ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟ್‌ ಕಾಯಿನ್ ದೋಚಲು ‘ನ್ಯಾನೊ ಲೆಡ್ಜರ್‌’ ಬಳಕೆ: ಗುಜರಾತ್‌ ಕಂಪನಿಯಿಂದ ಖರೀದಿ

* ಶ್ರೀಕಿ ಹ್ಯಾಕ್ ಮಾಡಿ ಸಂಗ್ರಹಿಸಿದ್ದ ಬಿಟ್‌ ಕಾಯಿನ್
Published 31 ಜನವರಿ 2024, 23:30 IST
Last Updated 31 ಜನವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಅಂತರರಾಷ್ಟ್ರೀಯ ಹ್ಯಾಕರ್ ಎನ್ನಲಾದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಹಲವು ಸರ್ವರ್‌ಗಳನ್ನು ಹ್ಯಾಕ್ ಮಾಡಿ ಸಂಗ್ರಹಿಸಿದ್ದ ಬಿಟ್‌ ಕಾಯಿನ್‌ಗಳನ್ನು ದೋಚಲು ಸಿಸಿಬಿ ಪೊಲೀಸರು ಹಾಗೂ ಸೈಬರ್ ತಜ್ಞರು, ‘ನ್ಯಾನೊ ಲೆಡ್ಜರ್‌’ (ಹಾರ್ಡ್‌ವೇರ್ ಕ್ರಿಪ್ಟೊ ವ್ಯಾಲೆಟ್) ಬಳಸಿದ್ದರೆಂಬ ಸಂಗತಿಯನ್ನು ಎಸ್‌ಐಟಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಬಿಟ್ ಕಾಯಿನ್ ಅಕ್ರಮ ಪ್ರಕರಣದ ಸಂಬಂಧ ಸಿಸಿಬಿ ತಾಂತ್ರಿಕ ವಿಭಾಗದ ಇನ್‌ಸ್ಪೆಕ್ಟರ್ ಡಿ.ಎಂ. ಪ್ರಶಾಂತ್‌ಬಾಬು ಹಾಗೂ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ಜಿಸಿಐಡಿ ಟೆಕ್ನಾಲಜೀಸ್ ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್‌ಕುಮಾರ್ ಅವರನ್ನು ಬಂಧಿಸಿದ್ದ ಎಸ್‌ಐಟಿ ಅಧಿಕಾರಿಗಳು, ಅವರಿಂದ ಹಲವು ಮಾಹಿತಿ ಕಲೆಹಾಕಿದ್ದಾರೆ.

‘ಆರೋಪಿಗಳಾದ ಪ್ರಶಾಂತ್‌ಬಾಬು, ಸಂತೋಷ್‌ಕುಮಾರ್ ಹಾಗೂ ಇತರರು, ಶ್ರೀಕಿ ಬಳಿಯ ಬಿಟ್‌ಕಾಯಿನ್‌ಗಳನ್ನು ದೋಚಲು ಸಂಚು ರೂಪಿಸಿದ್ದರು. ಬಿಟ್ ಕಾಯಿನ್‌ಗಳನ್ನು ಸಂಗ್ರಹಿಸಲೆಂದು, ಗುಜರಾತ್‌ನ ಹಲವು ಕಂಪನಿಗಳಿಂದ 3 ನ್ಯಾನೊ ಲೆಡ್ಜರ್‌ಗಳನ್ನು ಖರೀದಿಸಿ ತರಿಸಿದ್ದರು. ಶ್ರೀಕಿಯನ್ನು ಬೆದರಿಸಿ, ಹಲವು ಬಿಟ್‌ಕಾಯಿನ್‌ಗಳನ್ನು ಅಕ್ರಮವಾಗಿ ನ್ಯಾನೊ ಲೆಡ್ಜರ್‌ಗೆ ವರ್ಗಾಯಿಸಿಕೊಂಡಿರುವುದು ಸದ್ಯದ ತನಿಖೆಯಿಂದ ಗೊತ್ತಾಗಿದೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

‘ಪ್ರಕರಣದ ಪ್ರಮುಖ ಆರೋಪಿ ಶ್ರೀಕಿ ಬಳಿ 4 ಸಾವಿರಕ್ಕೂ ಹೆಚ್ಚು ಬಿಟ್‌ ಕಾಯಿನ್‌ಗಳು ಇದ್ದವೆಂಬ ಮಾಹಿತಿ ಇದೆ. ಇದಕ್ಕೆ ಸಂಬಂಧಪಟ್ಟಂತೆ ಪುರಾವೆಗಳನ್ನು ಪರಿಶೀಲಿಸಲಾಗುತ್ತಿದೆ. ಇಂಥ ಬಿಟ್‌ಕಾಯಿನ್‌ಗಳ ಪೈಕಿ ಹಲವು ಬಿಟ್‌ ಕಾಯಿನ್‌ಗಳನ್ನು ಸಿಸಿಬಿ ಪೊಲೀಸರು ಹಾಗೂ ಸೈಬರ್ ತಜ್ಞರು ದೋಚಿರುವುದು ಆರೋಪಿಗಳ ವಿಚಾರಣೆಯಿಂದ ಗೊತ್ತಾಗಿದೆ’ ಎಂದು ತಿಳಿಸಿವೆ.

‘ಮೂರು ನ್ಯಾನೊ ಲೆಡ್ಜರ್‌ಗಳ ಪೈಕಿ ಒಂದು ಲೆಡ್ಜರ್ ಮಾತ್ರ ಆರೋಪಿಗಳ ಬಳಿ ಸಿಕ್ಕಿದೆ. ಎರಡು ಲೆಡ್ಜರ್‌ಗಳು ಎಲ್ಲಿವೆ ಎಂಬುದು ಗೊತ್ತಾಗಿಲ್ಲ. ಗುಜರಾತ್‌ನ ಯಾವ ಕಂಪನಿಯಿಂದ ನ್ಯಾನೊ ಲೆಡ್ಜರ್‌ಗಳನ್ನು ಖರೀದಿಸಲಾಗಿತ್ತು. ಅವುಗಳು ಸದ್ಯ ಎಲ್ಲಿವೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಆರೋಪಿಗಳು ಸುಳಿವು ನೀಡುತ್ತಿಲ್ಲ’ ಎಂದೂ ಮೂಲಗಳು ಹೇಳಿವೆ.

‘ಕ್ರಿಪ್ಟೊ ಕರೆನ್ಸಿಗಳನ್ನು ಪರಸ್ಪರ ವರ್ಗಾವಣೆ ಮಾಡಿಟ್ಟುಕೊಳ್ಳಲು ನ್ಯಾನೊ ಲೆಡ್ಜರ್‌ಗಳನ್ನು ಬಳಸಲಾಗುತ್ತದೆ. ಈ ಬಗ್ಗೆ ಸಂತೋಷ್‌ಕುಮಾರ್‌ಗೆ ಹೆಚ್ಚಿನ ಮಾಹಿತಿ ಇತ್ತು. ಈತನ ಮೂಲಕವೇ ಇತರೆ ಆರೋಪಿಗಳು ಲೆಡ್ಜರ್‌ ಖರೀದಿಸಿ ಬಿಟ್‌ಕಾಯಿನ್‌ಗಳನ್ನು ವರ್ಗಾಯಿಸಿಕೊಂಡಿರುವುದು ಗೊತ್ತಾಗಿದೆ’ ಎಂದು ಮೂಲಗಳು ತಿಳಿಸಿವೆ.

250 ಜಿ.ಬಿ ದತ್ತಾಂಶ ಸಂಗ್ರಹ: ‘ಬಿಟ್ ಕಾಯಿನ್ ಅಕ್ರಮ ಸಂಬಂಧ ಕಾಟನ್‌ಪೇಟೆ ಹಾಗೂ ಸಿಐಡಿ ಸೈಬರ್ ಕ್ರೈಂ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಇದೇ ಪ್ರಕರಣದಲ್ಲಿ ಇನ್‌ಸ್ಪೆಕ್ಟರ್ ಪ್ರಶಾಂತ್ ಬಾಬು ಹಾಗೂ ಸೈಬರ್ ತಜ್ಞ ಸಂತೋಷ್‌ ಕುಮಾರ್‌ನನ್ನು ಬಂಧಿಸಲಾಗಿದೆ. ಇವರ ಮೊಬೈಲ್ ಹಾಗೂ ಇತರೆ ಡಿಜಿಟಲ್ ಉಪಕರಣಗಳಿಂದ 250 ಜಿ.ಬಿ ದತ್ತಾಂಶ ಸಂಗ್ರಹಿಸಲಾಗಿದೆ’ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.

‘ಚಾಟಿಂಗ್, ಫೋಟೊಗಳು ಸೇರಿದಂತೆ ಸಂಶಯಾಸ್ಪದ ಮಾಹಿತಿಗಳು ದತ್ತಾಂಶದಲ್ಲಿವೆ. ಎಲ್ಲ ದತ್ತಾಂಶವನ್ನು ತಜ್ಞರ ಸಹಾಯದಿಂದ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.

ಕಾರಾಗೃಹದಲ್ಲಿ ಪಂಚನಾಮೆ: ಶ್ರೀಕೃಷ್ಣ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಸಂದರ್ಭದಲ್ಲೂ ಬಿಟ್ ಕಾಯಿನ್ ವರ್ಗಾವಣೆ ಆಗಿರುವ ಮಾಹಿತಿ ಇದೆ. ಬಂಧಿತ ಆರೋಪಿಗಳನ್ನು ಕೇಂದ್ರ ಕಾರಾಗೃಹ ಹಾಗೂ ಸಿಸಿಬಿ ಕಚೇರಿಗೆ ಕರೆದೊಯ್ದಿದ್ದ ಎಸ್‌ಐಟಿ ಅಧಿಕಾರಿಗಳು, ಪಂಚನಾಮೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.

ಬಂಧಿತರು ನ್ಯಾಯಾಂಗ ಬಂಧನಕ್ಕೆ

ಆರೋಪಿಗಳಾದ ಪ್ರಶಾಂತ್‌ಬಾಬು ಹಾಗೂ ಸಂತೋಷ್‌ಕುಮಾರ್ ಅವರನ್ನು ವಿಚಾರಣೆಗಾಗಿ ಆರು ದಿನ ಕಸ್ಟಡಿಗೆ ಪಡೆದಿದ್ದ ಎಸ್‌ಐಟಿ ಅಧಿಕಾರಿಗಳು, ಅವಧಿ ಮುಗಿದಿದ್ದರಿಂದ ಬುಧವಾರ ನ್ಯಾಯಾಲಯಕ್ಕೆ
ಹಾಜರುಪಡಿಸಿದರು.

‘ಆರೋಪಿಗಳ ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಕರೆದೊಯ್ಯಲು ಹೆಚ್ಚಿನ ಸಮಯ ಹೋಗಿದೆ. ನಿಗದಿಯಂತೆ ವಿಚಾರಣೆ ಮಾಡಲು ಆಗಿಲ್ಲ. ಪ್ರಕರಣದಲ್ಲಿ ಮತ್ತಷ್ಟು ಮಹತ್ವದ ಮಾಹಿತಿಗಳನ್ನು ಪರಿಶೀಲಿಸಬೇಕಿದೆ. ಹೀಗಾಗಿ, ಆರೋಪಿಗಳನ್ನು ಮತ್ತಷ್ಟು ದಿನ ವಿಚಾರಣೆಗೆ ಒಳಪಡಿಸಬೇಕು. ಇಬ್ಬರನ್ನೂ ಫೆ. 7 ರವರೆಗೆ ಕಸ್ಟಡಿಗೆ ನೀಡಿ’ ಎಂದು ಎಸ್‌ಐಟಿ ಅಧಿಕಾರಿಗಳು ಮನವಿ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆರೋಪಿಗಳ ಪರ ವಕೀಲರು, ಕಸ್ಟಡಿಗೆ ನೀಡದಂತೆ ಕೋರಿದರು. ವಾದ–ಪ್ರತಿವಾದ ಆಲಿಸಿದ ನ್ಯಾಯಾಲಯ, ಎಸ್‌ಐಟಿ ಮನವಿ ತಿರಸ್ಕರಿಸಿ ಇಬ್ಬರೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

ಎಲ್ಲಿವೆ ಬಿಟ್‌ ಕಾಯಿನ್ ?

‘ಶ್ರೀಕಿಯಿಂದ ಬಿಟ್‌ ಕಾಯಿನ್‌ ದೋಚಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಆದರೆ, ದೋಚಿರುವ ಬಿಟ್‌ಕಾಯಿನ್‌ಗಳು ಎಲ್ಲಿವೆ ಎಂಬುದು ಇದುವರೆಗೂ ಗೊತ್ತಾಗಿಲ್ಲ. ‘ನ್ಯಾನೊ ಲೆಡ್ಜರ್‌’ ಬಳಸಿ ಬಿಟ್‌ ಕಾಯಿನ್ ವರ್ಗಾವಣೆ ಮಾಡಿಕೊಂಡಿರುವ ಮಾಹಿತಿಯನ್ನು ಎಸ್‌ಐಟಿ ಅಧಿಕಾರಿಗಳು ಇದೀಗ ಪತ್ತೆ
ಮಾಡಿದ್ದಾರೆ. ನ್ಯಾನೊ ಲೆಡ್ಜರ್‌ ಬಗ್ಗೆ ಹೆಚ್ಚಿನ ತನಿಖೆ ನಡೆದರೆ, ಬಿಟ್‌ ಕಾಯಿನ್ ಎಲ್ಲಿವೆ? ಅವುಗಳ ವಾರಸುದಾರರು ಯಾರು? ಎಂಬುದು ತಿಳಿಯಲಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT