ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ಸಿಇಗಳ ‘ಪ್ರಭಾವ’, ಸಿಎಂ ಆದೇಶ ಬದಲು

ಸಿಆ್ಯಂಡ್‌ಆರ್‌ ನಿಯಮಗಳ ಉಲ್ಲಂಘಿಸಿ ವರ್ಗಾವಣೆ ಮಾರ್ಪಾಟು
Last Updated 9 ನವೆಂಬರ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ ಇಬ್ಬರು ಮುಖ್ಯ ಎಂಜಿನಿಯರ್‌ಗಳು ‘ಪ್ರಭಾವ’ ಬಳಸಿ ಮುಖ್ಯಮಂತ್ರಿ ಸೂಚನೆ ಮೇರೆಗೆ ಹೊರಡಿಸಲಾಗಿದ್ದ ಆದೇಶವನ್ನೂ ಬದಲಿಸಿ, ಹುದ್ದೆ ಪಡೆದುಕೊಂಡಿದ್ದಾರೆ.

ಬಿಬಿಎಂಪಿ ಯೋಜನೆ, ರಾಜಕಾಲುವೆ ವಿಭಾಗದಲ್ಲಿ ನಿರೀಕ್ಷಿತ ಕಾರ್ಯ ನಡೆಯುತ್ತಿಲ್ಲ. ರಾಜಕಾಲುವೆಗಳ ತೆರವು ಕಾರ್ಯಾಚರಣೆ ಸರಿಯಾಗಿ ನಡೆಯುತ್ತಿಲ್ಲ ಎಂದು ಮುಖ್ಯಮಂತ್ರಿಯವರ ಆದೇಶದ ಮೇರೆಗೆ ಮುಖ್ಯ ಎಂಜಿನಿಯರ್‌ಗಳನ್ನು ನ.2ರಂದು ವರ್ಗಾಯಿಸಲಾಗಿತ್ತು.

ಬಿಬಿಎಂಪಿ ಯೋಜನೆ ವಿಭಾಗ ಹಾಗೂ ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ಆಗಿದ್ದ ಎಂ. ಲೋಕೇಶ್‌ ಅವರನ್ನು ದಾಸರಹಳ್ಳಿ ವಲಯ ಮುಖ್ಯ ಎಂಜಿನಿಯರ್‌, ಮಹದೇವಪುರ ವಲಯದ ಅಧೀಕ್ಷಕ ಎಂಜಿನಿಯರ್‌ ಪ್ರವೀಣ್ ಲಿಂಗಯ್ಯ ಅವರಿಗೆ ಯೋಜನೆ ವಿಭಾಗದ ಮುಖ್ಯ ಎಂಜಿನಿಯರ್‌ ಹುದ್ದೆ ಹೆಚ್ಚುವರಿ, ಎರವಲು ಸೇವೆ ಮೇರೆಗೆ ಬೆಂಗಳೂರು ಸ್ಮಾರ್ಟ್‌ ಸಿಟಿಯ ಮುಖ್ಯ ಎಂಜಿನಿಯರ್‌ ವಿಯಾಯಕ ಸೂಗೂರು ಅವರನ್ನು ಬಿಬಿಎಂಪಿ ರಾಜಕಾಲುವೆವಿಭಾಗದ ಮುಖ್ಯ ಎಂಜಿನಿಯರ್‌ ಆಗಿ ವರ್ಗಾಯಿಸಲಾಗಿತ್ತು. ನ.7ರವರೆಗೂ ಈ ಆದೇಶ ಅನುಷ್ಠಾನಕ್ಕೇ ಬಂದಿರಲಿಲ್ಲ.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ನ.7ರಂದು ಕಚೇರಿ ಆದೇಶ ಹೊರಡಿಸಿ ನಗರಾಭಿವೃದ್ಧಿ ಇಲಾಖೆಯಿಂದ ಬಂದ ವರ್ಗಾವಣೆಯನ್ನು ಬದಲಾಯಿದ್ದಾರೆ. ಲೋಕೇಶ್‌ ಅವರನ್ನು ಮಹದೇವಪುರ ವಲಯದ ಮುಖ್ಯ ಎಂಜಿನಿಯರ್‌, ಅಲ್ಲಿನ ಮುಖ್ಯ ಎಂಜಿನಿಯರ್‌ ಬಸವರಾಜ ಕಬಾಡೆ ಅವರನ್ನು ಬೃಹತ್‌ ನೀರುಗಾಲುವೆ ವಿಭಾಗಕ್ಕೆ ಹಾಗೂ ವಿನಾಯಕ ಸುಗೂರ್‌ ಅವರನ್ನು ಯೋಜನಾ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಬುಧವಾರ ಇವರೆಲ್ಲ ಅಧಿಕಾರ ವಹಿಸಿಕೊಂಡಿದ್ದಾರೆ.

ವೃಂದ ಮತ್ತು ನೇಮಕಾತಿ ನಿಯಮಗಳನ್ನು (ಸಿಆ್ಯಂಡ್‌ಆರ್‌) ತಿದ್ದುಪಡಿ ಮಾಡಿ ಎರಡು ವರ್ಷಗಳಾಗಿದ್ದು, ಇದರಂತೆ ಬಿಬಿಎಂಪಿಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ (ಎಇಇ) ಅವರ ಮೇಲಿನ ಹುದ್ದೆಗಳ ವರ್ಗಾವಣೆ, ಬಡ್ತಿ ಪ್ರಕ್ರಿಯೆಗಳು ನಗರಾಭಿವೃದ್ಧಿ ಇಲಾಖೆಯಿಂದಲೇ ಆಗಬೇಕಿದೆ. ಆದರೆ, ಇದನ್ನು ಮೀರಿ ಈ ಕಚೇರಿ ಆದೇಶವಾಗಿದೆ.

‘ಬಿಬಿಎಂಪಿ ಮುಖ್ಯ ಆಯುಕ್ತರೂ ಪ್ರಧಾನ ಕಾರ್ಯದರ್ಶಿಯವರ ದರ್ಜೆಯವರಾಗಿದ್ದು, ಅವರು ಕೆಲವೊಂದು ಆದೇಶ ಮಾಡಬಹುದಾಗಿದೆ. ಆದರೆ, ಇದು ಮುಖ್ಯ ಎಂಜಿನಿಯರ್‌ಗಳ ಮಟ್ಟದಲ್ಲಾಗಿರುವ ವರ್ಗಾವಣೆ. ಇದು ಸಿಆ್ಯಂಡ್‌ಆರ್‌ಗೆ ವಿರುದ್ಧವಾಗಿದೆ. ಮುಂದಿನ ದಿನಗಳಲ್ಲಿ ಇದು ಬೇರೆ ರೀತಿಯ ಮಟ್ಟಕ್ಕೆ ಹೋದರೆ ಸಾಕಷ್ಟು ಸಮಸ್ಯೆ ಉಂಟಾಗುತ್ತದೆ’ ಎಂದು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹೇಳಿದರು.

ಅಧಿಕಾರದ ದಾಹ!
ಮುಖ್ಯಮಂತ್ರಿ ಆದೇಶದಂತೆ ಆಗಿರುವ ವರ್ಗಾವಣೆಯನ್ನು ಅನುಷ್ಠಾನಕ್ಕೆ ತಾರದೆ, ಕಚೇರಿ ಆದೇಶದಲ್ಲಿ ಮುಖ್ಯ ಎಂಜಿನಿಯರ್‌ಗಳ ಹುದ್ದೆಯನ್ನು ಬದಲಿಸಲಾಗಿದೆ. ಇದಕ್ಕೆ ಇಬ್ಬರು ಮುಖ್ಯ ಎಂಜಿನಿಯರ್‌ಗಳು ಮುಖ್ಯ ಆಯುಕ್ತರ ಮೇಲೆ ಹಾಕಿರುವ ‘ಪ್ರಭಾವ’ವೇ ಕಾರಣ. ಈ ಇಬ್ಬರು ಎಲ್ಲ ಅಧಿಕಾರ ನಮ್ಮಲ್ಲೇ ಇರಬೇಕು ಎಂಬ ದಾಹದಿಂದ ಮುಖ್ಯಮಂತ್ರಿ ಆದೇಶವನ್ನೇ ಕಡೆಗಣಿಸಿದ್ದಾರೆ’ ಎಂದು ಬಿಬಿಎಂಪಿ ಎಂಜಿನಿಯರ್‌ಗಳು ದೂರುತ್ತಿದ್ದಾರೆ.

ಪ್ರತಿಕ್ರಿಯೆ ಇಲ್ಲ: ಮುಖ್ಯ ಎಂಜಿನಿಯರ್‌ಗಳ ಬದಲಿ ವರ್ಗಾವಣೆ ಬಗ್ಗೆ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರನ್ನು ಸಂಪರ್ಕಿಸಿದಾಗ ‘ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT