ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜನಸ್ಪಂದನ: ಬಹುದಿನದ ಬವಣೆಗೆ ಸ್ಥಳದಲ್ಲೇ ಪರಿಹಾರ

ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ವಾರ್ಡ್‌ವಾರು ಪಿಂಚಣಿ ಅದಾಲತ್‌– ಬೈರತಿ l ₹180 ಕೋಟಿ ವೆಚ್ಚದಲ್ಲಿ ನೆಲದಡಿ ವಿದ್ಯುತ್‌ ಕೇಬಲ್‌ ಅಳವಡಿಕೆ
ಫಾಲೋ ಮಾಡಿ
Comments

ಬೆಂಗಳೂರು: ಕಾವೇರಿ ನೀರು ಬರದೆ ಸಮಸ್ಯೆ ಎದುರಿಸುತ್ತಿರುವವರು, ಆಗಾಗ ಒಳಚರಂಡಿ ಕಟ್ಟಿಕೊಂಡು ತೊಂದರೆ ಅನುಭವಿಸುತ್ತಿರುವವರು, ಹೆಬ್ಬಾಳದ ಸಂಚಾರ ದಟ್ಟಣೆಯಲ್ಲಿ ದಿನವೂ ಸಿಲುಕಿ ಬಸವಳಿದವರು, ಟಿಡಿಆರ್ ಸಿಗದೆ ಪರದಾಡುತ್ತಿರುವವರು... ಹೀಗೆ ಹತ್ತಾರು ಸಮಸ್ಯೆಗಳಿಂದ ತತ್ತರಿಸಿರುವ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ನಾಗರಿಕರು ಶನಿವಾರ ತುಸು ನಿರಾಳರಾದರು.

ಕಚೇರಿಗಳಿಗೆ ಅಲೆದಾಡಿ ಸುಸ್ತಾಗಿದ್ದ ಜನರಲ್ಲಿ ಹೊಸ ಆಶಾಕಿರಣ ಮೂಡಿತು. ಇದಕ್ಕೆ ಕಾರಣವಾಗಿದ್ದು ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ವತಿಯಿಂದ ಆರ್‌.ಟಿ.ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮ.

‘ನಾವು ಸ್ಮಾರ್ಟ್ ಸಿಟಿಯಲ್ಲಿ ಜೀವನ ಮಾಡುತ್ತಿಲ್ಲ, ಇಲ್ಲಿ ಹೆಣ ಹೊತ್ಕೊಂಡು ಹೋಗೋಕೆ ಮನೆ ಮುಂದೆ ರಸ್ತೇನೇ ಇಲ್ಲ, ಡ್ರೈನೇಜ್ ಪೈಪ್‌ಗಳಂತೂ ಓವರ್‌ ಲೋಡ್‌ನಿಂದ ಲೀಕ್ ಆಗಿ ಕೊಳಚೆ ನೀರು ಮನೆ ಒಳಗೇ ನುಗ್ಗುತ್ತಿದೆ, ಕಸ ಎತ್ತುವುದಕ್ಕೆ ಬಿಬಿಎಂಪಿ ಸಿಬ್ಬಂದಿಗೆ ವಾರಗಟ್ಟಲೆ ಸಮಯ ಬೇಕು, ಅಗೆದ ರಸ್ತೆಗಳನ್ನು ಹಾಗೇ ಬಿಟ್ಟಿರುವ ಜಲಮಂಡಳಿ... ನಾಗರಿಕರು ಬಿಡಿಸಿಟ್ಟಸಾಲು ಸಾಲು ಸಮಸ್ಯೆಗಳಿವು.

ಮೂರು ಗಂಟೆಗೂ ಹೆಚ್ಚು ಕಾಲ ಜನರ ಸಮಸ್ಯೆಗಳನ್ನು ಒಂದೊಂದಾಗಿ ಆಲಿಸಿದಕ್ಷೇತ್ರದ ಶಾಸಕ ಬೈರತಿ ಸುರೇಶ್‌, ತಕ್ಷಣವೇ ನಾಗರಿಕರ ಎಲ್ಲ ಅಹವಾಲುಗಳಿಗೂ ಸ್ಪಂದಿಸುವಂತೆ ಹಾಜರಿದ್ದ ಇಲಾಖಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಶೀಘ್ರವೇಕ್ಷೇತ್ರದಲ್ಲಿ ವಾರ್ಡ್‌ವಾರು ಪಿಂಚಣಿ ಅದಾಲತ್‌ ಆರಂಭಿಸುವುದಾಗಿಯೂ ಅವರು ಇದೇ ವೇಳೆ ಪ್ರಕಟಿಸಿದರು.

‘ನನ್ನ ಕ್ಷೇತ್ರದಲ್ಲಿ ಶೇ 80ರಷ್ಟು ಬಡವರು, ಕಡುಬಡವರು ಹಾಗೂ ಮಧ್ಯಮ ವರ್ಗದವರೇ ಇದ್ದಾರೆ. ಇವರೆಲ್ಲರ ದೊಡ್ಡ ಸಮಸ್ಯೆ ಎಂದರೆ ಕುಡಿಯುವ ನೀರು, ನೈರ್ಮಲ್ಯ ಮತ್ತು ಕಸ ವಿಲೇವಾರಿ. ಹಾಗಾಗಿ ಅಧಿಕಾರಿಗಳು ಇಂತಹ ಸಮಸ್ಯೆಗಳನ್ನು ಹೊತ್ತು ತಂದ ನಾಗರಿಕರ ದೂರುಗಳಿಗೆ ತಡಮಾಡದೆ ಸ್ಪಂದಿಸಬೇಕು’ ಎಂದು ಶಾಸಕರು ಅಧಿಕಾರಿ ವರ್ಗಕ್ಕೆ ತಾಕೀತು ಮಾಡಿದರು.

‘ಕ್ಷೇತ್ರದ ಜನರುನನ್ನನ್ನು ಯಾವಾಗ ಬೇಕಾದರೂ ಪ್ರಶ್ನೆ ಮಾಡಬಹುದು. ಅವರಿಗೆ ಆ ಅಧಿಕಾರ ಯಾವಾಗಲೂ ಇದ್ದೇ ಇದೆ.ಸರ್ಕಾರದ ಕೆಲಸ ದೇವರ ಕೆಲಸ. ಇದನ್ನು ಅರಿತು ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು’ ಎಂದು ಎಚ್ಚರಿಸಿದ ಅವರು, ‘ನಾಲ್ಕೈದು ಎಕರೆ ಸರ್ಕಾರಿ ಸ್ವತ್ತು ಒತ್ತುವರಿ ಮಾಡಿದ ಶ್ರೀಮಂತರನ್ನು ಸುಮ್ಮನೇ ಬಿಡುತ್ತೀರಿ. ಆದರೆ, ಸಣ್ಣಪುಟ್ಟ ತಪ್ಪು ಮಾಡಿದ ಬಡವರ ಬಗ್ಗೆ ನಿಮಗೆ ಉದಾರತೆ ಇಲ್ಲವಲ್ಲಾ’ ಎಂದು ಕಿಡಿಕಾರಿದರು.

‘ಹೆಬ್ಬಾಳ ಕ್ಷೇತ್ರದಲ್ಲಿ ವಿದ್ಯುತ್ ಕೇಬಲ್ ಸಮಸ್ಯೆಯನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ನೆಲದಡಿ ಕೇಬಲ್‌ ಹಾಕಲಾಗುತ್ತಿದೆ. ಕ್ಷೇತ್ರದಾದ್ಯಂತ ₹ 180 ಕೋಟಿ ವೆಚ್ಚದಲ್ಲಿ 110 ಕಿ.ಮೀ. ಉದ್ದದಯುಜಿಸಿ (ಅಂಡರ್‌ ಗ್ರೌಂಡ್‌ ಕೇಬಲ್‌) ಕಾಮಗಾರಿ ಕೈಗೊಳ್ಳಲಾಗಿದೆ’ ಎಂದು ಅವರು ತಿಳಿಸಿದರು.

ನೀರಿನ ಸಮಸ್ಯೆಯೇ ಹೆಚ್ಚು

ಜನಸ್ಪಂದನ ಕಾರ್ಯಕ್ರಮದಲ್ಲಿ ಜನರಿಂದ ಎದುರಾದ ಪ್ರಶ್ನೆಗಳಲ್ಲಿ ಬಹುತೇಕವು ಕಾವೇರಿ ನೀರು ಪೂರೈಕೆಗೆ ಸಂಬಂಧಿಸಿದ್ದವೇ ಆಗಿದ್ದವು.

ಚೋಳನಾಯಕನಹಳ್ಳಿ ನಂಜಪ್ಪ ಮಾತನಾಡಿ, ‌‘ನಮ್ಮ ಬಡಾವಣೆಗೆ 5 ದಿನಕ್ಕೊಮ್ಮೆ ಕಾವೇರಿ ನೀರು ಬರುತ್ತಿದೆ. 5ನೇ ದಿನ ತಾಂತ್ರಿಕ ಸಮಸ್ಯೆ ಉಂಟಾಗಿ ನೀರು ಬರದಿದ್ದರೆ, ಮುಂದಿನ 5ನೇ ದಿನದ ಸರದಿ ಬರುವ ತನಕ ಅಂದರೆ 10 ದಿನ ಕಾಯಬೇಕಾಗುತ್ತದೆ’ ಎಂದು ಅಳಲು ತೋಡಿಕೊಂಡರು.

ಚೋಳನಾಯಕನಹಳ್ಳಿಯ ವಿಕ್ಟರಿ ಹಾರ್ಮನಿ ಅಪಾರ್ಟ್‌ಮೆಂಟ್‌ನಲ್ಲಿ 100 ಮನೆಗಳಿದ್ದು, ಕಾವೇರಿ ನೀರಿಗೆ ನಿತ್ಯ ಪರದಾಡುವ ಸ್ಥಿತಿ ಇದೆ. ಟ್ಯಾಂಕರ್‌ ಮೂಲಕ ನೀರು ತರಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ದೇವಿ ಅವರು ಸಮಸ್ಯೆ ಬಿಚ್ಚಿಟ್ಟರು. ಸೆಂಟ್ರಲ್ ಎಕ್ಸೇಜ್ ಲೇಔಟ್‌ನಲ್ಲಿ ಒಂದು ತೊಟ್ಟು ಕಾವೇರಿ ನೀರೂ ಬರುತ್ತಿಲ್ಲ ಎಂದು ನಾಗೇಶ್‌ಕುಮಾರ್‌ ವಿವರಿಸಿದರು. ಇದೇ ರೀತಿಯ ಹಲವು ಪ್ರಶ್ನೆಗಳು ಸಭೆಯಲ್ಲಿ ಎದುರಾದವು.

ಇದಕ್ಕೆ ಉತ್ತರಿಸಿದ ಶಾಸಕ ಬೈರತಿ ಸುರೇಶ್ ಅವರು, ‘ಜನರಿಗೆ ಕುಡಿಯುವ ನೀರು ಪೂರೈಸಲು ಸಾಧ್ಯವಾಗದಿದ್ದರೆ, ಸರ್ಕಾರವಾಗಲೀ, ಜಲಮಂಡಲಿಯಾಗಲಿ, ಜನಪ್ರತಿನಿಧಿಯಾಗಿ ನಾವ್ಯಾರು ಇರಲು ನಾಲಾಯಕ್‌ ಎಂದೇ ಪರಿಗಣಿಸಬೇಕಾಗುತ್ತದೆ. ಕುಡಿಯುವ ನೀರಿನ ಸಮಸ್ಯೆಯನ್ನು ಜಲ ಮಂಡಳಿ ಅಧಿಕಾರಿಗಳು ಕೂಡಲೇ ಪರಿಹರಿಸಬೇಕು’ ಎಂದು ಹೇಳಿದರು.

‘ಈಗ ಒದಗಿಸುತ್ತಿರುವ ನೀರಿನ ಪ್ರಮಾಣ ಸಾಕಾಗುತ್ತಿಲ್ಲ. ಅದನ್ನು ಹೆಚ್ಚಿಸದಿದ್ದರೆ ಪ್ರಯೋಜನವಾಗುವುದಿಲ್ಲ. ಜಲ ಮಂಡಳಿ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ನೀರು ಪೂರೈಕೆ ಪ್ರಮಾಣ ಹೆಚ್ಚಿಸಬೇಕು’ ಎಂದು ಸೂಚನೆ ನೀಡಿದರು.

ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ತೇನೆ..!

‘ಹೆಬ್ಬಾಳ ಕ್ಷೇತ್ರದಲ್ಲಿ 40 ವರ್ಷಗಳಿಂದ ವಾಸ ಮಾಡುತ್ತಿರುವ ನನಗೆ ಈ ತನಕ ಉಚಿತ ನಿವೇಶನ ಸಿಕ್ಕಿಲ್ಲ. ಇನ್ನೂ ನೀವು ನನಗೆ ನಿವೇಶನ ಕೊಡಿಸಲಿಲ್ಲ ಎಂದರೆ ನಿಮ್ಮ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡು ಬಿಡುತ್ತೇನೆ‘ ಎಂದು ಕುಂತಿ ಗ್ರಾಮದ ಸಿ.ಶಂಭಯ್ಯ ಎಂಬ ಹಿರಿಯ ನಾಗರಿಕರೊಬ್ಬರು ಶಾಸಕ ಬೈರತಿ ಸುರೇಶ್‌ ಅವರಿಗೆ ಬೆದರಿಕೆ ಒಡ್ಡಿದ ಪ್ರಸಂಗಕ್ಕೂ ’ಜನ್ಪಸಂದನ’ ಸಾಕ್ಷಿಯಾಯಿತು.

ಈ ಮಾತಿಗೆ ತಬ್ಬಿಬ್ಬಾದ ಸುರೇಶ್‌ ತಕ್ಷಣವೇ ಸಾವರಿಸಿಕೊಂಡು, ‘ಅಯ್ಯೋ ಯಜಮಾನ್ರೇ ಸುಮ್ನಿರಿ, ಕೊಡಿಸೋಣ. ನೀವು ನಾಲ್ಕು ವರ್ಷಗಳಿಂದ ಹೀಗೇ ಹೇಳ್ತಾನೇ ಇದ್ದೀರಿ’ ಎಂದು ಸಮಾಧಾನಪಡಿಸಿದರು! ಕೂಡಲೇ ಈ ಕುರಿತು ಪರಿಶೀಲನೆ ನಡೆಸಿ ಹಿರಿಯರಿಗೆ ಒಂದು ಸೂರು ಕಲ್ಪಿಸುವ ಬಗ್ಗೆ ವ್ಯವಸ್ಥೆ ಮಾಡೋಣ ಎಂದೂ ಅವರು ತಿಳಿಸಿದರು.

‘ಕ್ಷೇತ್ರದಲ್ಲಿ ಭ್ರಷ್ಟರಿಗೆ ಕಡಿವಾಣ’

‘ನನ್ನ ಕ್ಷೇತ್ರದಲ್ಲಿ ಯಾವುದೇ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆಯಲು ಅವಕಾಶ ಕೊಟ್ಟಿಲ್ಲ. ಯಾರು ಭ್ರಷ್ಟಾಚಾರ ಮಾಡದೆಯೇ ಕಾಮಗಾರಿ ಮಾಡುತ್ತಿದ್ದಾರೊ ಅಂಥವರಿಗೆ ಫ್ರೀ ಬಿಟ್ಟಿದ್ದೇವೆ. ಭ್ರಷ್ಟರ ಮೇಲೆ ಕಣ್ಣಿಟ್ಟಿದ್ದೇವೆ’ ಎಂದು ಸುರೇಶ್‌ ಸ್ಪಷ್ಟಪಡಿಸಿದರು.‘ಜಲಮಂಡಳಿಯವರು ಬಿಬಿಎಂಪಿ ಪರವಾನಗಿ ಇಲ್ಲದೆಯೇ ರಸ್ತೆಗಳಲ್ಲಿ ಗುಂಡಿ ತೆಗೆಯುತ್ತಿದ್ದಾರೆ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ‘ಜನರ ಕೆಲಸ ಮಾಡದ ಯಾವುದೇ ಅಧಿಕಾರಿಗಳು, ಶಾಸಕರು, ಸಂಸದರು ನಾಲಾಯಕ್‌ಗಳು’ ಎಂದು ಹೀಗಳೆದರು.

ಗನ್‌ ಹಿಡಿದುಕೊಂಡು ಬರ್ತಾರೆ...

ಡಿಫೆನ್ಸ್‌ ಕಾಲೊನಿಯ ಸುತ್ತಮುತ್ತಲಿನ ಸಮಸ್ಯೆಯೊಂದಕ್ಕೆ ಉತ್ತರಿಸುತ್ತಾ ಶಾಸಕರು, ‘ನಾವು ಅವರ ಪರಿಧಿಯೊಳಗೇ ಪ್ರವೇಶ ಮಾಡಲು ಆಗುವುದಿಲ್ಲ. ಏನಾದರೂ ಹೇಳಲು ಹೋದರೆ ಗನ್‌ ಎತ್ತಿಕೊಂಡು ಬಂದು ಬಿಡುತ್ತಾರೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ರಕ್ಷಣಾ ಇಲಾಖೆಗೆ ಸೇರಿದ ಪ್ರದೇಶಗಳ ಸುತ್ತಮುತ್ತಲಿನ ಸಮಸ್ಯೆಗಳಲ್ಲಿ ಪ್ರಮುಖವಾಗಿ ಚರಂಡಿಗಳ ಉನ್ನತೀಕರಣಕ್ಕೆ ಒತ್ತು ನೀಡುವುದಾಗಿ ಅವರು ಭರವಸೆ ನೀಡಿದರು.

ರೈಲು ತಡೆ ಮಾಡೋಣ...

‘ಹೆಬ್ಬಾಳ ಮೇಲ್ಸೇತುವೆ ಕೆಳಗಿನ ರೈಲ್ವೆ ಹಳಿ ದಾಟುವ ಪಾದಚಾರಿಗಳ ಸಮಸ್ಯೆಗೆ ಕೇಂದ್ರ ಸರ್ಕಾರವೇ ಸ್ಪಂದಿಸಬೇಕು. ಸಂಸದ ಡಿ.ವಿ.ಸದಾನಂದ ಗೌಡ ಅವರಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ನಮಗೆ ರೈಲು ತಡೆ ಮಾಡುವುದೊಂದೇ ಉಳಿದಿರುವ ಮಾರ್ಗ. ಆಗಲಾದರೂ ಗಮನ ಹರಿಸುತ್ತಾರೊ ನೋಡೋಣ’ ಎಂದು ಬೈರತಿ ಸುರೇಶ್ ಹೇಳಿದರು.

‘ಇಲ್ಲಿ ರೈಲ್ವೆ ಹಳಿ ದಾಟುವುದು ಅತ್ಯಂತ ಅಪಾಯಕಾರಿ. ಎಷ್ಟೊ ಬಾರಿ ನಾನು ಮತ್ತು ಶಾಸಕ ಕೃಷ್ಣ ಬೈರೇಗೌಡರು ಇಲ್ಲಿನ ಸಂಕಟವನ್ನು ಪರೀಕ್ಷಿಸಲಿಕ್ಕಾಗಿಯೇ ಬಂದು ಹೋಗಿದ್ದೇವೆ. ಹಳಿ ದಾಟಲು ನನಗೇ ಹೆದರಿಕೆ ಆಗುತ್ತದೆ. ಈಗಾಗಲೇ ಇಲ್ಲಿ 15–20 ಜನ ಸತ್ತು ಹೋಗಿದ್ದಾರೆ. ಆದರೆ, ಸಂಸದರಿಗೆ ಈ ಬಗ್ಗೆ ಗಮನವಿಲ್ಲ. ಕೊರೊನಾದಲ್ಲಿ ದೇಶದಾದ್ಯಂತ 5 ಲಕ್ಷ ಜನರು ಸತ್ತರೂ ಕೇರ್‌ ಮಾಡದ ಇವರಿಗೆ 15–20 ಜನರ ಸಾವು ಯಾವ ಲೆಕ್ಕ’ ಎಂದು ಕೇಂದ್ರ ಸರ್ಕಾರವನ್ನು ಪರೋಕ್ಷವಾಗಿ ಕುಟುಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT