ಶನಿವಾರ, ಅಕ್ಟೋಬರ್ 1, 2022
23 °C

ಸ್ವಾತಂತ್ರ್ಯೋತ್ಸವ | ಬಿಜೆಪಿ ಜಾತ್ರೆ, ಕಾಂಗ್ರೆಸ್ ನಡಿಗೆ: ಭಾರಿ ದಟ್ಟಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸ್ವಾತಂತ್ರ್ಯೋತ್ಸವ ಆಚರಣೆ, ಬಿಜೆಪಿಯ ಅಮೃತ ಭಾರತಿಗೆ ಕರುನಾಡು ಜಾತ್ರೆ, ಕಾಂಗ್ರೆಸ್‌ ನಡಿಗೆ ಸೇರಿ ಸಾಲು ಸಾಲು ಕಾರ್ಯಕ್ರಮಗಳಿಂದಾಗಿ ನಗರದಲ್ಲಿ ಸೋಮವಾರ ವಿಪರೀತ ವಾಹನ ದಟ್ಟಣೆ ಉಂಟಾಯಿತು.

ಧ್ವಜಾರೋಹಣಕ್ಕೆಂದು ಶಾಲೆ, ಕಾಲೇಜು, ಕಚೇರಿ, ಮೈದಾನಕ್ಕೆ ಹೊರಟಿದ್ದವರು ತಮ್ಮ ವಾಹನಗಳನ್ನು ನಸುಕಿನಲ್ಲೇ ರಸ್ತೆಗೆ ಇಳಿಸಿದ್ದರು. ಇದರಿಂದಾಗಿ ಪ್ರಮುಖ ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತು, ನಿಧಾನವಾಗಿ ಚಲಿಸಿದವು.

ವಿಧಾನಸೌಧ, ರಾಜಭವನ ರಸ್ತೆ, ಚಾಲುಕ್ಯ ವೃತ್ತ, ಅರಮನೆ ರಸ್ತೆ, ಕೆ.ಆರ್. ವೃತ್ತ, ಕಾರ್ಪೊರೇಷನ್ ವೃತ್ತ, ಎಂ.ಜಿ.ರಸ್ತೆ, ಕಂಠೀರವ ಕ್ರೀಡಾಂಗಣ ಸುತ್ತಮುತ್ತ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ದಟ್ಟಣೆ ಇತ್ತು.

ಕೆಲ ಚಾಲಕರು ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿದ್ದರಿಂದ ದಟ್ಟಣೆ ಮತ್ತಷ್ಟು ಬಿಗಡಾಯಿಸಿತು. ಸ್ಥಳದಲ್ಲಿದ್ದ ಪೊಲೀಸರು ದಟ್ಟಣೆ ನಿಯಂತ್ರಿಸಲು ಪರದಾಡಿದರು. ಇಂಥ ರಸ್ತೆಗಳಲ್ಲಿ ಆಂಬುಲೆನ್ಸ್ ಸಂಚಾರಕ್ಕೂ ತೊಂದರೆ ಉಂಟಾಯಿತು. ಕೆ.ಆರ್. ವೃತ್ತದಲ್ಲಿ ಪೊಲೀಸರು ಹಾಗೂ ಸಾರ್ವಜನಿಕರು, ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟು ಮುಂದೆ ಕಳುಹಿಸಿದ ದೃಶ್ಯ ಕಂಡುಬಂತು.

ಅಮೃತ ಭಾರತಿಗೆ ಕರುನಾಡು ಜಾತ್ರೆಗೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರು. ಓಡಾಟ ಹೆಚ್ಚಿದ್ದರಿಂದ ಸುತ್ತಮುತ್ತ ದಟ್ಟಣೆ ಉಂಟಾಗಿ, ವಾಹನಗಳು ಸಾಲುಗಟ್ಟಿ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

ನಿಂತಲೇ ನಿಂತ ವಾಹನಗಳು: ಮೆಜೆಸ್ಟಿಕ್‌ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದವರೆಗೂ ಕಾಂಗ್ರೆಸ್ ಪಕ್ಷದಿಂದ ಸ್ವಾತಂತ್ರ್ಯ ನಡಿಗೆ ಆಯೋಜಿಸಲಾಗಿತ್ತು.

ನಡಿಗೆ ಸಾಗಿದ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಕೆಲವೆಡೆ ಒಂದು ಬದಿಯಲ್ಲಿ ವಾಹನ ಓಡಾ ಟಕ್ಕೂ ಅವಕಾಶ ನೀಡಿದರೂ ದಟ್ಟಣೆ ಕಡಿಮೆ ಆಗಲಿಲ್ಲ. ರಸ್ತೆಯಲ್ಲಿ ಜನರು ಹೆಚ್ಚಿದ್ದರಿಂದ ಮಾರ್ಗಮಧ್ಯೆಯೇ ವಾಹನಗಳು ನಿಂತಲೇ ನಿಲ್ಲಬೇಕಾಯಿತು.

ಓಕಳಿಪುರ, ಮೆಜೆಸ್ಟಿಕ್, ಗಾಂಧಿನಗರ, ಶೇಷಾದ್ರಿರಸ್ತೆ, ಅರಮನೆ ರಸ್ತೆ, ಕೆ.ಆರ್. ವೃತ್ತ, ಕಾರ್ಪೊರೇಷನ್ ವೃತ್ತ, ಲಾಲ್‌ಬಾಗ್, ಬಸವನಗುಡಿ, ಜೆ.ಸಿ.ರಸ್ತೆಯಲ್ಲಿ ದಟ್ಟಣೆ ಅಧಿಕವಾಗಿತ್ತು.

ಬಳ್ಳಾರಿ ರಸ್ತೆ, ತುಮಕೂರು ರಸ್ತೆ, ಮೈಸೂರು ರಸ್ತೆ, ಕನಕಪುರ ರಸ್ತೆ, ಯಶವಂತಪುರ, ಮಲ್ಲೇಶ್ವರ, ರಾಜಾಜಿನಗರ, ಶೇಷಾದ್ರಿಪುರ ಹಾಗೂ ಸುತ್ತಮುತ್ತ ರಸ್ತೆಗಳಲ್ಲಿ ದಟ್ಟಣೆ ಬಿಸಿ ತಟ್ಟಿತು. ನಗರದ ಪ್ರಮುಖ ರಸ್ತೆಗಳಲ್ಲಿ ರಾತ್ರಿಯೂ ದಟ್ಟಣೆ ಅಧಿಕವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು