ಗುರುವಾರ , ಫೆಬ್ರವರಿ 20, 2020
19 °C

ಕಾದಂಬರಿಗಳ ರೀತಿ ಸಂವಿಧಾನ ಓದಬೇಡಿ: ನಾಗಮೋಹನ್ ದಾಸ್ ಕಿವಿಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಸುಶಿಕ್ಷಿತರೆನಿಸಿಕೊಂಡ ಶೇ 90ರಷ್ಟು ಜನರಿಗೆ ಕಾನೂನುಗಳ ಬಗ್ಗೆ ಜ್ಞಾನವಿಲ್ಲ. ಸಂವಿಧಾನವನ್ನು ಕಥೆ, ಕಾದಂಬರಿಗಳ ರೀತಿಯಲ್ಲಿ ಓದಿದರೆ ಅರ್ಥವಾಗುವುದಿಲ್ಲ’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಬೇಸರ ವ್ಯಕ್ತಪಡಿಸಿದರು. 

ಬೆಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಎನ್‌ಎಸ್‌ಎಸ್ ರಾಜ್ಯ ಕೋಶ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ಸಂವಿಧಾನ ಓದು’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಸಂವಿಧಾನದಲ್ಲಿ ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲರಿಗೂ ಸಮಾನತೆ ಒದಗಿಸಲಾಗಿದೆ. ಈ ಸಂವಿಧಾನದಲ್ಲಿ ಯಾವುದೇ ದೋಷವಿಲ್ಲ. ಆದರೆ, ಅದನ್ನು ಜಾರಿಗೊಳಿಸುವವರಲ್ಲಿ ದೋಷವಿದೆ’ ಎಂದು ಹೇಳಿದರು.

‘ಭಾರತದಲ್ಲಿ ನಿರುದ್ಯೋಗ, ಭ್ರಷ್ಟಾಚಾರ, ಭಯೋತ್ಪಾದನೆ ಸೇರಿದಂತೆ ಸಾಕಷ್ಟು ಸಮಸ್ಯೆಗಳು ಹಾಗೂ ಸವಾಲುಗಳಿವೆ. ಇದಕ್ಕೆ ಸಂವಿಧಾನ ಕಾರಣವಲ್ಲ. ಬದಲಾಗಿ ಸಂವಿಧಾನ ಜಾರಿಗೊಳಿಸುವವರು ಕಾರಣ. ಸಂವಿಧಾನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಕೆಲಸವಾ ಗುತ್ತಿಲ್ಲ’ ಎಂದು ತಿಳಿಸಿದರು. 

‘ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳನ್ನು ಜಾರಿಗೆ ತಂದಿರುವುದೇ ಜನರು. ಅವುಗಳಿಗೆ ರೂಪಿಸಲಾದ ನಿಯಮಗಳೇ ಸಂವಿಧಾನವಾಗಿರುವುದು. ಜಗತ್ತಿನ ವಿದ್ವಾಂಸರು ಹಾಗೂ ಕಾನೂನುತಜ್ಞರು ಭಾರತೀಯ ಸಂವಿಧಾನವನ್ನು ಪ್ರಶಂಸಿಸಿದ್ದಾರೆ. ಸಂವಿಧಾನ ಜಾರಿಗೆ ಬಂದ ಬಳಿಕ ಜಾತಿ ಪದ್ಧತಿ ನಿವಾರಣೆ, ವೃತ್ತಿ ಕಸುಬು ಬದಲಾವಣೆ ಹಾಗೂ ಅಂತರ್ಜಾತಿ ವಿವಾಹಗಳು ಸಾಧ್ಯವಾದವು’ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಕೆ.ಆರ್. ವೇಣುಗೋಪಾಲ್, ‘ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ವಿವಿಧ ಧರ್ಮಗಳಿಗೆ ಬೇರೆ ಬೇರೆ ಧರ್ಮ ಗ್ರಂಥಗಳಿವೆ. ಆದರೆ, ಇಡೀ ಭಾರತೀಯರಿಗೆ ಸಂವಿಧಾನ ಏಕಮೇವ ಗ್ರಂಥವಾಗಿದ್ದು, ಪ್ರತಿಯೊಬ್ಬರೂ ಇದನ್ನು ಅರ್ಥೈಸಿಕೊಳ್ಳಬೇಕು. ನಂಬಿಕೆ, ಆತ್ಮವಿಶ್ವಾಸ ಹೊಂದಿದ್ದವರಿಗೆ ದೇವರ ಅಗತ್ಯ ಕೂಡಾ ಇರುವುದಿಲ್ಲ’ ಎಂದು ತಿಳಿಸಿದರು. 

 *
ಸಂವಿಧಾನದಿಂದ ದಲಿತರು ಹಾಗೂ ಮಹಿಳೆಯರಿಗೆ ಸಮಾನ ಅವಕಾಶಗಳು ದೊರೆತವು. ಇದರಿಂದಾಗಿ ಉನ್ನತ ಹುದ್ದೆಗಳು ದೊರೆತಿವೆ.
-ಎಚ್.ಎನ್. ನಾಗಮೋಹನದಾಸ್, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು