ಭಾನುವಾರ, ಮಾರ್ಚ್ 29, 2020
19 °C
ಚಿಂದಿ ಚಿತ್ರಾನ್ನವಾಗಿದ್ದ ಬದುಕಿಗೆ ಭರವಸೆ ತುಂಬಿದ ಹಸಿರು ದಳ

ಕಸ ಆಯುವ ಮಹಿಳೆ ಬಳಿ ₹2 ಲಕ್ಷ ಒ.ಡಿ

ಪ್ರವೀಣ್‌ ಕುಮಾರ್ ಪಿ.ವಿ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎಳೆ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು, ಕಸ ಆಯ್ದು ಹಾಗೋ ಹೀಗೋ ಬದುಕು ಸವೆಸುತ್ತಿದ್ದ ಮಹಿಳೆ ಈಗ ರಾಷ್ಟ್ರೀಕೃತ ಬ್ಯಾಂಕ್‌ನಿಂದ ₹ 2 ಲಕ್ಷ ಓವರ್‌ ಡ್ರಾಫ್ಟ್‌ (ಒ.ಡಿ) ಪಡೆಯುವಂಥಹ ಸಾಧನೆ ಮಾಡಿದ್ದಾರೆ. ಶಾಲೆಗೇ ಹೋಗದ ಇವರು ಒಣ ಕಸ ಸಂಗ್ರಹ ಕೇಂದ್ರವನ್ನು ಮಾದರಿಯಾಗಿ ನಿರ್ವಹಿಸುತ್ತಿದ್ದಾರೆ.

ಬನಶಂಕರಿಯ ಸಂಪಂಗಿ ಅವರ ಬದುಕು ಕಸದೊಂದಿಗಿನ ಸೆಣಸಾಟ. ಬದುಕಿನ ಕಷ್ಟಗಳಿಂದ ಮುಕ್ತಿಯೇ ಇಲ್ಲವೇನೋ ಎಂದು ಕೈಸೋತಿದ್ದ ಕಾಲದಲ್ಲಿ ಅವರ ನೆರವಿಗೆ ಬಂದಿದ್ದು ‘ಹಸಿರು ದಳ’. ಈ ಆಸರೆ ಅವರ ಬದುಕಿನ ದಿಕ್ಕನ್ನೇ ಬದಲಿಸಿದೆ. ಕುಮಾರಸ್ವಾಮಿ ಲೇಔಟ್‌ ವಾರ್ಡ್‌ನಲ್ಲಿ ಒಣ ಕಸ ಸಂಗ್ರಹ ಕೇಂದ್ರವನ್ನು ನಡೆಸುತ್ತಿರುವ ಸಂಪಂಗಿ ಈಗ ಪತಿ ಹಾಗೂ ಮೂವರು ಮಕ್ಕಳನ್ನು ಒಳಗೊಂಡ ಸಂಸಾರವನ್ನು ಪೊರೆಯುವುದ ಜೊತೆಗೆ ನಾಲ್ಕೈದು ಮಂದಿಗೂ ಕೆಲಸ ನೀಡಿದ್ದಾರೆ. ಅಷ್ಟೇ ಅಲ್ಲ, ಇತರರಿಗೂ ಈ ಬಗ್ಗೆ ತರಬೇತಿ ನೀಡುತ್ತಿದ್ದಾರೆ. ನವದೆಹಲಿ, ಹೈದರಾಬಾದ್‌, ಕೊಯಮತ್ತೂರು ನಗರಗಳನ್ನೂ ಸುತ್ತಿ ಕಸವನ್ನು ರಸವನ್ನಾಗಿ ಪರಿವರ್ತಿಸುವುದರ ಮಹತ್ವ ಸಾರಿದ್ದಾರೆ.

‘ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಾಗ ನನ್ನಮ್ಮ ಗಾರೆ ಕೆಲಸಕ್ಕೆ ಹೋಗಿ ನಮ್ಮನ್ನು ಸಾಕಿದಳು. ನಾನು, ಅಕ್ಕ, ಅಣ್ಣ ಕಸವನ್ನು ಆಯುವ ಮೂಲಕ ಅಮ್ಮನಿಗೆ ನೆರವಾಗುತ್ತಿದ್ದೆವು. 9ನೇ ವರ್ಷದಿಂದಲೇ ನಾನು ಕಸ ಆಯುವ ಕೆಲಸದಲ್ಲಿ ತೊಡಗಿಕೊಂಡೆ. ಶಾಲೆಯ ಮೆಟ್ಟಿಲು ಹತ್ತಿಲ್ಲ. ಬನಶಂಕರಿಯ ಗುಡಿಸಲಿನಲ್ಲಿ ನಮ್ಮ ವಾಸ. ಮಳೆ ಬಂದಾಗ ಮನೆಯೊಳಗೂ ಕೊಡೆ ಹಿಡಿದುಕೊಳ್ಳಬೇಕಾದ ಸ್ಥಿತಿ ಇತ್ತು’ ಎಂದು ತಮ್ಮ ಗತ ಬದುಕಿನ ಬವಣೆಗಳನ್ನು ಬಿ‌ಚ್ಚಿಟ್ಟರು ಸಂಪಂಗಿ.

‘ನನ್ನ ಬಾಲ್ಯವೆಲ್ಲ ಕಸದ ರಾಶಿಯಲ್ಲಿ ಕಾಗದ ಹಾಗೂ ರಟ್ಟಿನ ಚೂರು ಆಯುವುದರಲ್ಲೇ ಕಳೆಯಿತು. ದಿನವಿಡೀ ಕಷ್ಟಪಟ್ಟು ಕೆ.ಜಿ.ಗಟ್ಟಲೆ ಕಾಗದ ಹೆಕ್ಕಿದರೆ 10 ಪೈಸೆ, 20 ಪೈಸೆ ಸಿಗುತ್ತಿತ್ತು. ಗಾಜಿನ ಬಾಟಲಿ, ಹಳೆ ಕಬ್ಬಿಣದಂತಹ ಗುಜರಿ ಸಿಕ್ಕಾಗ ದಿನಕ್ಕೆ ನಾಲ್ಕೈದು ರೂಪಾಯಿ ಬಂದರೆ ಹೆಚ್ಚು. ಎಷ್ಟೋ ದಿನಗಳನ್ನು ಹಸಿವಿನಿಂದ ಕಳೆದಿದ್ದೇನೆ’ ಎನ್ನುವಾಗ ಅವರ ಧ್ವನಿ ಗದ್ಗದಿತವಾಯಿತು.

‘ಚಿಂದಿ ಚಿತ್ರಾನ್ನವಾಗಿದ್ದ ನನ್ನ ಬದುಕಿನ ದಿಕ್ಕು ಬದಲಾಗಿದ್ದು ಹಸಿರು ದಳದ ಸಂಪರ್ಕದಿಂದ. 2012ರಲ್ಲಿ  ಕಸ ಆಯುವ ಕಾರ್ಮಿಕರಿಗೆ (ವೇಸ್ಟ್‌ ಪಿಕ್ಕರ್‌) ನೀಡುವ ಗುರುತಿನ ಚೀಟಿ ನೀಡಿದಾಗ ಅದರ ಮಹತ್ವ ತಿಳಿದಿರಲಿಲ್ಲ. ಕುಮಾರಸ್ವಾಮಿ ಲೇಔಟ್‌ ವಾರ್ಡ್‌ನ ಒಣ ಕಸ ಸಂಗ್ರಹಿಸುವ ಬಿಬಿಎಂಪಿಯ ಕೇಂದ್ರವನ್ನು ನಿರ್ವಹಿಸುವ ಹೊಣೆಯನ್ನು 2016ರಲ್ಲಿ ನನಗೆ ಕೊಡಿಸಿದರು. ಅಲ್ಲಿಂದ ನನ್ನ ಬದುಕೇ ಬದಲಾಯಿತು. ಇಬ್ಬರು ಮಕ್ಕಳನ್ನು ಪಿಯುಸಿ ವರೆಗೆ ಓದಿಸಿದ್ದೇನೆ’ ಎಂದರು.

‘ಕಸ ಸಂಗ್ರಹಿಸಿದ್ದಕ್ಕೆ ಬಿಬಿಎಂಪಿಯಿಂದ ಸಕಾಲದಲ್ಲಿ ಹಣ ಪಾವತಿ ಆಗುತ್ತಿರಲಿಲ್ಲ. ಹಾಗಾಗಿ ಆಗಾಗ ಹಣಕಾಸಿನ ಬಿಕ್ಕಟ್ಟು ಎದುರಾಗುತ್ತಿತ್ತು. ದುಡ್ಡಿನ ವಿಚಾರದಲ್ಲಿ ಪಕ್ಕ ವ್ಯವಹಾರ ನನ್ನದು. ಇದನ್ನು ನೋಡಿ ವಿಜಯಾ ಬ್ಯಾಂಕ್‌ ಆರಂಭದಲ್ಲಿ ₹ 1 ಲಕ್ಷ ಮೊತ್ತದ ಓವರ್‌ ಡ್ರಾಫ್ಟ್‌ ನೀಡಿತು. ನಂತರ ಈ ಮೊತ್ತವನ್ನು ₹ 2 ಲಕ್ಷಕ್ಕೆ ಹೆಚ್ಚಿಸಿತು’ ಎಂದರು.

‘ಸಂಪಂಗಿ ಅವರು ಕಷ್ಟದಲ್ಲಿರುವ ಇತರ ಮಹಿಳೆಯರಿಗೂ ಪ್ರೇರಣೆ. ಒಣ ಕಸ ಸಂಗ್ರಹ ಕೇಂದ್ರದ ಯಂತ್ರಗಳನ್ನು ಅವರು ಪುರುಷರಷ್ಟೇ ಸಮರ್ಥವಾಗಿ ನಿಭಾಯಿಸುತ್ತಾರೆ. ಏನೇ ಕಷ್ಟ ಬಂದರೂ ದಿಟ್ಟತನದಿಂದ ಎದುರಿಸುತ್ತಾರೆ. ಈಗ ಅಂಕೆಗಳನ್ನು ಓದಲು ಬರೆಯಲು ಕಲಿತಿದ್ದಾರೆ. ಕಸ ಸಂಗ್ರಹದ ಅಂಕಿ ಅಂಶಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ದುಡ್ಡಿನ ವ್ಯವಹಾರದಲ್ಲೂ ಅಷ್ಟೇ, ಶಿಸ್ತು ಕಾಪಾಡಿದ್ದಾರೆ. ಹಾಗಾಗಿಯೇ ಬ್ಯಾಂಕ್‌ ಅವರಿಗೆ ₹ 2 ಲಕ್ಷ ಮೊತ್ತದ ಒ.ಡಿ. ನೀಡಿದೆ’ ಎಂದು ಹಸಿರುದಳದ ನಳಿನಿ ಶೇಖರ್‌ ತಿಳಿಸಿದರು.  

ನಿತ್ಯ 2 ಟನ್‌ ಒಣ ಕಸ ಸಂಗ್ರಹ 
‘ನಿತ್ಯ ಸರಾಸರಿ 2 ಟನ್‌ಗಳಷ್ಟು ಒಣ ಕಸ ಸಂಗ್ರಹಿಸುತ್ತಿದ್ದೇವೆ. ಆರಂಭದಲ್ಲಿ ಒಣ ಕಸ ಬೇರ್ಪಡಿಸಿ ನೀಡುವಂತೆ ಜನರ ಮನವೊಲಿಸಲು ತುಂಬಾ ಕಷ್ಟವಾಗಿತ್ತು. ಆದರೆ, ಈಗ ಈ ಕಾರ್ಯ ಚೆನ್ನಾಗಿ ನಡೆಯುತ್ತಿದೆ’ ಎಂದು ಸಂಪಂಗಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು