ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಜೂಜಾಟ ಹೆಚ್ಚಾಗುತ್ತಿದ್ದು, ಸಾವಿರಾರು ಮಂದಿ ಹಣ ಕಳೆದುಕೊಳ್ಳುತ್ತಿದ್ದಾರೆ. ಇಂಥ ಜೂಜಾಟ ನಿರ್ಬಂಧಿಸುವಂತೆ ಒತ್ತಾಯಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುವಾಗಿದೆ.
ಫೇಸ್‌ಬುಕ್ ಹಾಗೂ ಟ್ವಿಟರ್‌ನಲ್ಲಿ ಪೋಸ್ಟ್‌ಗಳನ್ನು ಹರಿಬಿಡುತ್ತಿರುವ ಸಾರ್ವಜನಿಕರು, ‘ಆನ್‌ಲೈನ್ ಜೂಜಾಟ ಬೇಡವೇ ಬೇಡ’ ಎಂದು ಆಗ್ರಹಿಸುತ್ತಿದ್ದಾರೆ.
‘ಆನ್‌ಲೈನ್ ಗ್ಯಾಂಬ್ಲಿಗ್, ಘನ ಸರ್ಕಾರಕ್ಕಿದು ತರವಲ್ಲ ನೋಡ !’, ‘ಆನ್‌ಲೈನ್‌ನಲ್ಲಿ ಗ್ಯಾಂಬ್ಲಿಗ್, ಬದುಕು ಆಫ್‌ಲೈನ್’ ಮುಂತಾದ ಬರಹಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಪ್ರಕಟಿಸುತ್ತಿದ್ದಾರೆ.
‘ಮನರಂಜನೆ ಹಾಗೂ ಸಮಯ ಕಳೆಯುವ ಹೆಸರಿನಲ್ಲಿ ಶುರುವಾದ ಆನ್‌ಲೈನ್ ಜೂಜು, ಇಂದು ವಿಭಿನ್ನ ಆಯಾಮ ಪಡೆಯುತ್ತಿದೆ. ಸುಲಭವಾಗಿ ಹಣ ಗಳಿಸುವ ಆಸೆಯಿಂದ ಹಲವರು ಲಕ್ಷಗಟ್ಟಲೇ ಹಣ ಕಟ್ಟಿ ಕೆಲವರು ಜೂಜು ಆಡುತ್ತಿದ್ದಾರೆ. ಆ ಪೈಕಿ ಬಹುತೇಕರು ಹಣ ಕಳೆದುಕೊಳ್ಳುತ್ತಿದ್ದಾರೆ. ಅವರೆಲ್ಲರ ಕುಟುಂಬಗಳು ಬೀದಿಗೆ ಬರುತ್ತಿವೆ’ ಎಂದು ಈ ಅಭಿಯಾನದಲ್ಲಿ ತೊಡಗಿಸಿಕೊಂಡವರು ದೂರುತ್ತಿದ್ದಾರೆ.
ಆನ್‌ಲೈನ್ ಜೂಜು ನಿಷೇಧಕ್ಕೆ ಕಾಯ್ದೆ: ಆನ್‌ಲೈನ್ ಜೂಜು ಹಾಗೂ ಇತರೆ ಆಟಗಳ ನಿಷೇಧದ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಶೀಘ್ರವೇ ಕಾಯ್ದೆ ಜಾರಿಗೆ ಸಿದ್ಧತೆ ನಡೆಸಿದೆ. ಈ ಬಗ್ಗೆ ರಾಜ್ಯ ಸರ್ಕಾರವೇ ಇತ್ತೀಚೆಗೆ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
‘ಮಸೂದೆ ಸಿದ್ಧವಾಗಿದೆ. ಅದರಲ್ಲಿ ಕೆಲ ಬದಲಾವಣೆಗಳಿದ್ದು, ಅವುಗಳನ್ನು ತಿದ್ದುವ ಕೆಲಸ ನಡೆದಿದೆ. ಮಸೂದೆ ಹೇಗಿರಬೇಕು, ಯಾವೆಲ್ಲ ಆಟಗಳನ್ನು ನಿಷೇಧಿಸಬೇಕು, ನಿಯಮ ಉಲ್ಲಂಘನೆಗೆ ಶಿಕ್ಷೆ ಏನು... ಮೊದಲಾದ ಅಂಶಗಳನ್ನು ಚರ್ಚಿಸಲಾಗುತ್ತಿದೆ’ ಎಂದು ಗೃಹ ಇಲಾಖೆಯ ಮೂಲಗಳು ಹೇಳಿವೆ.