ಈಶ ಯೋಗ ಕೇಂದ್ರ: ಆದಿಯೋಗಿ ಪ್ರತಿಮೆ ಸ್ಥಳದಲ್ಲಿ ಯಥಾಸ್ಥಿತಿಗೆ ಹೈಕೋರ್ಟ್ ಆದೇಶ

ಬೆಂಗಳೂರು: ಚಿಕ್ಕಬಳ್ಳಾಪುರದ ಆವಲಗುರ್ಕಿಯಲ್ಲಿ ಈಶ ಯೋಗ ಕೇಂದ್ರವು ನಿರ್ಮಿಸಿರುವ ಆದಿಯೋಗಿ ಪ್ರತಿಮೆಯ ಸ್ಥಳದಲ್ಲಿ ಪರಿಸರಕ್ಕೆ ಹಾನಿಯಾಗುವಂತಹ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸದೆ ಯಥಾಸ್ಥಿತಿ ಕಾಯ್ದುಕೊಂಡು ಹೋಗಬೇಕು’ ಎಂಬ ಮಧ್ಯಂತರ ಆದೇಶವನ್ನು ಹೈಕೋರ್ಟ್ ಮುಂದುವರಿಸಿದೆ.
ನಂದಿಬೆಟ್ಟದ ಸಮೀಪ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ನಿರ್ಮಿಸಿರುವುದನ್ನು ಪ್ರಶ್ನಿಸಿ ಚಿಕ್ಕಬಳ್ಳಾಪುರ ಕಸಬಾ ಹೋಬಳಿಯ ಚಂಬಳ್ಳಿಯ ನಿವಾಸಿ ಎಸ್.ಕ್ಯಾತಪ್ಪ ಸೇರಿದಂತೆ ನಾಲ್ವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಆಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಈಶ ಯೋಗ ಕೇಂದ್ರದ ಪರ ವಕೀಲರು, ‘ಯಥಾಸ್ಥಿತಿ ಆದೇಶವು ಪೂರ್ವಾಗ್ರಹ ಪೀಡಿತವಾಗಿದೆ. ಆದ್ಯತೆಯ ಮೇರೆಗೆ ಪ್ರಕರಣ ಆಲಿಸಬೇಕು’ ಎಂದು ಮನವಿ ಮಾಡಿದರು.
ಇದಕ್ಕೆ ನ್ಯಾಯಪೀಠವು, ‘ನಾವು ಪೂರ್ವಗ್ರಹ ಉಂಟುಮಾಡುವ ಯಾವುದೇ ಆದೇಶ ನೀಡಿಲ್ಲ. ಎಲ್ಲರ ಹಿತಾಸಕ್ತಿ ಕಾಪಾಡಲಾಗುವುದು. ಯಾರೊಬ್ಬರ ಇಚ್ಛೆಗೆ ಅನುಗುಣವಾಗಿ ನಡೆದುಕೊಳ್ಳಲಾಗದು. ಈಗ ನಿಮ್ಮ ಪ್ರಕರಣವನ್ನು ಕೈಗೆತ್ತಿಕೊಂಡರೆ ಎಲ್ಲರೂ ನಾಳೆ ನಮ್ಮ ಪ್ರಕರಣವನ್ನು ಪರಿಗಣಿಸಿ ಎಂದು ಕೋರಬಹುದು. ಪ್ರಾಯೋಗಿಕವಾಗಿ ಇದು ಸಾಧ್ಯವಿಲ್ಲ’ ಎಂದು ತಿಳಿಸಿ ವಿಚಾರಣೆ ಮುಂದೂಡಿತು.
ಏತನ್ಮಧ್ಯೆ, ಅರ್ಜಿದಾರರ ಪರ ವಕೀಲ ಎಂ.ಶಿವಕುಮಾರ್, ‘ಟಿವಿ ಮಾಧ್ಯಮಗಳು ಸುಪ್ರೀಂಕೋರ್ಟ್ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರನ್ನು ಅಶಾಂತಿ ಭೂಷಣ್ ಎಂದು ಜರೆದಿವೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು‘ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರು, ‘ಅರ್ಜಿಯಲ್ಲಿ ಟಿವಿ ಮಾಧ್ಯಮಗಳು ಪ್ರತಿವಾದಿಗಳಲ್ಲ. ಈ ಕುರಿತು ಪ್ರತ್ಯೇವಾದ ಅರ್ಜಿ ದಾಖಲಿಸಿ‘ ಎಂದು ಸಲಹೆ
ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.