ಬೆಂಗಳೂರು: ಆನೆಗೊಂದಿ ಮಾದಕವಸ್ತು ಮಾಫಿಯಾ ಕೇಂದ್ರವಾಗಿದೆ ಎಂದು ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದ ಶಾಸಕ ಬಸವರಾಜ ರಾಯರಡ್ಡಿ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ, ಭಾವಚಿತ್ರ ದಹಿಸಿದ್ದ ಆರೋಪದ ಮೇಲೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
ಬುಧವಾರ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ರಾಯರಡ್ಡಿ, ‘ಸೋಮವಾರ ನಾನು ಸದನದಲ್ಲಿ ಮಾತನಾಡಿದ್ದೆ. ಅದನ್ನು ವಿರೋಧಿಸಿ ಗಂಗಾವತಿಯಲ್ಲಿ ಪ್ರತಿಭಟನೆ ನಡೆಸಲಾಗಿದೆ. ನನ್ನ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ, ಸುಟ್ಟಿದ್ದಾರೆ. ಬೆದರಿಕೆಯನ್ನೂ ಹಾಕುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಆಗ ಮಧ್ಯ ಪ್ರವೇಶಿಸಿದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜಿ. ಜನಾರ್ದನ ರೆಡ್ಡಿ, ‘ಪ್ರತಿಭಟನೆ ಕುರಿತು ನನ್ನತ್ತ ನೋಡಿ ಮಾತನಾಡುತ್ತಿದ್ದಾರೆ. ರಾಯರಡ್ಡಿ ವಿರುದ್ಧ ಪ್ರತಿಭಟನೆ ನಡೆಸಿದವರು ಕಾಂಗ್ರೆಸ್‌ನವರೇ. ವಿಧಾನ ಪರಿಷತ್‌ನ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ್ ನೇತೃತ್ವದಲ್ಲೇ ಪ್ರತಿಭಟನೆ ನಡೆದಿದೆ’ ಎಂದರು.
‘ಜನಾರ್ದನ ರೆಡ್ಡಿ ಬೆಂಬಲಿಗರು ಮತ್ತು ನಕಲಿ ಕಾಂಗ್ರೆಸ್‌ನವರು ಸೇರಿ ಪ್ರತಿಭಟನೆ ನಡೆಸಿದ್ದಾರೆ’ ಎಂದು ರಾಯರಡ್ಡಿ ಹೇಳಿದರು.
ಬಳಿಕ ಉತ್ತರ ನೀಡಿದ ಪರಮೇಶ್ವರ, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿದ್ದು, ಐವರನ್ನು ಬಂಧಿಸಲಾಗಿದೆ. ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು’ ಎಂದರು.
‘ಫಾರ್ಮ್ ಸ್ಟೇ’ಗಳನ್ನು ತೆರವು ಮಾಡದಂತೆ ಜನಾರ್ದನ ರೆಡ್ಡಿ ಆಗ್ರಹಿಸಿದರು. ಕೆಲಕಾಲ ವಾಕ್ಸಮರವೂ ನಡೆಯಿತು. ಮಧ್ಯ ಪ್ರವೇಶಿಸಿದ ಸ್ಪೀಕರ್ ಯು.ಟಿ. ಖಾದರ್, ‘ದ್ವೇಷ ಮುಕ್ತ ಮತ್ತು ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲ ಶಾಸಕರೂ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.