂ ಟ್ರ್ಯಾಕ್ಟರ್ ಬಳಸಿ ಕಾರ್ಯಾಚರಣೆ ನಡೆಸಿದರು. ಫ್ಲ್ಯಾಟ್ನಲ್ಲಿ ಸಿಲುಕಿದ್ದ ವೃದ್ಧರು, ಮಹಿಳೆಯರು ಹಾಗೂ ಮಕ್ಕಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ತಲುಪಿಸಿದರು. ರಾತ್ರಿಯಾದರೂ ನೀರು ಕಡಿಮೆಯಾಗಿರಲಿಲ್ಲ. ಕಾರ್ಯಾಚರಣೆ ಮುಂದುವರಿದಿತ್ತು.

ನಿವಾಸಿಗಳು ಉಳಿದುಕೊಳ್ಳಲು ಅಂಬೇಡ್ಕರ್ ಭವನ ಹಾಗೂ ವಸತಿ ನಿಲಯಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಆಹಾರ ಹಾಗೂ ಕುಡಿಯುವ ನೀರು ಪೂರೈಸಲಾಗಿದೆ. ಕೆಲ ನಿವಾಸಿಗಳು, ಸಂಬಂಧಿಕರು ಹಾಗೂ ಸ್ನೇಹಿತರ ಮನೆಗಳಿಗೆ ಹೊರಟು ಹೋದರು. ಅಪಾರ್ಟ್ಮೆಂಟ್ ಸಮುಚ್ಚಯದಲ್ಲಿ 600 ಫ್ಲ್ಯಾಟ್ಗಳಿದ್ದು, ಐದು ಸಾವಿರಕ್ಕೂ ಹೆಚ್ಚು ಮಂದಿ ವಾಸವಿದ್ದರು.

‘ಲಕ್ಷಾಂತರ ರೂಪಾಯಿ ನೀಡಿ ಫ್ಲ್ಯಾಟ್ ಖರೀದಿಸಿದ್ದೆವು. ಆದರೆ, ಇದೀಗ ನೀರಿನಲ್ಲಿ ಸಿಲುಕುವಂತಾಗಿದೆ. ಇದಕ್ಕೆ ಕಾರಣ ಯಾರು ಎಂಬುದೇ ತಿಳಿಯದಂತಾಗಿದೆ’ ಎಂದು ನಿವಾಸಿ ರಾಘವೇಂದ್ರ ಅಳಲು ತೋಡಿಕೊಂಡರು.

ನಂಜಪ್ಪ ಬಡಾವಣೆಯಲ್ಲಿರುವ ಮತ್ತೆರಡು ಅಪಾರ್ಟ್ಮೆಂಟ್ ಸಮುಚ್ಚಯಗಳಿಗೂ ನೀರು ನುಗ್ಗಿತ್ತು. ಅಲ್ಲಿಯೂ ನೆಲಮಹಡಿಯಲ್ಲಿ ನೀರು ನಿಂತುಕೊಂಡು, ನಿವಾಸಿಗಳು ಆತಂಕಗೊಂಡಿದ್ದರು. ಅಲ್ಲಿಯ ನೀರು ತೆರವು ಮಾಡಿ, ನಿವಾಸಿಗಳನ್ನು ರಕ್ಷಿಸಲಾಯಿತು.

ಕೋಗಿಲು ಕ್ರಾಸ್ ರಸ್ತೆ ಜಲಾವೃತ್ತ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಗೆ ಹೊಂದಿಕೊಂಡಿರುವ ಯಲಹಂಕ ಕೋಗಿಲು ಕ್ರಾಸ್ ಜಲಾವೃತ್ತಗೊಂಡಿತು. ಇಡೀ ರಸ್ತೆಯಲ್ಲಿ ನೀರು ನಿಂತುಕೊಂಡಿದ್ದರಿಂದ, ವಾಹನಗಳ ಸಂಚಾರವೇ ಬಂದ್ ಆಗಿತ್ತು.

ನಿಂತ ನೀರಿನಲ್ಲೇ ಕೆಲವರು ಕಾರು ಹಾಗೂ ಬೈಕ್ ಚಲಾಯಿಸಿಕೊಂಡು ಹೋದರು. ಎಂಜಿನ್ ಒಳಗೆ ನೀರು ಹೋಗಿದ್ದರಿಂದ ಹಲವು ವಾಹನಗಳು ಕೆಟ್ಟು ನಿಂತಿದ್ದವು. ಅವುಗಳನ್ನು ತಳ್ಳಿಕೊಂಡೇ ಚಾಲಕರು ಮುಂದಕ್ಕೆ ಹೋದರು.

‘ಕೋಗಿಲು ಕ್ರಾಸ್ನಲ್ಲಿ ರಾಜಕಾಲುವೆ ಹಾದು ಹೋಗಿದೆ. ಅಕ್ಕ–ಪಕ್ಕದ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ನೀರು ರಸ್ತೆಗೆ ಹರಿಯುತ್ತಿದೆ. ಭಾನುವಾರ ಮಳೆ ಪ್ರಮಾಣ ಹೆಚ್ಚಿದ್ದರಿಂದ, ಕಾಲುವೆ ತುಂಬಿ ಹರಿದು ಅವಾಂತರ ಸೃಷ್ಟಿಸಿತು’ ಎಂದು ಸ್ಥಳೀಯ ವ್ಯಾಪಾರಿ ಸಿರಾಜ್ ಅಹ್ಮದ್ ಹೇಳಿದರು.

ಜಕ್ಕೂರಿನಲ್ಲೂ ನೀರೇ ನೀರು: ಜಕ್ಕೂರು ಹಾಗೂ ಸುತ್ತಮುತ್ತ ಸ್ಥಳಗಳ ರಸ್ತೆಗಳನ್ನೂ ನೀರು ಹೊಳೆಯಂತೆ ಹರಿಯಿತು. 10ಕ್ಕೂ ಹೆಚ್ಚು ಮನೆಗಳಿಗೂ ನೀರು ನುಗ್ಗಿ, ನಿವಾಸಿಗಳು ತೊಂದರೆ ಅನುಭವಿಸಿದರು.

ಜಕ್ಕೂರಿನ ಜವಾಹರಲಾಲ್ ನೆಹರೂ ಸಂಶೋಧನಾ ಕೇಂದ್ರದ ಆವರಣ, ಪ್ರಮುಖ ಉದ್ಯಾನಗಳು ಹಾಗೂ ಮೈದಾನಗಳಲ್ಲೂ ಮೂರು ಅಡಿಗಳಷ್ಟು ನೀರು ನಿಂತುಕೊಂಡಿತ್ತು.

ಕಾಂಪೌಂಡ್ ಕುಸಿತ

ಯಶವಂತಪುರ ರೈಲ್ವೆ ನಿಲ್ದಾಣದ ಆವರಣ ಗೋಡೆಯು ಮಳೆಯಿಂದಾಗಿ ಕುಸಿದು ಬಿದ್ದಿದ್ದು, ದ್ವಿಚಕ್ರ ವಾಹನ ಹಾಗೂ ಎರಡು ಆಟೊಗಳು ಜಖಂಗೊಂಡಿವೆ.

ಭಾನುವಾರ ರಾತ್ರಿ ಜೋರು ಮಳೆಯಾಗುತ್ತಿದ್ದಂತೆ ಸಂದರ್ಭದಲ್ಲೇ, ಮೋಹನ್ಕುಮಾರ್ ನಗರಕ್ಕೆ ತಾಗಿಕೊಂಡಿರುವ ರೈಲ್ವೆ ನಿಲ್ದಾಣದ ಕಾಂಪೌಂಡ್ ಕುಸಿದು ಬಿದ್ದಿತ್ತು. ವಾಹನಗಳು ಮಾತ್ರ ಜಖಂಗೊಂಡಿದ್ದು, ಯಾವುದೇ ಪ್ರಾಣಹಾನಿ ಉಂಟಾಗಿಲ್ಲ.

ಎಲ್ಲಾ ಕಡೆ ಅವಾಂತರ

ವಿದ್ಯಾರಣ್ಯಪುರ ಬಳಿಯ ವೆಂಕಟಸ್ವಾಮಿಯಪ್ಪ ಬಡಾವಣೆಯಲ್ಲೂ ಮಳೆ ಅವಾಂತರ ಸೃಷ್ಟಿಸಿತು.

ಬಡಾವಣೆಯ ಕಾಲುವೆ ಹಾಗೂ ಚರಂಡಿಗಳು ತುಂಬಿ ಹರಿದವು. ರಸ್ತೆಗಳಲ್ಲೇ ಎರಡು ಅಡಿಯಷ್ಟು ನೀರು ಹರಿದು, ಅಕ್ಕ–ಪಕ್ಕದ ಮನೆಗಳಿಗೂ ನುಗ್ಗಿತ್ತು.

ನೀರು ಹೊರಹಾಕುವುದರಲ್ಲೇ ಜನ ರಾತ್ರಿ ಕಳೆದರು. ಸೂಕ್ತ ಕಾಲುವೆ ವ್ಯವಸ್ಥೆ ಮಾಡದೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಹಿಡಿಶಾಪ ಹಾಕಿದರು.

‘ನಿರಂತರವಾಗಿ ಮಳೆ ಸುರಿದು, ನಮ್ಮ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಮನೆಗಳಿಗೆ ಪದೇ ಪದೇ ನೀರು ನುಗ್ಗುತ್ತಿದ್ದು, ನೆಮ್ಮದಿಯಿಂದ ನಿದ್ದೆ ಮಾಡುವ ಸ್ಥಿತಿಯೂ ಇಲ್ಲದಂತಾಗಿದೆ. ಹಲವು ಬಾರಿ ದೂರು ನೀಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸ್ಥಳಕ್ಕೂ ಬಂದು ಪರಿಶೀಲನೆ ನಡೆಸುತ್ತಿಲ್ಲ’ ಎಂದು ಸ್ಥಳೀಯರು ದೂರಿದರು.

ವಿ.ಎಸ್. ಬಡಾವಣೆಯಲ್ಲೂ ತಪ್ಪದ ಬವಣೆ

ವಿ.ಎಸ್. ಬಡಾವಣೆ ಹಾಗೂ ಸುತ್ತಮುತ್ತ ಪ್ರದೇಶಗಳ 40ಕ್ಕೂ ಹೆಚ್ಚು ಮನೆಗಳಿಗೂ ನೀರು ನುಗ್ಗಿತ್ತು. ಆಹಾರ ಪದಾರ್ಥಗಳು, ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಪೀಠೋಪಕರಣಗಳು ನೀರಿನಲ್ಲಿ ತೇಲಿದವು. ನಿವಾಸಿಗಳು ರಾತ್ರಿ ಇಡೀ ಎಷ್ಟೇ ಪ್ರಯತ್ನಿಸಿದರೂ ನೀರು ಹೊರಹಾಕಲು ಸಾಧ್ಯವಾಗಲಿಲ್ಲ.

ಬಡಾವಣೆಯಲ್ಲಿ ಒಂಟಿಯಾಗಿ ವಾಸವಿದ್ದ 70 ವರ್ಷದ ಗೌರಮ್ಮ, ತಮ್ಮ ಮನೆಗೆ ನೀರು ನುಗ್ಗಿದ್ದನ್ನು ಕಂಡು ಕಣ್ಣೀರಿಟ್ಟರು. ಮನೆಯ ಎಲ್ಲ ವಸ್ತುಗಳು ಕೆಟ್ಟುಹೋಗಿದ್ದು, ಜೀವನ ನಡೆಸುವುದು ಹೇಗೆ? ಎಂಬು ಗೋಗರೆದರು.

‘59 ಪ್ರದೇಶಗಳಲ್ಲಿ ಹಾನಿ’

‘ನಗರದ 59 ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಹಾನಿ ಆಗಿದೆ. ಉತ್ತರ ಭಾಗದಲ್ಲಿರುವ ಯಲಹಂಕ ಹಾಗೂ ಸುತ್ತಮುತ್ತಲಿನ ಹೆಚ್ಚು ಪ್ರದೇಶಗಳು ಜಲಾವೃತ್ತಗೊಂಡಿದ್ದವು’ ಎಂದು ಬಿಬಿಎಂಪಿ ಮೂಲಗಳು ಹೇಳಿವೆ.

‘ಪೂರ್ವ ವಲಯದಲ್ಲಿ 4 ಕಡೆ, ಪಶ್ಚಿಮ ವಲಯ ಹಾಗೂ ರಾಜರಾಜೇಶ್ವರಿನಗರದಲ್ಲಿ ತಲಾ ಒಂದು ಕಡೆ ಹಾನಿ ಆಗಿದೆ. ಮಹದೇವಪುರ ವಲಯದಲ್ಲಿ 3 ಕಡೆ ಹಾಗೂ ದಾಸರಹಳ್ಳಿ ವಲಯದಲ್ಲಿ 5 ಕಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಆಗಿತ್ತು. ದಕ್ಷಿಣ ವಲಯ ಹಾಗೂ ಬೊಮ್ಮನಹಳ್ಳಿ ವಲಯಗಳಲ್ಲಿ ಹಾನಿ ಬಗ್ಗೆ ದೂರುಗಳು ಬಂದಿಲ್ಲ’ ಎಂದೂ ಮೂಲಗಳು ತಿಳಿಸಿವೆ.

ಅಧಿಕಾರಿಗಳಿಂದ ಪರಿಶೀಲನೆ

ಮಳೆಯಿಂದಾಗಿ ಹಾನಿ ಸಂಭವಿಸಿದ್ದ ಸ್ಥಳಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಶಾಸಕ ಎಸ್.ಆರ್. ವಿಶ್ವನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನೀರು ನುಗ್ಗಿದ್ದ ಮನೆಗಳಿಗೆ ಹೋಗಿ, ನಿವಾಸಿಗಳ ದೂರು ಆಲಿಸಿದರು. ನೀರು ಹರಿಯುತ್ತಿದ್ದ ರಸ್ತೆಗಳಲ್ಲೂ ಸಂಚರಿಸಿ ವಸ್ತುಸ್ಥಿತಿ ತಿಳಿದುಕೊಂಡರು. ಹಾನಿ ಸಂಭವಿಸಿದ್ದ ಸ್ಥಳಗಳ ಸುಧಾರಣೆಗಾಗಿ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಿಬಿಎಂಪಿ ಜಂಟಿ ಆಯುಕ್ತರಾದ ಪೂರ್ಣಿಮಾ, ಬೆಂಗಳೂರು ಉತ್ತರ ತಾಲ್ಲೂಕಿನ ತಹಶೀಲ್ದಾರ್ ನಾರಾಯಣಸ್ವಾಮಿ ಇದ್ದರು.

‘ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ ಸಮುಚ್ಚಯ ಜಲಾವೃತಗೊಂದಿದ್ದು, ನಿವಾಸಿಗಳನ್ನು ರಕ್ಷಿಸಲಾಗುತ್ತಿದೆ. ಅವರಿಗೆ ಆಹಾರ ಪದಾರ್ಥಗಳನ್ನು ವಿತರಿಸಿ, ವಸತಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ಗೌರವ್ ಗುಪ್ತ ತಿಳಿಸಿದರು.

ಎಸ್.ಆರ್. ವಿಶ್ವನಾಥ್, ‘ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಾನಿ ಸಂಭವಿಸಿದ್ದು, ಸ್ಥಳೀಯರು ಯಾವುದೇ ಆತಂಕಕ್ಕೆ ಒಳಗಾಗಬಾರದು. ನಿಮ್ಮ ಜೊತೆ ನಾವಿದ್ದೇವೆ’ ಎಂದರು.

‘25 ವರ್ಷಗಳ ಹಿಂದೆ ಯಲಹಂಕ ಪ್ರದೇಶ, ಬಿಬಿಎಂಪಿ ವ್ಯಾಪ್ತಿಗೆ ಸೇರಿದೆ. ಜಮೀನುಗಳಿದ್ದ ಜಾಗದಲ್ಲಿ ಅಪಾರ್ಟ್ಮೆಂಟ್ ಸಮುಚ್ಚಯ
ಗಳನ್ನು ನಿರ್ಮಿಸಿದ್ದರಿಂದ, ಇದೀಗ ಇಂಥ ಸಮಸ್ಯೆಗಳು ಉಲ್ಬಣಿಸಿವೆ. ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ರಾತ್ರಿಯಿಂದಲೇ ಕೆಲಸ ಮಾಡುತ್ತಿದ್ದಾರೆ. ಮಳೆ ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ' ಎಂದೂ ಹೇಳಿದರು.

ರಕ್ಷಣೆಗೆ ನಿಂತ ಸಿಬ್ಬಂದಿ

ಎಸ್ಡಿಆರ್ಎಫ್ – 42
ಅಗ್ನಿಶಾಮಕ ಮತ್ತು ತುರ್ತು ಸೇವೆ – 45
ಪೊಲೀಸರು – 40
ಬಿಬಿಎಂಪಿ – 30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.