ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕಾ ನ್ಯಾಯಮಂಡಳಿ ಪೀಠಾಸೀನ ಅಧಿಕಾರಿ ಹುದ್ದೆ:: ನಿಲುವು ತಿಳಿಸಲು ನಿರ್ದೇಶನ

Last Updated 24 ಮೇ 2022, 20:14 IST
ಅಕ್ಷರ ಗಾತ್ರ

ಬೆಂಗಳೂರು: ‘ಕೇಂದ್ರ ಸರ್ಕಾರಿ ಕೈಗಾರಿಕಾ ನ್ಯಾಯಮಂಡಳಿ ಮತ್ತು ಕಾರ್ಮಿಕ ನ್ಯಾಯಾಲಯದ ಬೆಂಗಳೂರು ಕೇಂದ್ರದಲ್ಲಿ ಖಾಲಿಯಿರುವ ಪೀಠಾಸೀನ ಅಧಿಕಾರಿ ನೇಮಕ ಕುರಿತಂತೆ ಎರಡು ವಾರಗಳ ಒಳಗೆ ನಿರ್ಧಾರ ತಿಳಿಸಿ’ ಎಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಈ ಕುರಿತಂತೆ ‘ಇಂಡಸ್ಟ್ರಿಯಲ್‌ ಲಾ ಪ್ರಾಕ್ಟ್ರೀಷನರ್ಸ್‌ ಫೋರಂ’ ಕಾರ್ಯದರ್ಶಿ ಕೆ.ಬಿ.ನಾರಾಯಣ ಸ್ವಾಮಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್‌ ಅವಸ್ಥಿ ಮತ್ತು ಅಶೋಕ್ ಎಸ್‌.ಕಿಣಗಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಕೇಂದ್ರಸರ್ಕಾರದ ಪರ ವಕೀಲ ಎ. ವಿ. ನಿಶಾಂತ್ ಅವರು ಮಾತನಾಡಿ, ‘ಕೇಂದ್ರ ಸರ್ಕಾರಿ ಕೈಗಾರಿಕಾ ನ್ಯಾಯಮಂಡಳಿ ಮತ್ತು ಕಾರ್ಮಿಕ ನ್ಯಾಯಾಲಯದ ಪೀಠಾಸೀನ ಅಧಿಕಾರಿಗಳ ನೇಮಕಕ್ಕೂ ಮುನ್ನ ಪರಿಶೀಲನೆ ಮತ್ತು ಆಯ್ಕೆ ಸಮಿತಿಯ ಅಧ್ಯಕ್ಷರಾದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಸಭೆ ಸೇರಿ ತೀರ್ಮಾನ ಕೈಗೊಳ್ಳಬೇಕಿರುತ್ತದೆ. ಈ ನಿಟ್ಟಿನಲ್ಲಿ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ’ ಎಂದು ನ್ಯಾಯಪೀಠಕ್ಕೆ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಎರಡು ವಾರಗಳಲ್ಲಿ ಈ ಕುರಿತಂತೆ ನಿಶ್ಚಿತವಾದ ನಿಮ್ಮ ನಿಲುವನ್ನು ತಿಳಿಸಿ’ ಎಂದು ನಿರ್ದೇಶಿಸಿ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ.

ಪ್ರಕರಣವೇನು?: ಈ ಮೊದಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರತ್ನಕಲಾ ಅವರು, ಕೇಂದ್ರ ಸರ್ಕಾರಿ ಕೈಗಾರಿಕಾ ನ್ಯಾಯಮಂಡಳಿ ಮತ್ತು ಕಾರ್ಮಿಕ ನ್ಯಾಯಾಲಯದ ಬೆಂಗಳೂರು ಕೇಂದ್ರದ ಪೀಠಾಸೀನ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. 2021ರ ಜನವರಿ 27ರಂದು ಅವರು ಅವಧಿ ಪೂರೈಸಿದ ಕಾರಣ ಅಲ್ಲಿಂದಲೂ ಆ ಹುದ್ದೆಖಾಲಿ ಇದೆ.

‘ನ್ಯಾಯಮೂರ್ತಿ ರತ್ನಕಲಾ ಅವರು ಅವಧಿ ‍ಪೂರೈಸಿದ ನಂತರ ಚೆನ್ನೈ ಕೇಂದ್ರದ ಪೀಠಾಸೀನ ಅಧಿಕಾರಿಗೆ ಹೆಚ್ಚುವರಿ ಜವಾಬ್ದಾರಿ ಹೊರಿಸಲಾಗಿದೆ. ಆದ್ದರಿಂದ, ಖಾಲಿ ಇರುವ ಹುದ್ದೆಯನ್ನು ಕೂಡಲೇ ಭರ್ತಿ ಮಾಡಲು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT