ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ 17 ಜಿಲ್ಲೆಗಳಿಗೆ ಬಿಸಿ ಗಾಳಿ ಎಚ್ಚರಿಕೆ

Published 28 ಏಪ್ರಿಲ್ 2024, 15:35 IST
Last Updated 28 ಏಪ್ರಿಲ್ 2024, 15:35 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧೆಡೆ ಸೋಮವಾರದಿಂದ ನಾಲ್ಕು ದಿನ ಬಿಸಿ ಗಾಳಿ ಹೆಚ್ಚಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು 17 ಜಿಲ್ಲೆಗಳಿಗೆ ಶಾಖಾಘಾತದ ಮುನ್ಸೂಚನೆ ನೀಡಿದೆ. 

ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಕೊಪ್ಪಳ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ‘ಆರೆಂಜ್ ಅಲರ್ಟ್’ ನೀಡಲಾಗಿದ್ದು, ಈ ಜಿಲ್ಲೆಗಳಲ್ಲಿ ಶಾಖದ ಅಲೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ. 

ರಾಜ್ಯದಾದ್ಯಂತ ಮುಂದಿನ ಒಂದು ವಾರ ಒಣಹವೆ ಇರುವ ಸಂಭವವಿದೆ. ಮುಂದಿನ ಐದು ದಿನಗಳು ರಾಜ್ಯದಲ್ಲಿ ಗರಿಷ್ಠ ತಾಪಮಾನ 2ರಿಂದ 3 ಡಿಗ್ರಿ ಸೆಲ್ಸಿಯಸ್‌ ಏರಿಕೆಯಾಗುವ ಸಾಧ್ಯತೆಯಿದೆ. ಮೇ 2ರವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ವಾತಾವರಣವಿರುವ ಸಂಭವವಿದೆ ಎಂದು ಇಲಾಖೆ ಹೇಳಿದೆ.

ಭಾನುವಾರ ಬೆಳಿಗ್ಗೆ 8.30ಕ್ಕೆ ಅನ್ವಯಿಸಿದಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ ಕಲಬುರಗಿಯಲ್ಲಿ ಗರಿಷ್ಠ (42.9 ಡಿಗ್ರಿ ಸೆಲ್ಸಿಯಸ್) ಉಷ್ಣಾಂಶ ವರದಿಯಾಗಿದೆ.

ಬೆಂಗಳೂರಿನಲ್ಲಿ 38.5 ಡಿಗ್ರಿ ಸೆಲ್ಸಿಯಸ್: ಬೆಂಗಳೂರಿನಲ್ಲಿ ತಾಪಮಾನ ಮತ್ತಷ್ಟು ಹೆಚ್ಚಳವಾಗಿದ್ದು, ಸತತ ಎರಡನೇ ದಿನವೂ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಭಾನುವಾರ ಗರಿಷ್ಠ ಉಷ್ಣಾಂಶ 38.5 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 23.4 ಡಿಗ್ರಿ ಸೆಲ್ಸಿಯಸ್ ವರದಿಯಾಗಿದೆ. ಶನಿವಾರ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತು.  

ಸೋಮವಾರ ಮತ್ತು ಮಂಗಳವಾರ ಕೂಡ ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT