ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 2,500ಕ್ಕೆ ಆಧಾರ್: ಅಕ್ರಮ ಜಾಲ ಪತ್ತೆ, ವೈದ್ಯಾಧಿಕಾರಿ ಸೇರಿ ಆರು ಮಂದಿ ಬಂಧನ

ಬೊಮ್ಮನಹಳ್ಳಿ ಪೊಲೀಸರ ಕಾರ್ಯಾಚರಣೆ
Last Updated 25 ಸೆಪ್ಟೆಂಬರ್ 2022, 3:23 IST
ಅಕ್ಷರ ಗಾತ್ರ

ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಅಕ್ರಮ ವಾಸಿಗಳಿಗೆ ಆಧಾರ್ ಮಾಡಿಸಿಕೊಡುತ್ತಿದ್ದ ಜಾಲವನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಭೇದಿಸಿದ್ದು, ನಿವೃತ್ತ ವೈದ್ಯಾಧಿಕಾರಿ ಸೇರಿ ಆರು ಮಂದಿಯನ್ನು ಬಂಧಿಸಿದ್ದಾರೆ.

‘ಕೋಣನಕುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ನಿವೃತ್ತ ವೈದ್ಯಾಧಿಕಾರಿ ಡಿ. ಸುನೀಲ್ (63), ಪ್ರವೀಣ್, ನಾಗರಾಜು, ರಮೇಶ್, ರೂಪಂ ಭಟ್ಟಾಚಾರ್ ಹಾಗೂ ರವಿ ಬಂಧಿತರು. ಆರೋಪಿಗಳಿಂದ ನಕಲಿ ದಾಖಲೆಗಳು, ಕಂಪ್ಯೂಟರ್ ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿಗಳು, ಅಕ್ರಮ ವಾಸಿಗಳಿಂದ ತಲಾ ₹ 2,500 ಪಡೆದು ಆಧಾರ್ ಮಾಡಿಸಿಕೊಡುತ್ತಿದ್ದರು. ಕೃತ್ಯದ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಸಾರ್ವಜನಿಕರ ವೇಷದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ತಿಳಿಸಿವೆ.

‘ಆರೋಪಿ ಪ್ರವೀಣ್, ಮೊಬೈಲ್ ಮಾರಾಟ ಹಾಗೂ ದುರಸ್ತಿ ಮಳಿಗೆ ಇಟ್ಟುಕೊಂಡಿದ್ದ. ನಾಗರಾಜು, ಆಧಾರ್ ನೋಂದಣಿ ಏಜೆನ್ಸಿ ಹೊಂದಿದ್ದ. ಇನ್ನೊಬ್ಬ ಆರೋಪಿ ರಮೇಶ್ ಕಾರು ಚಾಲಕ ಹಾಗೂ ಮತ್ತೊಬ್ಬ ಆರೋಪಿ ರೂಪಂ ಗಾರ್ಮೆಂಟ್ಸ್ ಕಾರ್ಖಾನೆ ನೌಕರ. ಆರನೇ ಆರೋಪಿ ರವಿ, ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ.’

‘ಆರು ತಿಂಗಳಿನಿಂದ ಆರೋಪಿಗಳು ಕೃತ್ಯ ಎಸಗುತ್ತಿದ್ದು, ಇದುವರೆಗೂ 150ಕ್ಕೂ ಹೆಚ್ಚು ಆಧಾರ್ ಮಾಡಿಸಿಕೊಟ್ಟಿರುವ ಮಾಹಿತಿ ಇದೆ. ಆಧಾರ್ ಪಡೆದಿರುವ ವ್ಯಕ್ತಿಗಳನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಹೇಳಿವೆ.

ಮೊಬೈಲ್ ಮಳಿಗೆಯಿಂದ ಅಕ್ರಮ ಆರಂಭ: ‘ಆರೋಪಿ ಪ್ರವೀಣ್ ತನ್ನ ಮೊಬೈಲ್ ಮಾರಾಟ ಹಾಗೂ ದುರಸ್ತಿ ಮಳಿಗೆಯಲ್ಲಿ ಫಲಾನುಭವಿಗಳ ಪರವಾಗಿ ಸರ್ಕಾರದ ವಿವಿಧ ಯೋಜನೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಮಾಡುತ್ತಿದ್ದ. ಇದರ ಜೊತೆಯಲ್ಲಿ ಹಲವರಿಗೆ ಅಕ್ರಮವಾಗಿ ಆಧಾರ್ ಮಾಡಿಸಿಕೊಡುತ್ತಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಬಾಂಗ್ಲಾದೇಶ ಹಾಗೂ ಇತರೆ ಅಕ್ರಮವಾಸಿಗಳನ್ನು ಸಂಪರ್ಕಿಸುತ್ತಿದ್ದ ಆರೋಪಿ ಪ್ರವೀಣ್, ಯಾವುದೇ ದಾಖಲೆ ಇಲ್ಲದೇ ಆಧಾರ್ ಮಾಡಿಸಿಕೊಡುವುದಾಗಿ ಹೇಳಿ ತಲಾ ₹ 2,500 ಪಡೆಯುತ್ತಿದ್ದ. ಹಣ ನೀಡಿದ ಅಕ್ರಮ ವಾಸಿಗಳ ಪಟ್ಟಿ ಸಿದ್ಧಪಡಿಸಿ, ಕಾರು ಚಾಲಕ ರಮೇಶ್ ಮೂಲಕ ನಿವೃತ್ತ ವೈದ್ಯಾಧಿಕಾರಿ ಸುನೀಲ್ ಬಳಿ ಕಳುಹಿಸುತ್ತಿದ್ದ.’

‘ನಿವೃತ್ತಿ ಬಳಿಕವೂ ವೈದ್ಯಾಧಿಕಾರಿಯ ಸೀಲ್ ತನ್ನ ಬಳಿ ಇಟ್ಟುಕೊಂಡಿದ್ದ ಸುನೀಲ್, ಅದನ್ನು ಬಳಸಿ ಅಕ್ರಮ ವಾಸಿಗಳ ನಕಲಿ ದಾಖಲೆ ಸೃಷ್ಟಿಸುತ್ತಿದ್ದ. ಅದೇ ದಾಖಲೆ ಪಡೆಯುತ್ತಿದ್ದ ಆರೋಪಿ ನಾಗರಾಜ್, ಆಧಾರ್ ನೋಂದಣಿ ಮಾಡುತ್ತಿದ್ದ. ಈ ಅಕ್ರಮಕ್ಕೆ ರೂಪಂ ಹಾಗೂ ರವಿ ಸಹಕಾರ ನೀಡುತ್ತಿದ್ದರು. ಬಂದ ಹಣವನ್ನು ಎಲ್ಲರೂ ಹಂಚಿಕೊಳ್ಳುತ್ತಿದ್ದರು’ ಎಂದೂ ಹೇಳಿವೆ.

‘ಒಂದೇ ದಾಖಲೆ ಪರಿಶೀಲನೆ: ಅಕ್ರಮಕ್ಕೆ ದಾರಿ’
‘ಬೆಂಗಳೂರಿಗೆ ಬರುವ ಹಲವು ಅಕ್ರಮ ವಾಸಿಗಳು ತಮ್ಮ ವಿಳಾಸ ದೃಢೀಕರಣ ಮಾಡಿಸಿಕೊಳ್ಳಲು ವಿಫಲರಾಗುತ್ತಾರೆ. ಅಂಥವರು ಹೆಚ್ಚಿನ ಹಣ ನೀಡಿ ವೈದ್ಯಾಧಿಕಾರಿಗಳ ಮೂಲಕ ನಕಲಿ ದಾಖಲೆ ಮಾಡಿಸಿಕೊಳ್ಳುತ್ತಿದ್ದಾರೆ. ಇದೊಂದೇ ದಾಖಲೆ ಪರಿಶೀಲಿಸಿ ಆಧಾರ್ ನೋಂದಣಿ ಮಾಡುತ್ತಿರುವುದು ಅಕ್ರಮಕ್ಕೆ ದಾರಿ ಮಾಡಿಕೊಟ್ಟಿದೆ’ ಎಂದು ಆಗ್ನೇಯ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಬಂಧಿತ ಡಿ. ಸುನೀಲ್, ನಿವೃತ್ತಿ ಬಳಿಕವೂ ನಕಲಿ ದಾಖಲೆ ಮಾಡಿಕೊಡುತ್ತಿದ್ದ. ಈತ, ಕರ್ತವ್ಯದಲ್ಲಿದ್ದ ವೇಳೆಯಲ್ಲೂ ಇಂಥ ಕೃತ್ಯ ಎಸಗಿರುವ ಅನುಮಾನವಿದೆ’ ಎಂದು ತಿಳಿಸಿದರು. ‘ಆಧಾರ್ ಅಕ್ರಮ ಜಾಲದ ಬಗ್ಗೆ ವಿವರವಾದ ವರದಿ ಸಿದ್ಧಪಡಿಸಿ, ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರಕ್ಕೆ ಸಲ್ಲಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT