ಬುಧವಾರ, ಆಗಸ್ಟ್ 17, 2022
26 °C

‘ಕೋಟಿ ಕೊಟ್ಟ ಕುಲಪತಿಗಳು ಅಕ್ರಮ ನಡೆಸದಿರಲು ಸಾಧ್ಯವೇ?’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 'ಕುಲಪತಿಗಳ ನೇಮಕದಲ್ಲಿ ಹಿಂದೆ ಅಕ್ರಮ ನಡೆಯುತ್ತಿತ್ತು. ಐದಾರು ಕೋಟಿ ಲಂಚ ಕೊಟ್ಟು ಹುದ್ದೆ ಪಡೆಯುತ್ತಿದ್ದವರು ಅಕ್ರಮ ನಡೆಸದೇ ಇರಲು ಸಾಧ್ಯವೇ' ಎಂದು ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಪ್ರಶ್ನಿಸಿದರು.

ವಿಧಾನ ಪರಿಷತ್‌ನಲ್ಲಿ ಉನ್ನತ ಶಿಕ್ಷಣ ಸಚಿವ ಡಾ.‌ಸಿ.ಎನ್.‌ ಅಶ್ವತ್ಥನಾರಾಯಣ ಮಂಡಿಸಿದ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಮತ್ತು ಇತರೆ ಕೆಲವು ಕಾನೂನು ತಿದ್ದುಪಡಿ ಮಸೂದೆ ಮೇಲೆ‌ ನಡೆದ ಚರ್ಚೆ ವೇಳೆ‌ ಮಾತನಾಡಿದ ಅವರು, 'ಈ ವ್ಯವಸ್ಥೆಗೆ ಸುಧಾರಣೆ ತರಲು ಈಗಾಗಲೇ ಹಲವು ಕ್ರಮಗಳನ್ನು ಸಚಿವರು ಕೈಗೊಂಡಿದ್ದಾರೆ. ಕಾಯ್ದೆ ತಿದ್ದುಪಡಿ ಈ ಯತ್ನಗಳಿಗೆ ಪೂರಕವಾಗಲಿದೆ. ವಿಶ್ವವಿದ್ಯಾಲಯಗಳ ಪ್ರಗತಿ
ಯಲ್ಲಿ ಶಾಸಕರು ಪಾಲ್ಗೊಳ್ಳುವ ಕಾರ್ಯ ಆಗಬೇಕು. ಯಾವ ರೀತಿ ಬಳಸಿಕೊಳ್ಳಬಹುದು ಎನ್ನುವುದನ್ನು ಸಚಿವರು ನಿರ್ಧರಿಸಬೇಕು’ ಎಂದು ತಿಳಿಸಿದರು.

ಕಾಯ್ದೆ ತಿದ್ದುಪಡಿ ಅಗತ್ಯದ ಬಗ್ಗೆ ವಿವರಿಸಿದ ಸಚಿವರು, ‘ಈ ಹಿಂದೆ ಕುಲಪತಿ ನೇಮಕ ವಿಚಾರದಲ್ಲಿ ಅವಕಾಶ ಸೀಮಿತವಾಗಿತ್ತು. ಹೊಸದಾಗಿ ಸ್ಥಾಪಿತವಾದ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಿಸಲು ಅನುಕೂಲ ಕಲ್ಪಿಸಲು ಕಾಯ್ದೆಯ ಸೆಕ್ಷನ್ 14 ರಲ್ಲಿ ಬದಲಾವಣೆ ತರಲಾಗಿದೆ. ಅಲ್ಲದೆ, ಹಲವು ವಿಚಾರಗಳಲ್ಲಿ ನಿರ್ಧಾರ ಕೈಗೊಳ್ಳಲು ಅನುಕೂಲವಾಗುವ ಬದಲಾವಣೆ ತರಲಾಗಿದೆ’ ಎಂದರು.

ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ, 'ಕುಲಪತಿ ನೇಮಕಕ್ಕೆ ಐಎಎಸ್, ಕೆಎಎಸ್ ಅಧಿಕಾರಿಗಳನ್ನು ನೇಮಿಸಬಾರದು. ಪ್ರಾಧ್ಯಾಪಕರಿಗೆ ಅವಕಾಶ ಸಿಕ್ಕರೆ ಶಿಕ್ಷಣ ಪ್ರಗತಿ ಸಾಧ್ಯ. ಹಣ ಹಾಗೂ ಜಾತಿ ಆಧಾರದ ಮೇಲೆ ಉಪಕುಲಪತಿಗಳ ನೇಮಕವಾದರೆ ಮಕ್ಕಳ ಭವಿಷ್ಯ ಬೆಳಗುವುದು ಹೇಗೆ: ಎಂದು ಪ್ರಶ್ನಿಸಿದರು. ಜೆಡಿಎಸ್‌ನ ಭೋಜೇಗೌಡ, 'ವಿಶ್ವವಿದ್ಯಾಲಯಗಳು ನಾಯಿ ಕೊಡೆಯಂತೆ ತಲೆ ಎತ್ತುತ್ತಿವೆ. ಸಿಬ್ಬಂದಿ ಕೊರತೆ ಇದೆ. ವಿಶ್ವವಿದ್ಯಾಲಯಗಳು ವ್ಯಾಪಾರೀಕರಣದ ಕೇಂದ್ರವಾಗಿವೆ. ರಾಜಕೀಯ ಪ್ರಭಾವಿ ನಾಯಕರ ಆಪ್ತರೇ ಇಲ್ಲಿನ ಆಯಕಟ್ಟಿನ ಸ್ಥಾನಗಳಲ್ಲಿದ್ದಾರೆ' ಎಂದರು.

ಬಿಜೆಪಿಯ ಎಸ್.ವಿ.ಸಂಕನೂರ, 'ಇದುವರೆಗೂ ಹಲವು ವಿಶ್ವವಿದ್ಯಾಲಯಗಳಲ್ಲಿ ದೂರಶಿಕ್ಷಣ ನಡೆಸುತ್ತಿದ್ದೆವು. ಇನ್ನು ಮುಂದೆ ಮುಕ್ತ ವಿಶ್ವವಿದ್ಯಾಲಯ ಹೊರತುಪಡಿಸಿ ಉಳಿದ ವಿಶ್ವವಿದ್ಯಾಲಯಗಳಲ್ಲಿ ಅವಕಾಶ ಇಲ್ಲ. ದೂರಶಿಕ್ಷಣ ವ್ಯವಸ್ಥೆಯಿಂದ ಒಂದಿಷ್ಟು ಆದಾಯ ಬರುತ್ತಿತ್ತು. ಅದು ನಿಂತರೆ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟ’ ಎಂದು ಅಭಿಪ್ರಾಯಪಟ್ಟರು. ಚರ್ಚೆಯ ಬಳಿಕ ಮಸೂದೆಗೆ ಅಂಗೀಕಾರ ‌ನೀಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು