ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗದ ಐಸಿಯು ಹಾಸಿಗೆ: ಪ್ರಾಣ ಬಿಡುತ್ತಿರುವ ಸೋಂಕಿತರು

ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ * ರೋಗಿಗಳಿಗೆ ತಪ್ಪದ ಪೀಕಲಾಟ
Last Updated 2 ಮೇ 2021, 6:45 IST
ಅಕ್ಷರ ಗಾತ್ರ

ಬೆಂಗಳೂರು: ತೀವ್ರ ಉಸಿರಾಟ ಸಮಸ್ಯೆ ಎದುರಿಸುತ್ತಿರುವ ರೋಗಿಗಳ ಚಿಕಿತ್ಸೆಗೆ ನಗರದ ಯಾವುದೇ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿ (ಐಸಿಯು) ಹಾಸಿಗೆಯಾಗಲೀ, ಆಮ್ಲಜನಕ ಪೂರೈಕೆ ವ್ಯವಸ್ಥೆ ಹೊಂದಿದ ಎಚ್‌ಡಿಯು ಘಟಕದ ಹಾಸಿಗೆಗಳಾಗಲೀ ಸಿಗುತ್ತಿಲ್ಲ. ತುರ್ತಾಗಿ ಐಸಿಯು ಹಾಸಿಗೆ ಸಿಗದೇ ರೋಗಿಗಳು ಸಾಯುತ್ತಿರುವ ಪ್ರಕರಣಗಳು ಶನಿವಾರವೂ ಮುಂದುವರಿದಿವೆ.

ರಾಜರಾಜೇಶ್ವರಿನಗರದ ನಿಂಗಮಾರಯ್ಯ (55) ಅವರು ಏ 21ರಂದು ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡಿದ್ದರು. ಅವರಿಗೆ ಸೋಂಕು ದೃಢಪಟ್ಟಿತ್ತು. ಮನೆಯಲ್ಲೇ ಪ್ರತ್ಯೇಕವಾಸಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಶುಕ್ರವಾರ ಏಕಾಏಕಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ಸಹಾಯವಾಣಿಗೆ (1912) ಕರೆ ಮಾಡಿ ದಿನವಿಡೀ ಪ್ರಯತ್ನಿಸಿದರೂ ತುರ್ತು ನಿಗಾ ಘಟಕದ ಹಾಸಿಗೆ ಲಭಿಸಲಿಲ್ಲ. ಕೊನೆಗೆ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆ ವ್ಯವಸ್ಥೆ ಇದ್ದ ಹಾಸಿಗೆ ಸೌಲಭ್ಯ ಸಿಕ್ಕಿತು. ಅವರನ್ನು ದಾಖಲಿಸುವಾಗ ನಸುಕಾಗಿತ್ತು. ಸ್ವಲ್ಪಹೊತ್ತಿನಲ್ಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು.

‘ನನ್ನ ಮಾವನಿಗೆ ನಾಲ್ಕು ದಿನ ಮನೆಯಲ್ಲೇ ಆರೈಕೆ ಮಾಡಿದ್ದೆವು. ಉಸಿರಾಟ ಸಮಸ್ಯೆ ಕಾಣಿಸಿಕೊಂಡ ಐದಾರು ಗಂಟೆಗಳ ಒಳಗೆ ಐಸಿಯು ಹಾಸಿಗೆ ಸಿಗುತ್ತಿದ್ದರೆ ಖಂಡಿತ ಅವರನ್ನು ಉಳಿಸಿಕೊಳ್ಳಬಹುದಿತ್ತು’ ಎಂದು ಅವರ ಅಳಿಯ ಸುನಿಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ದೊಮ್ಮಲೂರಿನ ಆಸ್ಪತ್ರೆಯೊಂದರಲ್ಲಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡಿದ್ದ ವ್ಯಕ್ತಿಯೊಬ್ಬರಿಗೆ ಕೋವಿಡ್‌ ಇರುವುದು ಶುಕ್ರವಾರ ದೃಢಪಟ್ಟಿತ್ತು. ಆದರೆ, ಶನಿವಾರ ಏಕಾಏಕಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಬಿಬಿಎಂಪಿ ಸಹಾಯವಾಣಿಗೆ (1912) ಕರೆ ಮಾಡಿದರೆ ಸ್ಪಂದನೆ ಸಿಗಲಿಲ್ಲ. ಹೆಬ್ಬಾಳ ಬಳಿಯ ಆಸ್ಪತ್ರೆಯೊಂದಕ್ಕೆ ಸ್ವಂತ ಖರ್ಚಿನಲ್ಲಿ ದಾಖಲಿಸಲು ಮುಂದಾದರು. ರೋಗಿಯನ್ನು ದಾಖಲಿಸಿಕೊಳ್ಳಬೇಕಾದರೆ ₹ 1 ಲಕ್ಷ ತಕ್ಷಣ ಕಟ್ಟುವಂತೆ ಆಸ್ಪತ್ರೆಯವರು ಬೇಡಿಕೆ ಇಟ್ಟಿದ್ದರು. ಬಿಬಿಎಂಪಿ ಮೂಲಕ ಐಸಿಯು ಸೌಲಭ್ಯ ಇರುವ ಆಸ್ಪತ್ರೆ ಹುಡುಕಲೆತ್ನಿನಿಸಿದರೂ ಸಫಲರಾಗಲಿಲ್ಲ.

ಬಂಧುಗಳು ವಿಧಿ ಇಲ್ಲದೇ ಮತ್ತಿಕೆರೆಯ ಇನ್ನೊಂದು ಆಸ್ಪತ್ರೆಗೆ ರೋಗಿಯನ್ನು ದಾಖಲಿಸಲು ಕರೆತಂದರು. ಆ ಆಸ್ಪತ್ರೆಯವರು ವರಾಂಡದಲ್ಲೇ ತುರ್ತಾಗಿ ಆಮ್ಲಜನಕ ಪೂರೈಸುವ ವ್ಯವಸ್ಥೆ ಮಾಡಿದರು. ಆದರೆ, ಅಲ್ಲಿ ಐಸಿಯು ಲಭ್ಯ ಇಲ್ಲದ ಕಾರಣ ಬೇರೆ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದರು. ಆದರೆ, ಸ್ವಲ್ಪ ಹೊತ್ತಿನಲ್ಲೇ ಅವರು ಕೊನೆಯುಸಿರೆಳೆದರು.

‘ಐಸಿಯು ಕೊರತೆಯಿಂದಾಗಿಯೇ ಸಾವುಗಳ ಸಂಭವಿಸುತ್ತಿವೆ. ಸರ್ಕಾರ ತಕ್ಷಣ ಐಸಿಯು ವ್ಯವಸ್ಥೆಗಳನ್ನು ಕಲ್ಪಿಸಿದರೆ ಮಾತ್ರ ಜನರ ಪ್ರಾಣ ಉಳಿಸಬಹುದು’ ಎಂದು ಮೃತರ ಆಪ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಉಸಿರುಗಟ್ಟಿಸುತ್ತಿರುವ 108 ಸಮಸ್ಯೆ
ತೀವ್ರ ಉಸಿರಾಟ ಸಮಸ್ಯೆ ಇರುವವರು ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು ಸೊಂಕು ದೃಢಪಟ್ಟು ಬಿ.ಯು.ಸಂಖ್ಯೆ ಪಡೆದು ಆಸ್ಪತ್ರೆಗೆ ದಾಖಲಾಗಲು ಸಮಯ ತಗಲುತ್ತದೆ. ಕೋವಿಡ್‌ ಪರೀಕ್ಷೆಯಲ್ಲಿ ಸೋಂಕು ಇಲ್ಲ ಎಂಬ ಫಲಿತಾಂಶ ಬಂದ ಕೆಲವರಲ್ಲೂ ಸಿ.ಟಿ.ಸ್ಕ್ಯಾನ್‌ನಲ್ಲಿ ಸೋಂಕು ದೃಢಪಡುತ್ತಿದೆ. ಬಿ.ಯು.ಸಂಖ್ಯೆ ಹೊಂದಿರದ ಇಂತಹ ರೋಗಿಗಳು ಆಸ್ಪತ್ರೆಗೆ ದಾಖಲಾಗಲು 108 ಸಹಾಯವಾಣಿಗೆ ಕರೆ ಮಾಡುವಂತೆ ಸರ್ಕಾರ ಸೂಚಿಸಿದೆ. ಆದರೆ, ಇಂತಹವರು ಆಸ್ಪತ್ರೆಗೆ ದಾಖಲಾಗಲು ನೂರೆಂಟು ಸಮಸ್ಯೆ ಎದುರಿಸುತ್ತಿದ್ದಾರೆ.

‘108 ಸಹಾಯವಾಣಿಗೆ ಕರೆ ಮಾಡಿದರೂ ಕರೆಯನ್ನೇ ಸ್ವೀಕರಿಸುತ್ತಿಲ್ಲ. ಅಪ್ಪಿತಪ್ಪಿ ಕರೆ ಸ್ವೀಕರಿಸಿದರೂ ತಕ್ಷಣವೇ ಆಂಬುಲೆನ್ಸ್‌ ಕಳುಹಿಸುತ್ತಿಲ್ಲ. ಆಂಬುಲೆನ್ಸ್‌ ಬರುತ್ತದೋ ಇಲ್ಲವೋ ಎಂದು ತಾಸುಗಟ್ಟಲೆ ಕಾಯುತ್ತಾ ಕೂರಬೇಕು. ರಕ್ತದಲ್ಲಿ ಆಮ್ಲಜನಕದ ಪ್ರಮಾಣ ಕುಸಿಯುತ್ತಿರುವಾಗ ಎಷ್ಟು ಹೊತ್ತು ಕಾಯುತ್ತಾ ಕೂರಲು ಸಾಧ್ಯ’ ಎಂದು ರೋಗಿಯ ಬಂಧುವೊಬ್ಬರು ಪ್ರಶ್ನಿಸಿದರು.

ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿರುವ ರೋಗಿಯೊಬ್ಬರಿಗೆ ಆಸ್ಪತ್ರೆಗೆ ದಾಖಲಾಗಲು ಸಾಧ್ಯವಾಗದ ಬಗ್ಗೆ ‘ಪ್ರಜಾವಾಣಿ’ಯು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಗಮನಕ್ಕೆ ತಂದಿತು. ಅವರು ಮಧ್ಯಪ್ರವೇಶ ಮಾಡಿದ ಬಳಿಕ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲು ಬಿಬಿಎಂಪಿಯವರು ವ್ಯವಸ್ಥೆ ಕಲ್ಪಿಸಿದರು.

‘ಐಸಿಯು ಹಾಸಿಗೆ ಆದಷ್ಟು ಬೇಗ ಸಜ್ಜುಗೊಳಿಸಲಿ’
‘ನಮ್ಮ ವಲಯವೊಂದರಲ್ಲೇ ಐಸಿಯು ಹಾಸಿಗೆ ಒದಗಿಸಿ ಎಂದು 172ಕ್ಕೂ ಅಧಿಕ ಮಂದಿ ಒತ್ತಾಯಿಸಿದ್ದಾರೆ. ಯಾವುದೇ ಆಸ್ಪತ್ರೆಗಳಲ್ಲೂ ಐಸಿಯುಗಳು ಖಾಲಿ ಇಲ್ಲ. ನಾವು ಐಸಿಯು ಹಾಸಿಗೆ ಒದಗಿಸುವುದಾದರೂ ಹೇಗೆ’ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ ಜೊತೆ ಅಸಹಾಯಕತೆ ವ್ಯಕ್ತಪಡಿಸಿದರು.

‘ಪ್ರತಿವಲಯದಲ್ಲೂ 500 ಐಸಿಯು ಹಾಸಿಗೆಗಳ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಈ ಮೂಲಸೌಕರ್ಯಗಳು ಸಿದ್ಧವಾಗುವವರೆ ಸಾವು–ನೋವು ತಪ್ಪಿಸುವುದು ಕಷ್ಟ ಸಾಧ್ಯ. ಐಸಿಯು ಹಾಸಿಗೆಗಳನ್ನು ಒದಗಿಸಲು ಸರ್ಕಾರ ತಿಂಗಳ ಮೊದಲೇ ತೀರ್ಮಾನಿಸುತ್ತಿದ್ದರೆ ಒಂದಷ್ಟು ಮಂದಿಯ ಜೀವಗಳಾದರೂ ಉಳಿಯುತ್ತಿದ್ದವು. ಈಗಲಾದರೂ ಐಸಿಯು ಹಾಸಿಗೆಗಳನ್ನುಆದಷ್ಟು ಬೇಗ ಸಜ್ಜುಗೊಳಿಸಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT