ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

HMT ವಶದಲ್ಲಿರುವ ₹10 ಸಾವಿರ ಕೋಟಿ ಮೌಲ್ಯದ ಅರಣ್ಯ ಭೂಮಿ ಮರುವಶಕ್ಕೆ ಖಂಡ್ರೆ ಸೂಚನೆ

ಪೀಣ್ಯ ಜಾಲಹಳ್ಳಿ ಪ್ಲಾಂಟೇಷನ್ ಸರ್ವೆ ನಂ. 1 ಮತ್ತು 2ರಲ್ಲಿ ₹ 10 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ 599 ಎಕರೆ ಅಧಿಸೂಚಿತ ಅರಣ್ಯ ಪ್ರದೇಶ
Published : 11 ಆಗಸ್ಟ್ 2024, 11:25 IST
Last Updated : 11 ಆಗಸ್ಟ್ 2024, 11:25 IST
ಫಾಲೋ ಮಾಡಿ
Comments

ಬೆಂಗಳೂರು: ನಗರದ ಪೀಣ್ಯ ಜಾಲಹಳ್ಳಿ ಪ್ಲಾಂಟೇಷನ್ ಸರ್ವೆ ನಂ. 1 ಮತ್ತು 2ರಲ್ಲಿ ₹ 10 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ 599 ಎಕರೆ ಅಧಿಸೂಚಿತ ಅರಣ್ಯ ಪ್ರದೇಶವನ್ನು ಮರಳಿ ಪಡೆಯಲು ಕ್ರಮ ವಹಿಸುವಂತೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.

ಈ ಕುರಿತು ಟಿಪ್ಪಣಿ ಕಳುಹಿಸಿರುವ ಸಚಿವರು, ‘ಅರಣ್ಯ ನಿಯಮಾವಳಿ 1878ರ ಸೆಕ್ಷನ್ 9ರಡಿಯಲ್ಲಿ ಅರಣ್ಯ ಎಂದು ಘೋಷಣೆಯಾಗಿ, ಮೈಸೂರು ಮಹಾರಾಜರ ಆಳ್ವಿಕೆಯ ಕಾಲದಲ್ಲಿ, ಅಂದರೆ 1896 ಜೂನ್ 11ರಲ್ಲೇ ಗೆಜೆಟ್ ಅಧಿಸೂಚನೆ ಆಗಿರುವ ಸಾವಿರಾರು ಕೋಟಿ ಬೆಲೆಯ ಭೂಮಿಯನ್ನು ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್‌ಎಂಟಿ ಸಂಸ್ಥೆ ಅಕ್ರಮವಾಗಿ ಸರ್ಕಾರಿ ಇಲಾಖೆಗಳು, ವಿವಿಧ ಸಂಸ್ಥೆಗಳು ಮತ್ತು ಖಾಸಗಿಯವರಿಗೆ ಮಾರಾಟ ಮಾಡುತ್ತಿದೆ. ಒಟ್ಟು 599 ಎಕರೆ ಅರಣ್ಯ ಭೂಮಿಯ ಪೈಕಿ ಎಚ್‌ಎಂಟಿಗೆ ನೀಡಲಾಗಿದೆ ಎನ್ನಲಾದ 469 ಎಕರೆ 32 ಗುಂಟೆಯಲ್ಲಿ ಖಾಲಿ ಇರುವ 281 ಎಕರೆಯನ್ನು ತಕ್ಷಣ ವಶಕ್ಕೆ ಪಡೆಯಬೇಕು. ನಂತರ ಉಳಿದ ಭೂಮಿ ವಶಕ್ಕೆ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ಸೂಚಿಸಿದ್ದಾರೆ.

ಮಧ್ಯಂತರ ಅರ್ಜಿ ಹಿಂಪಡೆಯಬೇಕು: ‘ಎಚ್‌ಎಂಟಿ ಸಂಸ್ಥೆ ಈ ಭೂಮಿಯನ್ನು ಸರ್ಕಾರಿ ಇಲಾಖೆ, ಸಂಸ್ಥೆಗಳು ಮತ್ತು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿರುವುದು ಅಕ್ರಮ. ಈ ಸಂಬಂಧ ಸಚಿವ ಸಂಪುಟ ಸಭೆಯ ಗಮನಕ್ಕೂ ತಾರದೆ 2020ರಲ್ಲಿ ಡಿನೋಟಿಫೈ ಮಾಡಲು ಅನುಮತಿ ಕೋರಿ ಅರಣ್ಯ ಇಲಾಖೆಯು ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಸಲ್ಲಿಸಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಹೀಗಾಗಿ, ಮಧ್ಯಂತರ ಅರ್ಜಿ ಹಿಂಪಡೆಯಲು ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಮತ್ತು ಈ ಕುರಿತು ತನಿಖೆ ನಡೆಸಬೇಕು ಎಂದೂ ಅವರು ‌ಸೂಚನೆ ನೀಡಿದ್ದಾರೆ.

ಅರಣ್ಯ ಸಂರಕ್ಷಣಾ ಕಾಯ್ದೆ ಸೆಕ್ಷನ್ 64ಎ ಅಡಿಯಲ್ಲಿ ಈ ಹಿಂದೆ ಪ್ರಕ್ರಿಯೆ ನಡೆದು, ಭೂಮಿ ತೆರವಿಗೆ ಆದೇಶ ನೀಡಲಾಗಿತ್ತು. ಆದರೆ, ಈವರೆಗೂ ಕ್ರಮ ವಹಿಸದ ಅರಣ್ಯಾಧಿಕಾರಿಗಳ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸಚಿವರು, ಈ ಕುರಿತು ತನಿಖೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದೂ ಸೂಚಿಸಿದ್ದಾರೆ.

ಅರಣ್ಯ ನಿಯಂತ್ರಣ ಕಾಯ್ದೆ 1900ರ ಸೆಕ್ಷನ್ 30ರ ಉಪ ಸೆಕ್ಷನ್ (1)ರ ಅಡಿಯಲ್ಲಿ ಯಾವುದೇ ಅರಣ್ಯ ಭೂಮಿಯನ್ನು ದಾನವಾಗಿ ನೀಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಯಾವುದೇ ಅರಣ್ಯ ಭೂಮಿಯನ್ನು ಮಂಜೂರಾತಿ ಮಾಡುವ ಮೊದಲು ಅರಣ್ಯೇತರ ಉದ್ದೇಶಕ್ಕೆ ಪರಿವರ್ತನೆ ಮಾಡಲು ಮೊದಲಿಗೆ ಡಿನೋಟಿಫೈ ಮಾಡಿ ಗೆಜೆಟ್ ಅಧಿಸೂಚನೆ ಹೊರಡಿಸಬೇಕು. ಆದರೆ, ಈ ಜಮೀನನ್ನು ಅಂದಿನ ಬೆಂಗಳೂರು ನಗರ ಜಿಲ್ಲಾಧಿಕಾರಿ ಹನುಮಾನ್ ಅವರು 1963ರಲ್ಲಿ ಎಚ್‌ಎಂಟಿಗೆ ದಾನಪತ್ರದ ಮೂಲಕ ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದೆ. ಈ ದಾನಪತ್ರದ ಕುರಿತಂತೆ ಯಾವುದೇ ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲ. ಅಲ್ಲದೆ, ಈ ಭೂಮಿ ಅರಣ್ಯೇತರ ಉದ್ದೇಶಕ್ಕೆ ಡಿನೋಟಿಫೈ ಕೂಡ ಆಗಿಲ್ಲ ಎಂದು ಖಂಡ್ರೆ ತಿಳಿಸಿದ್ದಾರೆ.

ಶರಾವತಿ ಸಂತ್ರಸ್ತರಿಗೆ ಅರಣ್ಯ ಭೂಮಿ ನೀಡಿದ್ದ ಪ್ರಕರಣ ಹಾಗೂ ಗೋದಾವರ್ಮನ್ ಮತ್ತು ಭಾರತ ಸರ್ಕಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶಗಳು ಇದನ್ನು ಸ್ಪಷ್ಟಪಡಿಸುತ್ತವೆ. ಈ ಹಿನ್ನೆಲೆಯಲ್ಲಿ, ಸದ್ಯ ಎಚ್‌ಎಂಟಿ ವಶದಲ್ಲಿರುವ ಮತ್ತು ಎಚ್‌ಎಂಟಿ ವಿವಿಧ ಸಂಸ್ಥೆ, ಇಲಾಖೆ, ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿರುವ ಭೂಮಿ ಅರಣ್ಯವೇ ಆಗಿದೆ. ‘ಒಮ್ಮೆ ಅರಣ್ಯವಾಗಿದ್ದರೆ, ಯಾವಾಗಲೂ ಅರಣ್ಯವೆ. ನಾಗರಿಕ ಹಕ್ಕುಗಳಿಗಿಂತ ಪರಿಸರವು ಮುಖ್ಯ’ ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ. ಈ ಜಮೀನಿನ ಪೈಕಿ ಎಚ್‌ಎಂಟಿ ಮಾರಾಟ ಮಾಡಿರುವ 201 ಎಕರೆಗೆ ಸಂಬಂಧಿಸಿದಂತೆ 64ಎ ಪ್ರಕ್ರಿಯೆಯೂ ಆಗಿದ್ದು, ಆ ಆದೇಶದ ವಿರುದ್ಧ ಎಚ್ಎಂಟಿ ಈವರೆಗೆ ಮೇಲ್ಮನವಿ ಸಲ್ಲಿಸಿಲ್ಲ.  ಹೀಗಾಗಿ, ಎಚ್‌ಎಂಟಿ ವಶದಲ್ಲಿರುವ ಭೂಮಿ, ಮಾರಾಟ ಮಾಡಿರುವ ಭೂಮಿ ಇಂದಿಗೂ ಅರಣ್ಯವೇ ಆಗಿದೆ ಎಂದೂ ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT